×
Ad

ಮನಪಾ: ನೀರಿನ ದರ ಪರಿಷ್ಕರಣೆ; ತಿಂಗಳೊಳಗೆ ಅನುಷ್ಠಾನಕ್ಕೆ ಕ್ರಮ: ಮೇಯರ್ ಭರವಸೆ

Update: 2022-05-31 19:15 IST

ಮಂಗಳೂರು : ಪಾಲಿಕೆ ವ್ಯಾಪ್ತಿಯಲ್ಲಿ ಗೃಹ ಬಳಕೆ ಕುಡಿಯುವ ನೀರಿನ ದರ ಪರಿಷ್ಕರಣೆಗೆ ನಿರ್ಧರಿಸಲಾಗಿದ್ದು, ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿ ತಿಂಗಳೊಳಗೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದ್ದಾರೆ.

ಮಂಗಳವಾರ ನಡೆದ ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಗೃಹ ಬಳಕೆಯ ಕುಡಿಯುವ ನೀರಿನ ಗರಿಷ್ಟ ದರವನ್ನು ೨೦ ಸಾವಿರ ಲೀಟರ್‌ಗೆ ಏರಿಕೆ ಮಾಡುವುದು ಹಾಗೂ ಕಿ.ಲೀ.ಗೆ ೬ರೂ.ಗಳಿದ್ದ ಬಳಕೆಯ ದರವನ್ನು ೫ ರೂ.ಗೆ ಇಳಿಕೆ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ. ಹೊಸ ದರ ಪರಿಷ್ಕರಣೆಯಂತೆ. ೨೦ ಸಾವಿರ ಲೀ. ನೀರು ಬಳಕೆ ಮಾಡಿದರೆ ಈ ಹಿಂದೆ ೧೪೦ ರೂ. ಶುಲ್ಕವಿದ್ದು, ಅದು  ೧೦೦ರೂ. ಆಗಲಿದೆ. ಪ್ರತಿ ೨೫ ಸಾವಿರ ಲೀ.ಗೆ ಹಾಲಿ ೧೮೫ ರೂ. ಶುಲ್ಕವಾಗುತ್ತಿದ್ದರೆ ಪರಿಷ್ಕರಣಾ ದರ ಅನುಷ್ಠಾನವಾದಲ್ಲಿ ಅದು  ೧೫೫ ರೂ. ಆಗಲಿದೆ ಎಂದರು.

ಈ ನಿರ್ಧಾರ ಪ್ರಕಟಿಸುವ ಮೊದಲು ಸದಸ್ಯ ಅಬ್ದುಲ್ ರವೂಫ್ ಅವರು ನೀರಿನ ದರ ಪರಿಷ್ಕರಣೆ ಕುರಿತಂತೆ ವಿಷಯ ಪ್ರಸ್ತಾಪಿಸಿದರು. ನೀರಿನ ದರ ಪರಿಷ್ಕರಣೆ ಮಾಡುವ ಬಗ್ಗೆ ಸುದೀರ್ಘ ಸಮಯದಿಂದ ತಿಳಿಸಿದರೂ ಕೂಡ ಮಾತು ಈಡೇರಿಲ್ಲ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಗರಿಷ್ಠ ೨೪ ಸಾವಿರ ಲೀ. ನೀರು ಇರುವುದನ್ನು ಈಗ ೮ ಸಾವಿರ ಲೀ.ಗೆ ಇಳಿಕೆ ಮಾಡಲಾಗಿದೆ ಎಂದು ಆಕ್ಷೇಪಿಸಿದರೆ, ಸದಸ್ಯ  ಪ್ರವೀಣ್‌ಚಂದ್ರ ಆಳ್ವ ಮಾತನಾಡಿ, ನೀರಿನ ದರ ಪರಿಷ್ಕರಣೆ ಮಾಡುವ ಬಗ್ಗೆ ಪಾಲಿಕೆಯು ಸರಕಾರಕ್ಕೆ ಪತ್ರ ಬರೆದಿದೆ ಎಂದು ಹೇಳಿ ಎರಡು ವರ್ಷಗಳಾದರೂ ಯಾವುದೇ ಕ್ರಮ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಮೇಯರ್ ಎಂ.ಶಶಿಧರ ಹೆಗ್ಡೆ ಮಾತನಾಡಿ, ನಗರದಲ್ಲಿ ಗೈಲ್ ಗ್ಯಾಸ್ ಯೋಜನೆಗಾಗಿ ಅಲ್ಲಲ್ಲಿ ರಸ್ತೆಯನ್ನು ಅಗೆಯುತ್ತಿದ್ದಾರೆ. ಆದರೆ ಅದೇ ಸ್ಥಳವನ್ನು ಮುಚ್ಚದ ಕಾರಣ ಸಮಸ್ಯೆಯಾಗುತ್ತಿದೆ.  ಜತೆಗೆ ಇ-ಖಾತಾ ಪಡೆಯಲು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ದೂರಿದರು.

ಕದ್ರಿ ಮತ್ತು ಸುರತ್ಕಲ್ ವಲಯ ಕಚೇರಿಗಳಲ್ಲಿ ಸಾರ್ವಜನಿಕರ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಮಾಜಿ ಮೇಯರ್ ಭಾಸ್ಕರ್ ಕೆ. ಪ್ರಸ್ತಾಪಿಸಿದರು.

ಸದಸ್ಯ ರಾಧಾಕೃಷ್ಣ ಅವರು ಮಾತನಾಡಿ, ಕದ್ರಿ ವಲಯ ಸಹಿತ ಪಾಲಿಕೆ ಭಾಗದಲ್ಲಿ ಸಾಮಾನ್ಯ ಜನರು ಇ ಖಾತಾ ಪಡೆಯಲು ಪರದಾಡುತ್ತಿದ್ದಾರೆ. ಕೆಲವರಿಗೆ ಮಾತ್ರ ಖಾತಾ ತತ್‌ಕ್ಷಣ ನೀಡಲಾಗುತ್ತಿದೆ ಎಂದು ದೂರಿದರು.

ಆಯುಕ್ತರಾದ ಅಕ್ಷಯ್ ಶ್ರೀಧರ್ ಮಾತನಾಡಿ, ಇ ಖಾತಾ ನೀಡುವಲ್ಲಿ ಯಾವುದೇ ಲೋಪ ಆಗಬಾರದು  ಹಾಗೂ ಇ ಖಾತೆಗೆ ಒಟಿಪಿ ಬದಲು ಬಯೋಮೆಟ್ರಿಕ್ ವ್ಯವಸ್ಥೆ ಅನುಷ್ಠಾನಿಸಲಾಗುವುದು ಎಂದು ಹೇಳಿದರು.

ಪಾಲಿಕೆ ಸದಸ್ಯ ಅಬ್ದುಲ್ ಲತೀಫ್ ಮಾತನಾಡುತ್ತಾ ಸ್ಮಾರ್ಟ್‌ಸಿಟಿಯ ಹೆಸರಿನಲ್ಲಿ ಹ್ಯಾಮಿಲ್ಟನ್ ಸರ್ಕಲ್ ಕಡೆಗೆ ಈಗ ಹೋಗಲು ಆಗುತ್ತಿಲ್ಲ. ವಾಹನ ಸಂಚರಿಸುವ ರಸ್ತೆಯಲ್ಲಿ ಕಲ್ಲುಗಳನ್ನಿಟ್ಟು ಸಂಚಾರ ದಟ್ಟಣೆಗೆ ಕಾರಣವಾಗಿದೆ. ಅವೈಜ್ಞಾನಿಕ ಯೋಜನೆ ಜಾರಿಗೆ ಮುಂದಾಗಿ ಜನರಿಗೆ ಸಮಸ್ಯೆ ಉಂಟುಮಾಡಲಾಗುತ್ತಿದೆ ಎಂದರು.

ಮಾಜಿ ಮೇಯರ್ ದಿವಾಕರ ಪಾಂಡೇಶ್ವರ ಮಾತನಾಡಿ, ಸ್ಥಳೀಯ ಕಾರ್ಪೊರೇಟರ್ ಗಮನಕ್ಕೆ ತಾರದೆ ಕೆಲಸ ನಡೆಸಲಾಗುತ್ತಿದ್ದು,  ಸ್ಮಾರ್ಟ್‌ಸಿಟಿ-ಪಾಲಿಕೆಗೆ ಹೊಂದಾಣಿಕೆ ಇಲ್ಲದೆ ಗೊಂದಲ ಉಂಟಾಗಿದೆ ಎಂದರು.
ಈ ಬಗ್ಗೆ ವಾರದೊಳಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಮೇಯರ್ ಹಾಗೂ ಆಯುಕ್ತರು ಭರವಸೆ ನೀಡಿದರು.

ಎ.ಸಿ. ವಿನಯ್‌ರಾಜ್ ಮಾತನಾಡಿ, ನಿಯಮಾವಳಿ ಪ್ರಕಾರ ಕಳೆದ ವರ್ಷ ಮಾ.೨ರಿಂದ ಈ ವರ್ಷದ ಮಾ.೧ರವರೆಗೆ ಮಾತ್ರ ಮೇಯರ್ ಅಧಿಕಾರಾವಧಿ ಇತ್ತು. ಆದರೆ, ಕೆಲವೊಂದು ಕಾರಣದಿಂದ ಮೇಯರ್ ಅವರು ಮುಂದುವರಿದಿದ್ದಾರೆ. ಹಾಗಾಗಿ ಈ ಸಭೆ ನಡೆಸುವ ಅಧಿಕಾರ ಹಾಗೂ ಕೈಗೊಳ್ಳಲಾಗುವ ನಿರ್ಧಾರಗಲಿಗೆ ಮಾನ್ಯತೆ ಇದೆಯೇ ಎಂದು ಪ್ರಶ್ನಿಸಿದರು.

ಆಯುಕ್ತ ಅಕ್ಷಯ್ ಶ್ರೀಧರ್ ಪ್ರತಿಕ್ರಿಯಿಸಿ,  ಕಾನೂನು ಸಲಹೆಯನ್ನು ಸರಕಾರದಿಂದ ನಿರೀಕ್ಷಿಸಿ ಅದರಂತೆ ಇದೀಗ ಸಭೆ ನಡೆಸಲಾಗಿದೆ. ಮೈಸೂರು ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆಗಳಲ್ಲಿಯೂ ಎಪ್ರಿಲ್ ತಿಂಗಳಲ್ಲಿ ಸಾಮಾನ್ಯ ಸಭೆ ನಡೆದಿದೆ ಎಂದರು.

ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಮಾತನಾಡಿ, ನ್ಯಾಯಾಲಯದಲ್ಲಿ ಮೀಸಲಾತಿ ವಿಚಾರವಿರುವ ಕಾರಣದಿಂದ ಹೊಸ ಮೇಯರ್ ಆಯ್ಕೆ ನಡೆಯಲಿಲ್ಲ. ಆದರೆ ನಿಯಮಾವಳಿ ಪ್ರಕಾರ ಮೇಯರ್ ಅವರೇ ಅಧಿಕಾರ ನಡೆಸಲು ಅವಕಾಶವಿದೆ. ಇದರಂತೆ ಆಡಳಿತಕ್ಕೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಂಡಿದ್ದೇನೆ. ಆಡಳಿತ ಮಂಜೂರಾತಿಯನ್ನು ನಿಯಮಾವಳಿಯಂತೆ ನಡೆಸಲಾಗಿದೆ. ಕಾನೂನಿನ ಸಲಹೆ ಪಡೆದು ಸಾಮಾನ್ಯ ಸಭೆ ಕರೆಯಲಾಗಿದೆ ಎಂದರು.

ಉಪಮೇಯರ್ ಸುಮಂಗಳಾ ರಾವ್, ಆಯುಕ್ತ ಅಕ್ಷಯ್ ಶ್ರೀಧರ್ ಉಪಸ್ಥಿತರಿದ್ದರು.

ವಾರ್ಡ್‌ನ ಪಾಲಿಕೆ ಸದಸ್ಯರು ಅಧಿಕಾರಿಗಳ ವಿಶೇಷ ಸಭೆ
ನಗರದ ವಿವಿಧ ವಾರ್ಡ್‌ಗಳಲ್ಲಿ ಹಲವು ಸಮಸ್ಯೆಗಳಿದ್ದು, ಸಮನ್ವಯತೆ ಇಲ್ಲದೆ ಕಾಮಗಾರಿಗಳಿಗೆ ತೊಂದರೆ ಯಾಗುತ್ತಿದೆ. ಪ್ರತೀ ವಾರ ವಲಯವಾರು ತಲಾ ೧೫ ವಾರ್ಡ್‌ಗಳ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳ ಜತೆಗೆ ವಿಶೇಷ ಸಭೆ ನಡೆಸಲಾಗುವುದು. ಈ ವಾರದಿಂದಲೇ ಈ ಕ್ರಮವನ್ನು ಜಾರಿಗೊಳಿಸಲಾಗುವುದು. ೧ ತಿಂಗಳಲ್ಲಿ ೬೦ ವಾರ್ಡ್‌ಗಳ ಸಭೆಯನ್ನು ಪ್ರತ್ಯೇಕವಾಗಿ ಈ ಮುಖೇನ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News