ನಾಳೆ (ಮೇ 31) ರಾಜ್ಯಾದ್ಯಂತ 'ಕಪ್ಪು ಬಾವುಟ ಹಿಡಿದು' ಪ್ರತಿಭಟನೆಗೆ ರೈತ ಸಂಘಟನೆಗಳ ಕರೆ

Update: 2022-05-30 14:56 GMT

ಬೆಂಗಳೂರು: ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಹಾಗೂ ಮಸಿ ಬಳಿದಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರೈತ ನಾಯಕರು ಗಾಂಧಿ ಭವನದ ಗಾಂಧಿ ಪುತ್ಥಳಿ ಮುಂಭಾಗ ಪ್ರತಿಭಟನೆ ನಡೆಸಿ, ಘಟನೆಯನ್ನು ತೀವ್ರವಾಗಿ ಖಂಡಿಸಿದರು. 

ಉದ್ದೇಶಪೂರ್ವಕವಾಗಿ ಹಾಗೂ ಪೂರ್ವನಿಯೋಜಿತವಾಗಿ ಈ ಕೃತ್ಯ ನಡೆದಿದೆ. ಕಿಡಿಗೇಡಿಗಳು ಎಲ್ಲ ಸಿದ್ಧತೆ ಮಾಡಿಕೊಂಡು ಬಂದಿದ್ದರು. ದುರುದ್ದೇಶಪೂರ್ವಕವಾಗಿ ಈ ಕೃತ್ಯವನ್ನು ಪೊಲೀಸರು ಸಹ ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಮೇ 31ರಂದು ನಾವು ರಾಜ್ಯಾದ್ಯಂತ ಹೋರಾಟಕ್ಕೆ ಕರೆ ಕೊಡುತ್ತಿದ್ದು, ಕಪ್ಪು ಮಸಿ ಬಳಿದಿರುವುದನ್ನು ಖಂಡಿಸಿ ಕಪ್ಪು ಬಟ್ಟೆ ಧರಿಸಿ ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ. ಅಲ್ಲದೇ ಈ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಆಗಬೇಕು. ಸೂಕ್ತ ತನಿಖೆ ನಡೆಸಿ ಅವರು ಯಾರು ಎಂಬುದನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ನಾಳೆ 11 ಗಂಟೆಗೆ ಬೆಂಗಳೂರಿನ ಪ್ರತಿಭಟನೆಯು ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿದ್ದು, ಸಂಯುಕ್ತ ಹೋರಾಟ, ಕರ್ನಾಟಕದ ಎಲ್ಲಾ ರೈತ, ಕಾರ್ಮಿಕ, ದಲಿತ, ವಹಿಳೆ, ವಿದ್ಯಾರ್ಥಿ ಯುವಜನ ಸಮಘಟನೆಗಳು ಸೇರಿದಂತೆ ಎಲ್ಲಾ ಸರಾಗಿ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸುವರು ಎಂದು ಸಂಯುಕ್ತ ಹೋರಾಟ-ಕರ್ನಾಟಕ ಕರೆ ನೀಡಿದೆ.

ಕೋಡಿಹಳ್ಳಿ ವಿರುದ್ಧದ ಆರೋಪ ವಿಚಾರಣೆಗೆ ಸಮಿತಿ ರಚನೆ

ಇದೇ ದಿನ ಕೋಡಿಹಳ್ಳಿ ಚಂದ್ರಶೇಖರ್ ಅವರ ಮೇಲೆ ಬಂದಿರುವ ಆರೋಪದ ಕುರಿತು ಸಂಯುಕ್ತ ಹೋರಾಟ-ಕರ್ನಾಟಕದ ಕೋರ್ ಕಮಿಟಿ ಸಭೆ ನಡೆಯುತ್ತಿತ್ತು. ಆರೋಪವು ಬಹಳ ಗಂಭೀರವಾಗಿದ್ದು ಇದನ್ನು ಸ್ವತಂತ್ರ ಮತ್ತು ಸಮಗ್ರವಾಗಿ ತನಿಖೆ ನಡೆಸಿ ಒಂದು ತೀರ್ಮಾನಕ್ಕೆ ಬರುವುದಾಗಿ ಸಮಿತಿ ನಿರ್ಣಯಿಸಿದೆ, ಅದರ ಭಾಗವಾಗಿ ತ್ರಿಸದಸ್ಯ ಪೀಠವನ್ನು ಸಮಿತಿ ರಚಿಸಿದೆ. ದೆಹಲಿಯ ಸಂಯುಕ್ತ ಕಿಸಾನ್ ನಾಯಕತ್ವದೊಂದಿಗೂ ಇದರ ಕುರಿತು ಎಲ್ಲಾ ದೃಷ್ಟಿಕೋನದಿಂದಲೂ ಚರ್ಚಿಸಿ ಸಮನ್ವಯ ಮಾಡಿಕೊಂಡು ಸಮಗ್ರವಾದ ತೀರ್ಮಾನದ ಜೊತೆಗೆ ಸಂಪೂರ್ಣ ವಾದ ವರದಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗುವುದು ಎಂದು ಬಡಗಲಪುರ ನಾಗೇಂದ್ರ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News