ಪ್ರತಿಭಾನ್ವಿತ ಕೊರಗ ಮಕ್ಕಳಿಗೆ ಅಭಿನಂದನೆ, ಮಾಹಿತಿ ಕಾರ್ಯಾಗಾರ
ಉಡುಪಿ, ಜೂ.೪: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಐಟಿಡಿಪಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕೊರಗ ಸಂಘಟನೆಗಳು ಉಡುಪಿ ಇವರ ಸಹಯೋಗದೊಂದಿಗೆ ಪಳ್ಳಿ ಗೋಕುಲ್‌ದಾಸ್ ಸಂಸ್ಮರಣೆ, ೨೦೨೧-೨೨ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಸಾಧಕರಿಗೆ ಸನ್ಮಾನ, ಮಕ್ಕಳ ಮಾನಸಿಕ ಆರೋಗ್ಯದ ಕುರಿತು ಆಪ್ತ ಸಮಾಲೋಚನೆ ಹಾಗೂ ಎಸೆಸೆಲ್ಸಿ ನಂತರ ಮುಂದೇನು ಎಂಬ ವಿಷಯದ ಕುರಿತ ಮಾಹಿತಿ ಕಾರ್ಯಾಗಾರವು ಶನಿವಾರ ಮಣಿಪಾಲದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶಾಸಕ ಕೆ. ರಘುಪತಿ ಭಟ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಎಚ್, ಉಡುಪಿ ನಗರ ಸಭೆಯ ನಾಮ ನಿರ್ದೇಶಿತ ಸದಸ್ಯೆ ಸುಬೇದಾ, ಎ.ವಿ.ಬಾಳಿಗಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಸೌಜನ್ಯ ಶೆಟ್ಟಿ, ಐಟಿಡಿಪಿ ಅಧಿಕಾರಿ ದೂದ್ ಪೀರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪಸಮನ್ವಯಾಧಿಕಾರಿ ಚಂದ್ರ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಕೊರಗ ಸಮುದಾಯದ ಮುಖಂಡ ಬಾಬು ಪಾಂಗಾಳ ಉಪಸ್ಥಿತರಿದ್ದರು.
ಇತ್ತೀಚೆಗೆ ನಡೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.೯೦ಕ್ಕಿಂತ ಹೆಚ್ಚು ಅಂಕ ಪಡೆದ ಕೊರಗ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.