ಹಣದುಬ್ಬರವನ್ನು ಎದುರಿಸಲು ತೆರಿಗೆ ಕಡಿತವು ಮೋದಿ ಸರಕಾರಕ್ಕೆ ನೆರವಾಗುವುದೇ?

Update: 2022-05-26 07:31 GMT

ಕೇಂದ್ರ ಸರಕಾರವು ಶನಿವಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 8 ರೂಪಾಯಿ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 6 ರೂಪಾಯಿ ಕಡಿತ ಮಾಡಿತು. ಪೆಟ್ರೋಲಿಯಂ ಉತ್ಪನ್ನಗಳ ಅಗಾಧ ಬೆಲೆಗಳಿಂದ ತತ್ತರಿಸುತ್ತಿದ್ದ ಜನರಿಗೆ ಇದು ಕೊಂಚ ನೆಮ್ಮದಿ ನೀಡಿತು.

ಅದೇ ವೇಳೆ, ಸರಕಾರ ಶನಿವಾರ ಎಂಟು ಉಕ್ಕು ಉತ್ಪನ್ನಗಳ ಮೇಲೆ ಶೇ. 15 ರಫ್ತು ತೆರಿಗೆಯನ್ನು ವಿಧಿಸಿತು. ಕಬ್ಬಿಣದ ಅದಿರಿನ ಮೇಲಿನ ರಫ್ತು ತೆರಿಗೆಯನ್ನು ಶೇ. 30ರಿಂದ ಶೇ. 50ಕ್ಕೆ ಹೆಚ್ಚಿಸಿತು. ಹಾಗೂ ಕಬ್ಬಿಣದ ಅದಿರಿನ ಉಂಡೆಗಳ ಮೇಲೆ ಶೇ. 45 ತೆರಿಗೆಯನ್ನು ವಿಧಿಸಿದೆ.

ಇನ್ನೊಂದು ಕಡೆ, ಪ್ಲಾಸ್ಟಿಕ್ ಉತ್ಪನ್ನಗಳು ಮತ್ತು ಉಕ್ಕಿನ ಕಚ್ಚಾ ವಸ್ತುಗಳ ಆಮದು ತೆರಿಗೆಯನ್ನು ಕಡಿತ ಮಾಡಿತು.

ಈ ನಡುವೆ, ಗರಿಷ್ಠ ಹಣದುಬ್ಬರ ದರವನ್ನು ಕೆಳಗೆ ತರಲು ಜೂನ್‌ನಲ್ಲಿ ಇನ್ನೊಮ್ಮೆ ಬಡ್ಡಿ ದರ ಏರಿಸುವ ಸೂಚನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ಗವರ್ನರ್ ಶಕ್ತಿಕಾಂತ ದಾಸ್ ನೀಡಿದ್ದಾರೆ.. ಹಣದುಬ್ಬರವು ಕಳೆದ ನಾಲ್ಕು ತಿಂಗಳುಗಳಲ್ಲಿ ತಾಳಿಕೊಳ್ಳುವ ಮಟ್ಟಕ್ಕಿಂತ ಮೇಲೆಯೇ ಉಳಿದಿದೆ. ಆರ್ಥಿಕ ನೀತಿ ಸಮಿತಿ (ಎಮ್‌ಪಿಸಿ)ಯ ಮುಂದಿನ ಸಭೆ ಜೂನ್6ರಿಂದ 8ರವರೆಗೆ ನಡೆಸಲು ನಿಗದಿಯಾಗಿದೆ.

‘‘ಬಡ್ಡಿ ದರ ಏರಿಕೆಯ ನಿರೀಕ್ಷೆಯಿದೆ. ಇದನ್ನು ನಿರೀಕ್ಷಿಸಲು ಪಂಡಿತರಾಗಬೇಕೆಂದೇನೂ ಇಲ್ಲ. ಬಡ್ಡಿ ದರದಲ್ಲಿ ಕೊಂಚ ಏರಿಕೆಯಾಗಲಿದೆ. ಆದರೆ ಎಷ್ಟೆಂದು ಹೇಳಲು ಈಗ ನನಗೆ ಸಾಧ್ಯವಿಲ್ಲ. ಶೇ. 5.15 ಎಂದು ಹೇಳಬಹುದು. ಆದರೆ ಅದು ಅಷ್ಟು ನಿಖರವಾಗಿರಲಾರದು’’ ಎಂದು ಶಕ್ತಿಕಾಂತ ದಾಸ್ ಇತ್ತೀಚೆಗೆ ಸಿಎನ್‌ಬಿಸಿ-ಟಿವಿ18ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಅನಿಯಮಿತ ಸಭೆ ನಡೆಸಿದ ಆರ್‌ಬಿಐ ರೆಪೊ ದರವನ್ನು ಶೇ. 4.40ಕ್ಕೆ ಏರಿಸಿತು. ಅದು ಸುಮಾರು ನಾಲ್ಕು ವರ್ಷಗಳ ಅವಧಿಯಲ್ಲಿ ಆರ್‌ಬಿಐ ಬಡ್ಡಿ ದರದಲ್ಲಿ ಮಾಡಿದ ಮೊದಲ ಏರಿಕೆಯಾಗಿತ್ತು.

ಎಪ್ರಿಲ್‌ನಲ್ಲಿ, ಆರ್‌ಬಿಐಯು ಹಾಲಿ ಹಣಕಾಸು ವರ್ಷದ ತನ್ನ ಹಣದುಬ್ಬರ ಮುನ್ನೋಟವನ್ನು ಶೇ. 4.5ರಿಂದ ಶೇ. 5.7ಕ್ಕೆ ಏರಿಸಿತ್ತು ಹಾಗೂ 2022-23ರ ಸಾಲಿನ ತನ್ನ ಜಿಡಿಪಿ ಬೆಳವಣಿಗೆ ಅಂದಾಜನ್ನು ಶೇ. 7.8ರಿಂದ ಶೇ. 7.2ಕ್ಕೆ ಇಳಿಸಿತ್ತು. ರಶ್ಯ-ಉಕ್ರೇನ್ ಯುದ್ಧದಿಂದಾಗಿ ಜಾಗತಿಕ ರಾಜಕಾರಣದಲ್ಲಿ ಆಗಿರುವ ವಿಪ್ಲವಗಳು ಇದಕ್ಕೆ ಕಾರಣ ಎಂದು ಅದು ಹೇಳಿತ್ತು.

ಹಣದುಬ್ಬರವನ್ನು ಕಡಿಮೆಗೊಳಿಸಲು ಆರ್‌ಬಿಐ ಮತ್ತು ಸರಕಾರ ಇನ್ನೊಂದು ಹಂತದ ಸಮನ್ವಯಿತ ಕಾರ್ಯಾಚರಣೆಗೆ ಮುಂದಾಗಿದೆ ಎಂಬುದಾಗಿಯೂ ಶಕ್ತಿಕಾಂತ ದಾಸ್ ಪ್ರಕಟಿಸಿದರು.

ಕಳೆದ 2-3 ತಿಂಗಳುಗಳ ಅವಧಿಯಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐಯು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದರು. ಗೋಧಿ ರಫ್ತು ನಿಷೇಧ ಮತ್ತು ಪೆಟ್ರೋಲ್ ಮತ್ತು ಡೀಸೆಲ್‌ಗಳ ಮೇಲಿನ ಅಬಕಾರಿ ಸುಂಕದಲ್ಲಿ ಕಡಿತ ಈ ನಿಟ್ಟಿನಲ್ಲಿ ಕೆಲವು ಉದಾಹರಣೆಗಳು ಎಂದರು. ಈ ಎಲ್ಲ ಕ್ರಮಗಳು ಜೊತೆಯಾದಾಗ ಬೆಲೆ ಏರಿಕೆ ನಿಯಂತ್ರಣಕ್ಕೆ ಬರುತ್ತದೆ ಎಂದರು.

ಚಿಲ್ಲರೆ ಹಣದುಬ್ಬರವು ಕಳೆದ ನಾಲ್ಕು ತಿಂಗಳುಗಳಿಂದ ಆರ್‌ಬಿಐಯ ಗರಿಷ್ಠ ತಾಳಿಕೆ ಮಟ್ಟದಿಂದಲೂ ಮೇಲಿದೆ. ಇತ್ತೀಚಿನ ಬಳಕೆದಾರ ಬೆಲೆ ಸೂಚ್ಯಂಕ (ಸಿಪಿಐ)ದ ಪ್ರಕಾರ, ಎಪ್ರಿಲ್‌ನಲ್ಲಿ ಹಣದುಬ್ಬರವು ಶೇ. 6.95ರಿಂದ ಶೇ. 7.79ಕ್ಕೆ ಏರಿದೆ. ಇದು 2021 ಎಪ್ರಿಲ್‌ನಲ್ಲಿ ಶೇ. 4.21 ಆಗಿತ್ತು.

ಸರಕಾರದ ಕ್ರಮಗಳು ಯಶಸ್ವಿಯಾಗುವವೇ?

‘‘ಹಣದುಬ್ಬರವನ್ನು ನಿಯಂತ್ರಿಸಲು ಆರ್ಥಿಕ ಮತ್ತು ಹಣಕ್ಕೆ ಸಂಬಂಧಿಸಿದ ನೀತಿಗಳೆರಡನ್ನೂ ಅನುಷ್ಠಾನಕ್ಕೆ ತರುವ ಅಗತ್ಯವನ್ನು ಸರಕಾರ ಒಪ್ಪಿಕೊಂಡಿದೆ ಎನ್ನುವುದನ್ನು ಸರಕಾರ ತೆಗೆದುಕೊಂಡಿರುವ ಕ್ರಮಗಳು ಸ್ಪಷ್ಟಪಡಿಸಿವೆ’’ ಎಂದು ‘ನೊಮುರ’ದಲ್ಲಿ ವಿಶ್ಲೇಷಕರಾಗಿರುವ ಸೊನಾಲ್ ವರ್ಮ ಹೇಳುತ್ತಾರೆ ಎಂದು ‘ರಾಯ್ಟರ್ಸ್’ ವರದಿ ಮಾಡಿದೆ. ಸರಕಾರದ ಇಷ್ಟೊಂದು ಕ್ರಮಗಳ ಹೊರತಾಗಿಯೂ ಭಾರತದಲ್ಲಿ ಚಿಲ್ಲರೆ ಕ್ಷೇತ್ರದ ಹಣದುಬ್ಬರವು ಅದರ ಶೇ. 6 ತಾಳಿಕೆ ಮಟ್ಟಕ್ಕಿಂತಲೂ ಕನಿಷ್ಠ 100 ಬೇಸಿಸ್ ಪಾಯಿಂಟ್ ಮೇಲೆಯೇ ಉಳಿಯಬಹುದು. ಯಾಕೆಂದರೆ ಇದರಲ್ಲಿ ಮಹತ್ವದ ಪಾತ್ರ ವಹಿಸುವ ಆಹಾರ ಬೆಲೆಗಳು ಏರಿಕೆಯಾಗುತ್ತಲೇ ಇರುವ ಸಾಧ್ಯತೆಯಿದೆ ಎಂದು ಎಚ್‌ಎಸ್‌ಬಿಸಿ ಮುಂತಾದ ಬ್ಯಾಂಕ್‌ಗಳು ಮತ್ತು ನೊಮುರದ ಅರ್ಥಶಾಸ್ತ್ರಜ್ಞರು ಹೇಳುತ್ತಾರೆ.

ಈ ಕ್ರಮಗಳು ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಹಾಗೂ ವಿತ್ತೀಯ ಕೊರತೆಯು 40-50 ಬೇಸಿಸ್ ಪಾಯಿಂಟ್‌ಗಳಷ್ಟು ಹಿಗ್ಗಬಹುದು ಎಂದು ಅವರು ಹೇಳುತ್ತಾರೆ.

ಆದರೆ, ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ. 6.4ಕ್ಕೆ ಮಿತಿಗೊಳಿಸುವ ಗುರಿಯನ್ನು ಸಾಧಿಸುವ ದಾರಿಯಲ್ಲಿ ಭಾರತವಿದೆ ಎಂಬುದಾಗಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಬಡ್ಡಿ ದರ ಏರಿಕೆಯಿಂದಾಗಿ ಸಾಲ ದುಬಾರಿಯಾಗುತ್ತದೆ. ದುಬಾರಿ ಸಾಲ ಮತ್ತು ರಫ್ತಿನ ಮೇಲೆ ವಿಧಿಸಲಾಗಿರುವ ತೆರಿಗೆಗಳು ಬೆಳವಣಿಗೆ ಅವಕಾಶಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎಂದು ಕೊಟಕ್ ಎಕನಾಮಿಕ್ ರಿಸರ್ಚ್ ನ ಸುವೊದೀಪ್ ರಕ್ಷಿತ್ ಹೇಳಿದ್ದಾರೆ ಎಂದು ‘ರಾಯ್ಟರ್ಸ್’ ವರದಿ ಮಾಡಿದೆ.

‘‘ಬೆಳವಣಿಗೆಗೆ ಇತ್ತೀಚೆಗೆ ಎದುರಾಗಿರುವ ಹಿನ್ನಡೆ ಮತ್ತು ಬಳಕೆದಾರ ಬೇಡಿಕೆಯ ಕುರಿತ ಅನಿಶ್ಚಿತತೆಯು ಖಾಸಗಿ ಹೂಡಿಕೆ ವಲಯದಲ್ಲಿನ ಚೇತರಿಕೆಯನ್ನು ಮತ್ತಷ್ಟು ಮುಂದಕ್ಕೆ ದೂಡಬಹುದು’’ ಎಂದು ರಕ್ಷಿತ್ ಹೇಳುತ್ತಾರೆ.

2022-23ರ ಸಾಲಿನ ಹಣಕಾಸು ವರ್ಷದ ಹಣದುಬ್ಬರ ದರವು ಶೇ. 7.2ರಲ್ಲೇ ಇರುತ್ತದೆ ಎಂದು ಅವರು ಹೇಳುತ್ತಾರೆ.

ಆಹಾರ ಬೆಲೆಗಳು ಮತ್ತು ವಿದ್ಯುತ್ ದರಗಳಲ್ಲಿ ಆಗಿರುವ ಏರಿಕೆಯಿಂದಾಗಿ ಹಣಕಾಸು ದರವು ಇನ್ನಷ್ಟು ಹೆಚ್ಚುವ ಅಪಾಯದ ಬಗ್ಗೆ ಅರ್ಥಶಾಸ್ತ್ರಜ್ಞರು ಎಚ್ಚರಿಕೆ ನೀಡುತ್ತಾರೆ.

‘‘ಅಧಿಕ ಆಹಾರ ಬೆಲೆ, ಕಾಯುತ್ತಿರುವ ವಿದ್ಯುತ್ ದರ ಏರಿಕೆ, ಉತ್ಪಾದನಾ ವೆಚ್ಚದಲ್ಲಿ ಆಗಿರುವ ಹೆಚ್ಚಳವನ್ನು ಕಂಪೆನಿಗಳು ಬಳಕೆದಾರರಿಗೆ ನಿರಂತರವಾಗಿ ವರ್ಗಾಯಿಸುತ್ತಿರುವುದು ಮತ್ತು ಎರಡನೇ ಸುತ್ತಿನ ಪರಿಣಾಮಗಳು ಹಣದುಬ್ಬರವನ್ನು ಮತ್ತಷ್ಟು ಏರಿಸುವ ಸಾಧ್ಯತೆಗಳಿವೆ’’ ಎಂದು ನೊಮುರದ ವರ್ಮ ಹೇಳುತ್ತಾರೆ.

Writer - ಕೃಪೆ: indiatoday.in

contributor

Editor - ಕೃಪೆ: indiatoday.in

contributor

Similar News