ಎರಡೂ ದೇಶಗಳ ನಡುವಿನ ಬಾಂಧವ್ಯದಲ್ಲಿ ಉತ್ತಮ ಆರಂಭ: ಭಾರತೀಯ ನಿಯೋಗದ ಭೇಟಿಗೆ ತಾಲಿಬಾನ್‌ ಪ್ರತಿಕ್ರಿಯೆ

Update: 2022-06-02 17:46 GMT
Photo: twitter/QaharBalkhi

ಕಾಬೂಲ್:‌ ಕಳೆದ ವರ್ಷ ಆಗಸ್ಟ್ 16 ರಂದು, ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ನಿಯೋಗವು ಕಾಬೂಲ್‌ಗೆ ತಲುಪಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಇರಾನ್‌ ಜೊತೆಗಿನ ವ್ಯವಹಾರಗಳನ್ನು ನೋಡಿಕೊಳ್ಳುವ ಜಂಟಿ ಕಾರ್ಯದರ್ಶಿ ಜೆಪಿ ಸಿಂಗ್ ನೇತೃತ್ವದ ನಿಯೋಗವು ಗುರುವಾರ ಕಾಬೂಲ್‌ಗೆ ತಲುಪಿದ್ದು, ಭಾರತದಿಂದ ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವಿನ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಈ ವೇಳೆ ಜೆಪಿ ಸಿಂಗ್ ಅವರು ತಾಲಿಬಾನ್ ಆಡಳಿತದ ಹಿರಿಯ ನಾಯಕರನ್ನೂ ಭೇಟಿ ಮಾಡಿದ್ದಾರೆ. ‌

ಕಾಬೂಲ್‌ಗೆ ಮೊದಲ ಭಾರತೀಯ ನಿಯೋಗವನ್ನು ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಸ್ವಾಗತಿಸಿದ್ದಾರೆ. ಈ ಬೆಳವಣಿಗೆಯನ್ನು ತಾಲಿಬಾನ್‌ ಸ್ವಾಗತಿಸಿದ್ದು,  ತಾಲಿಬಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಕಹರ್ ಬಾಲ್ಖಿ "ಎರಡೂ ದೇಶಗಳ ನಡುವಿನ ಬಾಂಧವ್ಯದಲ್ಲಿ ಉತ್ತಮ ಆರಂಭ" ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಅಫ್ಘಾನಿಸ್ತಾನಕ್ಕೆ ಭಾರತದ ಮಾನವೀಯ ನೆರವಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಇದಲ್ಲದೆ, ಅಫ್ಘಾನಿಸ್ತಾನದಲ್ಲಿ ತನ್ನ ರಾಜತಾಂತ್ರಿಕ ಉಪಸ್ಥಿತಿಯನ್ನು ಪುನರಾರಂಭಿಸಲು ಮುತ್ತಕಿ ಭಾರತಕ್ಕೆ ಕರೆ ನೀಡಿದ್ದಾರೆ.  ಅಲ್ಲದೆ,  ಸ್ಥಗಿತಗೊಂಡಿರುವ ಹಿಂದಿನ ಅಭಿವೃದ್ಧಿ ನೆರವು ಯೋಜನೆಗಳನ್ನು ಪುನರಾರಂಭಿಸುವಂತೆ ಅವರು ಭಾರತವನ್ನು ಕೋರಿದ್ದಾರೆ.

ಭಾರತವು ʼಹಿಂದಿನಂತೆ ಅಫ್ಘಾನಿಸ್ತಾನದೊಂದಿಗೆ ಸಕಾರಾತ್ಮಕ ಸಂಬಂಧವನ್ನು ಬಯಸಿದೆʼ ಎಂದು ಭಾರತದ ನಿಯೋಗವು ತಿಳಿಸಿದೆ ಎಂದು ತಾಲಿಬಾನ್  ಹೇಳಿಕೊಂಡಿರುವುದಾಗಿ thewire ವರದಿ ಮಾಡಿದೆ.

ಅಫ್ಘಾನಿಸ್ತಾನದ ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಭಾರತವು ಇದುವರೆಗೆ 20 ಸಾವಿರ ಮೆಟ್ರಿಕ್ ಟನ್ ಗೋಧಿ, 13 ಟನ್ ಔಷಧಿ, ಐದು ಲಕ್ಷ ಡೋಸ್ ಆಂಟಿ-ಕೋವಿಡ್ ಲಸಿಕೆ, ಬೆಚ್ಚಗಿನ ಬಟ್ಟೆಗಳು ಇತ್ಯಾದಿಗಳನ್ನು ಕಳುಹಿಸಿದೆ ಎಂದು ವಿದೇಶಾಂಗ ಸಚಿವಾಲಯ ಇಂದು ಹೇಳಿಕೆಯಲ್ಲಿ ತಿಳಿಸಿದೆ. ಈ ಸಾಮಾಗ್ರಿಗಳನ್ನು ಕಾಬೂಲ್‌ನಲ್ಲಿರುವ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ, WHO, WEP ನಂತಹ UN ಏಜೆನ್ಸಿಗಳಿಗೆ ಹಸ್ತಾಂತರಿಸಲಾಗಿದೆ.  

ಭಾರತವು ಮಾನವೀಯ ನೆರವು ನೀಡುವುದನ್ನು ಮುಂದುವರಿಸುತ್ತದೆ ಎಂದು ಒತ್ತಿ ಹೇಳಿದ ಭಾರತೀಯ ನಿಯೋಗವು ಗಡಿ ನಿರ್ಬಂಧಗಳನ್ನು ಸಡಿಲಿಸುವ ಮೂಲಕ ಅಫ್ಘನ್ ರಫ್ತುಗಳನ್ನು ಸುಗಮಗೊಳಿಸುವ ಬಗ್ಗೆಯೂ ಮಾತನಾಡಿದೆ.

 ಅಫ್ಘನ್ ಗಣರಾಜ್ಯದ ಪತನದ ನಂತರ ಭಾರತವು ತನ್ನ ರಾಜತಾಂತ್ರಿಕ ಉಪಸ್ಥಿತಿಯನ್ನು ಕಾಬೂಲ್‌ ನಿಂದ ಹಿಂತೆಗೆದುಕೊಂಡಿತ್ತು. ಆಗಸ್ಟ್ 2021 ರಲ್ಲಿ ವಿದೇಶಿ ದೇಶಗಳು ತಮ್ಮ ರಾಜತಾಂತ್ರಿಕ ಉಪಸ್ಥಿತಿಯನ್ನು ಹಿಂತೆಗೆದುಕೊಳ್ಳುತ್ತಿದ್ದಂತೆ ತಾಲಿಬಾನ್ ಮಿಲಿಟರಿ ಮಿಂಚಿನ ದಾಳಿ ನಡೆಸಿ ಇಡೀ ದೇಶವನ್ನು ವಶಪಡಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News