ಬೆಂಗಳೂರು: ಮೇ 27ರಿಂದ ಲಾಲ್‍ಬಾಗ್‍ನಲ್ಲಿ ಮಾವು ಮೇಳ

Update: 2022-05-26 16:36 GMT

ಬೆಂಗಳೂರು, ಮೇ 26: ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ‘ಮಾವು ಮತ್ತು ಹಲಸು ಪ್ರದರ್ಶನ ಹಾಗೂ ಮಾರಾಟ ಮೇಳ’ವನ್ನು ಲಾಲ್‍ಬಾಗ್‍ನಲ್ಲಿ ಮೇ 27ರಿಂದ ಜೂನ್ 13ರವರೆಗೆ ಆಯೋಜಿಸಲಾಗಿದೆ.

ಗುರುವಾರ ಲಾಲ್‍ಭಾಗ್‍ನ ಮಾಹಿತಿ ಕೇಂದ್ರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜು, ಮೇಳವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಸಚಿವ ಮುನಿರತ್ನ, ಸಂಸದ ತೇಜಸ್ವಿ ಸೂರ್ಯ, ಶಾಸಕ ಉದಯ್ ಗರುಡಾಚಾರ್ ಸೇರಿದಂತೆ ಪ್ರಮುಖರು ಭಾಗಿಯಾಗಲಿದ್ದಾರೆ ಎಂದರು.

ನಗರದ ಗ್ರಾಹಕರಿಗೆ ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ಮಾವು ಕೈಸೇರಲಿದೆ. ಮೇಳಕ್ಕೆ ಬರಲು ಸಾಧ್ಯವಾಗದವರಿಗೆ ಅಂಚೆ ಮೂಲಕ ಮಾವು ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮೇಳದಲ್ಲಿ 106 ಮಾವು ಮಳಿಗೆಗಳು, 16 ಹಲಸಿನ ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ. ಪ್ರದರ್ಶನದಲ್ಲಿ 50ಕ್ಕೂ ಹೆಚ್ಚು ತಳಿಯ ಮಾವು ಹಾಗೂ 10ಕ್ಕೂ ಹೆಚ್ಚು ತಳಿಯ ಹಲಸು ಇರಲಿವೆ.

ರಾಜ್ಯದಲ್ಲಿ 1.60 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ಸಲ 14 ಲಕ್ಷ ಟನ್‍ಗಳಷ್ಟು ಇಳುವರಿ ನಿರೀಕ್ಷೆ ಮಾಡಲಾಗಿತ್ತು ಎಂದ ಅವರು, ಋತುಮಾನ ಆಧಾರಿತ ಬೆಳೆಯಾಗಿರುವ ಮಾವು ಮತ್ತು ಹಲಸು ಹಣ್ಣುಗಳಿಗೆ ಉತ್ತಮ ಬೆಲೆ ಹಾಗೂ ಗುಣಮಟ್ಟದ ಹಣ್ಣುಗಳನ್ನು ಗ್ರಾಹಕರಿಗೆ ತಲುಪುವಂತೆ ಮಾಡಲು ಈ ಮೇಳ ಆಯೋಜಿಸಲಾಗಿದೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆಯ ಅಪರ ನಿರ್ದೇಶಕ ಕೆ.ಬಿ.ದುಂಡಿ ಮಾತನಾಡಿ, ಬಾದಾಮಿ, ರಸಪುರಿ, ಬೈಗನ್‍ಪಲ್ಲಿ, ಮಲ್ಲಿಕಾ, ಮಲಗೋವಾ, ಸಿಂಧೂರ, ಕೇಸರ್, ತೋತಾಪುರಿ ಸೇರಿದಂತೆ ವಿವಿಧ ತಳಿಗಳ ಮಾವು ಖರೀದಿಗೆ ಲಭ್ಯ. ಉಪ್ಪಿನಕಾಯಿ ತಯಾರಿಕೆಗೆ ಉಪಯೋಗಿಸುವ ವಿವಿಧ ಮಾವಿನಕಾಯಿ ಮೇಳದಲ್ಲಿ ಇರಲಿದೆ ಎಂದರು.

ಮಾವು ಬೆಳೆಗೆ ಸಂಬಂಧಿಸಿದ ಬೇಸಾಯ ಪದ್ಧತಿ, ಕಸಿ ಕಟ್ಟುವಿಕೆ, ಮಾವು ಮಾಗಿಸುವುದು, ವಿವಿಧ ಸಂಸ್ಕರಣಾ ಪದಾರ್ಥಗಳ ತಯಾರಿ ಕುರಿತು ಮೇಳದಲ್ಲಿ ತಜ್ಞರು ಮಾಹಿತಿ ನೀಡಲಿದ್ದಾರೆ ಎಂದೂ ಅವರು ಉಲ್ಲೇಖಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಸಿ.ಜಿ.ನಾಗರಾಜು ಸೇರಿದಂತೆ ಪ್ರಮುಖರಿದ್ದರು.

ಮೇಳದಲ್ಲಿ ಏನೇನಿದೆ?

106 ಮಾವು, 16 ಹಲಸಿನ ಮಳಿಗೆ
ಆನ್‍ಲೈನ್ ಮಾವು ಖರೀದಿಗೆ ಅವಕಾಶ
ಮಾವು ಪರಿಶೀಲನೆಗೆ ತಜ್ಞರ ತಂಡ

ಬಿಬಿಎಂಪಿಗೆ ಪತ್ರ

ಸ್ಥಳೀಯರು ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಸಾವಿರಾರು ಗ್ರಾಹಕರು ಇದರ ಲಾಭ ಪಡೆಯುತ್ತಾರೆ. ಬೆಂಗಳೂರಿನಲ್ಲಿ ರೈತರಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ನಗರದಲ್ಲಿರುವ ಆಟದ ಮೈದಾನಗಳಲ್ಲಿ ಮಾವು ಮಾರಾಟಕ್ಕೆ ಅವಕಾಶ ನೀಡಬೇಕೆಂದು ಬಿಬಿಎಂಪಿಗೆ ಪತ್ರ ಬರೆಯಲಾಗಿದೆ ಎಂದು ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News