ಪೊಲೀಸ್ ಕವಾಯತು ಶಿಸ್ತನ್ನು ಪ್ರತಿಬಿಂಬಿಸುತ್ತದೆ: ಎಡಿಜಿಪಿ ಅಲೋಕ್ ಕುಮಾರ್

Update: 2022-05-27 05:38 GMT

ಮಂಗಳೂರು, ಮೇ 27: ಕವಾಯತು ಡ್ರಾಯಿಂಗ್ ರೂಂನಂತೆ. ಅಲ್ಲಿನ ಅಲಂಕಾರ, ಶಿಸ್ತು ಹೇಗೆ ಮನೆಗೆ ಬರುವರನ್ನು ಆಕರ್ಷಿಸುವುದೋ ಪೊಲೀಸರ ಕವಾಯತು ಕೂಡಾ ಶಿಸ್ತನ್ನು ಪ್ರತಿಬಿಂಬಿಸುತ್ತದೆ ಎಂದು ಎಡಿಜಿಪಿ(ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ ಹೇಳಿದ್ದಾರೆ.

ನಗರದ ಪೊಲೀಸ್ ಮೈದಾನದಲ್ಲಿಂದು ನಡೆದ ಪೊಲೀಸ್ ಪರೇಡ್ ನಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಫೀಲ್ಡ್ ನಲ್ಲಿ ಕೆಲಸ ಮಾಡುವಾಗ ಕಾನೂನು ಸುವ್ಯವಸ್ಥೆ ಕಾಪಾಡುವ ಸಂದರ್ಭ ಹಿರಿಯ ಅಧಿಕಾರಿಗಳ ಕಮಾಂಡ್ ಮೇಲೆ ಕಾರ್ಯಾಚರಣೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಅನಾಹುತವಾಗುತ್ತದೆ. ಆ ಹಿನ್ನೆಲೆಯಲ್ಲಿ ಈ ಕವಾಯತು ಪೊಲೀಸರ ಕ್ಷಮತೆ, ಶಿಸ್ತಿಗೆ ಪೂರಕವಾಗಿರುತ್ತದೆ. ಹಾಗಾಗಿ ಪರೇಡ್ ಕಾಲ ಕಾಲಕ್ಕೆ ನಡೆಸುವುದು ಮುಖ್ಯ ಎಂದು ಅಲೋಕ್ ಕುಮಾರ್ ನುಡಿದರು.

ದ.ಕ. ಜಿಲ್ಲೆಯಲ್ಲಿ ಹಿಂದಿನಿಂದಲೂ ಬೀಟ್ ವ್ಯವಸ್ಥೆ ಇದೆ. ಕೋವಿಡ್ ಕಾರಣ ಸ್ವಲ್ಪ ತೊಂದರೆಯಾಗಿತ್ತು. ಈಗ ಕೋವಿಡ್ ಪ್ರಕರಣ ಕಡಿಮೆ ಆಗಿರುವ ಕಾರಣ ಬೀಟ್ ವ್ಯವಸ್ಥೆ, ಜನಸಂಪರ್ಕ ಸಭೆಗಳನ್ನು ನಡೆಸಬೇಕು. ಈಗಿರುವ ಬೀಟ್ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿ ಮುಂದುವರಿಸಬೇಕಿದೆ ಎಂದರು.

ಕಾಸರಗೋಡು, ಕಣ್ಣೂರು ಗಡಿ ಭಾಗದಲ್ಲಿ ಮಾದಕ ದ್ರವ್ಯಗಳ ಸಾಗಾಟ ಮೇಲೆ ನಿಗಾ, ಇತರ ಅಪರಾಧಗಳ ಬಗ್ಗೆ ನೆರೆಯ ಜಿಲ್ಲೆಯ ಪೊಲೀಸರ ಚತೆ ಚರ್ಚೆ ನಡೆಸುವ ಕೆಲಸ ಆಗಬೇಕು. ಆಗ ದುಷ್ಟ ಶಕ್ತಿಗಳಿಗೆ ಭಯ ಆಗಲಿದೆ. ಈ ಬಗ್ಗೆ ಪೊಲೀಸ್ ಆಯುಕ್ತ ರು, ಅಧೀಕ್ಷಕರು, ಐಜಿಪಿಗೆ ಸಲಹೆ ಮಾಡಿದ್ದೇನೆ. ಜನಸಾಮಾನ್ಯರ ಜತೆ ನಿಕಟ ಸಂಪರ್ಕ ಇರಿಸಿ ಕೆಲಸ ಮಾಡಿದರೆ ಶಾಂತಿ ಸುವ್ಯವಸ್ಥೆ, ಅಪರಾಧ ನಿಗ್ರಹ  ಕಾಪಾಡಲು ಜನಸ್ನೇಹಿ ಪೊಲೀಸಿಂಗ್  ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

ಚುನಾವಣೆ ವರ್ಷ ವಾಗಿದ್ದು ಹಲವಾರು ಸಮಸ್ಯೆಗಳನ್ನು ‌ಎದುರಿಸಬೇಕಾಗುತ್ತದೆ. ಖಾಕಿ ಬಟ್ಟೆ ಹಾಕಿದ ಮೇಲೆ ಯಾವುದೇ ಕೆಲಸ ಆಗದು ಎಂದು ಹೇಳಲಾಗದು ಎಂದು ಎಡಿಜಿಪಿ ನುಡಿದರು.

ಅಧಿಕಾರಿಗಳಲ್ಲಿ ಪ್ರತಿ ಸಂದರ್ಭದಲ್ಲಿ ನೇರವಾಗಿ ಮಾತನಾಡುವ ಅವಕಾಶ ಸಿಗುತ್ತದೆ. ಆದರೆ ಇಲ್ಲಿ ಒತ್ತಡದ ನಡುವೆ ಕೆಲಸ ಮಾಡುವ  ಸಿಬ್ಬಂದಿ ಜತೆ ಮಾತನಾಡಲು ಅವಕಾಶ ಸಿಗುವುದಿಲ್ಲ. ಆ ಕಾರಣಕ್ಕಾಗಿ ಸಿಬ್ಬಂದಿ ಜತರ ಸಂವಾದ ನಡೆಸಲು ಬಂದಿದ್ದೇನೆ ಎಂದು ಅಲೋಕ್ ಕುಮಾರ್ ತಿಳಿಸಿದರು.

ಈ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೊನಾವಣೆ, ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News