ಲಜ್ಜೆ ಕಳೆದುಕೊಂಡ ಭಾಷಣ!

Update: 2022-05-30 03:46 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಅದು 1956ರ ಕಾಲ. ಲಾಲ್ ಬಹಾದುರ್ ಶಾಸ್ತ್ರಿಯವರು ರೈಲ್ವೇ ಸಚಿವರಾಗಿದ್ದರು. ಆಗಸ್ಟ್ ತಿಂಗಳಲ್ಲಿ ಆಂಧ್ರ ಪ್ರದೇಶದ ಮೆಹಬೂಬ್ ನಗರದಲ್ಲಿ ಭಾರೀ ರೈಲು ಅವಘಡವೊಂದು ನಡೆಯಿತು. 112 ಮಂದಿ ಈ ದುರಂತದಲ್ಲಿ ಮೃತಪಟ್ಟರು. ಸರಕಾರದೊಳಗಿರುವ ಸಚಿವರು ಅಚ್ಚರಿ ಪಡುವಂತೆ ಲಾಲ್ ಬಹಾದುರ್ ಶಾಸ್ತ್ರಿಯವರು ನೈತಿಕ ಹೊಣೆ ಹೊತ್ತು ತಕ್ಷಣ ತಮ್ಮ ಖಾತೆಗೆ ರಾಜೀನಾಮೆಯನ್ನು ಸಲ್ಲಿಸಿದರು. ಆದರೆ ಪ್ರಧಾನಿ ನೆಹರೂ ಅವರು ಆ ರಾಜೀನಾಮೆಯನ್ನು ಸ್ವೀಕರಿಸಲಿಲ್ಲ ಮಾತ್ರವಲ್ಲ, ಅದನ್ನು ಹಿಂದೆಗೆಯುವಂತೆ ಮಾಡುವಲ್ಲಿ ಯಶಸ್ವಿಯಾದರು. ಪ್ರಕರಣ ಇಲ್ಲಿಗೇ ಮುಗಿಯಲಿಲ್ಲ. ಇದಾದ ಕೆಲವೇ ತಿಂಗಳಲ್ಲಿ ಅಂದರೆ, ನವೆಂಬರ್‌ನಲ್ಲಿ ತಮಿಳುನಾಡಿನ ಅರಿಯಲೂರಿನಲ್ಲಿ ಇನ್ನೊಂದು ಭಾರೀ ರೈಲು ದುರಂತ ಸಂಭವಿಸಿತು. ಈ ದುರಂತದಲ್ಲಿ 144 ಮಂದಿ ಮೃತಪಟ್ಟರು. ಈಗ ಮಾತ್ರ ಲಾಲ್‌ಬಹಾದುರ್ ಶಾಸ್ತ್ರಿಯವರು ತಡಮಾಡಲಿಲ್ಲ. ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು ಮಾತ್ರವಲ್ಲ, ಅದನ್ನು ಯಾವ ‘ಸದ್ದು ಗದ್ದಲ’ವೂ ಇಲ್ಲದಂತೆ ತಕ್ಷಣವೇ ಸ್ವೀಕರಿಸಬೇಕು ಎಂದು ಪ್ರಧಾನಿಯವರಲ್ಲಿ ಮನವಿ ಮಾಡಿದರು. ಒಬ್ಬ ರಾಜಕಾರಣಿ, ಅದರಲ್ಲೂ ಒಬ್ಬ ಸಚಿವ ತನ್ನ ಹುದ್ದೆಗೆ ಎಷ್ಟರ ಮಟ್ಟಿಗೆ ನಿಷ್ಠನಾಗಿರಬೇಕು ಎನ್ನುವುದನ್ನು ತನ್ನ ಸಹೋದ್ಯೋಗಿಗಳಿಗೆ ‘ರಾಜೀನಾಮೆ’ಯ ಮೂಲಕ ಶಾಸ್ತ್ರಿಯವರು ತೋರಿಸಿಕೊಟ್ಟರು. ಇಂದು ಲಾಲ್‌ಬಹಾದುರ್ ಶಾಸ್ತ್ರಿಯವರು ಕೇವಲ ಕಾಂಗ್ರೆಸಿಗರಿಗೆ ಮಾತ್ರವಲ್ಲ, ಬಿಜೆಪಿಯವರಿಗೂ ಅಚ್ಚು ಮೆಚ್ಚು. ಅಕ್ಟೋಬರ್ 2ರಂದು ಇಡೀ ದೇಶ ಮಹಾತ್ಮಾ ಗಾಂಧೀಜಿಯ ಜಯಂತಿಯನ್ನು ಆಚರಿಸುತ್ತಿದ್ದರೆ, ಅಂದು ಲಾಲ್ ಬಹಾದುರ್ ಶಾಸ್ತ್ರಿಯವರೂ ಹುಟ್ಟಿದ ದಿನ ಎನ್ನುವುದನ್ನು ದೇಶಕ್ಕೆ ನೆನಪಿಸಿಕೊಡುವುದು ಬಿಜೆಪಿಯ ನಾಯಕರೇ ಆಗಿದ್ದಾರೆ. ಆದುದರಿಂದ ಲಾಲ್ ಬಹಾದುರ್ ಶಾಸ್ತ್ರಿಯವರ ರಾಜಕೀಯ ನಡೆಗಳು ಬಿಜೆಪಿಯ ನಾಯಕರಿಗೆ ಒಂದು ಆದರ್ಶವಾಗಿರಬೇಕಾಗಿತ್ತು. ಸರಕಾರದ ಎಡವಟ್ಟಿನಿಂದ ನಡೆದ ಸಾವಿರಾರು ‘ದುರಂತಗಳಿಗೆ’ ಬಿಜೆಪಿಯ ನಾಯಕರೇನಾದರೂ ರಾಜೀನಾಮೆ ನೀಡುತ್ತಾ ಬಂದಿದ್ದರೆ, ಇಂದು ಸರಕಾರ ನಡೆಸುವುದಕ್ಕೆ ಮತ್ತೆ ಕಾಂಗ್ರೆಸ್ ನಾಯಕರನ್ನೇ ಹುಡುಕಬೇಕಾದ ಸ್ಥಿತಿ ಬಿಜೆಪಿಗೆ ನಿರ್ಮಾಣವಾಗಿ ಬಿಡಬಹುದಿತ್ತು. ಆದುದರಿಂದಲೇ ಭದ್ರತೆಯ ಲೋಪದೋಷಕ್ಕೆ ಸಂಬಂಧಿಸಿ ಸಚಿವರೊಬ್ಬರ ರಾಜೀನಾಮೆಗೆ ವಿರೋಧ ಪಕ್ಷ ಒತ್ತಾಯಿಸಿದಾಗ ‘ಕೇಳಿದಾಗೆಲ್ಲ ರಾಜೀನಾಮೆ ನೀಡಲು ನಮ್ಮದು ಯುಪಿಎ ಸರಕಾರ ಅಲ್ಲ’ ಎಂದು ಬಿಜೆಪಿ ನಾಯಕರಾದ ರಾಜ್‌ನಾಥ್ ಸಿಂಗ್ ಸ್ಬಷ್ಟಪಡಿಸಿದ್ದರು.

ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ 8 ವರ್ಷಗಳು ಸಂದಿವೆ. 2014ರ ಮೇ 26ರಂದು ಪ್ರಧಾನಿಯಾಗಿ ಅವರು ಅಧಿಕಾರ ಸ್ವೀಕರಿಸಿದ ದಿನವೇ ಉತ್ತರ ಭಾರತದಲ್ಲಿ ಗೋರಖಪುರದಿಂದ ಹಿಸಾರ್‌ಗೆ ಸಾಗುತ್ತಿದ್ದ ರೈಲೊಂದು ಹಳಿತಪ್ಪಿ ಭಾರೀ ದುರಂತವೊಂದು ಸಂಭವಿಸಿತು. ಈ ದುರಂತದಲ್ಲಿ 40ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 150 ಮಂದಿ ಗಾಯಗೊಂಡಿದ್ದರು. ಪ್ರಧಾನಿ ಪ್ರಮಾಣ ವಚನದ ದಿನವೇ ಸಂಭವಿಸಿದ ಈ ದುರಂತ, ಭವಿಷ್ಯದಲ್ಲಿ ಭಾರತ ಹೇಗೆ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಹಳಿ ತಪ್ಪಲಿದೆ ಎನ್ನುವ ಸಂದೇಶವೊಂದನ್ನು ದೇಶದ ಜನರಿಗೆ ನೀಡಿತ್ತೆ? ಎಂದು ದೇಶವಾಸಿಗಳು ಅನುಮಾನ ಪಡುವಂತಹ ಸ್ಥಿತಿಗೆ ಬಂದು ನಿಂತಿದೆ ಭಾರತ. ಎಂಟು ವರ್ಷವನ್ನು ‘ಮುಗಿಸಿದ’ ಪ್ರಧಾನಿ ಮೋದಿ, ಇತ್ತೀಚೆಗೆ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡುತ್ತಾ ‘‘ನಾನು ಹಾಗೂ ನನ್ನ ಸರಕಾರ ಕಳೆದ ಎಂಟು ವರ್ಷಗಳಲ್ಲಿ ಜನರು ನಾಚಿಕೆಯಿಂದ ತಲೆ ತಗ್ಗಿಸುವಂತಹ ಯಾವುದೇ ಕೆಲಸವನ್ನು ಮಾಡಿಲ್ಲ’’ ಎಂದು ಎದೆ ತಟ್ಟಿಕೊಂಡರು. ‘‘ನಿಮ್ಮ ಹಾರೈಕೆ ಹಾಗೂ ಬಾಪು, ಸರ್ದಾರರ ಪವಿತ್ರ ಭೂಮಿಯ ಕಾರಣದಿಂದ ಕಳೆದ ಎಂಟು ವರ್ಷಗಳಲ್ಲಿ ಪ್ರಮಾದವಶಾತ್ ಕೂಡ ಯಾವುದೇ ತಪ್ಪು ಸಂಭವಿಸಲು ನಾನು ಅವಕಾಶ ನೀಡಿಲ್ಲ. ನಾಗರಿಕರು ನಾಚಿಕೆಯಿಂದ ತಲೆ ತಗ್ಗಿಸುವಂತಹ ಯಾವುದೇ ಕೆಲಸವನ್ನು ಮಾಡಿಲ್ಲ’’ ಎಂದು ಅವರು ಯಾವುದೇ ನಾಚಿಕೆಯಿಲ್ಲದೆ ಘೋಷಿಸಿಕೊಂಡಿದ್ದಾರೆ. ತಾನು ಸಚಿವನಾಗಿ ನಿರ್ವಹಿಸುತ್ತಿದ್ದ ಇಲಾಖೆಯ ರೈಲೊಂದು ಹಳಿತಪ್ಪಿ ನಡೆದ ದುರಂತಕ್ಕೆ ಎರಡೆರಡು ಬಾರಿ ರಾಜೀನಾಮೆ ನೀಡಿದ ಲಾಲ್ ಬಹಾದುರ್ ಶಾಸ್ತ್ರಿಯವರೇನಾದರೂ ಪ್ರಧಾನಿ ಮೋದಿಯವರ ಮಾತುಗಳನ್ನು ಕೇಳಿದ್ದಿದ್ದರೆ, ಒಂದು ಕಾಲದಲ್ಲಿ ಈ ದೇಶದ ಪ್ರಧಾನಿಯಾದ ತಪ್ಪಿಗೆ ಖಂಡಿತವಾಗಿಯೂ ನಾಚಿಕೊಳ್ಳುತ್ತಿದ್ದರೇನೋ?

 ಎಂಟು ವರ್ಷಗಳ ಮೊದಲು ಈ ದೇಶದ ಜಿಡಿಪಿ ಹೇಗಿತ್ತು, ಇಂದು ಈ ದೇಶದ ಜಿಡಿಪಿ ಯಾವ ಮಟ್ಟಕ್ಕೆ ಇಳಿದಿದೆ ಎನ್ನುವುದನ್ನು ಗಂಭೀರವಾಗಿ ತೆಗೆದುಕೊಂಡ ಯಾವ ಪ್ರಧಾನಿಯೂ ‘‘ಕಳೆದ ಎಂಟು ವರ್ಷಗಳಲ್ಲಿ ದೇಶ ತಲೆತಗ್ಗಿಸುವಂತಹ ಕೆಲಸ ಮಾಡಿಲ್ಲ’’ ಎಂದು ಎದೆ ತಟ್ಟಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ರೂಪಾಯಿ ವೌಲ್ಯ ಇಳಿಕೆ, ನಿರುದ್ಯೋಗ ಹೆಚ್ಚಳ, ಸಾರ್ವಜನಿಕ ಸಂಸ್ಥೆಗಳ ಮಾರಾಟ, ಹಸಿವಿನಲ್ಲಿ ಹೆಚ್ಚಳ, ಹೆಚ್ಚುತ್ತಿರುವ ಕೋಮುಗಲಭೆಗಳು, ಗುಂಪು ಹತ್ಯೆಗಳು ಇವೆಲ್ಲವನ್ನು ಪ್ರಧಾನಿಯವರು ತನ್ನ ಸಾಧನೆಗಳ ಖಾತೆಗೆ ಜಮಾ ಮಾಡಿಕೊಂಡಿದ್ದಾರೆ ಎನ್ನುವುದು ಅವರ ಮಾತಿನಿಂದ ಸ್ಪಷ್ಟವಾಗುತ್ತದೆ.

ನೋಟು ನಿಷೇಧ ಪ್ರಧಾನಿ ನರೇಂದ್ರ ಮೋದಿಯ ಅಧಿಕಾರಾವಧಿಯಲ್ಲಿ ನಡೆದ ಅತಿ ದೊಡ್ಡ ಅನ್ಯಾಯ. ಇಂದಿಗೂ ನೋಟು ನಿಷೇಧದಿಂದ ದೇಶಕ್ಕಾಗಿರುವ ಲಾಭವೇನು ಎನ್ನುವುದನ್ನು ಜನರ ಮುಂದಿಡುವಲ್ಲಿ ಮೋದಿಯವರು ಸಂಪೂರ್ಣ ವಿಫಲವಾಗಿದ್ದಾರೆ. ಕಪ್ಪು ಹಣ ಹೊರ ಬರುತ್ತದೆ ಎಂಬ ನಿರೀಕ್ಷೆಯಿಂದ ಈ ದೇಶದ ಜನಸಾಮಾನ್ಯರು ಮಾಡಿದ ಬಲಿದಾನಗಳು ಸಂಪೂರ್ಣ ವ್ಯರ್ಥವಾದವು. ‘‘ನನಗೆ ಕೇವಲ 50 ದಿನ ಕೊಡಿ. ಅಷ್ಟರಲ್ಲಿ ಎಲ್ಲವನ್ನು ಸರಿ ಮಾಡದೇ ಇದ್ದಲ್ಲಿ ನನ್ನನ್ನು ಕೊಂದು ಹಾಕಿ’’ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕ ವೇದಿಕೆಯಲ್ಲಿ ನಿಂತು ಜನರಿಗೆ ಕರೆ ನೀಡಿದರು. 50 ದಿನಗಳಲ್ಲ, ಎಂಟು ವರ್ಷಗಳು ಸಂದಿವೆ. ಆದರೂ ಯಾವುದೂ ಸರಿಯಾಗಲೇ ಇಲ್ಲ. ಬದಲಿಗೆ ಇನ್ನಷ್ಟು ಬಿಗಡಾಯಿಸುತ್ತಲೇ ಹೋಯಿತು. ಕೊಂದು ಹಾಕುವ ಪ್ರಶ್ನೆ ಪಕ್ಕಕ್ಕಿರಲಿ, ಕನಿಷ್ಠ ತನ್ನಿಂದಾದ ಪ್ರಮಾದಕ್ಕಾಗಿ ರಾಜೀನಾಮೆಯನ್ನು ನೀಡಿದ್ದರೂ ಮೋದಿಯವರು ತಮ್ಮ ೌರವವನ್ನು ಉಳಿಸಿಕೊಳ್ಳುತ್ತಿದ್ದರು.

ಕೊರೋನವನ್ನು ನಿರ್ವಹಿಸಿದ ರೀತಿಗಾಗಿ ಭಾರತ ವಿಶ್ವದ ಟೀಕೆಗೊಳಗಾಯಿತು. ಯಾವುದೇ ಪೂರ್ವ ಸೂಚನೆಗಳಿಲ್ಲದ ಲಾಕ್‌ಡೌನ್ ಕಾರಣದಿಂದಾಗಿ ಸಹಸ್ರಾರು ಕೂಲಿ ಕಾರ್ಮಿಕರು ಬೀದಿಗೆ ಬಿದ್ದರು. ನೂರಾರು ಕಿಲೋಮೀಟರ್‌ಗಳನ್ನು ನಡೆಯುತ್ತಾ ತಮ್ಮ ಮನೆ ಸೇರುವ ಧಾವಂತದಲ್ಲಿ ಕಾರ್ಮಿಕರು ದಾರಿ ಮಧ್ಯೆ ಮೃತಪಟ್ಟರು. ಹಾಗೆ ಮನೆ ಸೇರುತ್ತಿದ್ದ ಹಲವು ಕಾರ್ಮಿಕರ ಮೇಲೆ ರೈಲು ಹರಿದ ಘಟನೆ ಜಾಗತಿಕ ಮಟ್ಟದಲ್ಲಿ ಚರ್ಚೆಗೀಡಾಯಿತು. ಆಸ್ಪತ್ರೆಗಳ ಅವ್ಯವಸ್ಥೆ ಸಾವಿರಾರು ಜನರ ಸಾವಿಗೆ ಕಾರಣವಾಯಿತು. ಗಂಗಾನದಿಯಲ್ಲಿ ಸಾವಿರಾರು ಮೃತದೇಹಗಳು ತೇಲತೊಡಗಿದವು. ಈ ಮೃತದೇಹಗಳ ಚಿತ್ರಗಳು ವಿದೇಶಿ ಪತ್ರಿಕೆಗಳ ಮುಖಪುಟಗಳಲ್ಲಿ ರಾರಾಜಿಸಿದಾಗ ದೇಶದ ಜನರು ನಾಚಿಕೆಯಿಂದ ತಲೆತಗ್ಗಿಸಬೇಕಾಯಿತು. ಆದರೆ ಪ್ರಧಾನಿಯವರಿಗೆ ಮಾತ್ರ ಈ ಬಗ್ಗೆ ಯಾವ ಪಶ್ಚಾತ್ತಾಪವೂ ಇಲ್ಲ ಎನ್ನುವುದು ಅವರ ಹೇಳಿಕೆಯಿಂದ ಇದೀಗ ಸಾಬೀತಾಗಿದೆ. ಸೂಕ್ತ ಸಮಯದಲ್ಲಿ ಆಕ್ಸಿಜನ್ ಸಿಲಿಂಡರ್ ಪೂರೈಸದ ಕಾರಣಕ್ಕಾಗಿ ಸುಪ್ರೀಂಕೋರ್ಟ್‌ನಿಂದ ತಪರಾಕಿ ಪಡೆದಾಗಲಾದರೂ ಪ್ರಧಾನಿ ಮೋದಿಯವರು ತಲೆತಗ್ಗಿಸಬೇಕಾಗಿತ್ತು. ಆ ತಪರಾಕಿಯ ನೋವು ಅವರ ಭಾಷಣದಲ್ಲಿ ಎಳ್ಳಷ್ಟು ಇರಲಿಲ್ಲ. ಅಮೆರಿಕದ ಚುನಾವಣೆಯಲ್ಲಿ ಮೂಗು ತೂರಿಸಿ, ಟ್ರಂಪ್ ಪರವಾಗಿ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿಯವರು ಭಾಗವಹಿಸಿ ‘ಅಬ್ ಕಿ ಬಾರ್ ಟ್ರಂಪ್‌ಕಿ ಸರ್ಕಾರ್’ ಎಂದು ಘೋಷಿಸಿದಾಗ ಭಾರತದ ಜನಸಾಮಾನ್ಯರು ಅವಮಾನದಿಂದ ತಲೆತಗ್ಗಿಸಿದ್ದು ಅವರ ನೆನಪಲ್ಲೇ ಇಲ್ಲ. ರೈತರನ್ನು ಸುಮಾರು ಒಂದು ವರ್ಷಗಳ ಕಾಲ ಬೀದಿಯಲ್ಲಿ ನಿಲ್ಲಿಸಿ ಅವರನ್ನು ಉಗ್ರರು, ಭಯೋತ್ಪಾದಕರು ಎಂದು ಅವಮಾನಿಸಿ, ಬಳಿಕ ಅವರ ಬೇಡಿಕೆಗಳಿಗೆ ತಲೆಬಾಗಿದ ಆ ಕ್ಷಣವನ್ನಾದರೂ ಪ್ರಧಾನಿ ಮೋದಿ ತಮ್ಮ ಸ್ಮತಿಯಲ್ಲಿ ಉಳಿಸಿಕೊಳ್ಳಬೇಕಾಗಿತ್ತು. ‘ಅಚ್ಚೇ ದಿನ್’ ಕುರಿತಂತೆ ಜನರಲ್ಲಿ ಕನಸುಗಳನ್ನು ಬಿತ್ತಿದ ಮೋದಿಯ ಬಣ್ಣದ ಮಾತುಗಳು ಸಂಪೂರ್ಣ ಕರಗಿವೆ. ದೇಶ ವಾಸ್ತವಕ್ಕೆ ಮುಖ ಮಾಡಿ ನಿಂತಿದೆ. ಪ್ರಧಾನಿಯ ರಂಗು ರಂಗಿನ ಮಾತುಗಳನ್ನು ನಂಬಿ ಮೋಸ ಹೋದ ಅವಮಾನದಿಂದ ಜನರು ಇನ್ನೂ ತಲೆ ಎತ್ತಿಲ್ಲ. ಆ ಜನರ ಮುಂದೆ ‘‘ದೇಶ ನಾಚಿಕೆಯಿಂದ ತಲೆ ತಗ್ಗಿಸುವಂತಹ ಕೆಲಸವನ್ನು ನಾನು ಮಾಡಿಲ್ಲ’ ಎಂದು ಮೋದಿಯವರು ಘಂಟಾಘೋಷವಾಗಿ ಹೇಳಬೇಕಾದರೆ ಅವರು ಲಜ್ಜೆಯನ್ನು ಸಂಪೂರ್ಣ ಕಳೆದುಕೊಂಡಿರುವ ಸಂಕೇತವಾಗಿದೆ. ಲಜ್ಜೆ ಕಳೆದುಕೊಂಡ ಮನುಷ್ಯ ಎಲ್ಲವನ್ನು ಕಳೆದುಕೊಂಡ ಎನ್ನುವ ಮಾತಿದೆ. ಆದರೆ ಇಲ್ಲಿ ಕಳೆದುಕೊಳ್ಳಲಿರುವುದು ಮೋದಿಯಲ್ಲ, ಈ ದೇಶ ಎನ್ನುವುದನ್ನು ನಾವು ನೆನಪಲ್ಲಿಟ್ಟುಕೊಂಡು ಮುರಿದು ಬಿದ್ದಿರುವ ವರ್ತಮಾನವನ್ನು ಮತ್ತೆ ಎತ್ತಿ ಕಟ್ಟುವ ಕೆಲಸ ಮಾಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News