ರೈತರ ಬದುಕಿನಲ್ಲಿ ಡ್ರೋನ್ ಗಳು ಪ್ರಮುಖ ಪಾತ್ರ ವಹಿಸಲಿವೆ: ಡ್ರೋನ್ ಮಹೋತ್ಸವದಲ್ಲಿ ಪ್ರಧಾನಿ‌

Update: 2022-05-27 17:27 GMT

ಹೊಸದಿಲ್ಲಿ, ಮೇ 27: ದೇಶದಲ್ಲಿ ಡ್ರೋನ್ಗಳ ಬಳಕೆಯ ಕುರಿತು ಗಮನ ಸೆಳೆದಿರುವ ಪ್ರಧಾನಿ ನರೇಂದ್ರ ಮೋದಿ, ಗ್ರಾಮಗಳಲ್ಲಿ ಆಸ್ತಿಯ ಡಿಜಿಟಲ್ ನಕ್ಷೆಗೆ ಪಿಎಂ ಸ್ವಾಮಿತ್ವ ಯೋಜನೆ ನೆರವಾಗಲಿದೆ ಎಂದು ಶುಕ್ರವಾರ ಹೇಳಿದ್ದಾರೆ.

‘ಇದು ಮಾನವನ ಹಸ್ತಕ್ಷೇಪವನ್ನು ಕಡಿಮೆ ಮಾಡಲಿದೆ ಹಾಗೂ ಪಾರದರ್ಶಕತೆಯನ್ನು ಹೆಚ್ಚಿಸಲಿದೆ. ಇದುವರೆಗೆ 65,000 ಆಸ್ತಿ ಪತ್ರಗಳನ್ನು ವಿತರಿಸಲಾಗಿದೆ’ ಎಂದು ಅವರು ತಿಳಿಸಿದರು. ಹೊಸದಿಲ್ಲಿಯ ಪ್ರಗತಿ ಮೈದಾನದಲ್ಲಿ ನಡೆದ ‘ಭಾರತ ಡ್ರೋನ್ ಮಹೋತ್ಸವ’ವನ್ನು ಶುಕ್ರವಾರ ಉದ್ಘಾಟಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ‘‘ನಮ್ಮ ರೈತರ ಜೀವನವನ್ನು ಉತ್ತಮಗೊಳಿಸುವಲ್ಲಿ ಡ್ರೋನ್ಗಳು ಮುಖ್ಯ ಪಾತ್ರ ವಹಿಸಲಿವೆ.

ಇದಕ್ಕೆ ಸ್ವಾಮಿತ್ವ ಯೋಜನೆ ಅತ್ಯುತ್ತಮ ಉದಾಹರಣೆ’’ ಎಂದು ಅವರು ಹೇಳಿದರು. ಸ್ವಾಮಿತ್ವ (ಎಸ್ವಿಎಎಂಐಟಿವಿಎ- ಸರ್ವೇ ಆಫ್ ವಿಲೇಜ್ ಆ್ಯಂಡ್ ಮ್ಯಾಪಿಂಗ್ ವಿದ್ ಇಂಪ್ರೂವೈಸ್ಡ್ ಟೆಕ್ನಾಲಜಿ ಇನ್ ವಿಲೇಜ್ ಏರಿಯಾ) ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2020 ಎಪ್ರಿಲ್ 24ರಂದು ಲೋಕಾರ್ಪಣೆಗೊಳಿಸಿದ್ದರು. ಗ್ರಾಮದ ಪ್ರತಿ ಮನೆಯ ಮಾಲಕನಿಗೆ ‘‘ದಾಖಲೆಯ ಹಕ್ಕು’’ ನೀಡುವ ಮೂಲಕ ಗ್ರಾಮೀಣ ಭಾರತದಲ್ಲಿ ಆರ್ಥಿಕ ಪ್ರಗತಿಯನ್ನು ಸಾಧಿಸುವ ಉದ್ದೇಶವನ್ನು ಇದು ಹೊಂದಿದೆ. ‘‘ಡ್ರೋನ್ ನಮಗೆ ದೊರತೆ ಸ್ಮಾರ್ಟ್ ಸಾಧನ. ಇದು ಶೀಘ್ರದಲ್ಲಿ ಪ್ರತಿಯೊಬ್ಬ ನಾಗರಿಕನ ಬದುಕಿನ ಭಾಗವಾಗಲಿದೆ. ದೇಶದಲ್ಲಿ ಕೃಷಿಯಿಂದ ರಕ್ಷಣೆ, ಪ್ರವಾಸೋದ್ಯಮ, ಆರೋಗ್ಯ ಸೇವೆ ವರೆಗಿನ ಕ್ಷೇತ್ರಗಳಲ್ಲಿ ಗುಣಮಟ್ಟವನ್ನು ಸುಧಾರಿಸಲು ಡ್ರೋನ್ಗಳು ನೆರವಾಗಲಿವೆ’’ ಎಂದು ಅವರು ಹೇಳಿದರು. 

‘‘ಈ ಮಹೋತ್ಸವದಲ್ಲಿ ರೈತರು, ಡ್ರೋನ್ ಎಂಜಿನಿಯರ್ಗಳು, ಸ್ಟಾರ್ಟ್ಅಪ್ಗಳು ಹಾಗೂ ಹಲವು ನಾಯಕರು ಕೂಡ ಇದ್ದಾರೆ. ಡ್ರೋನ್ ತಂತ್ರಜ್ಞಾನದ ಬಗೆಗಿನ ಈ ಉತ್ಸಾಹ ತುಂಬಾ ವಿಶೇಷವಾಗಿದೆ. ನಮ್ಮ ಸ್ಟಾರ್ಟ್ಅಪ್ ಶಕ್ತಿಯನ್ನು ಆಧರಿಸಿ ಜಗತ್ತಿನಲ್ಲಿ ಡ್ರೋನ್ ತಂತ್ರಜ್ಞಾನದ ಕೇಂದ್ರವಾಗುವಲ್ಲಿ ಭಾರತ ಅತಿ ವೇಗದಲ್ಲಿ ಮುನ್ನಡಿ ಇರಿಸುತ್ತಿದೆ’’ ಎಂದು ಅವರು ಹೇಳಿದರು. ಈ ಕಾರ್ಯಕ್ರಮ ಡ್ರೋನ್ಗಳಿಗೆ ಮಾತ್ರ ಸೀಮಿತವಲ್ಲ. ಭಾರತದಲ್ಲಿ ಹೊಸ ತಂತ್ರಜ್ಞಾನ ಹಾಗೂ ಆವಿಷ್ಕಾರದತ್ತ ಸಾಗಲು ಕೂಡ ಈ ಕಾರ್ಯಕ್ರಮ ನೆರವಾಗಲಿದೆ ಎಂದು ಪ್ರಧಾನಿ ಅವರು ಹೇಳಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News