ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಶೋಷಣೆ

Update: 2022-05-26 08:14 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಜನಸಾಮಾನ್ಯರು ಕಾಯಿಲೆಗೊಳಗಾದಾಗ ದುಬಾರಿ ವೈದ್ಯಕೀಯ ವೆಚ್ವ ಭರಿಸಲು ತೊಂದರೆಯಾಗುತ್ತದೆ ಎಂದು ಸರಕಾರ ಮೊದಲು ಯಶಸ್ವಿನಿ ಯೋಜನೆ ಜಾರಿಗೆ ತಂದಿತು. ಈಗ ಇನ್ನೂ ವ್ಯಾಪಕವಾದ ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿ ಮಾಡಲಾಗಿದೆ. ಆದರೆ ಸರಕಾರ ಯಾವ ಯೋಜನೆ ಜಾರಿಗೆ ತಂದರೂ ಬಡ ರೋಗಿಗಳ ತಾಪತ್ರಯ ಕಡಿಮೆಯಾಗಿಲ್ಲ.

ಆಯುಷ್ಮಾನ್ ಭಾರತ ಯೋಜನೆಯಡಿಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾದ ರೋಗಿಗಳಿಂದ ಆಸ್ಪತ್ರೆಗಳು ಹೆಚ್ಚುವರಿ ಹಣ ವಸೂಲಿ ಮಾಡುತ್ತಿವೆ. ಈ ಖಾಸಗಿ ಆಸ್ಪತ್ರೆಗಳು ಸರಕಾರದ ಹಣ ಪಡೆಯುವುದಲ್ಲದೆ ರೋಗಿಗಳಿಂದಲೂ ಹಣ ಪಡೆಯುತ್ತಿರುವುದು ಹಗಲು ಶೋಷಣೆ ಅಲ್ಲದೆ ಬೇರೇನೂ ಅಲ್ಲ.

ಆಯುಷ್ಮಾನ್ ಭಾರತ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾದ ತಮ್ಮಿಂದ ಸರಕಾರ ನಿಗದಿ ಪಡಿಸಿದ ಶುಲ್ಕಕ್ಕಿಂತ ಹೆಚ್ಚು ಹಣವನ್ನು ವಸೂಲಿ ಮಾಡಲಾಗಿದೆ ಎಂದು ರಾಜ್ಯದ ಅನೇಕ ಕಡೆಗಳಿಂದ 1,767 ಮಂದಿ ದೂರು ಸಲ್ಲಿಸಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗಿರಬಹುದು. ಈ ಬಗ್ಗೆ ಸರಕಾರ ತನಿಖೆ ನಡೆಸಿದಾಗ ರೋಗಿಗಳಿಂದ ಹೆಚ್ಚುವರಿ ಹಣ ವಸೂಲಿ ಮಾಡಿದ 284 ಪ್ರಕರಣಗಳು ಪತ್ತೆಯಾಗಿವೆ.

ಕೋವಿಡ್ ಸಾಂಕ್ರಾಮಿಕ ಕಾಲದಲ್ಲೂ ಖಾಸಗಿ ಆಸ್ಪತ್ರೆಗಳು ಯಾತನೆ ಪಡುತ್ತಿದ್ದ ರೋಗಿಗಳನ್ನು ಸುಲಿಯದೆ ಬಿಡಲಿಲ್ಲ. ಸರಕಾರ ನಿಗದಿ ಪಡಿಸಿದ ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲದೆ ಖಾಸಗಿ ಆಸ್ಪತ್ರೆಗಳಲ್ಲೂ ಶೇಕಡಾ 50ರಷ್ಟು ಹಾಸಿಗೆಗಳನ್ನು ಸರಕಾರ ಕೋವಿಡ್ ಪೀಡಿತರಿಗಾಗಿ ಮೀಸಲಾಗಿಟ್ಟಿತ್ತು. ಆ ಸಂದರ್ಭದಲ್ಲಿ ಪರಿಸ್ಥಿತಿಯ ದುರುಪಯೋಗ ಮಾಡಿಕೊಂಡ ಖಾಸಗಿ ಆಸ್ಪತ್ರೆಗಳು ಹಾಸಿಗೆ ಇದ್ದರೂ ಅವನ್ನು ಕೋವಿಡ್ ಪೀಡಿತ ರೋಗಿಗಳಿಗೆ ಕೊಡಲು ನಿರಾಕರಿಸುವುದು, ಅಕ್ರಮವಾಗಿ ಹಾಸಿಗೆಗಳನ್ನು ಬ್ಲಾಕ್ ಮಾಡುವುದು, ಆಕ್ಸಿಜನ್ ಸಿಲಿಂಡರ್‌ಗಳನ್ನು ಅಕ್ರಮವಾಗಿ ದಾಸ್ತಾನು ಮಾಡುವುದು ಮುಂತಾದ ಲಾಭಕೋರ ಚಟುವಟಿಕೆಗಳಲ್ಲಿ ತೊಡಗಿದ್ದವು. ಇಡೀ ದೇಶ ಸಂಕಷ್ಟ ಸ್ಥಿತಿಯಲ್ಲಿ ಇರುವಾಗ ಸರಕಾರಕ್ಕೆ ನೀಡಬೇಕಾದ ಸಹಕಾರವನ್ನು ಖಾಸಗಿ ಆಸ್ಪತ್ರೆಗಳು ನೀಡಲಿಲ್ಲ.

ಭಾರತದಲ್ಲಿ ಖಾಸಗಿ ಆರೋಗ್ಯ ವಲಯ ಎಂಬುದು ಜನಸಾಮಾನ್ಯರ ಜೇಬು ಕತ್ತರಿಸುವ ದಂಧೆಯಾಗಿದೆ. ದುಬಾರಿ ವಿಮೆ ಹೊಂದಿರುವವರನ್ನು ನೋಡಿಕೊಂಡಂತೆ ಯಾವುದೇ ವಿಮಾ ಯೋಜನೆಗೆ ಒಳಪಡದ ಬಡ ರೋಗಿಗಳನ್ನು ನೋಡಿಕೊಳ್ಳುವುದಿಲ್ಲ. ಖಾಸಗಿ ಆಸ್ಪತ್ರೆಗಳನ್ನು ನಡೆಸುವವರು ಕೂಡ ವೈದ್ಯರೇ, ರೋಗಿಗಳಿಗೆ ಅತ್ಯುತ್ತಮ ಸೇವೆ ಸಲ್ಲಿಸುವುದಾಗಿ ಅವರು ಪ್ರಮಾಣ ವಚನ ಸ್ವೀಕರಿಸಿ ಕಾಲೇಜುಗಳಿಂದ ಹೊರಗೆ ಬಂದಿರುತ್ತಾರೆ. ರೋಗಿಯ ಹಣ ಮುಖ್ಯವಾಗಬಾರದು. ಮೊದಲ ಆದ್ಯತೆ ಆರೋಗ್ಯ ಚಿಕಿತ್ಸೆಗೆ ಇರಬೇಕು. ಎಲ್ಲ ಖಾಸಗಿ ವೈದ್ಯರು ಹೀಗಿದ್ದಾರೆಂದಲ್ಲ. ಆದರೆ ಬಹುತೇಕ ವೈದ್ಯರು ದುಡ್ಡಿನ ಪಿಶಾಚಿಗಳಾಗಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

ಬಡ ಮತ್ತು ಮಧ್ಯಮ ವರ್ಗಗಳ ರೋಗಿಗಳ ಅನುಕೂಲಕ್ಕಾಗಿ ಸರಕಾರ ಆಯುಷ್ಮಾನ್ ಭಾರತ ಎಂಬ ಸಾಮಾಜಿಕ ಸುರಕ್ಷತಾ ಯೋಜನೆ ಜಾರಿಗೆ ತಂದಿದೆ. ಇದು ಸರಿಯಾಗಿ ಜಾರಿಯಾಗಬೇಕೆಂದರೆ ಸರಕಾರಿ ಆಸ್ಪತ್ರೆಗಳಂತೆ ಖಾಸಗಿ ಆಸ್ಪತ್ರೆಗಳು ಸಹಕಾರ ನೀಡಬೇಕಾಗುತ್ತದೆ.

ಆಯುಷ್ಮಾನ್ ಭಾರತ ಯೋಜನೆಯಲ್ಲಿ ನಾಗರಿಕರ ಚಿಕಿತ್ಸೆಗೆ ತಗಲಬಹುದಾದ ಖರ್ಚು ವೆಚ್ಚಗಳ ಬಗ್ಗೆ ತಜ್ಞರ ಜೊತೆ ಸಮಾಲೋಚನೆ ಮಾಡಿಯೇ ಸರಕಾರ ದರ ನಿಗದಿಪಡಿಸಿದೆ.ರೋಗಿಯೊಬ್ಬನ ಖರ್ಚು ವೆಚ್ಚ ಸರಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಾಗಿದ್ದರೆ ಅದನ್ನು ಸರಕಾರದ ಗಮನಕ್ಕೆ ತಂದು ಮಂಜೂರು ಮಾಡಿಸಿಕೊಳ್ಳಬೇಕೇ ಹೊರತು ರೋಗಿಯನ್ನು ಯಾವುದೇ ಕಾರಣಕ್ಕೂ ಪೀಡಿಸಬಾರದು.
ಶತಮಾನಗಳಿಗೊಮ್ಮೆ ಯಾವಾಗಲೋ ಬರುವ ಕೋವಿಡ್ ಸಾಂಕ್ರಾಮಿಕದಂತಹ ಸಂದರ್ಭದಲ್ಲೂ ರೋಗಿಗಳ ಸುಲಿಗೆ ಮಾಡಿದ ಖಾಸಗಿ ಆಸ್ಪತ್ರೆಗಳ ಮೇಲೆ ಸರಕಾರ ನಿಗಾ ವಹಿಸಬೇಕು. ಆಯುಷ್ಮಾನ್ ಭಾರತ ಯೋಜನೆ ಸರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು.

ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸುವುದು ತಪ್ಪಬೇಕಾದರೆ ಸಾರ್ವಜನಿಕ ಆರೋಗ್ಯ ಕ್ಷೇತ್ರ ಅಂದರೆ ಸರಕಾರಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕು. ವಿಷಾದದ ಸಂಗತಿ ಅಂದರೆ ಆರೋಗ್ಯ ಕ್ಷೇತ್ರದಲ್ಲಿ ಕರ್ನಾಟಕದ ಸಾಧನೆ ಸಮಾಧಾನಕರವಾಗಿಲ್ಲ. ಪ್ರಸಕ್ತ ವರ್ಷದ ಆರೋಗ್ಯ ಸೂಚ್ಯಂಕದ ವರದಿಯ ಪ್ರಕಾರ ದಕ್ಷಿಣ ಭಾರತದ ರಾಜ್ಯಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿರುವ ರಾಜ್ಯಗಳಲ್ಲಿ ಕೇರಳ ಮತ್ತು ತಮಿಳು ನಾಡುಗಳು ಮೊದಲ ಸ್ಥಾನದಲ್ಲಿವೆ.

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಸರಕಾರ ಮುಂಗಡಪತ್ರದಲ್ಲಿ ಹೆಚ್ಚು ಮೊತ್ತವನ್ನು ಹಂಚಿಕೆ ಮಾಡಬೇಕು. ಉಳಿದವುಗಳಿಗಿಂತ ಹೆಚ್ಚಿನ ಆದ್ಯತೆ ನೀಡಬೇಕು.

ನಮ್ಮ ಸರಕಾರಿ ಆಸ್ಪತ್ರೆಗಳು ಹೆಸರಿಗೆ ಮಾತ್ರ ಇವೆ. ಗ್ರಾಮೀಣ ಪ್ರದೇಶದಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತದೆ.ಕೆಲ ಆಸ್ಪತ್ರೆಗಳಲ್ಲಿ ವೈದ್ಯರ ಕೆಲಸವನ್ನು ದಾದಿಯರೇ ಮಾಡಿದ ಉದಾಹರಣೆಗಳಿವೆ. ಇನ್ನು ಮುಂದಾದರೂ ಹೀಗಾಗದಂತೆ ಸರಕಾರ ನೋಡಿಕೊಳ್ಳಬೇಕು. ವೈದ್ಯರ ಮತ್ತು ವೈದ್ಯಕೀಯ ಸಿಬ್ಬಂದಿಯ ನೇಮಕಾತಿಗೆ ಆದ್ಯತೆ ನೀಡಬೇಕು. ಅನೇಕ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ. ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು

ಒಟ್ಟಾರೆ ಜನಸಾಮಾನ್ಯರಿಗೆ, ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ತೊಂದರೆ ಯಾಗದಂತೆ ವೈದ್ಯಕೀಯ ಕ್ಷೇತ್ರವನ್ನು ಸುಸಜ್ಜಿತಗೊಳಿಸಬೇಕಾಗಿದೆ. ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುವ ಶೋಷಣೆಗೆ ಕಡಿವಾಣ ಹಾಕಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News