ಒಗ್ಗಟ್ಟಿನಿಂದ ಮಾಡುವ ಕಾರ್ಯದಲ್ಲಿ ಶಕ್ತಿ: ಸ್ವಾಮಿ ಗೌತಮಾನಂದಜಿ
ಮಂಗಳೂರು : ನಾಯಕತ್ವ, ಸಂಘಟನಾ ಶಕ್ತಿಯ ಮೇಲೆ ನಂಬಿಕೆ ಇರಿಸಿದ್ದ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಅನುಸರಿಸಿಕೊಂಡು ಸಮಾಜದಲ್ಲಿ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿದಾಗ ಮಹತ್ತರ ಬದಲಾವಣೆಗಳನ್ನು ತರಲು ಸಾಧ್ಯ ಎಂದು ಪಶ್ಚಿಮ ಬಂಗಾಲದ ರಾಮಕೃಷ್ಣ ಮತ್ತು ರಾಮಕೃಷ್ಣ ಮಿಷನ್ ಬೇಲೂರು ಮಠದ ಉಪಾಧ್ಯಕ್ಷ ಸ್ವಾಮಿ ಗೌತಮಾನಂದಜಿ ಮಹಾರಾಜ್ ಅಭಿಪ್ರಾಯಿಸಿದ್ದಾರೆ.
ಅವರು ಇಂದು ಮಂಗಳೂರು ರಾಮಕೃಷ್ಣ ಮಠದ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸ್ವಾಮಿ ವಿವೇಕಾನಂದರು ವಿವೇಕಾನಂದರು ಮಾನವತೆಯೇ ವಿಶ್ವ ಧರ್ಮ ಎಂದು ಸಾರಿದ್ದರು. ಆ ನಿಟ್ಟಿನಲ್ಲಿ ನಾವು ಒಟ್ಟಾಗಿ ಸಮಾಜದ ಪ್ರತಿ ನಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಮಂಗಳೂರಿನ ರಾಮಕೃಷ್ಣ ಆಶ್ರಮ ಯಾವುದೇ ಸದ್ದುಗದಲ್ಲವಿಲ್ಲದೆ ಸಮಾಜ ಕಾರ್ಯಗಳನ್ನು ಮಾಡುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಗಳೂರಿನ ರಾಮಕೃಷ್ಣ ಮಠವು ತನ್ನ ಸಮಾಜ ಸೇವಾ ಕಾರ್ಯಗಳ ಮೂಲಕವೇ ಸಾಕಷ್ಟು ಭಕ್ತರು, ಅನುಯಾಯಿಗಳ ಮೇಲೆ ಪ್ರಭಾವ ಬೀರಿರುವುದು ಕಂಡು ಬರುತ್ತಿದೆ. ೧೯೭೨ರಲ್ಲಿ ಮೊದಲ ಬಾರಿ ಮಂಗಳೂರಿನ ಆಶ್ರಮಕ್ಕೆ ಭೇಟಿ ನೀಡಿದಾಗ ಹಾಗೂ ಇಂದು ಭೇಟಿಯ ಸಂದರ್ಭ ಕಂಡು ಬಂದ ಜನಸ್ತೋಮ ಇದಕ್ಕೆ ಸಾಕ್ಷಿಯಾಗಿದೆ. ನಾವು ಸಮಾಜದ ಒಂದು ಭಾಗ, ಸಮಾಜವನ್ನು ಬಿಟ್ಟು ನಾವಿಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳಿಕೊಳ್ಳುತ್ತಿದ್ದರು. ಹಾಗಾಗಿ ಸನ್ಯಾಸಿಗಳು ಹಾಗೂ ಗೃಹಸ್ಥರು ಸೇರಿಕೊಂಡು ಒಟ್ಟಾಗಿ ಸಮಾಜಕ್ಕಾಗಿ ಸೇವೆಯನ್ನು ನೀಡಬೇಕು. ಮಂಗಳೂರಿನ ಮಠದಿಂದ ಇನ್ನಷ್ಟು ಸೇವೆಗಳು ನಡೆಯಲಿದೆ ಎಂದು ಅವರು ಹಾರೈಸಿದರು.
ಈ ಸಂದರ್ಭ ಶ್ರೀ ಮಠದ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿ ಮಾತನಾಡಿದ ನಿಟ್ಟೆ ವಿಸ್ವವಿದ್ಯಾನಿಲಯದ ಕುಲಾಧಿಪತಿ ಡಾ. ವಿನಯ್ ಹೆಗ್ಡೆ, ರಾಮಕೃಷ್ಣ ಮಠವು ನಗರದ ಜನತೆಗೆ ಮಾಡಿರುವ, ಮಾಡುತ್ತಿರುವ ಸಹಕಾರ, ಸೇವೆ ಅತ್ಯಮೂಲ್ಯವಾದದ್ದು ಎಂದರು.
ಶ್ರೀಮಠದ ವೆಬ್‌ಸೈಟ್ ಬಿಡುಗಡೆಗೊಳಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಎಂಬ ಪರಿಕಲ್ಪನೆಯನ್ನು ವಿವೇಕಾನಂದರು ನೀಡಿದ್ದರು, ರಾಮರಾಜ್ಯದ ಕನಸನ್ನು ಕಂಡವರು ಮಹಾತ್ಮಗಾಂಧಿಯವರು. ಇವರಿಬ್ಬರ ಪರಿಕಲ್ಪನೆಯನ್ನು ಸ್ವಚ್ಛ ಮಂಗಳೂರು ಕಾರ್ಯಕ್ರಮ ಸೇರಿದಂತೆ ಹಲವಾರು ಸಮಾಜಪರ ಕಾರ್ಯಕ್ರಮಗಳ ಮೂಲಕ ರಾಮಕೃಷ್ಣ ಆಶ್ರಮ ನೆರವೇರಿಸುತ್ತಿದೆ ಎಂದರು.
ಇದೇ ವೇಳೆ ಕರ್ನಾಟ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ಅವರು ಭಾರತದ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಬಿಡುಗಡೆಗೊಳಿಸಲಾಗುತ್ತಿರುವ ವಿಶೇಷ ಅಂಚೆ ಲಕೋಟೆಯನ್ನು ಹಸ್ತಾಂತರಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮೇಯರ್ ಪ್ರೇಮಾನಂದ ಶೆಟ್ಟಿ, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ, ಉದ್ಯಮಿ ರವೀಂದ್ರ ಪೈ ಮೊದಲಾದವರು ಮಾತನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಗದಗ ಮಾಜಿ ಶಾಸಕ ಡಿ.ಆರ್. ಪಾಟೀಲ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸ್ವಾಮಿ ಜಿತಕಾಮಾನಂದಜಿ, ಮಂಗಳೂರಿನ ರಾಮಕೃಷ್ಣ ಮಠವು ಆಧ್ಯಾತ್ಮಿಕ ಕಾರ್ಯಕ್ರಮಗಳ ಜತೆ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸ್ವಾಮಿ ವಿವೇಕಾನಂದರ ಆಶಯಗಳನ್ನು ಪಾಲಿಸಿಕೊಂಡು ಬರುತ್ತಿದೆ ಎಂದರು.
ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ಸ್ವಾಮಿ ಏಕಗಮ್ಯಾನಂದಜಿ ವಂದಿಸಿದರು.
ಸ್ವಾಮಿ ಗೌತಮಾನಂದಜಿ ಅವರ ಕೃತಿ 'ಪಥದರ್ಶಿ' ಬಿಡುಗಡೆಗೊಳಿಸಲಾಯಿತು. ಮಂಗಳೂರು ರಾಮಕೃಷ್ಣ ಮಠಕ್ಕೆ ಜಾಗವನ್ನು ನೀಡಿದ ಸಾಹುಕಾರ್ ವೆಂಕಟೇಶ ಪೈ ಅವರ ಮೊಮ್ಮಗ ವೆಂಕಟೇಶ ಪೈ ಅವರನ್ನು ಸನ್ಮಾನಿಸಲಾಯಿತು.