ಒಕ್ಕೂಟ ವ್ಯವಸ್ಥೆಯ ತತ್ವ ಎತ್ತಿ ಹಿಡಿದ ತೀರ್ಪು

Update: 2022-05-26 04:48 GMT

ತೆರಿಗೆ ವಿಧಿಸುವ ವಿಚಾರದಲ್ಲಿ ಶಾಸನ ರೂಪಿಸುವ ಸಮಾನ ಅಧಿಕಾರ ಒಕ್ಕೂಟ ಸರಕಾರ ಮತ್ತು ರಾಜ್ಯ ಸರಕಾರಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಕಳೆದ ವಾರ ನೀಡಿರುವ ತೀರ್ಪು ಸ್ವಾಗತಾರ್ಹವಾಗಿದೆ. ಈ ತೀರ್ಪಿನಿಂದ ಒಂದು ಅಂಶ ಸ್ಪಷ್ಟವಾಗಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಮಂಡಳಿಯ ಶಿಫಾರಸುಗಳನ್ನು ಇನ್ನು ಮುಂದೆ ಒಕ್ಕೂಟ ಸರಕಾರವಾಗಲಿ, ರಾಜ್ಯ ಸರಕಾರಗಳಾಗಲಿ ಕಡ್ಡಾಯವಾಗಿ ಪಾಲಿಸಬೇಕೆಂದೇನಿಲ್ಲ. ಈ ಶಿಫಾರಸುಗಳೇನಿದ್ದರೂ ಮನವೊಲಿಕೆಯ ಸ್ವರೂಪದ್ದಾಗಿವೆ, ಸಂಸತ್ತಿನ ನಿಲುವೂ ಇದೇ ಆಗಿತ್ತು ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್ ಒಕ್ಕೂಟ ತತ್ವದ ಅಂಶಗಳನ್ನು ಎತ್ತಿಹಿಡಿದಿದೆ. ಸಂವಿಧಾನದ 246(ಎ) ಮತ್ತು 279ನೇ ವಿಧಿಗಳಲ್ಲಿ ಈ ಅಂಶ ದಾಖಲಾಗಿರುವುದನ್ನು ಈ ತೀರ್ಪು ಮತ್ತೊಮ್ಮೆ ದೃಢಪಡಿಸಿದೆ.

ಬಿಜೆಪಿ ಒಕ್ಕೂಟ ಸರಕಾರದ ಸೂತ್ರ ಹಿಡಿದ ನಂತರ ರಾಜ್ಯಗಳನ್ನು ಪಂಚಾಯತ್ ಮಟ್ಟಕ್ಕೆ ಇಳಿಸಿ ಅವುಗಳ ಸ್ವಾಯತ್ತತೆಯನ್ನು ಗಾಳಿಗೆ ತೂರಿ ಯಜಮಾನಿಕೆ ನೀತಿಯನ್ನು ಅನುಸರಿಸುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರ ನೇತೃತ್ವದ ತ್ರಿ ಸದಸ್ಯ ಪೀಠ ನೀಡಿದ ತೀರ್ಪು ಶ್ಲಾಘನೀಯವಾಗಿದೆ. ಒಕ್ಕೂಟ ಸರಕಾರ ಅಥವಾ ರಾಜ್ಯ ಸರಕಾರಗಳು ವಿಧಿಸುವ ಸರಕು ಸೇವಾ ತೆರಿಗೆ ವಿಚಾರದಲ್ಲಿ ಕಾನೂನು ರೂಪಿಸಲು ಪ್ರತಿಯೊಂದು ರಾಜ್ಯದ ವಿಧಾನಸಭೆಗೆ ಅಧಿಕಾರವಿದೆ ಎಂದು ಸಂವಿಧಾನದ 246(ಎ) ವಿಧಿ ಹೇಳುತ್ತದೆ. ಹೀಗಾಗಿ ಮಂಡಳಿ ಮಾಡುವ ಶಿಫಾರಸುಗಳನ್ನು ಒಕ್ಕೂಟ ಸರಕಾರ ಇಲ್ಲವೇ ರಾಜ್ಯ ಸರಕಾರಗಳು ಕಡ್ಡಾಯವಾಗಿ ಪಾಲಿಸಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದ ಈ ಕುರಿತ ಗೊಂದಲ ನಿವಾರಣೆಯಾದಂತಾಗಿದೆ.

ಗುಜರಾತ್ ಹೈಕೋರ್ಟ್ ನೀಡಿದ್ದ ಆದೇಶವೊಂದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ. ಸಮುದ್ರ ಮಾರ್ಗದಲ್ಲಿ ಸರಕು ಸಾಗಣೆಗೆ ಶೇ. 5ರಷ್ಟು ತೆರಿಗೆ ವಿಧಿಸುವುದು ಅಸಾಂವಿಧಾನಿಕ ಎಂದು ಗುಜರಾತ್ ಹೈಕೋರ್ಟ್ ಹೇಳಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಕುರಿತ ಗೊಂದಲ ನಿವಾರಿಸಿದೆ.

ಒಕ್ಕೂಟ ಸರಕಾರ ಮತ್ತು ರಾಜ್ಯ ಸರಕಾರಗಳು ಪರಸ್ಪರ ಮಾತುಕತೆ ನಡೆಸಿ ಅದರ ಆಧಾರದಲ್ಲಿ ಸರಕು ಸೇವಾ ತೆರಿಗೆ ಮಂಡಳಿ ಶಿಫಾರಸು ಮಾಡುತ್ತದೆ. ಅವು ಶಿಫಾರಸಿನ ಸ್ವರೂಪವನ್ನು ಮಾತ್ರ ಹೊಂದಿವೆ. ಆ ಶಿಫಾರಸುಗಳನ್ನು ಪಾಲಿಸಲೇಬೇಕಾದ ಆಜ್ಞೆ ಎಂಬಂತೆ ಕಾಣುವುದು ಒಕ್ಕೂಟ ವ್ಯವಸ್ಥೆಯ ಹಣಕಾಸಿನ ಸ್ವರೂಪವನ್ನೇ ನಾಶ ಮಾಡುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಸಮರ್ಥನೀಯವಾಗಿದೆ.

ಭಾರತದಲ್ಲಿ ಇರುವುದು ಬಹುಪಕ್ಷ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ. ಒಕ್ಕೂಟ ಸರಕಾರದ ಸೂತ್ರ ಹಿಡಿದ ಪಕ್ಷವೊಂದು ಯಾವುದೇ ರಾಜ್ಯದಲ್ಲಿ ಅಧಿಕಾರದಲ್ಲಿ ಇರಬಹುದು ಅಥವಾ ಇಲ್ಲದಿರಬಹುದು. ಹಾಗೆಂದು ರಾಜ್ಯಗಳಿಗೆ ಕಡಿಮೆ ಅಧಿಕಾರವಿದೆ ಎಂದು ಭಾವಿಸಬಾರದು. ಒಕ್ಕೂಟ ಸರಕಾರದ ಆಜ್ಞೆಗಳಿಗೆ ರಾಜ್ಯ ಸರಕಾರಗಳು ಸಂವಿಧಾನಾತ್ಮಕವಾಗಿ ಪ್ರತಿರೋಧ ಒಡ್ಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಗಮನಾರ್ಹವಾಗಿದೆ.

ಜಿಎಸ್‌ಟಿ ಕುರಿತ ಸುಪ್ರೀಂ ಕೋರ್ಟ್ ತೀರ್ಪನ್ನು ಕೇರಳ ಮತ್ತು ತಮಿಳುನಾಡು ಸರಕಾರಗಳು ಸಹಜವಾಗಿ ಸ್ವಾಗತಿಸಿವೆ. ಜಿಎಸ್‌ಟಿ ಮಂಡಳಿಗೆ ಇರುವ ಅಧಿಕಾರ ಕೇವಲ ಶಿಫಾರಸು ಮಾಡುವುದು. ಅದು ತನ್ನ ನಿರ್ಧಾರಗಳನ್ನು ಒಕ್ಕೂಟ ಸರಕಾರ ಇಲ್ಲವೇ ರಾಜ್ಯ ಸರಕಾರಗಳ ಮೇಲೆ ಹೇರುವಂತಿಲ್ಲ ಎಂಬ ಅಂಶ ಸುಪ್ರೀಂ ಕೋರ್ಟಿನ ಈ ತೀರ್ಪಿನಿಂದ ಸ್ಪಷ್ಟವಾಗಿದೆ.

ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದ ಒಂದು ದೇಶ ಒಂದು ತೆರಿಗೆ ಪರಿಕಲ್ಪನೆ ಮೂಲೆಗುಂಪಾಗುವುದೇ? ಒಕ್ಕೂಟ ಸರಕಾರದ ಸೂಚನೆಗಳನ್ನು ರಾಜ್ಯ ಸರಕಾರಗಳು ತಿರಸ್ಕರಿಸುತ್ತವೆಯೇ?, ಅವುಗಳನ್ನು ಜಾರಿಗೆ ತರಲು ನಿರಾಕರಿಸುತ್ತವೆಯೇ? ಜಿಎಸ್‌ಟಿ ವ್ಯವಸ್ಥೆ ಕುಸಿದು ಬೀಳುವುದೇ? ಎಂದೆಲ್ಲಾ ಅಪಾರ್ಥ ಭಾವನೆಯ ಊಹೆ ಸರಿಯಲ್ಲ. ಸುಪ್ರೀಂ ಕೋರ್ಟ್‌ನ ಈ ತೀರ್ಪನ್ನು ಒಕ್ಕೂಟ ಸರಕಾರ ಮತ್ತು ರಾಜ್ಯ ಸರಕಾರಗಳು ಎಚ್ಚರದಿಂದ ಗಮನಿಸಿ ಯಾರಿಗೂ ಅನ್ಯಾಯವಾಗದಂತೆ ಪರಸ್ಪರ ಸಮಾಲೋಚನೆ ಮೂಲಕ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿಕೊಂಡರೆ ಯಾವ ತೊಂದರೆಯೂ ಇಲ್ಲ. ಜಿಎಸ್‌ಟಿ ವ್ಯವಸ್ಥೆಯಿಂದ ರಾಜ್ಯಗಳ ಆದಾಯಕ್ಕೆ ಉಂಟಾಗಬಹುದಾದ ನಷ್ಟವನ್ನು ಭರಿಸಲು ಒಕ್ಕೂಟ ಸರಕಾರ ಪರಿಹಾರ ಕೊಡುವಲ್ಲಿ ವಿಳಂಬ ಮಾಡಬಾರದು. ಇಂತಹ ಸೂಕ್ಷ್ಮ ಸಮಸ್ಯೆಗಳನ್ನು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬರದಂತೆ ಬಗೆಹರಿಸಿಕೊಳ್ಳುವುದು ಸೂಕ್ತ.

ತೆರಿಗೆ ವಿಚಾರವಾಗಿ ಜಿಎಸ್‌ಟಿ ಮಂಡಳಿಯ ಶಿಫಾರಸನ್ನು ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಅಧಿಕಾರ ರಾಜ್ಯಗಳಿಗೆ ಇದ್ದರೂ ಈ ವರೆಗೆ ಯಾವ ರಾಜ್ಯವೂ ತನ್ನ ಈ ಅಧಿಕಾರವನ್ನು ಚಲಾಯಿಸಿಲ್ಲ.
ವಾಸ್ತವವಾಗಿ ಜಿಎಸ್‌ಟಿ ಮಂಡಳಿಯ ತೀರ್ಪುಗಳು ಸಂವಿಧಾನ ತಿದ್ದುಪಡಿಯ ಪ್ರಕಾರ ಮಾರ್ಗದರ್ಶಿ ಸ್ವರೂಪವನ್ನು ಹೊಂದಿವೆಯೇ ಹೊರತು ಅವನ್ನು ಕಡ್ಡಾಯವಾಗಿ ಪಾಲಿಸಬೇಕೆಂದೇನಿಲ್ಲ.
ಆದರೆ ಮುಂದೆ ಹೀಗೆಯೇ ಇರುತ್ತದೆಯೇ ಎಂಬುದು ಮುಂದಿನ ರಾಜಕೀಯ ಬೆಳವಣಿಗೆಗಳನ್ನು ಅವಲಂಬಿಸಿದೆ. ಆದರೆ ಬಹುಶಃ ಅಂತಹ ವ್ಯತ್ಯಾಸ ಆಗಲಿಕ್ಕಿಲ್ಲ.
ಒಕ್ಕೂಟ ಸರಕಾರ ಮತ್ತು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಸರಕಾರಗಳು ವಿಭಿನ್ನ ಪಕ್ಷಗಳಿಗೆ ಸೇರಿದ್ದರೆ ಒಮ್ಮಮ್ಮೆ ಗೊಂದಲ ಉಂಟಾಗಬಹುದು. ಆದರೆ ಪರಸ್ಪರ ತಿಳಿವಳಿಕೆಯಿಂದ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News