ಹಿಂದೂಯೇತರರ ವಾಹನಕ್ಕೆ ನಿಷೇಧ ಹೇರಿ ಸೌತಡ್ಕದಲ್ಲಿ ಫ್ಲೆಕ್ಸ್ ಅಳವಡಿಕೆ; ಪಿಡಿಒಗೆ ನೋಟೀಸ್ ನೀಡಿದ ದ.ಕ. ಜಿಲ್ಲಾ ಎಸ್ಪಿ
ಬೆಳ್ತಂಗಡಿ: ತಾಲೂಕಿನ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ತೆರಳುವ ರಸ್ತೆಯ ಗೇಟ್ ಸಮೀಪ ಹಿಂದೂಯೇತರರ ಆಟೋ, ಟ್ಯಾಕ್ಸಿ ಇನ್ನಿತರ ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಿ ಕಟೌಟ್ ಅಳವಡಿಸಿರುವುದು ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ಸ್ಥಳೀಯ ಪಿಡಿಒಗೆ ನೋಟೀಸು ನೀಡಲಾಗಿದೆ ಎಂದು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೊನಾವಣೆ ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿರುವ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಗೇಟ್ ಸಮೀಪ ಹಿಂದೂಯೇತರರ ಆಟೋ, ಟ್ಯಾಕ್ಸಿ ಇನ್ನಿತರ ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಿ ಕಟೌಟ್ ಅಳವಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಈ ಬಗ್ಗೆ "ವಾರ್ತಾಭಾರತಿ"ಗೆ ಮಾಹಿತಿ ನೀಡಿದ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೊನಾವಣೆ, "ಇದು ಮಾಧ್ಯಮದ ಮೂಲಕವಷ್ಟೆ ನಮ್ಮ ಗಮನಕ್ಕೆ ಬಂದಿದೆ. ಯಾರಿಂದಲೂ ಈ ಬಗ್ಗೆ ದೂರು ಬಂದಿಲ್ಲ. ಈ ಬಗ್ಗೆ ಸ್ಥಳೀಯ ಪಿಡಿಒಗೆ ನೋಟೀಸು ನೀಡಲಾಗಿದೆ. ಅದು ದೇವಸ್ಥಾನ ಜಾಗದಲ್ಲಿ ದೇವಸ್ಥಾನದವರೆ ಹಾಕಿರುವುದೇ, ಸಾರ್ವಜನಿಕ ಜಾಗದಲ್ಲಿ ಹಾಕಿರುವುದೇ, ಸ್ಥಳೀಯಾಡಳಿತದಿಂದ ಅನುಮತಿ ಪಡೆಯಲಾಗಿದೆಯೇ ಎಂದೆಲ್ಲಾ ಕೇಳಲಾಗಿದೆ. ಅದನ್ನು ಪರಿಶೀಲನೆ ಮಾಡಿ, ತೆರವುಗೊಳಿಸುವ ಕ್ರಮ ವಹಿಸುವುದು ಸ್ಥಳೀಯಾಡಳಿತಕ್ಕೆ ಸಂಬಂಧಿಸಿದ್ದಾಗಿದೆ. ಈ ಬಗ್ಗೆ ಪಿಡಿಒ ಅವರನ್ನು ಕೇಳಲಾಗಿದೆ" ಎಂದು ತಿಳಿಸಿದ್ದಾರೆ.
ಜೂ.3ರಂದು ಈ ಕಟೌಟ್ ಸಾರ್ವಜನಿಕ ಸ್ಥಳದಲ್ಲಿ ಕಂಡುಬಂದಿದೆ.
ವಿಶ್ವ ಹಿಂದೂ ಪರಿಷತ್ ಭಜರಂಗದಳ, ಹಿಂದೂ ಜಾಗರಣ ವೇದಿಕೆ ಕೊಕ್ಕಡ ಎಂಬ ಹೆಸರಿನಲ್ಲಿ ಈ ಬ್ಯಾನರ್ ಅಳವಡಿಸಲಾಗಿದ್ದು, ಅದರಲ್ಲಿ "ಹಿಂದೂಗಳ ಶ್ರದ್ಧಾ ಕೇಂದ್ರವಾದ ನಮ್ಮ ಊರಿನ ಪುಣ್ಯಕ್ಷೇತ್ರ ಸೌತಡ್ಕದಲ್ಲಿ ಅನ್ಯಕೋಮಿನವರು ಪ್ರವೇಶ ಮಾಡಿ ಭಕ್ತಾದಿಗಳನ್ನು ಲೌವ್ ಜಿಹಾದ್ ಹಾಗೂ ದುಷ್ಕೃತ್ಯ ನಡೆಸಿರುವುದು ಕಂಡುಬಂದಿರುವುದರಿಂದ ಹಿಂದೂಯೇತರ ಜನರ ಆಟೋ ಮತ್ತು ಟ್ಯಾಕ್ಸಿ ಇನ್ನಿತರ ಯಾವುದೇ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ" ಎಂದು ಬರೆಯಲಾಗಿದೆ.
ಕೆಲ ದಿನಗಳ ಹಿಂದೆ ಇಲ್ಲಿ ಮುಸ್ಲಿಂ ರಿಕ್ಷಾ ಚಾಲಕರಿಗೆ ಹಿಂದೂ ಯುವತಿಯರನ್ನು ರಿಕ್ಷಾದಲ್ಲಿ ಕರೆದೊಯ್ಯುವ ಬಗ್ಗೆ ತಂಡವೊಂದು ಹಲ್ಲೆ ನಡೆಸಿತ್ತು. ಇದರ ಮುಂದುವರಿದ ಭಾಗವಾಗಿ ಇದೀಗ ಬ್ಯಾನರ್ ಅಳವಡಿಸಲಾಗಿದೆ.
ಇದೀಗ ಮುಜರಾಯಿ ಇಲಾಖೆಯ ಅಡಿಯಲ್ಲಿರುವ ದೇವಸ್ಥಾನದ ಮುಂದೆ ಈ ರೀತಿ ಬ್ಯಾನರ್ ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ. ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತಾರೆಂದು ಕಾದು ನೋಡಬೇಕಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.