2021-22ನೆ ಆರ್ಥಿಕ ಸಾಲಿಗೆ 411.03 ಕೋಟಿ ರೂ. ಲಾಭ : ಸಿಎಂಡಿ ಟಿ. ಸಮೀನಾಥನ್
ಮಂಗಳೂರು : ಕೇಂದ್ರ ಸರಕಾರಿ ಸ್ವಾಮ್ಯದ ಉಕ್ಕಿನ ಸಚಿವಾಲಯದಡಿ ಕಾರ್ಯಾಚರಿಸುವ ಕೆಐಓಸಿಎಲ್ ಲಿಮಿಟೆಡ್ ಕಂಪನಿಯು ೨೦೨೧-೨೨ನೆ ಸಾಲಿನಲ್ಲಿ ೪೧೧.೦೩ ಕೋಟಿ ರೂ. (ತೆರಿಗೆ ಮುಂಚಿನ) ಲಾಭ ದಾಖಲಿಸಿರುವುದಾಗಿ ಕಂಪನಿಯ ಸಿಎಂಡಿ ಟಿ. ಸಮೀನಾಥನ್ ತಿಳಿಸಿದ್ದಾರೆ.
ಮಂಗಳವಾರ ನಡೆದ ಕಂಪನಿಯ ನಿರ್ದೇಶಕ ಮಂಡಳಿಯ ಸಭೆಯಲ್ಲಿ ೨೦೨೨ರ ಮಾರ್ಚ್‌ಗೆ ಕೊನೆಗೊಂಡ ೨೦೨೧-೨೨ನೆ ಸಾಲಿನ ಕಂಪನಿಯ ೪ನೆ ತ್ರೈಮಾಸಿಕದ ಹಣಕಾಸು ಫಲಿತಾಂಶಗಳನ್ನು ಘೋಷಿಸಲಾಯಿತು.
ಹಣಕಾಸು ವರ್ಷ ೨೦೨೧ರ ೨೩೭೬.೪೪ ಕೋಟಿ ರೂ.ಗಳ ಬದಲಿಗೆ ೨೦೨೨ರಲ್ಲಿ ೩೦೦೬.೪೫ ಕೋಟಿ ರೂ.ಗಳ ಒಟ್ಟು ದಾಯ ಗಳಿಸಿದೆ. ಈ ಮೂಲಕ ಕಂಪನಿಯು ತೆರಿಗೆ ಮುಂಚಿತವಾಗಿ ೪೧೧.೦೩ ಕೋಟಿ ರೂ. ಲಾಭ ದಾಖಲಿಸಿದ್ದು, ತೆರಿಗೆ ನಂರದ ಲಾಭ ೩೧೩.೪೧ ಕೋಟಿ ರೂ.ಗಳಾಗಿವೆ ಎಂದು ಅವರು ತಿಳಿಸಿದ್ದಾರೆ.
ಈ ವರ್ಷ ಕಂಪನಿಯು ೨.೦೩೦ ಮಿಲಿಯ ಟನ್ ಕಲ್ಲಿದ್ದಲು ಉತ್ಪಾದನೆ ಮಾಡಿದ್ದು, ೨.೦೭೨ ಮಿಲಿಯ ಟನ್ ಪೆಲೆಟ್ ರವಾನಿಸಿದೆ. ೨.೦೩೨ ಮಿಲಿಯ ಟನ್ ರಫ್ತು ಆಗಿದೆ. ಕೆಐಒಸಿಎಲ್ ತನ್ನ ದೇಶಿಯ ಮಾರುಕಟ್ಟೆಗಳ ಜತೆಗೆ ನಿಯಮಿತ ಅಂತಾರಾಷ್ಟ್ರೀಯ ಮಾರುಕಟ್ಟೆಗಳಾದ ಚೀನಾ, ಇಂಡೋನೇಷ್ಯಾ, ಮಲೇಷ್ಯಾ, ಬ್ರೆಝಿಲ್ ಮಾರುಕಟ್ಟೆಗಳ ಜತೆಗೆ ತನ್ನ ರಫ್ತನ್ನು ಯೂರೋಪಿಯನ್ ದೇಶಗಳಾದ ಆಸ್ಟ್ರಿಯಾ, ಫಿನ್‌ಲ್ಯಾಂಡ್, ಪೋಲೆಂಡ್, ಸ್ವಿಟ್ಜರ್‌ಲ್ಯಾಂಡ್ ಹಾಗೂ ಇತರ ದೇಶಗಳಾದ ಇರಾನ್, ಜಪಾನ್, ದಕ್ಷಿಣ ಕೊರಿಯಾ, ಓಮನ್‌ಗೆ ವಿಸ್ತರಿಸಿದೆ. ೨೦೨೨ರ ಮಾರ್ಚ್‌ನಲ್ಲಿ ೩.೮೦ ಲಕ್ಷ ಟನ್ ಪೆಲೆಟ್ ಸಾಗಾಟವಾಗಿದೆ ಎಂದು ಅವರು ತಿಳಿಸಿದ್ದಾರೆ.
ವಾರ್ಷಿಕ ಮಹಾಸಭೆಯಲ್ಲಿ ಷೇರುದಾರರ ಅನುಮೋದನೆಗೆ ಒಳಪಟ್ಟು ಈಕ್ವಿಟಿ ಷೇರಿಗೆ ೦.೭೯ ರೂ.ಗಳ ಲಾಭಾಂಶವನ್ನು ನಿರ್ದೇಶಕರ ಮಂಡಳಿ ಶಿಫಾರಸು ಮಾಡಿದೆ. ಮಧ್ಯಂತರ ಲಾಭಾಂಶವಾದ ೦.೯೮ ರೂ.ಗಳನ್ನು ಈಗಾಗಲೇ ಪಾವತಿಸಲಾಗಿದೆ ಎಂದು ಟಿ. ಸಾಮಿನಾಥನ್ ತಿಳಿಸಿದ್ದಾರೆ.