ಮಳಲಿ ಮಸೀದಿ ವಿಚಾರ: ಜೂ.6ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ
ಮಂಗಳೂರು: ಮಳಲಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡುವಂತೆ ಕೋರಿ ಮಸೀದಿಯ ಪರವಾಗಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಗೊಂಡ ಮಂಗಳೂರಿನ ಮೂರನೇ ಹೆಚ್ಚುವರಿ ನ್ಯಾಯಾಲಯವು ತೀರ್ಪನ್ನು ಜೂ.6ಕ್ಕೆ ಕಾಯ್ದಿರಿಸಿದೆ.
ಇಂದು ವಾದ-ಪ್ರತಿವಾದ ನಡೆಸಿದ ವಕೀಲರು ಮಂಗಳವಾರ ನಡೆಸಿದ್ದ ವಾದಗಳಿಗೆ ಬದ್ಧರಾಗಿ ನ್ಯಾಯಾಲಯದ ಗಮನ ಸೆಳೆಯಲು ಮುಂದಾದರು.
ಮಸೀದಿಯ ಪರವಾಗಿ ವಾದಿಸಿದ ವಕೀಲರು ಎರಡು ಅರ್ಜಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಮಸೀದಿಯ ಜಮೀನನ್ನು ಈಗಾಗಲೇ ವಕ್ಫ್ ಬೋರ್ಡಿಗೆ ಬಿಟ್ಟು ಕೊಟ್ಟಿರುತ್ತದೆ. ಹೀಗಾಗಿ ಈ ಪ್ರಕರಣವು ಸಿವಿಲ್ ನ್ಯಾಯಾಲಯದ ಪರಿಧಿಗೆ ಬರುವುದಿಲ್ಲ. ಇದು ವಕ್ಫ್ ನ್ಯಾಯಾಲಯದ ಅಧೀನಕ್ಕೆ ಬರುತ್ತದೆ. ಆದ್ದರಿಂದ ಈ ಪ್ರಕರಣವನ್ನು ಸಿವಿಲ್ ನ್ಯಾಯಾಲಯದಲ್ಲಿ ನಡೆಸಲು ಸಾಧ್ಯವಿಲ್ಲ. ಹೀಗಿರುವಾಗ ವಿಶ್ವ ಹಿಂದೂ ಪರಿಷತ್ ಮಾಡಿರುವ ಮನವಿ ನ್ಯಾಯಾಲಯದಲ್ಲಿ ಸ್ವೀಕಾರಾರ್ಹವಲ್ಲ. ಅಲ್ಲದೆ 1991ರ ಪ್ರಕಾರ ಮಸೀದಿಯನ್ನು ಯಥಾಸ್ಥಿತಿಯಲ್ಲಿ ಕಾಯ್ದಿರಿಸಿಕೊಂಡು ಮಸೀದಿಯ ಪುನರ್ ನಿರ್ಮಾಣ ಕಾಮಗಾರಿಗೆ ಅನುವು ಮಾಡಿಕೊಡ ಬೇಕೆಂದು ಮಸೀದಿ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ವಿಶ್ವ ಹಿಂದೂ ಪರಿಷತ್ ಪರ ವಕೀಲ ಚಿದಾನಂದ ಕೆದಿಲಾಯ, ಮಸೀದಿಯ ಕಟ್ಟಡ ಪುರಾತನವಾಗಿದ್ದು, ಈ ಬಗ್ಗೆ ನ್ಯಾಯಾಲಯವು ವಿಶೇಷ ಕಮಿಷನ್ ನೇಮಿಸಿ ಉತ್ಖನನ ಮಾಡಿ ಸತ್ಯಾಸತ್ಯತೆ ಗಳನ್ನು ತಿಳಿಯಬೇಕೆಂದು ನ್ಯಾಯಾಲಯಕ್ಕೆ ವಾದ ಮಂಡಿಸಿದರು.
ಬಳಿಕ ವಾದ ಮಂಡಿಸಿದ ಮಸೀದಿಯ ಪರ ವಕೀಲರು, ಪ್ರಕರಣವು ವಕ್ಫ್ ನ್ಯಾಯಾಲಯಕ್ಕೆ ಸಂಬಂಧಪಟ್ಟದ್ದು ಅಥವಾ ಸಿವಿಲ್ ನ್ಯಾಯಾಲಯದ ಪರಿಧಿಗೆ ಬರುತ್ತದೆಯೋ ಇಲ್ಲವೋ? ಎಂಬ ಬಗ್ಗೆ ಪ್ರಥಮವಾಗಿ ನ್ಯಾಯಾಲಯ ತೀರ್ಪು ನೀಡಬೇಕು ಎಂದು ಮನವಿ ಮಾಡಿದರು.
ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ಪ್ರಥಮ ಪ್ರಾಶಸ್ತ್ಯದಲ್ಲಿ ವಿವಾದಿತ ಸ್ಥಳವನ್ನು ನ್ಯಾಯಾಲಯದ ಕಮಿಷನ್ ಮೂಲಕ ಸಂಪೂರ್ಣ ಪರಿಶೀಲನೆಗೆ ಒಳಪಡಿಸಬೇಕೆಂದು ಮನವಿ ಮಾಡಿಕೊಂಡರು.
ಎರಡೂ ಕಡೆಯ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಲಯವು ಪ್ರಕರಣವು ಸಿವಿಲ್ ನ್ಯಾಯಪೀಠದ ಪರಿಧಿಗೆ ಬರುತ್ತದೆಯೋ, ವಕ್ಫ್ ನ್ಯಾಯಾಲಯಕ್ಕೆ ಅಥವಾ ವಿಶ್ವ ಹಿಂದೂ ಪರಿಷತ್ ಅರ್ಜಿ ಪ್ರಥಮ ಪ್ರಾಶಸ್ತ್ಯದಲ್ಲಿ ಪುರಸ್ಕರಿಸಬೇಕೋ ಎಂಬುದರ ಕುರಿತು ಜೂನ್ 6 ರಂದು ತೀರ್ಪು ನೀಡಲಾಗುವುದು. ಆ ಬಳಿಕ ಪ್ರಕರಣವನ್ನು ಮುನ್ನಡೆಸಲಾಗುವುದು ಎಂದು ತಿಳಿಸಿತು.