ಇಂಗ್ಲೆಂಡ್‍ನ ಎಚ್‍ಪಿಐ ವೀಸಾ ಅರ್ಹತೆ ಪಟ್ಟಿಯಲ್ಲಿಲ್ಲ ಭಾರತೀಯ ವಿವಿಗಳ ಹೆಸರು

Update: 2022-06-06 10:05 GMT

ಲಂಡನ್: ಬ್ರಿಟನ್ ಸೋಮವಾರ ಆರಂಭಿಸಿದ ಹೈ ಪೊಟೆನ್ಶಿಯಲ್ ಇಂಡಿವಿಜುವಲ್ (ಎಚ್‍ಪಿಐ) ವೀಸಾ ಯೋಜನೆಗೆ  ಅರ್ಜಿ ಸಲ್ಲಿಸಲು ಆಯ್ಕೆಯಾಗಿರುವ ಟಾಪ್ 50 ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಭಾರತದ ಒಂದೇ ಒಂದು ಐಐಟಿ  ಕಾಣಿಸಿಕೊಂಡಿಲ್ಲ.

ಪ್ರತಿಷ್ಠಿತ ವಿವಿಗಳ ಪ್ರತಿಭಾನ್ವಿತರಿಗೆ ಬ್ರಿಟನ್‍ನಲ್ಲಿ ಸೇವೆ ಸಲ್ಲಿಸಲು ಅವಕಾಶ ಒದಗಿಸುವ ಈ ಎಚ್‍ಪಿಐ ವೀಸಾ ಪಡೆಯಲು ಅರ್ಹ ಸಂಸ್ಥೆಗಳ ಪಟ್ಟಿಯಲ್ಲಿ ಭಾರತೀಯ ಸಂಸ್ಥೆಗಳು ಇಲ್ಲದೇ ಇರುವುದು ಹಲವರ ಹುಬ್ಬೇರಿಸಿದೆ.

ಈ ವೀಸಾ ಹೊಂದಿರುವವರು  ಎರಡು ವರ್ಷ ಯುಕೆ ವರ್ಕ್ ವೀಸಾ ಪಡೆಯಬಹುದಾಗಿದೆ (ಪಿಎಚ್ಡಿ ಪದವಿ ಹೊಂದಿದವರಿಗೆ ಮೂರು ವರ್ಷ) ಅರ್ಜಿ ಸಲ್ಲಿಸಿದ ಹಿಂದಿನ ಐದು ವರ್ಷಗಳ ಅವಧಿಯಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹತೆ ಪಡೆಯಲು ಅಭ್ಯರ್ಥಿ ಕಲಿತ ಸಂಸ್ಥೆಯು  ಕ್ಯೂಎಸ್, ಟೈಮ್ಸ್ ಹೈಯರ್ ಎಜುಕೇಶನ್ ಮತ್ತು ಅಕಾಡೆಮಿಕ್ ರ್ಯಾಂಕಿಂಗ್ ಆಫ್ ವಲ್ರ್ಡ್ ಯುನಿವರ್ಸಿಟೀಸ್ ಇವುಗಳ ಮೂರು ರ್ಯಾಂಕಿಂಗ್ ಪಟ್ಟಿಯ ಪೈಕಿ ಕನಿಷ್ಠ ಎರಡು ಪಟ್ಟಿಗಳಲ್ಲಿ ಟಾಪ್ 50 ಸಂಸ್ಥೆಗಳ ಪೈಕಿ ಒಂದಾಗಿರಬೇಕಿದೆ. ಈ ಅರ್ಹತೆಯೊಂದಿದ್ದರೆ ಯಾವುದೇ ರಾಷ್ಟ್ರೀಯರಿಗೆ ಅವಕಾಶವಿದ್ದರೂ ಅರ್ಹತೆ ಪಡೆದಿರುವ ವಿವಿ ಪಟ್ಟಿಗಳಲ್ಲಿ ಆಫ್ರಿಕಾ, ಲ್ಯಾಟಿನ್ ಅಮೆರಿಕಾ ಮತ್ತು ದಕ್ಷಿಣ ಏಷ್ಯಾದ  ವಿವಿಗಳಿಲ್ಲ.

ಉದಾಹರಣೆಗೆ ತೀರಾ ಇತ್ತೀಚಿಗಿನ ಪಟ್ಟಿಯಲ್ಲಿ ಹಾರ್ವರ್ಡ್, ಯೇಲ್ ಸಹಿತ ಅಮೆರಿಕಾದ ವಿವಿಗಳೇ ಇವೆ. ಉಳಿದಂತೆ ಚೀನಾ, ಯುರೋಪ್, ಆಸ್ಟ್ರೇಲಿಯಾ, ಹಾಂಗ್ ಕಾಂಗ್, ಜಪಾನ್, ಕೆನಡಾ ಮತ್ತು ಸಿಂಗಾಪುರದ ಸಂಸ್ಥೆಗಳಿದ್ದು ಭಾರತೀಯ ವಿದ್ಯಾರ್ಥಿಯೊಬ್ಬ ಅರ್ಹತೆ ಪಡೆಯಬೇಕಿದ್ದರೆ ಆತ ಈ ವಿವಿಗಳಿಂದ ಶಿಕ್ಷಣ ಪಡೆದಿರಬೇಕಿದೆ.
 ಈ ಪಟ್ಟಿಗಳನ್ನು  ಜಗತ್ತಿನ ಅತ್ಯಂತ ವಿಶ್ವಾಸಾರ್ಹ ಮೂರು ವಿವಿ ರ್ಯಾಂಕಿಂಗ್ ಪಟ್ಟಿಗಳ ಆಧಾರದಲ್ಲಿ ಸಿದ್ಧಪಡಿಸಲಾಗಿದೆ ಎಂದು ಸಂಬಂಧಿತ ಸಂಸ್ಥೆಗಳ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಗ್ಲೋಬಲ್ ರ್ಯಾಂಕಿಂಗ್‍ನಲ್ಲಿ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ಈ ಮಾನದಂಡವನ್ನು ಪೂರೈಸದ ಹಲವು ಉನ್ನತ ವಿವಿಗಳಲ್ಲಿ ಶಿಕ್ಷಣ ಪಡೆಯುವರು ಬ್ರಿಟನ್‍ನ ಈ ಎಚ್‍ಪಿಐ ವೀಸಾ ಪಡೆಯಲು ಅರ್ಹತೆ ಹೊಂದಿರುವುದಿಲ್ಲ.

ಇಂಡಿಯನ್ ನ್ಯಾಷನಲ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಯುಕೆ ಸಹಿತ ಇಂಗ್ಲೆಂಡ್‍ನಲ್ಲಿರುವ ಹಲವು ಭಾರತೀಯ ವಿದ್ಯಾರ್ಥಿ ಸಂಘಟನೆಗಳು ಈ ಹೊಸ ಪಟ್ಟಿಗಳ ಕುರಿತಂತೆ ತಮ್ಮ ಅಸಮಾಧಾನ ತೋಡಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News