ಜೂನ್ 25ರಂದು ದ.ಕ. ಜಿಲ್ಲೆಯಲ್ಲಿ ಮೆಗಾ ಲೋಕ್ ಅದಾಲತ್: ನ್ಯಾ.ರವೀಂದ್ರ ಜೋಷಿ

Update: 2022-05-27 07:12 GMT

ಮಂಗಳೂರು, ಮೇ.27: ಮುಂಬರುವ ಜೂನ್ 25ರಂದು ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದ್ದು, ಅದರ ಅಂಗವಾಗಿ ಜಿಲ್ಲೆಯ ನಾಗರಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ತಕ್ಷಣ  ಪರಿಹಾರ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ರವೀಂದ್ರ ಎಂ. ಜೋಶಿ ತಿಳಿಸಿದ್ದಾರೆ.

 ಅವರು ನಗರದ ನ್ಯಾಯಾಲಯಗಳ ಸಂಕಿರ್ಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜೂನ್ 25ರ ನಾಲ್ಕನೇ ಶನಿವಾರ ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಮೆಗಾ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ, ಇದರಲ್ಲಿ ಉಭಯ ಪಕ್ಷಕಾರರು ರಾಜಿ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದರು.

ಪರಸ್ಪರ ಇಬ್ಬರಿಗೂ ಒಪ್ಪಿಗೆಯಾಗುವಂತಹ ಪ್ರಕರಣಗಳು ತೀರ್ಮಾನವಾಗುವುದರಿಂದ ಬಾಂಧವ್ಯಗಳು ಉಳಿದು ವಿವಾದವು ತೀರ್ಮಾನವಾಗುತ್ತದೆ, ನ್ಯಾಯಾಲಯದಲ್ಲಿ ದಾಖಲಾಗದೆ ಇರುವ ಪ್ರಕರಣಗಳನ್ನು ಸಹ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ. ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ಶುಲ್ಕವನ್ನು ಮರುಪಾವತಿಸಲಾಗುವುದು. ಮುಖ್ಯವಾಗಿ ಸಂಧಾನಕಾರರು ಸೂಚಿಸುವ ಪರಿಹಾರ ಒಪ್ಪಿಗೆಯಾದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದಾಗಿದೆ. ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನಕ್ಕಾಗಿ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ತಿಳಿಸಿದ್ದಾರೆ.

 ಜಿಲ್ಲೆಯಲ್ಲಿ ಒಟ್ಟಾರೆ 52,238 ಪ್ರಕರಣಗಳು ಬಾಕಿ ಉಳಿದಿವೆ. ಅವುಗಳಲ್ಲಿ 4,040 ಪ್ರಕರಣಗಳನ್ನು ರಾಜಿಯಾಗಬಹುದಾದ ಪ್ರಕರಣಗಳು ಎಂದು ಇದುವರೆಗೂ ಗುರುತಿಸಲಾಗಿದೆ. ಅವುಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

 ಲೋಕ್ ಅದಾಲತ್ ನಲ್ಲಿ ರಾಜಿ ಸಂಧಾನದ ಮೂಲಕ ಕೆಲವೊಂದು ರಾಜಿಯಾಗಲ್ಲ ಕ್ರಿಮಿನಲ್ ಪ್ರಕರಣಗಳು,  ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲು ಪಡುವ ಪ್ರಕರಣಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿನ ಪ್ರಕರಣಗಳು, ಕರ್ನಾಟಕ ರಿಯಲ್ ಎಸ್ಟೇಟ್ ಪ್ರಾಧಿಕಾರಕ್ಕೆ ಸಂಬಂಧಿಸಿದ ಪ್ರಕರಣಗಳು, ಸಾಲ ವಸೂಲಾತಿ ನ್ಯಾಯಾಧೀಕರಣದ ಪ್ರಕರಣಗಳು, ಖಾಯಂ ಜನತಾ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣ ಪ್ರಕರಣಗಳು, ಕಾರ್ಮಿಕ ವಿವಾದಗಳು, ವಿದ್ಯುತ್ ಹಾಗೂ ಶುಲ್ಕಗಳು, ಭೂ ಸ್ವಾಧೀನ ಪ್ರಕರಣಗಳು, ವೇತನ ಹಾಗೂ ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಹಾಗೂ ಪಿಂಚಣಿ ಪ್ರಕರಣಗಳು, ಸಾರ್ವಜನಿಕ ಉಪಯುಕ್ತತೆ ಸೇವೆಗಳ ಸಂಬಂಧಿಸಿದ ಪ್ರಕರಣಗಳು, ರಾಜಿಯಾಗಬಲ್ಲ  ಸಿವಿಲ್ ಹಾಗೂ ಇತರ ಪ್ರಕರಣಗಳು, ವಿಚ್ಛೇದನ ಹೊರತುಪಡಿಸಿದಂತೆ ಕೌಟುಂಬಿಕ ಹಾಗೂ ವೈವಾಹಿಕ ನ್ಯಾಯಾಲಯದ ಪ್ರಕರಣಗಳನ್ನು  ಲೋಕ್ ಅದಾಲತ್ ನಲ್ಲಿ ರಾಜಿ ಮೂಲಕ ಇತ್ಯರ್ಥ ಪಡಿಸಿ ಕೊಳ್ಳಬಹುದಾಗಿದೆ ಎಂದು ಅವರು ವಿವರ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪೊಕ್ಸೋ-1ರ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಪೃಥ್ವಿರಾಜ್ ವರ್ಣೇಕರ್ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರ ಸದಸ್ಯ ಕಾರ್ಯದರ್ಶಿ ಮಧುಕರ್ ಭಾಗವತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News