×
Ad

ಕೇರಳ: ಪೊಲೀಸರ ವಿರುದ್ಧ ಜಾತಿನಿಂದನೆ, ಅಕ್ರಮ ಪ್ರವೇಶ ಆರೋಪ

Update: 2022-06-05 22:52 IST

ತಿರುವನಂತಪುರ,ಜೂ.5: ಅಲಪ್ಪುಳ ಜಿಲ್ಲೆಯ ಹರಿಪದ ಪ್ರದೇಶದ ದಲಿತ ಕಾಲನಿಯಲ್ಲಿಯ ಮನೆಗಳಿಗೆ ಅಕ್ರಮವಾಗಿ ನುಗ್ಗಿದ ಪೊಲೀಸರು ಅಲ್ಲಿಯ ಕೆಲವು ನಿವಾಸಿಗಳ ವಿರುದ್ಧ ಜಾತಿನಿಂದನೆ ಮಾಡಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ವರದಿಯೊಂದನ್ನು ಸಲ್ಲಿಸುವಂತೆ ಕೇರಳ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಆಯೋಗವು ರವಿವಾರ ಪೊಲೀಸ್ ಇಲಾಖೆಗೆ ನಿರ್ದೇಶ ನೀಡಿದೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಆಯೋಗದ ಅಧ್ಯಕ್ಷ ಬಿ.ಎಸ್.ಮಾವೋಜಿ ಅವರು ಪೊಲೀಸ್ ಕ್ರಮವನ್ನು ‘ಅತಿರೇಕದ್ದು’ ಎಂದು ಬಣ್ಣಿಸಿದರು. ಘಟನೆಗೆ ಸಂಬಂಧಿಸಿದಂತೆ ಅಲಪ್ಪುಳ ಎಸ್ಪಿಯಿಂದ ವರದಿಯನ್ನು ಕೇಳಲಾಗಿದೆ ಎಂದರು.

ಘಟನೆಗೆ ಸಂಬಂಧಿಸಿದ ಮಾಧ್ಯಮ ವರದಿಗಳ ಆಧಾರದಲ್ಲಿ ಆಯೋಗವು ಸ್ವಯಂ ಆಗಿ ವಿಷಯವನ್ನು ಕೈಗೆತ್ತಿಕೊಂಡಿದೆ ಎಂದೂ ಅವರು ತಿಳಿಸಿದರು.
ಆಯೋಗಕ್ಕೆ ಕರೆ ಮಾಡಿದ ಕಾಲನಿಯ ನಿವಾಸಿಗಳು ಪೊಲೀಸರು ಅಕ್ರಮ ದಾಳಿಯನ್ನು ನಡೆಸಿದ್ದಾರೆ ಮತ್ತು ಅಲ್ಲಿಯ ಜನರ ವಿರುದ್ಧ ಜಾತಿನಿಂದನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ ಎಂದರು.ಜೂನ್ 4ರಂದು ಮಧ್ಯರಾತ್ರಿಯ ಬಳಿಕ ಘಟನೆ ಸಂಭವಿಸಿತ್ತು.

 ಮಾಮೂಲು ಗಸ್ತು ಕಾರ್ಯದಲ್ಲಿ ನಿರತರಾಗಿದ್ದ ಅಧಿಕಾರಿಗಳು ಕಾಲನಿಯ ಮನೆಯೊಂದರ ಹೊರಗೆ ಬೈಕ್ ಪಕ್ಕದಲ್ಲಿ ಇಬ್ಬರು ವ್ಯಕ್ತಿಗಳು ನಿಂತಿದ್ದನ್ನು ಗಮನಿಸಿ ಅವರನ್ನು ಪ್ರಶ್ನಿಸಿದ್ದರು. ಈ ವೇಳೆ ಕಾಲನಿಯ ಇತರ ನಿವಾಸಿಗಳು ಬಂದು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಹೆಚ್ಚೆಚ್ಚು ಜನರು ಸೇರುತ್ತಿದ್ದಂತೆ ಪರಿಸ್ಥಿತಿಯು ವಿಷಮಿಸಿತ್ತು ಮತ್ತು ಸ್ಥಳೀಯರು ಪೊಲೀಸ್ ಜೀಪನ್ನು ಅಡ್ಡಗಟ್ಟಿ ಅದರ ಚಾವಿಯನ್ನು ಕಿತ್ತುಕೊಂಡಿದ್ದರು ಹಾಗೂ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆಯನ್ನೂ ನಡೆಸಿದ್ದರು. ಕಾಯಂಕುಳಂ ಡಿಎಸ್ಪಿ ನೇತೃತ್ವದಲ್ಲಿ ಹೆಚ್ಚಿನ ಪೊಲೀಸ್ ಪಡೆ ಸ್ಥಳಕ್ಕೆ ಧಾವಿಸಿ ಆಪತ್ತಿನಲ್ಲಿದ್ದ ಅಧಿಕಾರಿಗಳನ್ನು ರಕ್ಷಿಸಿದ್ದಾರೆ ಮತ್ತು ಮೂವರನ್ನು ಬಂಧಿಸಿದ್ದಾರೆ ಎಂದು ಕರೀಲಕುಲಂಗರ ಪೊಲೀಸ ಠಾಣೆಯ ಅಧಿಕಾರಿ ತಿಳಿಸಿದರು.

ಪೊಲೀಸರು ಬಲವಂತದಿಂದ ಮನೆಗಳಿಗೆ ನುಗ್ಗಿದ್ದರು,ಅವರ ಮೇಲೆ ಹಲ್ಲೆ ನಡೆಸಿ ತುಚ್ಛ ಶಬ್ದಗಳಿಂದ ಅವಮಾನಿಸಿದ್ದರು ಎಂಬ ಆರೋಪಗಳನ್ನು ನಿರಾಕರಿಸಿದ ಅಧಿಕಾರಿ,ಗಸ್ತು ತಂಡವನ್ನು ನಿಂದಿಸಲಾಗಿತ್ತು ಮತ್ತು ಅವರ ಮೇಲೆ ಹಲ್ಲೆ ನಡೆಸಲಾಗಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News