×
Ad

ಉಪ್ಪಿನಂಗಡಿ: ವಿದ್ಯಾರ್ಥಿಗಳ ಗುಂಪಿನಿಂದ ಪ್ರಾಂಶುಪಾಲರ ವಿರುದ್ಧ ಧರಣಿ

Update: 2022-06-03 22:56 IST

ಉಪ್ಪಿನಂಗಡಿ: ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಬರುವ ವಿದ್ಯಾರ್ಥಿನಿಯರ ವಿರುದ್ಧ ಕ್ರಮ ಜರಗಿಸದೆ ಕಾನೂನು ಉಲ್ಲಂಘನೆಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ವಿದ್ಯಾರ್ಥಿಗಳ ಗುಂಪೊಂದು ತರಗತಿ ಬಹಿಷ್ಕರಿಸಿ ಧರಣಿ ನಡೆಸಿದ ಘಟನೆ ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.

ಹಿಜಾಬ್ ಧರಿಸುವ ಕುರಿತಾಗಿ ರಾಜ್ಯ ಉಚ್ಚ ನ್ಯಾಯಾಲಯ ತೀರ್ಪು ಹಾಗೂ ಸರಕಾರದ ಆದೇಶದಂತೆ ಉಪ್ಪಿನಂಗಡಿ ಕಾಲೇಜಿನಲ್ಲಿ ವಸ್ತ್ರ ಸಂಹಿತೆ ನಿಯಮಾವಳಿಗಳನ್ನು ರೂಪಿಸಲಾಗಿದೆ. ಆದರೆ ಕೆಲವೊಂದು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ  ಕಾಲೇಜಿಗೆ ಬರುತ್ತಿದ್ದಾರೆ. ಕಾಲೇಜು ಪ್ರಾಂಶುಪಾಲರು ಇವರ ವಿರುದ್ಧ ಕ್ರಮ ಜರಗಿಸದೆ ಮೃಧು ಧೋರಣೆ ಅನುಸರಿಸುತ್ತಿದ್ದಾರೆ. ಕಾಲೇಜಿನ ನಿಯಮಾವಳಿಗಳು ಪಾಲನೆಯಾಗುವವರೆಗೆ ತರಗತಿ ಬಹಿಷ್ಕರಿಸುವಂತೆ ನಿರ್ಧರಿಸಲಾಗಿದೆ ಎಂದು ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಗುಂಪು ಹೇಳಿದೆ.

ಸಿಡಿಸಿ ಸಭೆ: ಮಧ್ಯಾಹ್ನದ ಬಳಿಕ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕರಾದ ಸಂಜೀವ ಮಠಂದೂರು ಕಾಲೇಜಿಗೆ ಆಗಮಿಸಿದ್ದು, ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಈ ಸಂದರ್ಭ ಮನವಿ ನೀಡಿದರು. ಬಳಿಕ ಸಿಡಿಸಿ ಸಭೆ ನಡೆದು, ಕಾಲೇಜು ವರಾಂಡದಲ್ಲಿಯೂ ಇನ್ನು ಮುಂದೆ ಹಿಜಾಬ್ ಧರಿಸುವ ಆಗಿಲ್ಲ. ಕಾಲೇಜಿಗೆ ಬರುವವರು ಡ್ರೆಸ್ಸಿಂಗ್ ರೂಮಿಗೆ ತೆರಳಿ ಅಲ್ಲಿ ಕಾಲೇಜಿನ ವಸ್ತ್ರ ಸಂಹಿತೆಗೆ ವಿರುದ್ಧವಾಗಿರುವ ಉಡುಪುಗಳನ್ನು ಬದಲಾವಣೆ ಮಾಡಿ, ಕಾಲೇಜಿನ ನಿಯಮಾವಳಿಯಂತೆ ಮಾತ್ರ ಬಟ್ಟೆಗಳನ್ನು ಧರಿಸಬೇಕು. ಬಳಿಕ ಕಾಲೇಜಿನಿಂದ ಹೊರಹೋಗುವಾಗ ಮಾತ್ರ ಅವರ ಇಷ್ಟಬಂದ ವಸ್ತ್ರ ಸಂಹಿತೆಯನ್ನು ಅನುಸರಿಸಬಹು ದೆಂಬ ನಿರ್ಣಯ ತೆಗೆದುಕೊಳ್ಳಲಾಯಿತು ಹಾಗೂ ಇದನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು.

ಪತ್ರಕರ್ತರ ದಿಗ್ಭಂಧನ: ವಿದ್ಯಾರ್ಥಿಗಳಿಂದ ದೂರು

ಗುರುವಾರ ಉಪ್ಪಿನಂಗಡಿಯ ಕಾಲೇಜಿನಲ್ಲಿ ಪ್ರಾಂಶುಪಾಲರನ್ನು ಮಾತನಾಡಿಸಲು ಕಾಲೇಜಿಗೆ ಹೋಗಿದ್ದ ಸಂದರ್ಭ ವಿದ್ಯಾರ್ಥಿಗಳ ಗುಂಪಿನಿಂದ ಪತ್ರಕರ್ತರ ಮೇಲೆ ದಿಗ್ಭಂಧನದಂತಹ ಕೃತ್ಯಗಳು ನಡೆಯುತ್ತಿದ್ದರೂ, ಕಾಲೇಜು ಗೇಟಿನ ಬಳಿ ಇದ್ದ ಪೊಲೀಸರನ್ನು ಕರೆಯಿಸಿ ಪತ್ರಕರ್ತರನ್ನು ರಕ್ಷಿಸಲು ಪ್ರಾಂಶುಪಾಲರು ಯಾವುದೇ ಕ್ರಮ ಕೈಗೊಂಡಿಲ್ಲ  ಹಾಗೂ ದಿಗ್ಭಂಧನ ನಡೆಸಿ ಕಾಲೇಜಿನ ಘನತೆಗೆ ಚ್ಯುತಿ ತಂದಂತಹ ತಪ್ಪಿತಸ್ಥ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಜರಗಿಸದ ಬಗ್ಗೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸಬೇಕೆಂದು ವಿದ್ಯಾರ್ಥಿಗಳ ಗುಂಪು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ, ಶಾಸಕರೂ ಆಗಿರುವ ಸಂಜೀವ ಮಠಂದೂರು ಅವರಿಗೆ ಲಿಖಿತ  ದೂರು ಸಲ್ಲಿಸಿದೆ.

ಓರ್ವ ವಿದ್ಯಾರ್ಥಿನಿ ಅಮಾನತು

ಶುಕ್ರವಾರ ಕೂಡಾ ವಿದ್ಯಾರ್ಥಿನಿಯೋರ್ವಳು ಹಿಜಾಬ್ ಧರಿಸಿಕೊಂಡು ತರಗತಿಯೊಳಗೆ ಪ್ರವೇಶಿಸಿದ್ದು, ಆಕೆಯನ್ನು ಕೂಡ ತರಗತಿ ಪ್ರವೇಶಕ್ಕೆ ನಿರ್ಬಂಧಿಸಿ ಮುಂದಿನ ಆದೇಶದವರೆಗೆ ಅಮಾನತು ಮಾಡಿ ಪ್ರಾಂಶುಪಾಲರು ಆದೇಶಿಸಿದ್ದಾರೆ ಎಂದು ತಿಳಿದುಬಂದಿದ್ದು, ಹಿಜಾಬ್ ವಿಷಯವಾಗಿ ಅಮಾನತುಗೊಂಡವರ ಸಂಖ್ಯೆ ಈಗ 7ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News