ಉಡುಪಿ : 15 ದಿನಗಳೊಳಗೆ ಪಿಡಿಓಗಳ ಬೇಡಿಕೆ ಈಡೇರಿಸದಿದ್ದಲ್ಲಿ ಹೋರಾಟದ ಎಚ್ಚರಿಕೆ

Update: 2022-05-27 13:37 GMT

ಉಡುಪಿ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಉಡುಪಿ ಜಿಲ್ಲಾ ಘಟಕವು ಗುರುವಾರ ಜಿಪಂ ಸಿಇಓ ಪ್ರಸನ್ನ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದು, ೧೫ ದಿನಗಳೊಳಗೆ ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಯಿಂದ ಖಾಲಿ ಇರುವ ಸಹಾಯಕ ನಿರ್ದೇಶಕ ಹುದ್ದೆಗಳಿಗೆ ಭಡ್ತಿ ನೀಡಲು ಕ್ರಮ ವಹಿಸಬೇಕು. ೨೦೦೬-೦೭ರಿಂದ ೨೦೧೧-೧೨ರವರೆಗೆ ಮನರೇಗಾ ಯೋಜನೆಯಲ್ಲಿ ಅನುಷ್ಠಾನಗೊಂಡ ಕಾಮ ಗಾರಿಗಳನ್ನು ತನಿಖೆ ಮಾಡಲು ಲೋಕಾಯುಕ್ತಕ್ಕೆ ವಹಿಸಿರುವ ಪ್ರಕರಣವನ್ನು  ವಾಪಾಸ್ ಪಡೆಯಬೇಕು. ಕಳೆದ ಎಂಟು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಗ್ರೂಪ್ ಬಿಗೆ ಮೇಲ್ದರ್ಜೆ ಗೇರಿಸಬೇಕು.

ಇಲಾಖೆಯಲ್ಲಿ ನಿರ್ವಹಿಸಿರುತ್ತಿರುವ ಅಧಿಕಾರಿ ಮತ್ತು ನೌಕರರನ್ನು ಕೌನ್ಸಲಿಂಗ್ ಮೂಲಕ ವರ್ಗಾವಣೆ ಮಾಡುವ ನಿಯಮವನ್ನು ಕೂಡಲೇ ಜಾರಿಗೊಳಿಸಬೇಕು. ಇಲಾಖೆ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳ ಸೇವಾ ವಿಷಯಗಳನ್ನು ಸಕಾಲ ವ್ಯಾಪ್ತಿಗೆ ತರಬೇಕು. ಕೋವಿಡ್‌ನಿಂದ ಮೃತರಾದ ಅಧಿಕಾರಿ ಮತ್ತು ಸಿಬ್ಬಂದಿಗಳ ಕುಟುಂಬಗಳಿಗೆ ಪರಿಹಾರ ಮತ್ತು ಅನುಕಂಪದ ನೌಕರಿ ನೀಡಬೇಕು.

೧೬ ಎ ರದ್ದು ಮಾಡಿರು ವುದರಿಂದ ಅಂತರ್ ಜಿಲ್ಲೆಗೆ ವರ್ಗಾವಣೆಗೆ ಅವಕಾಶ ಇರುವುದಿಲ್ಲ. ಹಾಗಾಗಿ ಒಂದು ಬಾರಿ ಅಂತರ್ ಜಿಲ್ಲೆಗೆ ಅವಕಾಶ ನೀಡಬೇಕು. ಪಿಡಿಓ ಹುದ್ದೆಯನ್ನು ರಾಜ್ಯಮಟ್ಟದ ವೃಂದವನ್ನಾಗಿಸಬೇಕು. ಗ್ರಾಪಂ ಸಿಬ್ಬಂದಿಗೆ ವೇತನ ಶ್ರೇಣಿ ನಿಗದಿಪಡಿಸಬೇಕು. ಎಲ್ಲ ಗ್ರಾಪಂಗಳಿಗೆ ಎಸ್‌ಡಿಎಎ ಹುದ್ದೆಗಳನ್ನು ನೇಮ ಕಾತಿ ಮಾಡಿಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ನಿಯೋಗದಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಪಿ.ಶೆಟ್ಟಿ, ರಾಜ್ಯ ಪರಿಷತ್ ಸದಸ್ಯ ದಯಾನಂದ್, ಉಡುಪಿ ತಾಲೂಕು ಅಧ್ಯಕ್ಷ ಅನೀಲ್ ಶೆಟ್ಟಿ, ಕಾರ್ಕಳ ತಾಲೂಕು ಅಧ್ಯಕ್ಷ ಸದಾಶಿವ ಶೇರ್ವೆಗಾರ್ ಮೊದಲಾದವರು ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News