ಶ್ರೀಲಂಕಾ: ತೈಲ ದರ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಹೆಚ್ಚಳ: ಪೆಟ್ರೋಲ್ ಬೆಲೆ 420 ರೂ., ಡೀಸೆಲ್ 400 ರೂ.ಗೆ ಏರಿಕೆ

Update: 2022-05-24 17:44 GMT

ಕೊಲಂಬೊ, ಮೇ 24: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಮಂಗಳವಾರ ತೈಲ ದರದಲ್ಲಿ ಸಾರ್ವಕಾಲಿಕ ದಾಖಲೆ ಮಟ್ಟದ ಹೆಚ್ಚಳವಾಗಿದ್ದು ಪೆಟ್ರೋಲ್ ದರದಲ್ಲಿ 24.3% ಮತ್ತು ಡೀಸೆಲ್ ದರದಲ್ಲಿ 38.4% ಏರಿಕೆಯಾಗಿದೆ ಎಂದು ವರದಿಯಾಗಿದೆ. ಇದೀಗ ಶ್ರೀಲಂಕಾದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 420 ರೂ. ಮತ್ತು ಡೀಸೆಲ್ ಬೆಲೆ 400 ರೂ.ಗೆ ತಲುಪಿದೆ. 

ಸಚಿವ ಸಂಪುಟ ಅನುಮೋದಿಸಿದ ಇಂಧನ ದರ ಸೂತ್ರದ ಪ್ರಕಾರ ದರ ಹೆಚ್ಚಿಸಲಾಗಿದ್ದು ಮಂಗಳವಾರ ಬೆಳಿಗ್ಗೆ 3 ಗಂಟೆಯಿಂದ ಹೊಸ ದರ ಜಾರಿಗೆ ಬಂದಿದೆ ಎಂದು ಶ್ರೀಲಂಕಾದ ಇಂಧನ ಸಚಿವ ಕಾಂಚನ ವಿಜೆಶೇಕರ ಟ್ವೀಟ್ ಮಾಡಿದ್ದಾರೆ. ಬೆಲೆ ಪರಿಷ್ಕರಣೆಯು ಆಮದು ವೆಚ್ಚ, ಸರಕು ಇಳಿಸುವ ಮತ್ತು ಸಾಗಾಟ, ವಿತರಣೆ ಹಾಗೂ ತೆರಿಗೆಗೆ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಒಳಗೊಂಡಿರುತ್ತದೆ. ಅದಕ್ಕೆ ಅನುಗುಣವಾಗಿ ಸಾರಿಗೆ ಮತ್ತು ಇತರ ಸೇವಾ ಶುಲ್ಕಗಳ ಪರಿಷ್ಕರಣೆಗೂ ಸಚಿವ ಸಂಪುಟ ಅನುಮೋದನೆ ನೀಡಿದೆ. 

ಇನ್ನು ಮುಂದೆ ಪ್ರತೀ 15 ದಿನ ಅಥವಾ ತಿಂಗಳಿಗೊಮ್ಮೆ ದರ ಪರಿಷ್ಕರಣೆ ನಡೆಯಲಿದೆ ಎಂದವರು ಹೇಳಿದ್ದಾರೆ. ಈ ಮಧ್ಯೆ, ಆಟೊ ರಿಕ್ಷಾ ಪ್ರಯಾಣ ದರವನ್ನೂ ಹೆಚ್ಚಿಸುವುದಾಗಿ ರಿಕ್ಷಾ ನಿರ್ವಾಹಕರ ಸಂಘಟನೆ ಘೋಷಿಸಿದೆ. ಪ್ರಥಮ 1 ಕಿ.ಮೀಗೆ ಪ್ರಯಾಣ ದರ 90 ರೂ. ಮತ್ತು ಆ ಬಳಿಕದ ಪ್ರತೀ ಕಿ.ಮೀಗೆ 80 ರೂ. ದರ ನಿಗದಿಗೊಳಿಸುವುದಾಗಿ ಸಂಘಟನೆ ಹೇಳಿದೆ. ವೆಚ್ಚ ತಗ್ಗಿಸಲು ಹಲವು ಉಪಕ್ರಮಗಳನ್ನು ಕೈಗೊಂಡಿರುವ ಸರಕಾರ , ಅತೀ ಅಗತ್ಯವಿರುವ ಉದ್ಯೋಗಿಗಳನ್ನು ಮಾತ್ರ ಕಚೇರಿಗೆ ಆಹ್ವಾನಿಸುವಂತೆ, ಉಳಿದವರಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವ ಯೋಜನೆ ರೂಪಿಸುವಂತೆ ಎಲ್ಲಾ ಸಂಸ್ಥೆಗಳ ಮುಖ್ಯಸ್ಥರಿಗೂ ಸೂಚನೆ ರವಾನಿಸಿದೆ. ಪೆಟ್ರೋಲ್ ಪಂಪ್ಗಳಲ್ಲಿ ತೈಲ ದಾಸ್ತಾನು ಬರಿದಾಗುವುದನ್ನು ತಡೆಯುವ ನಿಟ್ಟಿನಲ್ಲಿ ವಿವಿಧ ಆಯ್ಕೆಗಳನ್ನು ಪರಿಶೀಲಿಸಲಾಗುವುು ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತದಿಂದ 500 ಮಿಲಿಯನ್ ಡಾಲರ್ ಸಾಲ ಪಡೆಯಲು ಶ್ರೀಲಂಕಾ ನಿರ್ಧಾರ 

ತೈಲ ಆಮದು ಮಾಡಿಕೊಳ್ಳಲು ವಿದೇಶಿ ವಿನಿಮಯದ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ತೈಲ ಬಿಕ್ಕಟ್ಟನ್ನು ನಿವಾರಿಸುವ ಪ್ರಯತ್ನವಾಗಿ ಭಾರತದ ಎಕ್ಸಿಮ್ ಬ್ಯಾಂಕ್ ನಿಂದ 500 ಮಿಲಿಯನ್ ಡಾಲರ್ ಸಾಲ ಪಡೆಯುವ ಪ್ರಸ್ತಾವನೆಯನ್ನು ಶ್ರೀಲಂಕಾ ಸರಕಾರ ಅನುಮೋದಿಸಿದೆ ಎಂದು ವರದಿಯಾಗಿದೆ. ದೇಶದಲ್ಲಿ ವಿದೇಶಿ ವಿನಿಮಯದ ಕೊರತೆ ಇರುವುದರಿಂದ ಇಂಧನ ಆಮದಿಗೆ ತೊಡಕಾಗಿದೆ. ದೇಶದ ಪೆಟ್ರೋಲ್ ಪಂಪ್ಗಳಲ್ಲಿ ತೈಲ ದಾಸ್ತಾನು ಬರಿದಾಗುವುದನ್ನು ತಡೆಯುವ ನಿಟ್ಟಿನಲ್ಲಿ ವಿವಿಧ ಆಯ್ಕೆಗಳನ್ನು ಪರಿಶೀಲಿಸಲಾಗುತ್ತಿದೆ. ಇಂಧನ ಕೊರತೆಯ ಬಿಕ್ಕಟ್ಟಿಗೆ ಪರಿಹಾರ ರೂಪಿಸಲು ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಭಾರತದ ಎಕ್ಸಿಮ್ ಬ್ಯಾಂಕ್ನಿಂದ (ಎಕ್ಸ್ ಪೋರ್ಟ್ ಇಂಪೋರ್ಟ್ ಬ್ಯಾಂಕ್ ಆಫ್ ಇಂಡಿಯಾ) ಸಾಲ ಪಡೆಯುವ ಪ್ರಸ್ತಾವನೆಗೆ ಅನುಮೋದನೆ ಲಭಿಸಿದೆ. ತೈಲ ಖರೀದಿಗೆ ಈಗಾಗಲೇ ಶ್ರೀಲಂಕಾವು ಎಕ್ಸಿಮ್ ಬ್ಯಾಂಕ್ ಆಫ್ ಇಂಡಿಯಾದಿಂದ 500 ಮಿಲಿಯನ್ ಡಾಲರ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 200 ಮಿಲಿಯನ್ ಡಾಲರ್ ಸಾಲ ಪಡೆದಿದೆ ಎಂದು ಇಂಧನ ಸಚಿವ ಕಾಂಚನ ವಿಜೆಶೇಕರ ಮಂಗಳವಾರ ಹೇಳಿದ್ದಾರೆ.

ಪ್ರಸಕ್ತ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ,  ಪೆಟ್ರೋಲಿಯಂ ಉತ್ಪನ್ನಗಳ ಖರೀದಿಗೆ ಭಾರತದ ಎಕ್ಸಿಮ್ ಬ್ಯಾಂಕ್ ನಿಂದ 500 ಮಿಲಿಯನ್ ಡಾಲರ್ ಸಾಲ ಪಡೆಯುವ ಇಂಧನ ಸಚಿವಾಲಯದ ಪ್ರಸ್ತಾವನೆಯನ್ನು ಅನುಮೋದಿಸಲಾಗಿದೆ ಎಂದು ಸಚಿವ ಸಂಪುಟದ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ. ಜೂನ್ನಿಂದ ತೈಲ ಆಮದಿಗೆ ಸುಮಾರು 530 ಮಿಲಿಯನ್ ಡಾಲರ್ ಮೊತ್ತದ ಅಗತ್ಯವಿರುವುದಾಗಿ ಶ್ರೀಲಂಕಾ ಸರಕಾರ ಅಂದಾಜಿಸಿದೆ. ಕ್ರೆಡಿಟ್ ಲೈನ್ ಉಪಕ್ರಮದಡಿ (ಹೊಂದಿಕೆ ಮಾಡಬಹುದಾದ ಸಾಲದ ಆಯ್ಕೆ) ಭಾರತ ರವಿವಾರ 40,000 ಮೆಟ್ರಿಕ್ ಟನ್ ಡೀಸೆಲ್, ಸೋಮವಾರ 40,000 ಮೆಟ್ರಿಕ್ ಟನ್ ಪೆಟ್ರೋಲ್ ಸರಬರಾಜು ಮಾಡಿದೆ. ತೈಲ ಆಮದು ಮಾಡಿಕೊಳ್ಳಲು ಕಳೆದ ತಿಂಗಳು ಹೆಚ್ಚುವರಿ 500 ಮಿಲಿಯನ್ ಡಾಲರ್ ನೆರವನ್ನು ಕ್ರೆಡಿಟ್ ಲೈನ್ ಉಪಕ್ರಮದಡಿ ಒದಗಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News