ಮೆಡಿಕಲ್ ಕಾಲೇಜು ಸ್ಥಾಪನೆಗೆ ಬಗ್ಗೆ ಚರ್ಚೆ ಅಗತ್ಯ: ರಘುಪತಿ ಭಟ್
ಮಣಿಪಾಲ : ಜಿಲ್ಲೆಯಲ್ಲಿ ಪಿಪಿಪಿ ಮಾದರಿ ಬದಲು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಒತ್ತಾಯಗಳು ಕೇಳಿಬರುತ್ತಿವೆ. ಆದರೆ ರಾಜ್ಯದ ಎರಡು ಮೂರು ಸರಕಾರಿ ಕಾಲೇಜಿನ ಅವ್ಯವಸ್ಥೆ ಅವ್ಯವಹಾರದ ಬಗ್ಗೆ ನಾವು ಸಾಕಷ್ಟು ತಿಳಿದುಕೊಂಡಿದ್ದೇವೆ. ಆದುದರಿಂದ ಖಾಸಗಿ ಸಹಭಾಗಿತ್ವದಲ್ಲಿ ಕಾಲೇಜು ಸ್ಥಾಪಿಸಲು ಮುಂದಾಗಿದ್ದೇವೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.
ಮಣಿಪಾಲ ಕೆಎಂಸಿಯ ಟಿ.ಎಂ.ಎ.ಪೈ ಹಾಲ್‌ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಪ್ರಥಮ ಕಾರ್ಡ್ ವಿತರಿಸುವ ಮೂಲಕ ೨೦೨೨ನೆ ಸಾಲಿನ ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಾವಣೆಗೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಡಿಪಿಆರ್ ತಯಾರಿಸಲಾಗುತ್ತಿದೆ. ಮೆಡಿಕಲ್ ಕಾಲೇಜು ಸ್ಥಾಪನೆ ಬಗ್ಗೆ ಮುಂದೆ ವಿರೋಧಗಳು ಬರಬಾರದು ಎಂಬ ಕಾರಣಕ್ಕೆ ಚರ್ಚೆಗಳು ಆರಂಭವಾಗಬೇಕಾಗಿವೆ. ಡಿಪಿಆರ್ ಮುಗಿದ ಬಳಿಕ ಸಾರ್ವಜನಿಕರ ಮಧ್ಯೆ ಈ ವಿಚಾರ ಇಟ್ಟು ಚರ್ಚೆ ನಡೆಸಿ ಅತೀ ಶೀಘ್ರದಲ್ಲೇ ಸ್ಥಾಪಿಸಲಾಗುವುದು ಎಂದರು.
ಆಯುಷ್ಮಾನ್ ಭಾರತ್ ಒಳ್ಳೆಯ ಯೋಜನೆಯಾಗಿದೆ. ಆದರೆ ಕರ್ನಾಟಕದಲ್ಲಿ ಆರೋಗ್ಯ ಕರ್ನಾಟಕದ ಜೊತೆ ಸೇರಿದರಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ. ಆಯುಷ್ಮಾನ್ ಯೋಜನೆಯಡಿ ಕೆಎಂಸಿಯಲ್ಲಿ ೫೩೫ ಬೆಡ್ ಮೀಸಲಿರಿಸ ಲಾಗಿದೆ. ಆದರೂ ಸಮಸ್ಯೆಗಳು ಆಗುತ್ತಿದೆ. ಇದನ್ನು ರಾಜ್ಯಮಟ್ಟದಲ್ಲಿ ಚೆರ್ಚ ಮಾಡಿ ಪರಿಹರಿಸಬೇಕಾಗಿದೆ. ಇದಕ್ಕೆ ಅತೀ ಶೀಘ್ರದಲ್ಲೇ ಪರಿಹಾರ ಮಾಡುವ ಭರವಸೆಯನ್ನು ಸರಕಾರ ನೀಡಿದೆ. ಸರಕಾರ ಮತ್ತು ಆಸ್ಪತ್ರೆ ಸೇರಿಕೊಂಡು ಇನ್ನಷ್ಟು ಸುಧಾರಣೆ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಳ್ಳಾಲ್ ಮಾತನಾಡಿ, ವರ್ಷದಿಂದ ವರ್ಷಕ್ಕೆ ಆರೋಗ್ಯ ಕಾರ್ಡ್‌ಗೆ ಸದಸ್ಯರ ನೋಂದಾವಣೆ ಹೆಚ್ಚುತ್ತಿದೆ. ಕಾರ್ಡ್ ಖರೀದಿಸಲು ಹೂಡಿಕೆ ಮಾಡಿದ ಹಣ ವನ್ನು ಕೇವಲ ಎರಡು ಅಥವಾ ಮೂರು ಸಲದ ಬಳಕೆಗಳಲ್ಲಿ ರಿಯಾಯಿತಿಯ ರೂಪದಲ್ಲಿ ಹಿಂದೆ ಪಡೆಯಬಹುದು ಎಂದು ಹೇಳಿದರು.
ಮಾಹೆ ಉಪಕುಲಪತಿ ಲೆಫ್ಟಿನೆಂಟ್ ಜನರಲ್(ಡಾ)ಎಂ.ಡಿ.ವೆಂಕಟೇಶ್ ಮಾತನಾಡಿ, ೨೦೦೦ರಲ್ಲಿ ಅವಿಭಜಿತ ದಕ್ಸಿಣ ಕನ್ನಡ ಜಿಲ್ಲೆಯ ಜನರಿಗೆ ಆರಂಭಿಸಿದ ಈ ಯೋಜನೆ ಇಂದು ಉಡುಪಿ, ದ.ಕ., ಉತ್ತರ ಕನ್ನಡ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಂಗಳೂರು, ಬಳ್ಳಾರಿ ಸೇರಿದಂತೆ ಕರಾವಳಿ ಕರ್ನಾಟಕದ ಮತ್ತು ಮಧ್ಯ ಕರ್ನಾಟಕದ ಸುಮಾರು ೧೨ಕ್ಕೂ ಹೆಚ್ಚು ಜಿಲ್ಲೆಗಳಿಗೆ ವಿಸ್ತರಣೆ ಆಗಿದೆ. ಅಲ್ಲದೇ ಕೇರಳ, ಗೋವಾದಂತಹ ನೆರೆ ರಾಜ್ಯಗಳಿಗೂ ವಿಸ್ತರಣೆ ಆಗಿದೆ ಎಂದರು.
ಈ ಸಂದರ್ಭದಲ್ಲಿ ವೈದ್ಯಕೀಯ ಮತ್ತು ದಂತ ವಿಜ್ಞಾನಗಳ ಸಹ ಕುಲಪತಿ ಡಾ.ಪಿ.ಎಲ್.ಎನ್.ಜಿ.ರಾವ್ ಮತ್ತು ಮಾಹೆ ಮಂಗಳೂರು ಕ್ಯಾಂಪಸ್‌ನ ಸಹ ಉಪಕುಲಪತಿ ಡಾ.ದಿಲೀಪ್ ಜಿ.ನಾಯ್ಕ್ ಮಣಿಪಾಲ ಆರೋಗ್ಯ ಕಾರ್ಡ್ ಪ್ರತಿನಿಧಿಗಳನ್ನು ಸನ್ಮಾನಿಸಿದರು. ಆರೋಗ್ಯ ವಿಜ್ಞಾನದ ಸಹ ಉಪಕುಲಪತಿ ಡಾ. ವೆಂಕಟರಾಯ ಎಂ.ಪ್ರಭು ಮಣಿಪಾಲ ಆರೋಗ್ಯ ಕಾರ್ಡ್‌ನ ಮಾಹಿತಿ ಕರಪತ್ರವನ್ನು ಬಿಡುಗಡೆಗೊಳಿಸಿದರು.
ಮಣಿಪಾಲ ಕೆಎಂಸಿ ಡೀನ್ ಡಾ.ಶರತ್ ಕೆ.ರಾವ್ ಸ್ವಾಗತಿಸಿದರು. ಮಂಗಳೂರು ಕೆಎಂಸಿ ಡೀನ್ ಡಾ.ಬಿ.ಉನ್ನಿಕೃಷ್ಣನ್ ವಂದಿಸಿದರು. ಕೃಷ್ಣ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.