×
Ad

ಬೈಂದೂರು; ಅಕ್ರಮ ಕಲ್ಲು ಗಣಿಗಾರಿಕೆಗೆ ಅಧಿಕಾರಿಗಳ ದಾಳಿ: 80 ಸಾವಿರ ರೂ. ದಂಡ

Update: 2022-06-04 20:24 IST

ಬೈಂದೂರು : ಆಲೂರು ಸರಕಾರಿ ಜಾಗದಲ್ಲಿನ ಅಕ್ರಮ ಕೆಂಪುಕಲ್ಲು ಗಣಿಗಾರಿಕೆಗೆ ಆರೋಪದಲ್ಲಿ ಉಡುಪಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರ ದಾಳಿ ನಡೆಸಿದ್ದು, ಗಣಿ ಮಾಲಕರಿಗೆ 80 ಸಾವಿರ ರೂ. ದಂಡ ವಿಧಿಸಿದೆ.

ಖಚಿತ ಮಾಹಿತಿಯಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಭೂ ವಿಜ್ಞಾನಿ ಸಂಧ್ಯಾ ಕುಮಾರಿ, ಕಂದಾಯ ಇಲಾಖೆ ವಂಡ್ಸೆ ವಲಯ ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಗ್ರಾಮ ಕರಣಿಕ ಉದಯ ತಂಡ ದಾಳಿ ನಡೆಸಿದ್ದು, ಅಕ್ರಮವಾಗಿ ನಡೆಯುತ್ತಿರುವ ಕಲ್ಲುಕ್ವಾರಿ ಹೊಂಡವನ್ನು ಮುಚ್ಚಿ ಶಾಲಾ ಮಕ್ಕಳು ತಿರುಗಾಟಕ್ಕೆ ಅವಕಾಶ ಮಾಡಿಕೊಡುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ಆಲೂರು ಗ್ರಾಮ ಐದು ಸೆಂಟ್ಸ್ ಪರಿಸರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸರಕಾರಿ ಜಾಗವಿದ್ದು, ಗಣಿ ಇಲಾಖೆ ಪರವಾನಿಗೆ ಕೂಡಾ ಪಡೆಯದೆ ಕುಮ್ಕಿಹಕ್ಕಿನ ಜಾಗದಲ್ಲಿ ಎರಡು ಕಲ್ಲುಕೊರೆಯುವ ಯಂತ್ರ, ಒಂದು ಕಲ್ಲೆತ್ತುವ ಯಂತ್ರದ ಮೂಲಕ ವ್ಯಾಪಕವಾಗಿ ಕೆಂಪುಕಲ್ಲು ಕಿತ್ತು ಹೊಂಡ ಹಾಗೆ ಬಿಡಲಾಗಿತ್ತು. ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು, ಹೊಂಡ ಮುಚ್ಚಿ ಕಲ್ಲು ಕೀಳದಂತೆ ಖಡಕ್ ಎಚ್ಚರಿಕೆ ನೀಡಿದರು.  

ಇಲ್ಲಿನ ಭೂಮಿ ಹಕ್ಕು ರದ್ದತಿಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ನಂತರ ಎಲ್ಲಾ ಸರಕಾರಿ ಜಾಗಕ್ಕೆ ಬೇಲಿ ನಿರ್ಮಿಸಿ ಕಲ್ಲುಕ್ವಾರಿಗೆ ಕಡಿವಾಣ ಹಾಕಲಾಗು ವುದು. ಅತಿಕ್ರಮ ಕಲ್ಲುಗಣಿ ಮತ್ತೆ ಆರಂಭಿಸಿದರೆ, ಅವರ ವಿರುದ್ಧ ನ್ಯಾಯಾ ಲಯದಲ್ಲಿ ಖಾಸಗಿ ದೂರು ದಾಖಲಿಸಿ, ದುಪ್ಪಟ್ಟು ದಂಡ ವಸೂಲಿ ಮಾಡಲಾ ಗುವುದು ಎಂದು ಕಂದಾಯ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಅಧಿಕಾರಿಗಳ ವಿರುದ್ಧ ಅಸಮಾಧಾನ

ಗಣಿ ಇಲಾಖೆ ಅಧಿಕಾರಿಗಳು ಕಾಟಾಚಾರಕ್ಕೆ ದಂಡ ಹಾಕಿದ್ದು, ಸ್ಥಳೀಯರ ಅಹವಾಲು ಆಲಿಸದೆ, ಯಂತ್ರಗಳ ವಶಪಡಿಸಿಕೊಳ್ಳದಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.

ತಹಸೀಲ್ದಾರ್ ಸ್ಥಳಕ್ಕೆ ಬಂದಾಗ ಕಲ್ಲು ಕರೆಯುವ ಹಾಗೂ ಕಲ್ಲೆತ್ತುವ ಯಂತ್ರ ಗಳ ವಶಪಡಿಸಿಕೊಳ್ಳುವಂತೆ ಸೂಚಿಸಿದ್ದರೂ, ಗಣಿ ಇಲಾಖೆ ಅಧಿಕಾರಿಗಳು ಯಂತ್ರ ವಶಪಡಿಸಿಕೊಳ್ಳಲು ಆಗಲ್ಲ ಎಂದು ಹೇಳಿ ಜಾರಿಕೊಂಡಿದ್ದಾರೆ. ಕಲ್ಲು ಗಣಿಗಾರಿಕೆ ಬಳಿಯೇ ಕೃಷಿ ಭೂಮಿಗೆ ಗೊಬ್ಬರ, ಸೊಪ್ಪು ತಲೆಹೊರೆಯಲ್ಲಿ ಹೋಗಬೇಕು ಮತ್ತು ಶಾಲಾ ಮಕ್ಕಳು ಇದೇ ರಸ್ತೆಯಲ್ಲಿ ಶಾಲೆಗೆ ತೆರಳುತ್ತಾರೆ. ರಸ್ತೆಯಲ್ಲೇ ಕಲ್ಲುಗಣಿ ನಡೆಯುತ್ತಿದ್ದರೂ ನಮ್ಮ ಅಹವಾಲು ಕೇಳಲಿಲ್ಲ ಎಂದು ಸ್ಥಳೀಯ ಗ್ರಾಮಸ್ಥರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News