×
Ad

ದೇಶದ ಪರಿಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ: ಕೆ.ಸಿ.ಚಂದ್ರಶೇಖರರಾವ್

Update: 2022-05-26 23:10 IST

ಬೆಂಗಳೂರು, ಮೇ 26: ದೇಶದಲ್ಲಿ ಯಾವ ಪಕ್ಷದ ಸರಕಾರ ರಚನೆಯಾಗುತ್ತದೆ, ಯಾವುದು ರಚನೆಯಾಗಲ್ಲ ಅನ್ನೋದಲ್ಲ ಪ್ರಶ್ನೆ. ಈಗಾಗಲೆ, ಹಲವಾರು ಸರಕಾರಗಳು ಬಂದಿವೆ, ಹಲವಾರು ಪ್ರಧಾನಿಗಳು ಆಗಿದ್ದಾರೆ. ಆದರೆ, ದೇಶದ ಪರಿಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆ ಏನು ಆಗಿಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರರಾವ್ ತಿಳಿಸಿದರು.

ಗುರುವಾರ ಪದ್ಮನಾಭನಗರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಮ್ಮ ದೇಶಕ್ಕಿಂತ ಕಡಿಮೆ ಜಿಡಿಪಿ ಹೊಂದಿದ್ದ ಚೀನಾ ಇವತ್ತು 16 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದಿದೆ. ಆದರೆ, ಇವತ್ತು ದೇಶದಲ್ಲಿ ನಮಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸು ಕಾಣಿಸುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ದೇಶಕ್ಕೆ ಅವಮಾನ ಮಾಡಿದಂತೆ. ನಾವು ಸರಿಯಾದ ಹಾದಿಯಲ್ಲಿ ಸಾಗಿದರೆ ಅಮೆರಿಕಾಕ್ಕಿಂತ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವಿದೆ ಎಂದು ಚಂದ್ರಶೇಖರರಾವ್ ಹೇಳಿದರು.

ದೇಶದಲ್ಲಿ ಅತೀ ಹೆಚ್ಚು ಯುವ ಶಕ್ತಿ ಹಾಗೂ ಮಾನವ ಸಂಪನ್ಮೂಲ ಇದೆ. ಪ್ರಾಕೃತಿಕ ಸಂಪತ್ತು ಇದೆ, ನದಿಗಳಲ್ಲಿ ಸಾವಿರಾರು ಟಿಎಂಸಿ ನೀರು ಇದೆ, ಸೌರ ಶಕ್ತಿಯ ಲಭ್ಯತೆ ಹೆಚ್ಚಿದೆ. ಇದೆಲ್ಲ ಇದ್ದರೂ ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಮಾಡುತ್ತಿರುವ ಈ ಸಂದರ್ಭದಲ್ಲಿಯೂ ಕುಡಿಯುವ ನೀರು, ವಿದ್ಯುತ್, ನೀರಾವರಿಗಾಗಿ ಪರಿತಪಿಸುತ್ತಿದ್ದೇವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಉಜ್ವಲ ಭಾರತ ನಿರ್ಮಾಣ ಆಗುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಡೆದಿದೆ. ಮಾಧ್ಯಮಗಳು ಇದರಲ್ಲಿ ಕೈ ಜೋಡಿಸಬೇಕು. ವೈಭವೀಕರಣದ ಸುದ್ದಿಗಳನ್ನು ಬಿಡಿ, ದೇಶವನ್ನು ಧನಾತ್ಮಕ ಹಾದಿಯಲ್ಲಿ ಸಾಗಿಸಲು ನೆರವಾಗಿ. ನಮ್ಮೊಂದಿಗೆ ಸ್ವಾತಂತ್ರ ಪಡೆದ ದೇಶಗಳು, ಸಾಕಷ್ಟು ಮುಂದುವರೆದಿವೆ. ನಾವು ಎಲ್ಲಿದ್ದೇವೋ ಅಲ್ಲೆ ಇದ್ದೇವೆ ಎಂದು ಚಂದ್ರಶೇಖರರಾವ್ ಹೇಳಿದರು.

ಇವತ್ತು ದೇಶದಲ್ಲಿ ರೈತರು, ದಲಿತರು, ಆದಿವಾಸಿಗಳು ಯಾರು ಸಂತುಷ್ಟವಾಗಿಲ್ಲ. ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ಭಾಷಣಗಳು ಆಗುತ್ತವೆ, ಭರವಸೆಗಳು ಕೊಡುತ್ತಾರೆ. ಆದರೆ, ವಾಸ್ತವ ಪರಿಸ್ಥಿತಿ ಏನು? ಕೈಗಾರಿಕೆಗಳು ಮುಚ್ಚುತ್ತಿವೆ, ಜಿಡಿಪಿ ಕುಸಿಯುತ್ತಿದೆ. ಬೆಲೆ ಏರಿಕೆ ಹೆಚ್ಚಳವಾಗಿದೆ. ಇತಿಹಾಸದಲ್ಲಿ ಯಾವತ್ತೂ ಆಗದ ರೀತಿಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿದೆ ಎಂದು ಅವರು ತಿಳಿಸಿದರು.

ಇದನ್ನೆಲ್ಲ ಮುಂದಿಟ್ಟುಕೊಂಡು, ಯುವಕರು, ಬುದ್ಧಿಜೀವಿಗಳು, ಪತ್ರಕರ್ತರು ತಮ್ಮ ಕರ್ತವ್ಯ ಎಂದು ಭಾವಿಸಿ, ದೇಶವನ್ನು ಬದಲಾಯಿಸಲು ಪ್ರಯತ್ನ ಪಡಬೇಕು. ದೇವೇಗೌಡ, ಕುಮಾರಸ್ವಾಮಿ ಜೊತೆ ರಾಷ್ಟ್ರ ರಾಜಕಾರಣ, ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ ಮಾಡಿದ್ದೇವೆ. ಈ ಬಾರಿ ರಾಷ್ಟ್ರಮಟ್ಟದಲ್ಲಿ ಬದಲಾವಣೆ ಆಗುತ್ತದೆ, ಇನ್ನೆರಡು ತಿಂಗಳಲ್ಲಿ ನಿಮಗೆ ಉತ್ತಮ ಸುದ್ದಿ ಸಿಗುತ್ತದೆ ಎಂದು ಚಂದ್ರಶೇಖರರಾವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News