ಉಕ್ರೇನ್ ಗೆ 20 ದೇಶಗಳಿಂದ ಶಸ್ತ್ರಾಸ್ತ್ರ ನೆರವಿನ ಘೋಷಣೆ

Update: 2022-05-24 17:48 GMT

ವಾಷಿಂಗ್ಟನ್, ಮೇ 24: ಸೋಮವಾರ ನಡೆದ ಮಿತ್ರರಾಷ್ಟ್ರಗಳ ಸಭೆಯಲ್ಲಿ, ರಶ್ಯದ ಆಕ್ರಮಣವನ್ನು ಎದುರಿಸಲು ಉಕ್ರೇನ್ ಗೆ ಕ್ಷಿಪಣಿ, ಹೆಲಿಕಾಪ್ಟರ್ ಸಹಿತ ಶಸ್ತ್ರಾಸ್ತ್ರಗಳನ್ನು ಒದಗಿಸಲು 20 ದೇಶಗಳು ಮುಂದೆ ಬಂದಿವೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಘೋಷಿಸಿದ್ದಾರೆ. ಉಕ್ರೇನ್ ರಕ್ಷಣಾ ಸಂಪರ್ಕ ಗುಂಪು ಎಂದು ಹೆಸರಿಸಲಾಗಿರುವ ಸಂಘಟನೆಯ ಸದಸ್ಯ ದೇಶಗಳ ಪ್ರತಿನಿಧಿಗಳು ಆನ್ ಲೈನ್ ಮೂಲಕ ನಡೆದ ಸಭೆಯಲ್ಲಿ ಪಾಲ್ಗೊಂಡು ಉಕ್ರೇನ್ ಗೆ ನೆರವು ಒದಗಿಸುವ ಬಗ್ಗೆ ಚರ್ಚೆ ನಡೆಸಿವೆ.

 20 ದೇಶಗಳು ಶಸ್ತ್ರಾಸ್ತ್ರ, ಸೇನಾ ಉಪಕರಣ, ಟ್ಯಾಂಕ್ ಗಳು, ಹೆಲಿಕಾಪ್ಟರ್ ಗಳು, ತಟ ರಕ್ಷಣಾ ವ್ಯವಸ್ಥೆ ಸಹಿತ ಶಸ್ತ್ರಾಸ್ತ್ರ ನೆರವಿನ ವಾಗ್ದಾನ ಮಾಡಿವೆ. ಇತರರು ಉಕ್ರೇನ್ ಯೋಧರಿಗೆ ತರಬೇತಿ ಒದಗಿಸುವುದಾಗಿ ಘೋಷಿಸಿದ್ದಾರೆ. 3 ತಿಂಗಳಿಂದ ನಡೆಯುತ್ತಿರುವ ಯುದ್ಧದ ಇತ್ತೀಚಿನ ಸ್ಥಿತಿಗತಿಯ ಬಗ್ಗೆ ಉಕ್ರೇನ್ ರಕ್ಷಣಾ ಸಚಿವ ಒಲೆಕ್ಸಿಯ್ ರೆಝ್ನಿಕೋವ್ ಸಭೆಗೆ ವಿವರಿಸಿದರು ಎಂದು ಆಸ್ಟಿನ್ ಹೇಳಿದ್ದಾರೆ. ಹಡಗು ನಿರೋಧಕ ಹಾರ್ಪೂನ್ ಕ್ಷಿಪಣಿ ವ್ಯವಸ್ಥೆ ಒದಗಿಸುವುದಾಗಿ ಡೆನ್ಮಾರ್ಕ್ ವಾಗ್ದಾನ ಮಾಡಿದೆ. ದಾಳಿ ಹೆಲಿಕಾಪ್ಟರ್, ಟ್ಯಾಂಕ್ ಗಳು ಹಾಗೂ ರಾಕೆಟ್ ವ್ಯವಸ್ಥೆಗಳನ್ನು ಝೆಕ್ ಗಣರಾಜ್ಯ ಒದಗಿಸಲಿದೆ. ಹಾರ್ಪೂನ್ ಕ್ಷಿಪಣಿ ದಡದಿಂದ 300 ಕಿ.ಮೀ ದೂರದಲ್ಲಿರುವ ಹಡಗುಗಳನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ. ಇವುಗಳನ್ನು ಕಪ್ಪು ಸಮುದ್ರದಲ್ಲಿರುವ ಉಕ್ರೇನ್ ನ ಒಡೆಸಾ ಬಂದರಿನಲ್ಲಿ ನಿಯೋಜಿಸಲಾಗುವುದು. ಈ ಕ್ಷಿಪಣಿಗಳು ರಶ್ಯದ ಕೆಲವು ನೌಕೆಗಳು ಲಂಗರು ಹಾಕಿರುವ ಸೆವಾಸ್ಟೊಪೊಲ್ ಬಂದರಿನ ಉದ್ದೇಶಿತ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿದೆ ಎಂದವರು ಹೇಳಿದ್ದಾರೆ. 

4 ವಾರದ ಹಿಂದೆ ಜರ್ಮನ್ ನಲ್ಲಿರುವ ಅಮೆರಿಕದ ಸೇನಾ ನೆಲೆಯಲ್ಲಿ ಶಸ್ತ್ರಾಸ್ತ್ರ ಕೊಡುಗೆದಾರರ ಗುಂಪಿನ ಪ್ರಥಮ ಸಭೆಯ ಬಳಿಕ ದೇಣಿಗೆ ಹಾಗೂ ಪೂರೈಕೆಗೆ ಹೆಚ್ಚಿನ ವೇಗ ದೊರಕಿದೆ. ಯುದ್ಧವು ಈಗ ಫಿರಂಗಿಗಳಿಂದ ನಡೆಯುತ್ತಿದ್ದು ಇದಕ್ಕೆ ಟ್ಯಾಂಕ್, ಡ್ರೋನ್ ಹಾಗೂ ಇತರ ಸಾಧನಗಳ ನೆರವು ದೊರಕುತ್ತಿದೆ. ಈ ಯುದ್ಧವನ್ನು ಯುರೋಪ್ ನಿಂದ ಆಚೆಗೆ ವಿಸ್ತರಿಸಲು ರಶ್ಯ ಬಯಸುತ್ತಿದೆ. ರಶ್ಯದ ಆಕ್ರಮಣವು ನಿಯಮಾಧಾರಿತ ಅಂತರಾಷ್ಟ್ರೀಯ ಕ್ರಮಕ್ಕೆ ಅಪಚಾರವಾಗಿದೆ ಎಂದು ಆಸ್ಟಿನ್ ಹೇಳಿದರು. ಬ್ರಸೆಲ್ಸ್ ನಲ್ಲಿ ಜೂನ್ 15ರಂದು ನಡೆಯಲಿರುವ ನೇಟೊ ಸಚಿವ ಮಟ್ಟದ ಸಭೆಯ ಸಂದರ್ಭ ಉಕ್ರೇನ್ ರಕ್ಷಣಾ ಸಂಪರ್ಕ ತಂಡದ ಮುಂದಿನ ಸುತ್ತಿನ ಮಾತುಕತೆ ನಡೆಯಲಿದೆ ಎಂದವರು ಹೇಳಿದ್ದಾರೆ. ಈ ಮಧ್ಯೆ, ದೀರ್ಘದೂರ ವ್ಯಾಪ್ತಿಯ ಕ್ಷಿಪಣಿ, ಎಂ270 ಮತ್ತು ಎಂ 142 ಹಿಮರ್ ಕ್ಷಿಪಣಿ ಉಡಾವಣಾ ವ್ಯವಸ್ಥೆಯನ್ನು ತ್ವರಿತವಾಗಿ ಒದಗಿಸುವಂತೆ ಉಕ್ರೇನ್ ಅಮೆರಿಕವನ್ನು ಒತ್ತಾಯಿಸಿದೆ. ಈ ವ್ಯವಸ್ಥೆಯಿಂದ 187 ಮೈಲುಗಳಷ್ಟು ದೂರದ ಗುರಿಯನ್ನು ತಲುಪುವ ಸಾಮರ್ಥ್ಯದ ಹಲವು ಕ್ಷಿಪಣಿಗಳನ್ನು ಏಕಕಾಲದಲ್ಲಿ ಉಡಾಯಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News