ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ಜನರಿಗೆ ಸಂಕಷ್ಟ: ಪೊರಕೆ ಹಿಡಿದ ಸಾಮಾಜಿಕ ಕಾರ್ಯಕರ್ತ ಜೆರಾರ್ಡ್ ಟವರ್ಸ್

Update: 2022-06-04 14:44 GMT

ಮಂಗಳೂರು : ಸ್ಮಾರ್ಟ್‌ಸಿಟಿಯಡಿ ನಗರದ ವಿವಿಧ ಕಡೆ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ಕಾಮಗಾರಿಯ ಅವ್ಯವಸ್ಥೆಯಿಂದಾಗಿ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ, ನಗರದ ಬೆಂದೂರ್‌ ವೆಲ್‌ನ ತೆರೆಸಾ ಶಾಲೆಯ ಮುಂಭಾಗದಲ್ಲಿ ಸಾಮಾಜಿಕ ಕಾರ್ಯಕರ್ತರೊಬ್ಬರು ಇಂದು ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು.

ರಸ್ತೆ ಕಾಮಗಾರಿಯ ಹಿನ್ನೆಲೆಯಲ್ಲಿ ಇಂಟರ್‌ ಲಾಕ್ ಮೇಲೆಲ್ಲಾ ಜಲ್ಲಿ ಹರಡಿರುವ ಕಾರಣ ವಾಹನಗಳ ಸಂಚಾರ, ರಸ್ತೆಯಲ್ಲಿ ನಡೆದಾಡುತ್ತಿರುವವರು ತೊಂದರೆ ಅನುಭವಿಸುತ್ತಿದ್ದಾರೆಂದು ಆಕ್ಷೇಪಿಸಿ ಸಾಮಾಜಿಕ ಕಾರ್ಯಕರ್ತ ರಾದ ಜೆರಾರ್ಡ್ ಟವರ್ಸ್ ಅವರು ಇಂದು ಕೈಯಲ್ಲಿ ಪೊರಕೆ ಹಿಡಿದು ಜಲ್ಲಿ ಗುಡಿಸುವ ಮೂಲಕ ಗಮನ ಸೆಳೆದರು.

ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಹೆಸರಿನಲ್ಲಿ ಈಗಾಗಲೇ ಸಂಗೀತ ಕಾರಂಜಿ, ಕ್ಲಾಕ್ ಟವರ್ ಹೆಸರಿನಲ್ಲಿ ಸಾಕಷ್ಟು ಹಣ ಪೋಲಾಗಿದೆ. ಇದೀಗ ಮತ್ತೆ ನಗರದ 40ಕ್ಕೂ ಅಧಿಕ ವಾರ್ಡ್‌ಗಳಲ್ಲಿ ಒಮ್ಮಿಂದೊಮ್ಮೆಗೆ ರಸ್ತೆ ಕಾಮಗಾರಿಗಳನ್ನು ಆರಂಭಿಸಿ ಅಗೆದು ಹಾಕಿ ತೊಂದರೆ ನೀಡುತ್ತಿದ್ದಾರೆ. ಇದರಿಂದ ವಾಹನ ಸಂಚಾರರ ಜತೆಗೆ ಶಾಲೆಗೆ ಹೋಗುವ ಮಕ್ಕಳು, ಪಾದಾಚಾರಿಗಳು ಸಾಕಷ್ಟು ತೊಂದರೆ ಅನುಭವಿಸುಂತಾಗಿದೆ. ರಸ್ತೆ ಕಾಮಗಾರಿ ನಡೆಸುವಾಗ ರಸ್ತೆ ಗುತ್ತಿಗೆದಾರರ ಹೆಸರು, ಕಾಮಗಾರಿಯ ವಿವರವನ್ನು ರಸ್ತೆಯಲ್ಲಿ ಹಾಕಬೇಕಾಗುತ್ತದೆ. ಆದರೆ ಅದ ಯಾವ ನಿಯಮವನ್ನೂ ಪಾಲಿಸಲಾಗುತ್ತಿಲ್ಲ. ಇದ್ದಲ್ಲೆಲ್ಲಾ ರಸ್ತೆ ಅಗೆದಿಟ್ಟು ನಾಳೆ ಯಾರಾದರೂ ಹೊಂಡಕ್ಕೆ ಬಿದ್ದು  ತೊಂದರೆ ಅನುಭವಿಸುವಾಗ ಯಾರ ಮೇಲೆ ಪ್ರಕರಮ ದಾಖಲಿಸುವುದು ಎಂದು ಜೆರಾರ್ಡ್ ಟವರ್ಸ್ ಪ್ರಶ್ನಿಸಿದ್ದಾರೆ.

ಜಿಲ್ಲಾಧಿಕಾರಿ ಇತ್ತೀಚೆಗೆ ರಸ್ತೆ ಅಗೆಯಬಾರದು ಎಂದು ಹೇಳಿಕೆ ನೀಡಿದ್ದಾರೆ. ಆದರೆ ನಗರದ ಕದ್ರಿ ಕಂಬಳದ ರಸ್ತೆಯಲ್ಲೂ ಒಂದೆರಡು ದಿನಗಳಲ್ಲಿ ಜೆಸಿಬಿಯಲ್ಲಿ ಅಗೆಯಲಾಗುತ್ತಿದೆ.  ಸಾಮಾನ್ಯ ಜನ ರಸ್ತೆ ಅಗೆಯಲು, ವಿದ್ಯುತ್ ಕಂಬ ಅಳವಡಿಸಲೂ ಅವಕಾಶ ನೀಡುವುದಿಲ್ಲ. ಆದರೆ ನಗರದ ರಸ್ತೆಗಳಲ್ಲಿ ಕೇಬಲ್‌ಗಳು ನೆಲದಲ್ಲಿವೆ. ಡ್ರೈನೇಜ್ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ನಿನ್ನೆ ವಾಹನ ಸಂಚರಿಸುತ್ತಿದ್ದ ವೇಳೆ ಜಲ್ಲಿ ಕಲ್ಲೊಂದು ಹಾರಿ ಮಗುವಿನ ಕಣ್ಣಿಗೆ ಬಿದ್ದಿದೆ. ಪ್ರಾಣಾಪಾಯದಿಂದ ಮಗು ಪಾರಾಗಿರುವುದನ್ನು ನಾನು ಕಣ್ಣಾರೆ ಕಂಡು ಇಂದು ಈ ರೀತಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದೇನೆ. ಆಡಳಿತ ಗಮನ ಹರಿಸಬೇಕೆಂಬುದು ನನ್ನ ಉದ್ದೇಶ ಎಂದು ಜೆರಾರ್ಡ್ ಟವರ್ಸ್ ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News