ಹಿಂದುತ್ವದ ಇಟಲಿ ನಂಟು

Update: 2022-06-04 09:52 GMT

ಶಾರದಾ ವಿಶ್ವವಿದ್ಯಾನಿಲಯದ ಶಿಕ್ಷಕ ತನ್ನ ವಿದ್ಯಾರ್ಥಿಗಳಿಗೆ ಸರಿಯಾದ ಮತ್ತು ಮಹತ್ವದ ಪ್ರಶ್ನೆಯನ್ನೇ ಕೇಳಿದ್ದಾರೆ ಎನ್ನುವುದನ್ನು ಕಸೊಲರಿಯ ಸಂಶೋಧನೆಗಳು ಸಾಬೀತುಪಡಿಸುತ್ತವೆ. ಈ ಪ್ರಶ್ನೆಗೆ ಉತ್ತರಿಸಲು ವಿದ್ಯಾರ್ಥಿಗಳಿಗೆ ಅವಕಾಶ ನೀಡದಿರುವ ಹಾಗೂ ಪ್ರಶ್ನೆ ಕೇಳಿದ ಶಿಕ್ಷಕನನ್ನೇ ಅಮಾನತುಗೊಳಿಸುವ ಮೂಲಕ ತಾವು ಸತ್ಯಕ್ಕೆ ಹೆದರುತ್ತಿದ್ದೇವೆ ಎನ್ನುವುದನ್ನು ವಿಶ್ವವಿದ್ಯಾನಿಲಯದ ಆಡಳಿತಗಾರರು ನಿರೂಪಿಸಿದ್ದಾರೆ. ಬಹುಶಃ ಸತ್ಯಕ್ಕಿಂತಲೂ ಹೆಚ್ಚು ತಮ್ಮ ರಾಜಕೀಯ ಧಣಿಗಳಿಗೆ ಹೆದರುತ್ತೇವೆ ಎನ್ನುವುದನ್ನು ಅವರು ತೋರಿಸಿರಬಹುದು. ಯಾಕೆಂದರೆ, ಹಿಂದುತ್ವದ ಸ್ಥಾಪಕರು ಯುರೋಪಿಯನ್ ಫ್ಯಾಶಿಸಮ್‌ನಿಂದ ಅಗಾಧವಾಗಿ ಪ್ರಭಾವಿತರಾಗಿದ್ದಾರೆ ಎನ್ನುವುದನ್ನು ನಾವು ಮರೆಯಬೇಕೆಂದು ಈ ರಾಜಕೀಯ ಧಣಿಗಳು ಬಯಸುತ್ತಾರೆ.



ಕಳೆದ ತಿಂಗಳು, ಉತ್ತರಪ್ರದೇಶದ ಶಾರದಾ ವಿಶ್ವವಿದ್ಯಾನಿಲಯದ ರಾಜಕೀಯಶಾಸ್ತ್ರ ಶಿಕ್ಷಕರೊಬ್ಬರು ಪರೀಕ್ಷೆಯಲ್ಲಿ ತನ್ನ ವಿದ್ಯಾರ್ಥಿಗಳಿಗೆ ಒಂದು ಪ್ರಶ್ನೆಯನ್ನು ಕೇಳಿದರು: ‘‘ಫ್ಯಾಶಿಸಮ್/ನಾಝಿವಾದ ಮತ್ತು ಹಿಂದೂ ಬಲಪಂಥ (ಹಿಂದುತ್ವ)ದ ನಡುವೆ ನಿಮಗೆ ಯಾವುದಾದರೂ ಸಾಮ್ಯತೆಗಳು ಕಾಣುತ್ತವೆಯೇ? ವಿಸ್ತಾರವಾಗಿ ಬರೆಯಿರಿ’’. ಆ ಶಿಕ್ಷಕನನ್ನು ವಿಶ್ವವಿದ್ಯಾನಿಲಯದ ಅಧಿಕಾರಿಗಳು ಬಳಿಕ ಅಮಾನತುಗೊಳಿಸಿದರು. ಅಮಾನತಿಗೆ ಕೊಟ್ಟ ಕಾರಣ ಹೀಗಿತ್ತು: ಇಂತಹ ಪ್ರಶ್ನೆಯು ನಮ್ಮ ದೇಶದ ‘ಶ್ರೇಷ್ಠ ರಾಷ್ಟ್ರೀಯ ಅಸ್ಮಿತೆ’ಗೆ ಸಂಪೂರ್ಣ ವಿರುದ್ಧವಾಗಿದೆ ಹಾಗೂ ಸಾಮಾಜಿಕ ಸಾಮರಸ್ಯವನ್ನು ಕದಡುವ ಉದ್ದೇಶವನ್ನೂ ಹೊಂದಿರಬಹುದಾಗಿದೆ (ಈ ಲೇಖನವನ್ನು ನೋಡಿ: https://thewire.in/education/sharda-university-professor-hindutva-nazism).

ತನ್ನ ವಿದ್ಯಾರ್ಥಿಗಳಿಗೆ ಯಾವ ಪ್ರಶ್ನೆಯನ್ನು ಕೇಳುವುದರಿಂದ ಶಾರದಾ ವಿಶ್ವವಿದ್ಯಾನಿಲಯದ ಶಿಕ್ಷಕನನ್ನು ತಡೆಯಲಾಯಿತೋ ಆ ಪ್ರಶ್ನೆಗೆ ಉತ್ತರಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡಲಾಗಿದೆ. ಇಲ್ಲಿ ನನ್ನ ಪ್ರಮುಖ ಆಕರ ಗ್ರಂಥಗಳಾಗಿ ಇಟಲಿಯ ಇತಿಹಾಸಕಾರ್ತಿ ಮರ್ಝಿಯ ಕಸೊಲರಿ ಅವರ ಲೇಖನಗಳನ್ನು, ಅದರಲ್ಲೂ ಮುಖ್ಯವಾಗಿ 2000ದಲ್ಲಿ ‘ಎಕನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ’ಯಲ್ಲಿ ಪ್ರಕಟಗೊಂಡಿರುವ ‘ಹಿಂದುತ್ವಾಸ್ ಫಾರೀನ್ ಟೈ-ಅಪ್ ಇನ್ ದ 1930ಸ್’ - 1930ರ ದಶಕದಲ್ಲಿ ಹಿಂದುತ್ವದ ವಿದೇಶಿ ನಂಟು (ಈ ಲೇಖನ ಇದರಲ್ಲಿ ಲಭ್ಯವಿದೆ-  https://www.epw.in/journal/2000/04/special-articles/hindutvas-foreign-tie-1930s.html) ಎಂಬ ಅವರ ಪ್ರಬಂಧ ಮತ್ತು 20 ವರ್ಷಗಳ ಬಳಿಕ ಅವರು ಪ್ರಕಟಿಸಿರುವ ‘ಇನ್ ದ ಶ್ಯಾಡೋ ಆಫ್ ದ ಸ್ವಸ್ತಿಕ: ದ ರಿಲೇಶನ್‌ಶಿಪ್ಸ್ ಬಿಟ್ವೀನ್ ರ್ಯಾಡಿಕಲ್ ನ್ಯಾಶನಲಿಸಮ್, ಇಟಾಲಿಯನ್ ಫ್ಯಾಶಿಸಮ್ ಆ್ಯಂಡ್ ನಾಝಿಸಮ್’- ಸ್ವಸ್ತಿಕದ ಪ್ರಭಾವಲಯದಡಿ: ತೀವ್ರ ರಾಷ್ಟ್ರೀಯವಾದ, ಇಟಲಿಯ ಫ್ಯಾಶಿಸಮ್ ಮತ್ತು ನಾಝಿ ಸಿದ್ಧಾಂತದ ನಡುವಿನ ನಂಟು (ಈ ಪುಸ್ತಕ ಇಲ್ಲಿ ಲಭ್ಯವಿದೆ-https://www.amazon.in/Shadow-Swastika-Relationships-Nationalism-Routledge-ebook/dp/B08DPXXLF6) ಎಂಬ ಪುಸ್ತಕವನ್ನು ಬಳಸಿದ್ದೇನೆ.

ಇಟಲಿ, ಭಾರತ ಮತ್ತು ಬ್ರಿಟನ್‌ನಲ್ಲಿ ವ್ಯಾಪಕ ಸಂಶೋಧನೆಗಳನ್ನು ನಡೆಸಿದ ಬಳಿಕ, ಡಾ. ಕಸೊಲರಿ ತಾನು ಕಂಡುಕೊಂಡ ಅಂಶಗಳನ್ನು ಪುಸ್ತಕಗಳ ಮೂಲಕ ಬಿಚ್ಚಿಟ್ಟಿದ್ದಾರೆ. ಅವರು ವಿವಿಧ ಭಾಷೆಗಳ ಮೂಲಗಳಿಂದ ಅಗತ್ಯ ವಿಷಯಗಳನ್ನು ಸಂಗ್ರಹಿಸಿದ್ದಾರೆ. 1920 ಮತ್ತು 1930ರ ದಶಕಗಳಲ್ಲಿ ಮರಾಠಿ ಪತ್ರಿಕೆಗಳು ಇಟಲಿಯಲ್ಲಿ ಫ್ಯಾಶಿಸಮ್‌ನ ಏಳಿಗೆಯ ಬಗ್ಗೆ ಅತ್ಯಂತ ಆಸಕ್ತಿಯಿಂದ ಹಾಗೂ ಬಹುತೇಕ ಮೆಚ್ಚುಗೆಯಿಂದ ವರದಿ ಮಾಡಿದ್ದವು ಎಂದು ಕಸೊಲರಿ ಹೇಳುತ್ತಾರೆ. ಭಾರತದಲ್ಲಿ ಇಂತಹದ್ದೇ ಸಿದ್ಧಾಂತವು ಹಿಂದುಳಿದ ಕೃಷಿ ಆಧಾರಿತ ದೇಶವನ್ನು ಕೈಗಾರಿಕಾ ಶಕ್ತಿಯಾಗಿ ಮಾರ್ಪಡಿಸಬಹುದು ಮತ್ತು ವಿವಾದಗಳಿಂದ ತುಂಬಿರುವ ಸಮಾಜಕ್ಕೆ ಒಂದು ವ್ಯವಸ್ಥೆ ಮತ್ತು ಶಿಸ್ತನ್ನು ತರಬಹುದು ಎಂಬ ನಿರೀಕ್ಷೆಯನ್ನು ಮರಾಠಿ ಪತ್ರಿಕೆಗಳು ಹೊಂದಿದ್ದವು. ಮುಸ್ಸೋಲಿನಿ ಮತ್ತು ಫ್ಯಾಶಿಸಮ್ ಕುರಿತ ಈ ಪ್ರಸಿದ್ಧ ಲೇಖನಗಳನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ದ ಮಹಾನಾಯಕರಾದ ಕೆ.ಬಿ. ಹೆಡಗೇವಾರ್ ಮತ್ತು ಎಮ್.ಎಸ್. ಗೋಳ್ವಾಲ್ಕರ್ ಹಾಗೂ ಹಿಂದೂ ಮಹಾಸಭಾದ ಮಹಾನಾಯಕರಾದ ವಿ.ಡಿ. ಸಾವರ್ಕರ್ ಮತ್ತು ಬಿ.ಎಸ್. ಮೂಂಜೆ ಚೆನ್ನಾಗಿ ಓದಿರುವ ಸಾಧ್ಯತೆಯಿದೆ. ಯಾಕೆಂದರೆ ಈ ಎಲ್ಲಾ ನಾಲ್ಕು ಮಂದಿಯ ಮಾತೃಭಾಷೆ ಮರಾಠಿ.

ಹಾಗಾಗಿ, 1920ರ ದಶಕದ ಕೊನೆಯ ವೇಳೆಗೆ ಇಟಲಿಯ ಫ್ಯಾಶಿಸ್ಟ್ ಸರಕಾರ ಮತ್ತು ಮುಸ್ಸೋಲಿನಿಗೆ ಮಹಾರಾಷ್ಟ್ರದಲ್ಲಿ ಹಲವಾರು ಬೆಂಬಲಿಗರಿದ್ದರು ಎಂಬುದಾಗಿ ಕಸೊಲರಿ ಬರೆಯುತ್ತಾರೆ. ಅರಾಜಕತೆಯಿಂದ ಸುವ್ಯವಸ್ಥೆಯೆಡೆಗೆ ಇಟಲಿ ಸಮಾಜದ ಪ್ರಯಾಣ ಮತ್ತು ದೇಶದ ಸೇನಾ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕೆ ಸಂಬಂಧಿಸಿದ ಫ್ಯಾಶಿಸಮ್‌ನ ವಿಚಾರಗಳು ಹಿಂದೂ ರಾಷ್ಟ್ರೀಯವಾದಿಗಳನ್ನು ತೀವ್ರವಾಗಿ ಆಕರ್ಷಿಸಿದವು. ಈ ಸಾರಾಸಗಟು ಪ್ರಜಾಪ್ರಭುತ್ವ ವಿರೋಧಿ ವ್ಯವಸ್ಥೆಯನ್ನು ಪ್ರಜಾಪ್ರಭುತ್ವಕ್ಕೆ ಧನಾತ್ಮಕ ಪರ್ಯಾಯ ಎಂಬುದಾಗಿ ಪರಿಗಣಿಸಲಾಯಿತು ಹಾಗೂ ಅದನ್ನು ಬ್ರಿಟಿಷರು ರೂಪಿಸಿದ ವ್ಯವಸ್ಥೆ ಎಂಬುದಾಗಿ ಭಾವಿಸಲಾಯಿತು.

ಕಸೊಲರಿಯ ಸಂಶೋಧನೆಗಳಲ್ಲಿನ ಒಂದು ಪ್ರಮುಖ ವ್ಯಕ್ತಿತ್ವ ಡಾ. ಬಿ.ಎಸ್. ಮೂಂಜೆ. ಅವರು ಪ್ರಮುಖ ಹಿಂದೂ ಬಲಪಂಥೀಯ ಸಿದ್ಧಾಂತಿ. ಅವರು 1931ರಲ್ಲಿ ಇಟಲಿಗೆ ಭೇಟಿ ನೀಡಿ ಅಲ್ಲಿನ ಫ್ಯಾಶಿಸ್ಟ್ ಸರಕಾರದ ಹಲವಾರು ಬೆಂಬಲಿಗರನ್ನು ಭೇಟಿಯಾದರು. ಅವರು ಬೆನಿಟೊ ಮುಸ್ಸೋಲಿನಿ ಮತ್ತು ಅವರ ಸಿದ್ಧಾಂತದಿಂದ ಗಾಢವಾಗಿ ಪ್ರಭಾವಿತರಾದರು. ಯುವಕರಲ್ಲಿ ಸೇನಾ ಮನೋಭಾವವನ್ನು ತುಂಬಿಸಲು ಮುಸ್ಸೋಲಿನಿ ಮಾಡಿದ ಪ್ರಯತ್ನಗಳಿಗೆ ಮಾರು ಹೋದರು.

ಮೂಂಜೆ ಮುಸ್ಸೋಲಿನಿಯನ್ನು ಭೇಟಿ ಮಾಡಲು ಬಯಸಿದರು. ಅವರ ಇಚ್ಛೆಯಂತೆಯೇ ಭೇಟಿಗೆ ಅವಕಾಶ ನೀಡಲಾಯಿತು. ಭೇಟಿಯ ವೇಳೆ, ಫ್ಯಾಶಿಸ್ಟ್ ಯುವ ಸಂಘಟನೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದಾಗಿ ಮುಸ್ಸೋಲಿನಿ, ಮೂಂಜೆಯನ್ನು ಕೇಳಿದರು. ಮೂಂಜೆ ಉತ್ತರಿಸಿದರು: ‘‘ಮಾನ್ಯರೇ, ನಾನು ಗಾಢವಾಗಿ ಪ್ರಭಾವಿತನಾಗಿದ್ದೇನೆ. ಮಹತ್ವಾಕಾಂಕ್ಷೆ ಹೊಂದಿರುವ ಮತ್ತು ಬೆಳೆಯುತ್ತಿರುವ ಪ್ರತಿಯೊಂದು ದೇಶಕ್ಕೆ ಇಂತಹ ಸಂಘಟನೆಯ ಅಗತ್ಯವಿದೆ. ಭಾರತದ ಸೇನಾ ನವೀಕರಣಕ್ಕೆ ಇಂತಹ ಸಂಘಟನೆಯ ತುರ್ತು ಅಗತ್ಯವಿದೆ.’’

ಇಟಲಿಯ ಫ್ಯಾಶಿಸ್ಟ್ ಸರ್ವಾಧಿಕಾರಿ ಮುಸ್ಸೋಲಿನಿಯೊಂದಿಗಿನ ತನ್ನ ಸಂಭಾಷಣೆಯ ಬಗ್ಗೆ ಮೂಂಜೆ ಹೀಗೆ ಹೇಳಿದ್ದಾರೆ: ‘‘ಯುರೋಪ್ ಜಗತ್ತಿನ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರಾದ ಸಿನ್ಯೋರ್ ಮುಸ್ಸೋಲಿನಿ ಜೊತೆಗಿನ ನನ್ನ ಸ್ಮರಣೀಯ ಭೇಟಿ ಹೀಗೆ ಮುಕ್ತಾಯ ಗೊಂಡಿತು. ಅವರು ಅಗಲ ಮುಖ, ದಪ್ಪ ಗದ್ದ ಮತ್ತು ಅಗಲ ಎದೆಯನ್ನು ಹೊಂದಿದ ಎತ್ತರದ ವ್ಯಕ್ತಿ. ಅವರೊಬ್ಬ ಗಟ್ಟಿ ಮನಸ್ಸಿನ ಬಲಶಾಲಿ ವ್ಯಕ್ತಿ ಎನ್ನುವುದನ್ನು ಅವರ ಮುಖವೇ ಹೇಳುತ್ತದೆ. ಇಟಲಿಯನ್ನರು ಅವರನ್ನು ಪ್ರೀತಿಸುತ್ತಾರೆ ಎನ್ನುವುದನ್ನು ನಾನು ಗಮನಿಸಿದ್ದೇನೆ’’.

ಮುಸ್ಸೋಲಿನಿಯ ವ್ಯಕ್ತಿತ್ವಕ್ಕೆ ಮೂಂಜೆ ಮಾರುಹೋಗಿದ್ದರು ಮತ್ತು ಅವರ ಸಿದ್ಧಾಂತದಿಂದ ಪ್ರಭಾವಿತರಾಗಿದ್ದರು. ನಿರಂತರವಾಗಿ ಯುದ್ಧ ನಡೆಸುವುದು ಹಾಗೂ ಶಾಂತಿ ಮತ್ತು ರಾಜಿ ಸಂಧಾನವನ್ನು ತಿರಸ್ಕರಿಸುವುದು ಮುಸ್ಸೋಲಿನಿಯ ಸಿದ್ಧಾಂತವಾಗಿದೆ. ಇಟಲಿಯ ಸರ್ವಾಧಿಕಾರಿಯ ಹೇಳಿಕೆಗಳನ್ನು ಮೂಂಜೆ ಹಲವು ಸಂದರ್ಭಗಳಲ್ಲಿ ಉಲ್ಲೇಖಿಸಿದ್ದಾರೆ ಮತ್ತು ಅವುಗಳನ್ನು ಅನುಮೋದಿಸಿದ್ದಾರೆ. ಅಂತಹ ಎರಡು ಹೇಳಿಕೆಗಳು ಇಲ್ಲಿವೆ: ಒಂದು, ‘‘ಸರ್ವ ಮಾನವ ಶಕ್ತಿಯನ್ನು ಅದರ ಉತ್ತುಂಗಕ್ಕೆ ಒಯ್ಯಲು ಯುದ್ಧಕ್ಕೆ ಮಾತ್ರ ಸಾಧ್ಯ. ಯುದ್ಧವು ತನ್ನನ್ನು ಸಂಧಿಸುವ ಧೈರ್ಯವಿರುವವರಿಗೆ ಶ್ರೇಷ್ಠತೆಯ ಮೊಹರನ್ನು ಒತ್ತುತ್ತದೆ.’’ ಎರಡು, ‘‘ಶಾಶ್ವತ ಶಾಂತಿಯ ಮೇಲಾಗಲಿ, ಅದರ ಉಪಯುಕ್ತತೆಯ ಮೇಲಾಗಲಿ ಫ್ಯಾಶಿಸಮ್‌ಗೆ ನಂಬಿಕೆಯಿಲ್ಲ. ಹಾಗಾಗಿ, ಅದು (ಫ್ಯಾಶಿಸಮ್) ಸಂಘರ್ಷವನ್ನು ನಿವಾರಿಸುವ ಮೂಲಕ ಹುಟ್ಟಿಕೊಳ್ಳುವ ಶಾಂತಿಯನ್ನು ತಿರಸ್ಕರಿಸುತ್ತದೆ. ಶಾಂತಿ ಎನ್ನುವುದು ತ್ಯಾಗದ ರೂಪದಲ್ಲಿರುವ ಹೇಡಿತನವಾಗಿದೆ’’.

ಕೆ.ಬಿ. ಹೆಡಗೆವಾರ್‌ಗೆ ಮೂಂಜೆ ಮಾರ್ಗದರ್ಶಿಯಾಗಿದ್ದರು. ಹೆಡಗೆವಾರ್ ಬಳಿಕ ಆರೆಸ್ಸೆಸ್ ಸ್ಥಾಪಿಸಿದರು. ನಾಗಪುರದಲ್ಲಿ ವಿದ್ಯಾರ್ಥಿಯಾಗಿದ್ದ ಹೆಡಗೆವಾರ್ ಮೂಂಜೆಯ ಮನೆಯಲ್ಲಿ ತಂಗಿದ್ದರು. ವೈದ್ಯಕೀಯ ಕಲಿಯಲು ಹೆಡಗೆವಾರ್‌ರನ್ನು ಕಲ್ಕತ್ತಾಕ್ಕೆ ಕಳುಹಿಸಿದ್ದು ಮೂಂಜೆ. ಮೂಂಜೆಯ ಇಟಲಿ ಪ್ರವಾಸದ ಬಳಿಕ, ಅವರು ಮತ್ತು ಹೆಡಗೆವಾರ್, ಹಿಂದೂ ಮಹಾಸಭಾ ಮತ್ತು ಆರೆಸ್ಸೆಸ್ ನಡುವೆ ನಿಕಟ ಸಹಯೋಗ ತರಲು ಕಠಿಣ ಪರಿಶ್ರಮಪಟ್ಟರು.

ಕಸಲೊರಿ ಹೀಗೆ ಬರೆಯುತ್ತಾರೆ: 1934ರ ಜನವರಿಯಲ್ಲಿ ನಡೆದ ಫ್ಯಾಶಿಸಮ್ ಮತ್ತು ಮುಸ್ಸೋಲಿನಿ ಕುರಿತ ಸಮ್ಮೇಳನದ ಅಧ್ಯಕ್ಷತೆ ಯನ್ನು ಹೆಡಗೆವಾರ್ ವಹಿಸಿದರು. ಆ ಸಮ್ಮೇಳನದಲ್ಲಿ ಮೂಂಜೆ ಪ್ರಧಾನ ಭಾಷಣ ಮಾಡಿದರು. ಅದೇ ವರ್ಷದ ಮಾರ್ಚ್‌ನಲ್ಲಿ, ಮೂಂಜೆ, ಹೆಡಗೆವಾರ್ ಮತ್ತು ಅವರ ಸಹೋದ್ಯೋಗಿಗಳು ಸುದೀರ್ಘ ಸಭೆಯೊಂದನ್ನು ಏರ್ಪಡಿಸಿದರು. ಆ ಸಭೆಯಲ್ಲಿ ಮೂಂಜೆ ಈ ಮಾತುಗಳನ್ನು ಹೇಳಿದರು: ‘‘ಹಿಂದೂ ಧರ್ಮ ಶಾಸ್ತ್ರದ ಆಧಾರದಲ್ಲಿ ನಾನೊಂದು ಯೋಜನೆಯನ್ನು ರೂಪಿಸಿದ್ದೇನೆ. ಅದು ಭಾರತದಾದ್ಯಂತ ಹಿಂದೂ ಧರ್ಮಕ್ಕೆ ಸಮಾನ ಮಾನದಂಡಗಳನ್ನು ನಿಗದಿಪಡಿಸುತ್ತದೆ..... ಆದರೆ, ಸಮಸ್ಯೆಯೆಂದರೆ, ಹಿಂದಿನ ಕಾಲದ ಶಿವಾಜಿಯಂತೆ ಅಥವಾ ಇಟಲಿ ಮತ್ತು ಜರ್ಮನಿಯಲ್ಲಿರುವ ಇಂದಿನ ಕಾಲದ ಮುಸ್ಸೋಲಿನಿ ಅಥವಾ ಹಿಟ್ಲರ್‌ನಂತೆ ಓರ್ವ ಹಿಂದೂ ಸರ್ವಾಧಿಕಾರಿ ಇರುವ ನಮ್ಮದೇ ಸ್ವರಾಜ್ಯವೊಂದು ಇಲ್ಲದಿದ್ದರೆ ಅದನ್ನು ಜಾರಿಗೆ ತರುವುದು ಸಾಧ್ಯವಿಲ್ಲ. ಆದರೆ, ಭಾರತದಲ್ಲಿ ಇಂತಹ ಓರ್ವ ಸರ್ವಾಧಿಕಾರಿಯ ಉದಯವಾಗುವವರೆಗೆ ನಾವು ಕೈಕಟ್ಟಿ ಕುಳಿತುಕೊಳ್ಳಬೇಕೆಂದು ಇದರ ಅರ್ಥವಲ್ಲ. ನಾವೊಂದು ವೈಜ್ಞಾನಿಕ ಯೋಜನೆಯನ್ನು ಸಿದ್ಧಪಡಿಸಬೇಕು ಹಾಗೂ ಅದಕ್ಕಾಗಿ ಪ್ರಚಾರ ಕಾರ್ಯವನ್ನು ಮಾಡುತ್ತಾ ಹೋಗಬೇಕು.’’

ಇಟಲಿಯ ಫ್ಯಾಶಿಸಮ್ ಮತ್ತು ಆರೆಸ್ಸೆಸ್ ಸಿದ್ಧಾಂತದ ನಡುವೆ ನೇರ ಸಾಮ್ಯತೆಯಿರುವುದನ್ನು ಮೂಂಜೆ ಗುರುತಿಸಿದ್ದರು. ಮೂಂಜೆ ಹೀಗೆ ಬರೆಯುತ್ತಾರೆ: ‘‘ಫ್ಯಾಶಿಸಮ್ ಸಿದ್ಧಾಂತವು ಜನರಲ್ಲಿ ಒಗ್ಗಟ್ಟಿನ ಮನೋಭಾವನೆಯನ್ನು ಮೂಡಿಸುತ್ತದೆ. ಭಾರತಕ್ಕೆ, ಅದರಲ್ಲೂ ಮುಖ್ಯವಾಗಿ ಹಿಂದೂ ಭಾರತಕ್ಕೆ, ಸೇನಾ ದೃಷ್ಟಿಯಿಂದ ಹಿಂದೂಗಳ ಪುನಶ್ಚೇತನಕ್ಕಾಗಿ ಇಂತಹ ವ್ಯವಸ್ಥೆಯೊಂದರ ಅಗತ್ಯವಿದೆ. ನಾಗಪುರದ ಡಾ. ಹೆಡಗೆವಾರ್ ನೇತೃತ್ವದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಇಂತಹ ಒಂದು ವ್ಯವಸ್ಥೆಯಾಗಿದೆ. ಆದರೆ ಈ ಸಂಘಟನೆಯನ್ನು ಸ್ವತಂತ್ರವಾಗಿ ರೂಪಿಸಲಾಗಿದೆ’’.

‘‘ಆರೆಸ್ಸೆಸ್‌ನ ನೇಮಕಾತಿ ವಿಧಾನವು ಇಟಲಿಯ ‘ಬಲಿಲ್ಲ’ ಯುವ ಸಂಘಟನೆಯ ನೇಮಕಾತಿ ವಿಧಾನಕ್ಕೆ ಸಮವಾಗಿದೆ. ಉದಾಹರಣೆಗೆ; ಶಾಖಾ ಸದಸ್ಯರನ್ನು ಅವರ ವಯಸ್ಸಿಗೆ ಅನುಗುಣವಾಗಿ (6-7ರಿಂದ 10; 10ರಿಂದ 14; 14ರಿಂದ 28; 28 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ವಿವಿಧ ಗುಂಪುಗಳನ್ನಾಗಿ ಮಾಡಲಾಗುತ್ತದೆ. ಇದು ಇಟಲಿಯ ಫ್ಯಾಶಿಸ್ಟ್ ಯುವ ಸಂಘಟನೆಗಳ ವಯಸ್ಸುವಾರು ಶ್ರೇಣೀಕೃತ ವಿಂಗಡಣೆಯೊಂದಿಗೆ ಅಚ್ಚರಿಯೆನಿಸುವಷ್ಟು ಸಾಮ್ಯತೆಗಳನ್ನು ಹೊಂದಿದೆ. ಆರೆಸ್ಸೆಸ್ ಸದಸ್ಯರ ಶ್ರೇಣೀಕೃತ ವಿಂಗಡಣೆಯು ಅದರ ಸ್ಥಾಪನೆಯ ಬಳಿಕ ಜಾರಿಗೆ ಬಂತು ಹಾಗೂ ಅದನ್ನು ಫ್ಯಾಶಿಸಮ್‌ನಿಂದ ನೇರವಾಗಿ ಎರವಲು ಪಡೆದಿರುವ ಸಾಧ್ಯತೆ ಅಧಿಕವಾಗಿದೆ ಎಂಬುದಾಗಿ ಕಸೊಲರಿ ಬರೆಯುತ್ತಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ 1933ರಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಬರೆದಿರುವ ಟಿಪ್ಪಣಿಯನ್ನು ಕಸಲೊರಿ ಉಲ್ಲೇಖಿಸುತ್ತಾರೆ. ಟಿಪ್ಪಣಿಯಲ್ಲಿ ಹೀಗೆ ಬರೆಯಲಾಗಿದೆ: ‘‘ಇಟಲಿಯಲ್ಲಿನ ಫ್ಯಾಶಿಸ್ಟರು ಮತ್ತು ಜರ್ಮನಿಯಲ್ಲಿನ ನಾಝಿಗಳ ಹಾಗೆ, ಭವಿಷ್ಯದಲ್ಲಿ ಭಾರತದಲ್ಲಿ ತಾನು ಆಗುವುದನ್ನು ಆರೆಸ್ಸೆಸ್ ಎದುರು ನೋಡುತ್ತಿದೆ ಎನ್ನುವುದು ಬಹುಶಃ ಉತ್ಪ್ರೇಕ್ಷೆಯಲ್ಲ. ಸಂಘವು ಪ್ರಧಾನವಾಗಿ ಮುಸ್ಲಿಮ್ ವಿರೋಧಿ ಸಂಘಟನೆಯಾಗಿದೆ ಹಾಗೂ ಅದು ದೇಶದಲ್ಲಿ ಹಿಂದೂ ಶ್ರೇಷ್ಠತೆಗಾಗಿ ಕೆಲಸ ಮಾಡುತ್ತಿದೆ’’.

ವಿ.ಡಿ. ಸಾವರ್ಕರ್‌ರ ಜಾಗತಿಕ ದೃಷ್ಟಿಕೋನ ಏನು ಎಂಬ ಬಗ್ಗೆಯೂ ಕಸಲೊರಿ ಸಂಶೋಧನೆ ಮಾಡಿದ್ದಾರೆ. ತನ್ನ ಸಂಶೋಧನೆ ಯಲ್ಲಿ ಅವರು ಆಸಕ್ತಿದಾಯಕ ವಿಷಯಗಳನ್ನು ಕಂಡುಕೊಂಡಿದ್ದಾರೆ. ಕಸೊಲರಿ ಬರೆಯುತ್ತಾರೆ: ‘‘1938ರ ಹೊತ್ತಿಗೆ ಸಾವರ್ಕರ್ ನೇತೃತ್ವದ ಹಿಂದೂ ಮಹಾಸಭಾಕ್ಕೆ ನಾಝಿ ಜರ್ಮನಿಯು ಹೆಚ್ಚಿನ ಆಸಕ್ತಿಯ ವಿಷಯವಾಗಿತ್ತು. ಭಾರತದಲ್ಲಿನ ‘ಮುಸ್ಲಿಮ್ ಸಮಸ್ಯೆ’ಯನ್ನು ನಿವಾರಿಸಲು ಜನಾಂಗಕ್ಕೆ ಸಂಬಂಧಿಸಿದ ಜರ್ಮನಿಯ ವಿಕೃತ ನೀತಿಗಳನ್ನು ಅದು ಮಾದರಿಯಾಗಿ ಸ್ವೀಕರಿಸಿತು’’.
ಸಾವರ್ಕರ್‌ರ ಹೇಳಿಕೆಗಳನ್ನು ಕಸಲೊರಿ ಹೀಗೆ ಉಲ್ಲೇಖಿಸಿದ್ದಾರೆ:

‘‘ನಾಝಿವಾದವನ್ನು ಅನುಸರಿಸಲು ಜರ್ಮನಿಗೆ ಮತ್ತು ಫ್ಯಾಶಿಸಮ್‌ನ್ನು ಅನುಸರಿಸಲು ಇಟಲಿಗೆ ಎಲ್ಲಾ ಹಕ್ಕುಗಳಿವೆ. ಈ ವಾದಗಳು ಮತ್ತು ಆ ದೇಶಗಳಲ್ಲಿ ಇರುವ ಸರಕಾರಿ ಮಾದರಿಗಳು ಅಲ್ಲಿ ನೆಲೆಸಿರುವ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಸೂಕ್ತವಾಗಿವೆ ಮತ್ತು ಅಲ್ಲಿನ ಜನರಿಗೆ ಪ್ರಯೋಜನಕಾರಿಯಾಗಿವೆ’’.
‘‘ರಾಷ್ಟ್ರೀಯತೆ ಎನ್ನುವುದು ಚಿಂತನೆ, ಮತ, ಭಾಷೆ ಮತ್ತು ಸಾಂಸ್ಕೃತಿಕ ಏಕತೆಯಷ್ಟು ತೀವ್ರವಾಗಿ ಭೌಗೋಳಿಕ ಪ್ರದೇಶವನ್ನು ಅವಲಂಬಿಸಿಲ್ಲ. ಇದೇ ಕಾರಣಕ್ಕಾಗಿ ಜರ್ಮನ್ನರು ಮತ್ತು ಯಹೂದಿಗಳನ್ನು ಒಂದೇ ದೇಶವಾಗಿ ಪರಿಗಣಿಸಲು ಸಾಧ್ಯವಿಲ್ಲ.’’
‘‘ಜರ್ಮನಿಯಲ್ಲಿ, ಜರ್ಮನ್ನರ ಚಳವಳಿಯು ರಾಷ್ಟ್ರೀಯ ಚಳವಳಿಯಾಗಿದೆ, ಆದರೆ ಯಹೂದಿಗಳ ಚಳವಳಿಯು ಕೋಮು ಚಳವಳಿಯಾಗಿದೆ.’’
‘‘ಒಂದು ದೇಶ ಸ್ಥಾಪನೆಯಾಗುವುದು ಅಲ್ಲಿ ವಾಸಿಸುವ ಬಹುಸಂಖ್ಯಾತರಿಂದ. ಜರ್ಮನಿಯಲ್ಲಿ ಯಹೂದಿಗಳು ಏನು ಮಾಡಿದರು? ಅವರು ಅಲ್ಪಸಂಖ್ಯಾತರಾಗಿದ್ದರಿಂದ ಅವರನ್ನು ಜರ್ಮನಿಯಿಂದ ಹೊರದಬ್ಬಲಾಯಿತು.’’
‘‘ಭಾರತೀಯ ಮುಸ್ಲಿಮರು ತಮ್ಮನ್ನು ಮತ್ತು ತಮ್ಮ ಹಿತಾಸಕ್ತಿಗಳನ್ನು ತಮ್ಮ ನೆರೆಮನೆಯಲ್ಲಿ ವಾಸಿಸುವ ಹಿಂದೂಗಳೊಂದಿಗೆ ಗುರುತಿಸಿಕೊಳ್ಳುವ ಬದಲು ಭಾರತದ ಹೊರಗಿನ ಮುಸ್ಲಿಮರೊಂದಿಗೆ ಗುರುತಿಸಿಕೊಳ್ಳಲು ಬಯಸುತ್ತಾರೆ. ಜರ್ಮನಿಯ ಯಹೂದಿಗಳೂ ಹೀಗೆ ಮಾಡುತ್ತಾರೆ’’.

ಸಾವರ್ಕರ್ ಖಂಡಿತವಾಗಿಯೂ ಇಂದು ಭಾರತದಲ್ಲಿ ಅಧಿಕಾರದಲ್ಲಿರುವ ಹಿಂದುತ್ವದ ಸರಕಾರಕ್ಕೆ ಆರಾಧ್ಯ ದೈವವಾಗಿದ್ದಾರೆ. ಇನ್ನೋರ್ವ ಹಿಂದುತ್ವ ನಾಯಕ ಶ್ಯಾಮಪ್ರಸಾದ್ ಮುಖರ್ಜಿಯ ಬಗ್ಗೆಯೂ ಕಸಲೊರಿಯ ಪುಸ್ತಕದಲ್ಲಿ ಉಲ್ಲೇಖವಿದೆ. ಎರಡು ಮಹಾಯುದ್ಧಗಳ ನಡುವಿನ ಅವಧಿಯಲ್ಲಿ (1918ರಿಂದ 1939), ಫ್ಯಾಶಿಸಮ್ ಪರ ಸಹಾನುಭೂತಿ ಹೊಂದಿರುವ ಭಾರತೀಯ ಚಿಂತಕರು ಮತ್ತು ರಾಜಕಾರಣಿಗಳನ್ನು ರೂಪಿಸಲು ಇಟಲಿ ಸರಕಾರವು ಸಕ್ರಿಯವಾಗಿ ಪ್ರಯತ್ನಿಸಿತು. ಇಟಲಿ ಸರಕಾರದ ಕೆಲಸಕ್ಕೆ ಬೆಂಬಲವಾಗಿ ನಿಂತವರು ಇಟಲಿಯ ಶ್ರೇಷ್ಠ ಪೌರ್ವಾತ್ಯವಾದಿ ಮತ್ತು ಸ್ವತಃ ಫ್ಯಾಶಿಸಂನ ಬೆಂಬಲಿಗರಾಗಿದ್ದ ಜಿಯುಸೆಪ್ ಟಕ್ಸಿ. ಟಕ್ಸಿ ನಿರಂತರವಾಗಿ ಬಿ.ಎಸ್. ಮೂಂಜೆ ಜೊತೆ ಪತ್ರ ವ್ಯವಹಾರ ನಡೆಸಿದರು. 1930ರ ದಶಕದಲ್ಲಿ ಟಕ್ಸಿ ಕಲ್ಕತ್ತಾ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿದ್ದ ಶ್ಯಾಮಪ್ರಸಾದ್ ಮುಖರ್ಜಿ ಜೊತೆಗೂ ಸಂಪರ್ಕದಲ್ಲಿದ್ದರು. ಮುಖರ್ಜಿ ಬಳಿಕ ಜನಸಂಘವನ್ನು ಸ್ಥಾಪಿಸಿದರು. ಜನಸಂಘವು ಬಳಿಕ ಇಂದಿನ ಭಾರತೀಯ ಜನತಾ ಪಕ್ಷವಾಯಿತು.

ಟಕ್ಸಿ ತನ್ನ ಮಾರ್ಗದರ್ಶಿ ಹಾಗೂ ಫ್ಯಾಶಿಸ್ಟ್ ಚಿಂತಕ ಜಿಯೋವಾನಿ ಜಂಟೈಲ್‌ಗೆ ಬರೆದ ಪತ್ರವೊಂದರಲ್ಲಿ, ಮುಖರ್ಜಿಯನ್ನು ‘‘ಕಲ್ಕತ್ತಾದ ಲ್ಲಿರುವ ನಮ್ಮ ಅತ್ಯಂತ ಪ್ರಮುಖ ಸಹಯೋಗಿ’’ ಎಂಬುದಾಗಿ ಬಣ್ಣಿಸಿದ್ದಾರೆ.
ಕಸೊಲರಿ ಹಿಂದುತ್ವ ಮತ್ತು ಫ್ಯಾಶಿಸಮ್ ನಡುವಿನ ಸಾಮ್ಯತೆ ಗಳನ್ನು ಅನ್ವೇಷಿಸಿದ ಮೊದಲ ಸಂಶೋಧಕಿಯೇನಲ್ಲ. ಆದರೆ, ಕಸೊಲರಿ ತನ್ನ ಸಂಶೋಧನೆಯನ್ನು ಇತರ ಎಲ್ಲರಿಗಿಂತಲೂ ಹೆಚ್ಚಿನ ಪರಿಶ್ರಮದಿಂದ ಮತ್ತು ಹೆಚ್ಚು ವಿವರವಾಗಿ ಮಾಡಿದ್ದಾರೆ. ಶಾರದಾ ವಿಶ್ವವಿದ್ಯಾನಿಲಯದ ಶಿಕ್ಷಕ ತನ್ನ ವಿದ್ಯಾರ್ಥಿಗಳಿಗೆ ಸರಿಯಾದ ಮತ್ತು ಮಹತ್ವದ ಪ್ರಶ್ನೆಯನ್ನೇ ಕೇಳಿದ್ದಾರೆ ಎನ್ನುವುದನ್ನು ಕಸೊಲರಿಯ ಸಂಶೋಧನೆಗಳು ಸಾಬೀತುಪಡಿಸುತ್ತವೆ. ಈ ಪ್ರಶ್ನೆಗೆ ಉತ್ತರಿಸಲು ವಿದ್ಯಾರ್ಥಿಗಳಿಗೆ ಅವಕಾಶ ನೀಡದಿರುವ ಹಾಗೂ ಪ್ರಶ್ನೆ ಕೇಳಿದ ಶಿಕ್ಷಕನನ್ನೇ ಅಮಾನತುಗೊಳಿಸುವ ಮೂಲಕ ತಾವು ಸತ್ಯಕ್ಕೆ ಹೆದರುತ್ತಿದ್ದೇವೆ ಎನ್ನುವುದನ್ನು ವಿಶ್ವವಿದ್ಯಾನಿಲಯದ ಆಡಳಿತಗಾರರು ನಿರೂಪಿಸಿದ್ದಾರೆ. ಬಹುಶಃ ಸತ್ಯಕ್ಕಿಂತಲೂ ಹೆಚ್ಚು ತಮ್ಮ ರಾಜಕೀಯ ಧಣಿಗಳಿಗೆ ಹೆದರುತ್ತೇವೆ ಎನ್ನುವುದನ್ನು ಅವರು ತೋರಿಸಿರಬಹುದು. ಯಾಕೆಂದರೆ, ಹಿಂದುತ್ವದ ಸ್ಥಾಪಕರು ಯುರೋಪಿಯನ್ ಫ್ಯಾಶಿಸಮ್‌ನಿಂದ ಅಗಾಧವಾಗಿ ಪ್ರಭಾವಿತರಾಗಿದ್ದಾರೆ ಎನ್ನುವುದನ್ನು ನಾವು ಮರೆಯಬೇಕೆಂದು ಈ ರಾಜಕೀಯ ಧಣಿಗಳು ಬಯಸುತ್ತಾರೆ.

Writer - ರಾಮಚಂದ್ರ ಗುಹಾ

contributor

Editor - ರಾಮಚಂದ್ರ ಗುಹಾ

contributor

Similar News