ಉಕ್ರೇನ್ ಕತೆ ಮುಗಿಯಿತು, ಇನ್ನು ಪೋಲ್ಯಾಂಡ್ ಸರದಿ: ಪುಟಿನ್ ಆಪ್ತನ ವೀಡಿಯೊ ಹೇಳಿಕೆ ವೈರಲ್

Update: 2022-05-26 17:05 GMT

ಮಾಸ್ಕೊ, ಮೇ 26: ಉಕ್ರೇನ್ ಕತೆ ಮುಗಿಯಿತು. ಇನ್ನು ಪೋಲ್ಯಾಂಡ್ ಸರದಿ. ನಮಗೆ ಆದೇಶ ನೀಡಿದರೆ 6 ಸೆಕೆಂಡ್‌ಗಳಲ್ಲೇ ನಾವೇನು ಎಂಬುದನ್ನು ತೋರಿಸಿಕೊಡಲಿದ್ದೇವೆ ಎಂದು ರಶ್ಯ ಅಧ್ಯಕ್ಷ ಪುಟಿನ್ ಅವರ ಆಪ್ತ, ಚೆಚೆನ್‌ನ ಪ್ರಮುಖ ಮುಖಂಡ ರಮ್ಝಾನ್ ಕಡಿರೋವ್ ಪೋಲ್ಯಾಂಡ್‌ಗೆ ಎಚ್ಚರಿಕೆ ನೀಡಿದ್ದು, ಈ ವೀಡಿಯೊ ವೈರಲ್ ಆಗಿದೆ.

ಉಕ್ರೇನ್‌ಗೆ ನೀಡಿರುವ ಶಸ್ತ್ರಾಸ್ತ್ರಗಳನ್ನು ಮತ್ತು ಅಲ್ಲಿರುವ ನಿಮ್ಮ ಬಾಡಿಗೆ ಸಿಪಾಯಿಗಳನ್ನು ವಾಪಾಸು ಪಡೆದುಕೊಂಡರೆ ನಿಮಗೇ ಒಳ್ಳೆಯದು. ಮತ್ತು ನಮ್ಮ ರಾಯಭಾರಿಗೆ ನೀವು ಮಾಡಿರುವ ಅವಮಾನಕ್ಕೆ ಅಧಿಕೃತವಾಗಿ ಕ್ಷಮೆ ಯಾಚಿಸಬೇಕು. ಈ ಪ್ರಕರಣವನ್ನು ನಾವು ಮರೆತುಬಿಡುತ್ತೇವೆ ಎಂದು ಭಾವಿಸಬೇಡಿ ಎಂದು ಅವರು ಎಚ್ಚರಿಕೆ ರವಾನಿಸಿದ್ದಾರೆ.

ಕಳೆದ ತಿಂಗಳು ಪೋಲ್ಯಾಂಡಿನ ವಾರ್ಸಾದಲ್ಲಿ ನಡೆದ ರಶ್ಯದ ವಿಜಯ ದಿನಾಚರಣೆಯ ಸೇನಾ ಕವಾಯತ್ ಸಂದರ್ಭ ಪೋಲ್ಯಾಂಡ್‌ಗೆ ರಶ್ಯದ ರಾಯಭಾರಿ ಸೆರ್ಗೈ ಆಂಡ್ರೀವ್ ಮೇಲೆ ಯುದ್ಧವಿರೋಧಿಗಳು ಕೆಂಪು ಬಣ್ಣ ಎರಚಿದ್ದರು. ರಶ್ಯದ ಆಕ್ರಮಣವನ್ನು ಎದುರಿಸಲು ಉಕ್ರೇನ್‌ಗೆ ಶಸ್ತ್ರಾಸ್ತ್ರ ನೆರವು ಒದಗಿಸಿದ ದೇಶಗಳಲ್ಲಿ ಪೋಲ್ಯಾಂಡ್ ಕೂಡಾ ಸೇರಿದೆ. ನೂರಾರು ಟ್ಯಾಂಕ್‌ಗಳು, ಹೊವಿಟ್ಝರ್ ಫಿರಂಗಿ, ರಾಕೆಟ್ ಲಾಂಚರ್ ಸೇರಿದಂತೆ 1.6 ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರವನ್ನು ಉಕ್ರೇನ್‌ಗೆ ರವಾನಿಸಿರುವುದಾಗಿ ಪೋಲ್ಯಾಂಡ್ ಸರಕಾರ ಹೇಳಿದೆ. ಉಕ್ರೇನ್‌ನ ಬಳಿಕ ನಾಝೀತತ್ವ ತೊಡೆದುಹಾಕಬೇಕಿರುವ ದೇಶಗಳಲ್ಲಿ ಪೋಲ್ಯಾಂಡ್ ಮೊದಲ ಸ್ಥಾನದಲ್ಲಿದೆ ಎಂದು ಇತ್ತೀಚೆಗೆ ರಶ್ಯದ ಸಂಸದ ಒಲೆಗ್ ಮೊರೊಝೊವ್ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News