ಮೇ 27ರಿಂದ ಪಣಂಬೂರು ಬೀಚ್ ನಲ್ಲಿ ಸರ್ಫಿಂಗ್; ಅಗತ್ಯ ಮುನ್ನೆಚ್ಚರಿಕಾ ಕ್ರಮಗಳಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಸೂಚನೆ
ಮಂಗಳೂರು: ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾ ಹಾಗೂ ಪ್ರವಾಸೋದ್ಯಮ ಇಲಾಖೆಯ ಪ್ರಾಯೋಜಕತ್ವದಲ್ಲಿ ಮೇ 27ರಿಂದ 29ರವರೆಗೆ ಪಣಂಬೂರು ಕಡಲತಡಿಯಲ್ಲಿ ಸರ್ಫಿಂಗ್ ಕ್ರೀಡೆಯನ್ನು ಆಯೋಜಿಸಲಾಗಿದ್ದು, ಯಾವುದೇ ಅಪಾಯಗಳು, ಅವಘಡಗಳು ಸಂಭವಿಸದಂತೆ ಕಟ್ಟುನಿಟ್ಟಿನ ಮುನ್ನೇಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಆಯೋಜಕರಿಗೆ ಸೂಚಿಸಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನ್ಯಾಷನಲ್ ಸರ್ಫಿಂಗ್ ಫೆಸ್ಟಿವಲ್ 2022 ಕುರಿಂತಂತೆ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮುದ್ರದ ಅಲೆಗಳ ಮೇಲೆ ಆಡುವ ಸರ್ಫಿಂಗ್ ಕ್ರೀಡೆಯಲ್ಲಿ ಹೆಚ್ಚಿನ ಜಾಗ್ರತೆ ಅವಶ್ಯ, ಲೈಫ್ ಗಾರ್ಡ್ ಗಳು, ಆಂಬುಲೆನ್ಸ್, ಮೆಡಿಕಲ್ ಪರಿಕರವಿರುವ ವಾಹನ, ಜೀವರಕ್ಷಕ ಸಾಧನಗಳು, ದೋಣಿಗಳು ಸೇರಿದಂತೆ ಅಪಾಯದಿಂದ ರಕ್ಷಿಸುವ ಕಾರ್ಯಾಚರಣೆ ಸಾಧನಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿಕೊಳ್ಳಬೇಕು ಎಂದರು.
ಎನ್ಎಂಪಿಟಿ, ಕರಾವಳಿ ಕಾವಲು ಪಡೆ ಹಾಗೂ ಪೊಲೀಸ್ ಸಿಬ್ಬಂದಿ ಅವಘಡಗಳು ಆಗದಂತೆ ಎಚ್ಚರವಹಿಸಬೇಕು. ಸರ್ಫಿಂಗ್ ಯಶಸ್ವಿಗೆ ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ನೀಡಲಾಗುವುದು, ಈ ಸಾಹಸ ಕ್ರೀಡೆಗಳು ಸಾರ್ವಜನಿಕರಲ್ಲಿ ಆಸಕ್ತಿ ಮೂಡಿಸಬೇಕು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು, ಅದಕ್ಕಾಗಿ ಸಮೂಹ ಹಾಗೂ ಸಾಮಾಜಿಕ ಮಾದ್ಯಮಗಳಲ್ಲಿ ಹೆಚ್ಚಿನ ಪ್ರಚಾರ ಕಾರ್ಯವನ್ನು ಮಾಡಬೇಕು, ಮುಖ್ಯವಾಗಿ ಯಾವುದೇ ರೀತಿಯ ಅವಘಡಗಳು ಸಂಭವಿಸದಂತೆ ಎಚ್ಚರ ವಹಿಸುವಂತೆ ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಾಣಿಕ್ಯ, ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾದ ಉಪಾಧ್ಯಕ್ಷ ರಾಮ್ ಮೋಹನ್, ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾದ ಜಂಟಿ ಕಾರ್ಯದರ್ಶಿ ಗೌರವ ಹೆಗ್ಡೆ, ಎನ್ ಎಂ ಪಿ ಟಿಯ ಸಿವಿಲ್ ಇಂಜಿನಿಯರ್ ಶಶಿಧರ್ ಸೇರಿದಂತೆ ಸಂಬಂಧಿಸಿದವರು ಸಭೆಯಲ್ಲಿ ಉಪಸ್ಥಿತರಿದ್ದರು.