×
Ad

ತಂಬಾಕು ಮುಕ್ತ ಗ್ರಾಮವಾಗಿ ಕೋಡಿಬೆಂಗ್ರೆ: ಅಧಿಕೃತ ಘೋಷಣೆ

Update: 2022-05-31 20:45 IST

ಉಡುಪಿ: ಕೋಡಿಬೆಂಗ್ರೆ ಗ್ರಾಮವು ತಂಬಾಕು ಮುಕ್ತ ಗ್ರಾಮವಾಗಬೇಕು ಎಂದು 20 ವರ್ಷಗಳ ಹಿಂದೆಯೇ ಸ್ಥಳೀಯ ಗ್ರಾಮಸ್ಥರು ನಿರ್ಧರಿಸಿ, ದೃಢ ನಿರ್ಧಾರದೊಂದಿಗೆ ತಂಬಾಕು ಮುಕ್ತ ಗ್ರಾಮವಾಗಿಸಿದ್ದರು. ಈಗ ಸರಕಾರದಿಂದ ಅಧಿಕೃತ ಘೋಷಣೆ ಮಾಡುತ್ತಿರುವುದು ಶ್ರೀರಕ್ಷೆಯನ್ನು ನೀಡಿದಂತಾಗಿದೆ. ಇದರಿಂದ ಗ್ರಾಮದ ಗ್ರಾಮಸ್ಥರ ಜವಾಬ್ದಾರಿಯು ಹೆಚ್ಚಿದೆ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದ್ದಾರೆ. 

ಮಂಗಳವಾರ ಜಿಲ್ಲಾಡಳಿತ, ಉಡುಪಿ ಜಿಲ್ಲಾ ಪಂಚಾಯತ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೆಕ್ಷಣಾ ಘಟಕ ಉಡುಪಿ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಉಡುಪಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕೋಡಿಬೆಂಗ್ರೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನ ಮತ್ತು ಕೋಡಿಬೇಂಗ್ರೆಯ ಎಲ್ಲಾ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ, ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ  ತಂಬಾಕು ಮುಕ್ತ ಕೋಡಿಬೆಂಗ್ರೆ ಗ್ರಾಮದ ಅಧಿಕೃತ ಘೋಷಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

15 ವರ್ಷಗಳ ಹಿಂದೆ ಈ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ  ನದಿ ಕಡಲದಡದ ಗ್ರಾಮವಾದ ಕೋಡಿಬೆಂಗ್ರೆ ಗ್ರಾಮದಲ್ಲಿ ಹಿರಿಯರು, ಯುವ ಜನರು ಸೇರಿ ಮದ್ಯ ಹಾಗೂ ತಂಬಾಕು ಮುಕ್ತ ಗ್ರಾಮವಾಗಬೇಕೆಂಬ ದೃಡ ನಿರ್ಣಯವನ್ನು ಕೈಗೊಂಡಿದ್ದು, ಪೂರ್ಣ ಗ್ರಾಮವನ್ನು ಮದ್ಯ ಹಾಗೂ ತಂಬಾಕು ಮುಕ್ತ ಗ್ರಾಮವಾಗಿರುವುದನ್ನು ಕೇಳಿ ಆಶ್ಚರ್ಯವೆನಿಸಿತು ಎಂದರು.

ಯಾವುದೇ ದುಷ್ಟಟವನ್ನು ಕಲಿತು ಅದರ ದಾಸರಾಗಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದರ ಬದಲು, ದುಶ್ಚಟದಿಂದ ಹೊರಬರಬೇಕೆಂಬ ಉತ್ತೇಜನ ಹೊಂದಿ, ವ್ಯಸನ ಮುಕ್ತರನ್ನಾಗಿಸುವುದು ಒಂದು ಕಷ್ಟದ ಕಾರ್ಯ. ಆದರೆ ಕೋಡಿಬೆಂಗ್ರೆ ಗ್ರಾಮದ ಜನರು ಇದನ್ನು ಸಾಧಿಸಿರುವುದು ಎಲ್ಲರಿಗೂ ಮಾದರಿಯಾಗಿದೆ. ಇದೊಂದು ಉತ್ತಮ ಸಾಧನೆ ಎಂದರು.

ತಂಬಾಕು ಮುಕ್ತ ಗ್ರಾಮವೆಂದು ಹಿಂದೆಯೇ ಕಾರ್ಯರೂಪಕ್ಕೆ ತಂದಿರುವುದಕ್ಕೆ ಈ ಗ್ರಾಮ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹವಾಗಿದೆ ಎಂದ ಅವರು,  ಸ್ಥಳೀಯ ಗ್ರಾಮದ ಸರ್ವಾಂಗಿಣ ಅಭಿವೃಧ್ದಿ ಕಾರ್ಯಗಳಿಗೆ ಹಾಗೂ ಇಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಸ್ಥಳೀಯ ಮುಖಂಡ ರಮೇಶ್ ಎಸ್.ತಿಂಗಳಾಯ ಪ್ರಾಸ್ತಾವಿಕವಾಗಿ ಮಾತನಾಡಿ, ಕೋಡಿಬೆಂಗ್ರೆ ಗ್ರಾಮವು ೨೯೦ ಮನೆಯನ್ನು ಹೊಂದಿ ೧೩೭೫ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಇದು ಒಂದು ಶಾಲೆ, ೬ ದೇವಸ್ಥಾನ, ೧ ಮಸೀದಿ, ೧೨ ದಿನಸಿ ಅಂಗಡಿಗಳನ್ನು ಒಳಗೊಂಡ ಗ್ರಾಮವಾಗಿದೆ. ಸ್ಥಳೀಯ ಜನರು ಒಳಿತು ಕಾರ್ಯಗಳಿಗೆ ಒಗ್ಗಟ್ಟನ್ನು ಪ್ರದರ್ಶಿಸುವುದು ಇಲ್ಲಿನ ಒಂದು ವಿಶೇಷ ಎಂದರು.

ಹಿಂದೆ ಮದುವೆ ಕಾರ್ಯಕ್ರಮದ ಮುನ್ನಾ ದಿನ ನಡೆಯುವ ವಿಜೃಂಭಣೆಯ ಮೆಹಂದಿ ಕಾರ್ಯಕ್ರಮದಲ್ಲಿ ಯುವ ಜನರು ಪಾನಮತ್ತರಾಗಿ, ತಡರಾತ್ರಿವರೆಗೆ ನರ್ತಿಸುತ್ತಿರುವುದು ಕಂಡ ಹಿರಿಯರು, ಯುವಜತೆ ದುಶ್ಚಟಕ್ಕೆ ಬಲಿಯಾಗ ಬಾರದೆಂಬ ಉದ್ದೇಶದಿಂದ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಮಿತಿಯ ಹಾಗೂ ದೇವರ ಆಶೀರ್ವಾದದಿಂದ ಮದ್ಯಪಾನ ಹಾಗೂ ನಶೆ ಮುಕ್ತ ಗ್ರಾಮ ವಾಗಿಸಬೇಕೆಂಬ ಕರಿಣ ನಿರ್ಧಾರ ಹಾಗೂ ಪರಿಶ್ರಮದಿಂದ  ಪ್ರಸ್ತುತ ಗ್ರಾಮ ಇವೆರೆಡರಿಂದ ಮುಕ್ತವಾಗಿದೆ ಎಂದರು.

ಗ್ರಾಮಸ್ಥರ ಜೊತೆಗೆ ಸ್ಥಳೀಯ ವ್ಯಾಪಾರಸ್ಥರು ಸಹ ಇದಕ್ಕೆ ಕೈಜೋಡಿಸಿ ತಮ್ಮ ಅಂಗಡಿ ಮುಂಗಟ್ಟುಗಳಲ್ಲಿ ತಂಬಾಕು ಉತ್ಪನ್ನಗಳನ್ನು  ಮಾರಾಟ ಮಾಡುವುದನ್ನೇ ನಿಲ್ಲಿಸಿ ಈ ಆಂದೋಲನಕ್ಕೆ ಸಹಕರಿಸಿದರು. ಗ್ರಾಮದಲ್ಲಿ ಅನಧಿಕೃತ ಮದ್ಯದಂಗಡಿಗಳನ್ನು ತೆರವುಗೊಳಿಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖ ವಾಗಿತ್ತು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ವಹಿಸಿದ್ದರು. ಇದೇ ಸಂದರ್ಭದಲ್ಲಿ  ಮದ್ಯ ಮತ್ತು ತಂಬಾಕು ಮುಕ್ತ ಗ್ರಾಮವನ್ನಾಗಿಸಲು ಸಹಕರಿಸಿದ ಹಿರಿಯರು ಹಾಗೂ ಯುವ ಜನರನ್ನು ಸನ್ಮಾನಿಸಲಾಯಿತು. ಸ್ಥಳೀಯ ಶಾಸಕರಿಗೆ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಬಗ್ಗೆ ಮನವಿಯನ್ನು ಸಲ್ಲಿಸಲಾಯಿತು.

ಸಭೆಯಲ್ಲಿ ಡಿಹೆಚ್‌ಓ ಡಾ.ನಾಗಭೂಷಣ ಉಡುಪ, ಜಿಲ್ಲಾ  ಸರ್ವೆಕ್ಷಣಾಧಿಕಾರಿ ಡಾ.ನಾಗರತ್ನ, ಜಿಲ್ಲಾ ಆಹಾರ ಸುರಕ್ಷಿತಾ ಅಧಿಕಾರಿ ಡಾ.ಪ್ರೇಮಾನಂದ, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು, ತಾಪಂ ಕಾರ್ಯ ನಿರ್ವಹಣಾಧಿಕಾರಿ ಇಬ್ರಾಂಪುರ್, ಜಿಲ್ಲಾ ಪಂಚಾಯತ್ ಮಾಜಿ  ಸದಸ್ಯ ಕೇಶವ ಕುಂದರ್, ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಸಂಘದ  ಅಧ್ಯಕ್ಷ ಜಯ ಕುಂದರ್, ಮಣಿಪಾಲ ವಿವಿಯ ಡಾ.ಮುರಳೀಧರ್ ಕುಲಕರ್ಣಿ, ಕೋಡಿಬೆಂಗ್ರೆ ಪ್ರಾಥಮಿಕ ಆರೋಗ್ಯ ಕೇಂದ್ರದ  ವೈದ್ಯ ಡಾ.ಸಚ್ಚಿದಾನಂದ ಮುಖಂಡರಾದ ಬಿ.ಬಿ.ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News