ಬಜ್ಪೆ; ಶಾಲಾ‌ ಬಸ್ ಗೆ ಟಿಪ್ಪರ್ ಢಿಕ್ಕಿ: ನಿರ್ವಾಹಕನಿಗೆ ಗಂಭೀರ ಗಾಯ

Update: 2022-06-03 18:18 GMT

ಬಜ್ಪೆ,  ಜೂ 3:  ಟಿಪ್ಪರ್ ಲಾರಿಯೊಂದು ಶಾಲಾ ಬಸ್ ನಿರ್ವಾಹಕ ಹಾಗೂ ಶಾಲಾ‌ ಬಸ್ ಗೆ ಢಿಕ್ಕಿ ಹೊಡೆದು ನಿರ್ವಾಹಕ ಗಂಭೀರ ಗಾಯಗೊಂಡಿರುವ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಗುರುಪುರ ಅರಸರ ಗುಡ್ಡೆ ವರದಿಯಾಗಿದೆ.

ಗಾಯಗೊಂಡವರನ್ನು ಉಳಾಯಿಬೆಟ್ಟು ಅಂಗಡಿ ಮನೆ ನಿವಾಸಿ ಸಾಹುಲ್ ಹಮೀದ್ ಎಂದು ಗುರುತಿಸಲಾಗಿದೆ.
ಘಟನೆಯಿಂದ ಸಾಹುಲ್ ಹಮೀದ್ ಅವರ ಎರಡು ಕಾಲುಗಳು ತುಂಡಾಗಿದ್ದು, ಬಸ್‌ನ ಚಾಲಕ ಎಂ.ಜಿ. ಸಾಹುಲ್ ಹಮೀದ್ ಅವರಿಗೂ ಗಾಯಗಳಾಗಿವೆ. ಅಲ್ಲದೆ, ಶಾಲೆಯ ಬಸ್ಸಿಗೂ  ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಘಟನೆಯ ವಿವರ: ಶಾಹುಲ್ ಹಮೀದ್ ಅವರು ತೆಂಕುಳಿಪಾಡಿಯಲ್ಲರುವ ಬಾಮಿ ಆಂಗ್ಲಮಾಧ್ಯಮ ಶಾಲೆಯ ಬಸ್ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಗುರುಪುರ ಅರಸರ ಗುಡ್ಡೆಯ ಬಳಿ ವಿದ್ಯಾರ್ಥಿಗಳನ್ನು ಶಾಲಾ ಬಸ್ ನಿಂದ ಇಳಿಸಿ ರಸ್ತೆ ದಾಟಿಸುತ್ತಿದ್ದ ವೇಳೆ ಏಕಾಏಕಿ ಹಿಂದಿನಿಂದ ಬಂದ ಟಿಪ್ಪರ್ ಲಾರಿ ಶಾಹುಲ್ ಹಮೀದ್ ಅವರಿಗೆ ಢಿಕ್ಕಿ ಹೊಡೆದು ಬಳಿಕ ಶಾಲಾ ಬಸ್‌ ಗೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ.

ಅಪಘಾತದ ರಭಸಕ್ಕೆ ಶಾಹುಲ್ ಹಮೀದ್ ಅವರ ಎರಡು ಕಾಲುಗಳು ತುಂಡಾಗಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆನ್ನಲಾಗಿದೆ. ಅಲ್ಲದೆ ಬಸ್ ಚಾಲಕ ಎಂಜಿ ಸಾಹುಲ್ ಹಮೀದ್ ಅವರಿಗೆ ಬಸ್ಸಿನ ಸ್ಟೇರಿಂಗ್ ತಾಗಿ ಎದೆಗೆ ಗಾಯವಾಗಿದೆ.

ಅಪಘಾತವನ್ನು ಕಂಡ ಸಾರ್ವಜನಿಕರು ಶಾಲಾ ಬಸ್ನ ಚಾಲಕ ಮತ್ತು ನಿರ್ವಾಹಕ ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತಕ್ಕೆ ಟಿಪ್ಪರ್ ಲಾರಿ ಚಾಲಕನ ವೇಗ ಮತ್ತು ಅಜಾಗರೂಕತೆಯ ಚಾಲನೆ‌ ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಚಾಲಕ ಎಂಜಿ ಸಾಹುಲ್ ಹಮೀದ್ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಬಜಪೆ ಪೊಲೀಸರು ಟಿಪ್ಪರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News