2 ವರ್ಷದ ಬಳಿಕ ಸೌದಿಗೆ ಆಗಮಿಸಿದ ವಿದೇಶಿ ಹಜ್ ಯಾತ್ರಿಕರ ಗುಂಪು

Update: 2022-06-04 17:21 GMT

 ರಿಯಾದ್, ಜೂ.4: ಇಂಡೋನೇಶ್ಯಾದ ಹಜ್ ಯಾತ್ರಿಕರ ತಂಡವೊಂದು ಮದೀನಾ ತಲುಪಿದ್ದು ಅಲ್ಲಿಂದ ಅವರು ಪವಿತ್ರ ನಗರ ಮಕ್ಕಾಕ್ಕೆ ಪ್ರಯಾಣಿಸಲಿದ್ದಾರೆ. ಕೊರೋನ ಸಾಂಕ್ರಾಮಿಕದ ಕಾರಣದಿಂದ, 2 ವರ್ಷದ ಬಳಿಕ ವಿದೇಶಿ ಹಜ್ ಯಾತ್ರಿಕರ ಪ್ರಥಮ ತಂಡ ದೇಶಕ್ಕೆ ಆಗಮಿಸಿದೆ ಎಂದು ಸರಕಾರಿ ಸ್ವಾಮ್ಯದ ಸುದ್ಧಿಮಾಧ್ಯಮ ವರದಿ ಮಾಡಿದೆ.

 ಈ ವರ್ಷ, ವಿದೇಶಿಯರು ಸೇರಿದಂತೆ 1 ಮಿಲಿಯನ್ ಜನರಿಗೆ ಹಜ್ ಯಾತ್ರೆ ಕೈಗೊಳ್ಳಲು ಅವಕಾಶ ನೀಡುವುದಾಗಿ ಸೌದಿ ಅರೆಬಿಯಾ ಕಳೆದ ತಿಂಗಳು ಘೋಷಿಸಿದೆ. ಕೊರೋನ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 2020ರಲ್ಲಿ 1,000ಕ್ಕೂ ಕಡಿಮೆ ಯಾತ್ರಿಕರಿಗೆ ಮತ್ತು 2021ರಲ್ಲಿ ಸುಮಾರು 60,000 ಯಾತ್ರಿಕರಿಗೆ ಅವಕಾಶ ನೀಡಲಾಗಿತ್ತು.

ಈ ವರ್ಷದ ಹಜ್‌ಗೆ ಪ್ರಥಮ ಯಾತ್ರಿಗಳ ತಂಡ ಇಂಡೋನೇಶ್ಯಾದಿಂದ ಆಗಮಿಸಿದೆ. ಮಲೇಶ್ಯಾ ಮತ್ತು ಭಾರತದಿಂದಲೂ ವಿಮಾನಗಳು ಆಗಮಿಸಲಿದೆ. ಸಾಂಕ್ರಾಮಿಕದಿಂದಾಗಿ 2 ವರ್ಷದ ಅಡಚಣೆಯ ಬಳಿಕ ವಿದೇಶದಿಂದ ಆಗಮಿಸುತ್ತಿರುವ ಅತಿಥಿಗಳನ್ನು ಸ್ವಾಗತಿಸಲು ನಮಗೆ ಸಂತೋಷವಾಗುತ್ತಿದೆ. ಅವರಿಗೆ ಸರ್ವ ವ್ಯವಸ್ಥೆಗಳನ್ನೂ ಮಾಡಲು ಸನ್ನದ್ಧರಾಗಿದ್ದೇವೆ ಎಂದು ಸೌದಿಯ ಹಜ್ ಸಚಿವ ಮುಹಮ್ಮದ್ ಅಲ್ ಬಿಜಾವಿಯವರನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ ಅಲ್- ಎಖ್‌ಬರಿಯಾ ಚಾನೆಲ್ ವರದಿ ಮಾಡಿದೆ.

ಕೊರೋನ ಸಾಂಕ್ರಾಮಿಕದ ಬಿಕ್ಕಟ್ಟು ಕಾಣಿಸಿಕೊಳ್ಳುವ ಮೊದಲು, ಅಂದರೆ 2019ರ ಹಜ್ ಯಾತ್ರೆಯಲ್ಲಿ ಸುಮಾರು 2.5 ಮಿಲಿಯನ್ ಜನತೆ ಪಾಲ್ಗೊಂಡಿದ್ದರು. ಮುಸ್ಲಿಮ್ ಯಾತ್ರಾರ್ಥಿಗಳಿಂದ ಸೌದಿಗೆ ವಾರ್ಷಿಕ ಸುಮಾರು 12 ಬಿಲಿಯನ್ ಡಾಲರ್ ಆದಾಯ ಸಂಗ್ರಹವಾಗುತ್ತದೆ.

 ಈ ವರ್ಷದ ಹಜ್ ಯಾತ್ರೆ ಲಸಿಕೆ ಪಡೆದ, 65 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮುಸ್ಲಿಮರಿಗೆ ಮಾತ್ರ ಸೀಮಿತವಾಗಿದೆ. ಸೌದಿ ಅರೆಬಿಯಾದ ಹೊರಗಿನಿಂದ ಆಗಮಿಸುವವರು ಪ್ರಯಾಣಕ್ಕೆ 72 ಗಂಟೆ ಮೊದಲು ನಡೆಸಿದ ಕೋವಿಡ್-19 ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಹಜ್ ವೀಸಾದ ಅರ್ಜಿಯ ಜತೆ ಲಗತ್ತಿಸಬೇಕು ಎಂದು ಹಜ್ ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News