ಮೇ 31, ಜೂನ್ 1ರಂದು ರಾಜ್ಯ ಮಟ್ಟದ ಮುಸ್ಲಿಂ ಸಮಾವೇಶ: ಸಿಪಿಐಎಂ ಕರ್ನಾಟಕ ಸಮಿತಿ

Update: 2022-05-27 12:25 GMT

ಮಂಗಳೂರು : ಭಾರತದ ದೊಡ್ಡ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಮರ ಸ್ಥಿತಿಗತಿ, ದೇಶದ ರಾಜಕಾರಣ ಕೋಮುವಾದೀಕರಣಗೊಳ್ಳುತ್ತಿರುವುದರಿಂದ ಮುಸ್ಲಿಂ ಸಮುದಾಯ ಎದುರಿಸುತ್ತಿರುವ ಬಹು ಆಯಾಮಗಳ ಬಿಕ್ಕಟ್ಟುಗಳ ಕುರಿತಂತೆ ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿಯು ಮೇ 31 ಹಾಗೂ ಜೂನ್ 1ರಂದು ಎರಡು ದಿನಗಳ ರಾಜ್ಯ ಮಟ್ಟದ ಮುಸ್ಲಿಂ ಸಮಾವೇಶವನ್ನು ಹಮ್ಮಿಕೊಂಡಿದೆ.

ಸುದ್ದಿಗೋಷ್ಟಿಯಲ್ಲಿಂದು ಈ ವಿಷಯ ತಿಳಿಸಿದ ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ, ಮೇ 31ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬೆಳಗ್ಗೆ 10.15ಕ್ಕೆ ಸಮಾವೇಶವನ್ನು ಕೇರಳದ ಮಾಜಿ ಉನ್ನತ ಶಿಕ್ಷಣ ಸಚಿವರಾದ ಡಾ. ಕೆ.ಟಿ. ಜಲೀಲ್ ಉದ್ಘಾಟಿಸುವರು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಮಾವಳ್ಳಿ ಶಂಕರ್, ಖ್ಯಾತ ಸಾಹಿತಿ ಡಾ. ಕೆ. ಶರೀಫಾ, ಸಿಪಿಂ ರಾಜ್ಯ ಸಮಿತಿ ಕಾರ್ಯದರ್ಶಿ ಯು. ಬಸವರಾಜು ಭಾಗವಹಿಸಲಿದ್ದಾರೆ. ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸಯ್ಯದ್ ಮುಜೀಬ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಮಧ್ಯಾಹ್ನ 2ರಿಂದ ಕೋಮುವಾದದ ಪ್ರಯೋಗ ಶಾಲೆಯಾಗಿ ಕರ್ನಾಟಕ ಎಂಬ ವಿಚಾರದಲ್ಲಿ ಪ್ರಥಮ ಗೋಷ್ಠಿ ನಡೆಯಲಿದ್ದು, ಹಂಪಿ ವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಚಂದ್ರ ಪೂಜಾರಿ, ಬೆಂಗಳೂರಿನ ರಾಜಕೀಯ ವಿಶ್ಲೇಷಕ ಡಾ. ಕೆ. ಪ್ರಕಾಶ್  ವಿಷಯ ಮಂಡಿಸಲಿದ್ದಾರೆ.

ಅಧ್ಯಕ್ಷತೆಯನ್ನು ಸಿಪಿಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ವಹಿಸಲಿದ್ದು, ಸುನಿಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.  ಮಧ್ಯಾಹ್ನ 4.15ರಿಂದ 2ನೆ ಗೋಷ್ಠಿ ಕರ್ನಾಟಕದ ಮುಸ್ಲಿಮರ ಸ್ಥಿತಿಗತಿ ಬಗ್ಗೆ ಹಿರಿಯ ಪತ್ರಕರ್ತರಾದ ಬಿ.ಎಂ. ಹನೀಫ್ ಹಾಗೂ ಬರಹಗಾರ ಬಿ. ಪೀರ್ ಬಾಷಾ ವಿಷಯ ಮಂಡಿಸಲಿದ್ದಾರೆ.

ಬರಹಗಾರ್ತಿ ಕೆ. ನೀಲಾ ಅಧ್ಯಕ್ಷತೆ ವಹಿಸಲಿದ್ದು, ಡಾ. ಜೀವನ್‌ ರಾಜ್ ಕುತ್ತಾರ್ ಕಾರ್ಯಕ್ರಮ ನಿರ್ವಹಣೆ ಮಾಡಲಿದಾದರೆ. ಸಂಜೆ 7ರಿಂದ ಬ್ಯಾರಿ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು, ಸಮಾರು 1500 ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ವಿವರಿಸಿದರು.

ಜೂ. 1ರಂದು ಅಲ್ಪಸಂಖ್ಯಾತ ಸಮುದಾಯಗಳ ಸಬಲೀಕರಣಕ್ಕಾಗಿ ಮುಂದೆ ನಡೆಸಬೇಕಾದ ಕೆಲಸಗಳ ಕುರಿತು ವಿವಿಧ ಜಿಲ್ಲೆಗಳಿಂದ ಆಗಮಿಸುವ ಪ್ರತಿನಿಧಿಗಳಿಗಾಗಿ ಆಂತರಿಕ ಕಲಾಪ ನಗರದ ಡಾನ್‌ ಬಾಸ್ಕೋ ಸಭಾಂಗಣ ದಲ್ಲಿ ನಡೆಯಲಿದೆ ಎಂದು ಸಿಪಿಎಂ  ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ತಿಳಿಸಿದರು.

ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ವರದಿಯ ಪ್ರಕಾರ ಮುಸ್ಲಿಮರ ಸ್ಥಿತಿ ಹಲವು ವಿಭಾಗಗಳಲ್ಲಿ ದಲಿತ ಸಮುದಾಯಗಳಿಗಿಂತ ನಿಕೃಷ್ಟವಾಗಿದೆ. ಭೂಮಿಯ ಒಡೆತನ, ಶಿಕ್ಷಣದ ಅವಕಾಶ, ಸರಕಾರಿ, ಸಾರ್ವಜನಿಕ ವಲಯದ ಉದ್ಯೋಗಗಳಲ್ಲಿ ಬೇರೆಲ್ಲ ಸಮುದಾಯಗಳಿಗಿಂದ ಮುಸ್ಲಿಮರ ಪಾಲು ಕಡಿಮೆ ಬಡತನದ ಸರಾಸರಿಯಲ್ಲೂ ಮುಸ್ಲಿಮರ ಪ್ರಮಾಣ ಅತೀ ಹೆಚ್ಚಿದೆ. ಮುಸ್ಲಿಮರ ಆಚರಣೆ, ನಂಬಿಕೆಗಳು, ಆಹಾರ ಪದ್ಧತಿ, ಆರಾಧನಾಲಯಗಳನ್ನು ವಿವಾದವನ್ನಾಗಿಸಲಾಗುತ್ತಿದೆ. ವ್ಯಾಪಾರ, ಒಡನಾಟಗಳಿಗೆ ತಡೆ ಹೇರಲಾಗುತ್ತಿದೆ. ಪ್ರಕೃತಿ ವಿಕೋಪ ಹಾಗೂ ಇನ್ನಿತರೆ ದುರಂತಗಳ ಸಂದರ್ಭ ಪರಿಹಾರ ವಿತರಣೆಗಳಲ್ಲೂ ಸರಕಾರ ಮುಸ್ಲಿಮರೊಂದಿಗೆ ತಾರತಮ್ಯ ತೋರುತ್ತಿದೆ. ಅಲ್ಪಸಂಖ್ಯಾತ ಸಮುದಾಯವೊಂದರ ಮೇಲಿನ ಇಂತಹ ಆಘಾತಕಾರಿ ದಾಳಿಗಳಿಗೆ ಆಳುವ ಸರಕಾರಗಳೇ ಬೆಂಬಲವಾಗಿ ನಿಂತಿರುವುದು ಮುಸ್ಲಿಂ ಸಮುದಾಯವನ್ನು ಅಸಹಾಯಕತೆ, ಅಭದ್ರತೆ, ಆತಂಕದ ಸ್ಥಿತಿಗೆ ತಳ್ಳಿದೆ. ಇಂತಹ ಸಂದರ್ಭದಲ್ಲಿ ವ್ಯವಸ್ಥೆಯ ದ್ವೇಷ, ಅನಾದಾರಕ್ಕೆ ಗುರಿಯಾದ ಮುಸ್ಲಿಮರ ನೈಜ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬೇಕು, ಕರ್ನಾಟಕದಲ್ಲಿ ಮುಸ್ಲಿಮರ ಸ್ಥಿತಿಗತಿಗಳ ವಾಸ್ತವವನ್ನು ಜನರ ಮುಂದೆ ತೆರೆದಿಡಬೇಕು, ಸುಳ್ಳು ಆರೋಪ, ಪೂರ್ವಾಗ್ರಹಗಳನ್ನು, ಸಂಶಯಗಳನ್ನು ದೂರೀಕರಿಸಲು ಯತ್ನಿಸಬೇಕು ಹಾಗೂ ಮತೀಯವಾದದ ಬಗ್ಗೆ ಪ್ರಜ್ಞಾಪೂರ್ವಕ ತಿಳುವಳಿಕೆ, ಕೋಮು ಸೌಹಾರ್ದತೆ, ಜಾತ್ಯಾತೀತತೆ, ಸಂವಿಧಾನದ ಮೌಲ್ಯಗಳ ಪ್ರತಿಪಾದನೆಯ ಉದ್ದೇಶದೊಂದಿಗೆ ಜಾತ್ಯಾತೀತತೆ, ಸಬಲೀಕರಣ, ಮುನ್ನಡೆ ಎಂಬ ಘೋಷಣೆಯ ಅಡಿಯಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ. ಬಾಲಕೃಷ್ಣ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್,  ಜಿಲ್ಲಾ ಸಮಿತಿ ಸದಸ್ಯರಾದ ಬಿ.ಕೆ. ಇಮ್ತಿಯಾಝ್, ಸಂತೋಷ್ ಕುಮಾರ್ ಬಜಾಲ್, ಯೋಗೀಶ್ ಜಪ್ಪಿನಮೊಗರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News