ಸಿದ್ದರಾಮಯ್ಯರಿಂದ ಆರೆಸ್ಸೆಸ್ ಟೀಕೆ ಖಂಡನೀಯ: ಸುದರ್ಶನ ಎಂ
ಮಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೆಸ್ಸೆಸ್ ಅನ್ನು ಟೀಕಿಸಿರುವುದು ಖಂಡನೀಯ. ಇದನ್ನು ಸಿದ್ದರಾಮಯ್ಯ ಕೈಬಿಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ .ಎಂ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಅಲ್ಪ ಸಂಖ್ಯಾತರ ಮತಗಳಿಸಲು ಸಿದ್ದರಾಮಯ್ಯ ಈ ರೀತಿಯ ಟೀಕೆ ಮಾಡುತ್ತಿದ್ದಾರೆ. ದೇಶದ ಪ್ರಧಾನಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಸ್ಪೀಕರ್ ಸಂಘದ ಸ್ವಯಂ ಸೇವಕರಾಗಿದ್ದವರು ಎನ್ನುವ ವುದನ್ನು ಸಿದ್ದರಾಮಯ್ಯ ತಿಳಿದುಕೊಳ್ಳಲಿ. ಸಂಘವನ್ನು ದುರ್ಬಲ ಸಂಘಟನೆ ಎಂದ ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸುದರ್ಶನ ತಿಳಿಸಿದ್ದಾರೆ.
ಇತ್ತೀಚೆಗೆ ಎಸ್ ಡಿಪಿಐ ಸಮಾವೇಶದಲ್ಲಿ ಎಸ್.ಸಿ ಸಮುದಾಯ ದ ಬಗ್ಗೆ ಅವಹೇಳನಕಾರಿಯಾಗಿ ಎಸ್ ಡಿಪಿಐ ಮುಖಂಡರು ಹೇಳಿಕೆ ನೀಡಿದ್ದಾರೆಂದು ಆರೋಪಿಸಿದ್ದು, ಆ ಹೇಳಿಕೆಯನ್ನು ಖಂಡಿಸುವುದಾಗಿ ಸುದರ್ಶನ ಹೇಳಿದರು.
ದೇಶದದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿ ದೇಶದ ವರ್ಚಸ್ಸನ್ನು ವೃದ್ಧಿಸಿ ಎಂಟು ವರ್ಷ ಪೂರ್ಣಗೊಳಿಸಿದ ಈ ಸಂದರ್ಭದಲ್ಲಿ ಜಿಲ್ಲೆಯ ಅಭಿವೃದ್ಧಿಗೂ ಸಾಕಷ್ಟು ನೆರವು ದೊರೆತಿದೆ. ವಿವಿಧ ಯೋಜನೆಗಳ ಜೊತೆ ಕೋವಿಡ್ ಸಂದರ್ಭದಲ್ಲಿ ಜನತೆಯ ನೆರವಿಗೆ ನಿಂತ ಪ್ರಧಾನ ಮಂತ್ರಿಯವರನ್ನು ದ.ಕ ಜಿಲ್ಲಾ ಬಿಜೆಪಿ ಕೃತಜ್ಞತೆಗಳೊಂದಿಗೆ ಅಭಿನಂದಿಸುವುದಾಗಿ ಸುದರ್ಶನ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶಾಸಕ ವೇದವ್ಯಾಸ ಕಾಮತ್, ವಕ್ತಾರ ರವಿಶಂಕರ್ ಮಿಜಾರ್, ಜಗದೀಶ್ ಶೇಣವ, ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಕೋಶಾಧಿಕಾರಿ ಜಿತೇಂದ್ರ ಕೊಟ್ಟಾರಿ ಮೊದಲಾದವರು ಉಪಸ್ಥಿತರಿದ್ದರು.