‘ಮಹಾನ್ ವ್ಯಕ್ತಿಗಳ ಘನತೆ ನಾಶಕ್ಕೆ ಬಿಡುವುದಿಲ್ಲ’: ರಾಜ್ಯ ಸರಕಾರದ ವಿರುದ್ಧ ಎಐಡಿಎಸ್‍ಒ ಆಕ್ರೋಶ

Update: 2022-06-06 17:11 GMT

ಬೆಂಗಳೂರು, ಜೂ.6: ಪಠ್ಯಪುಸ್ತಕ ರಚನೆಯಲ್ಲಿ ಸರಕಾರದ ಹಸ್ತಕ್ಷೇಪ ಸಲ್ಲದು. ಪಠ್ಯಪುಸ್ತಕಗಳಿಂದ ಮಹಾನ್ ವ್ಯಕ್ತಿಗಳ ಆಶಯ, ಚಿಂತನೆ, ಮೌಲ್ಯ ಹಾಗೂ ಘನತೆಯನ್ನು ನಾಶಗೊಳಿಸಲು ನಾವು ಬಿಡುವುದಿಲ್ಲ ಎಂದು ಎಐಡಿಎಸ್‍ಒ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿದರು.

ಸೋಮವಾರ ಇಲ್ಲಿನ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಎಐಡಿಎಸ್‍ಒ ಬೆಂಗಳೂರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು, ಜನ ಸಾಮಾನ್ಯರು ಪಠ್ಯ ಪುಸ್ತಕ ಪರಿಷ್ಕರಣೆಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ, ಕೋಮು ವೈಷಮ್ಯ ಹರಡುವ ಪುಸ್ತಕಗಳನ್ನು ತಿರಸ್ಕರಿಸಿ, ಮಹಾನ್ ವ್ಯಕ್ತಿಗಳ ಆಶಯಗಳನ್ನು ನಮ್ಮಿಂದ ದೂರ ಮಾಡಲಾಗದು ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಐಡಿಎಸ್‍ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ಕೋವಿಡ್ ಬಿಕ್ಕಟ್ಟಿನ ಎರಡು ವರ್ಷಗಳ ನಂತರ ವಿದ್ಯಾರ್ಥಿಗಳು ಶಾಲೆಯತ್ತ ಮುಖ ಮಾಡಿದ್ದರು. ಈ ಸಮಯದಲ್ಲಿ ಅವರಿಗೆ ಪಠ್ಯ ಪುಸ್ತಕಗಳು ಲಭ್ಯ ಇರಬೇಕಿತ್ತು. ಆದರೆಇಲ್ಲಿ ನಡೆದದ್ದೇ ಬೇರೆ. ಪಠ್ಯ ಪುಸ್ತಕ ಪರಿಷ್ಕರಣೆಯ ಹೆಸರಿನಲ್ಲಿ ಸರಕಾರವು ಮಹಾನ್ ವ್ಯಕ್ತಿಗಳ ಆಶಯ, ಮೌಲ್ಯ, ಘನತೆಯನ್ನು ಗಾಳಿಗೆ ತೂರುವ ಕೆಲಸ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತನ್ನ ಸಿದ್ಧಾಂತಕ್ಕೆ ಸರಿ ಹೊಂದುವ ಪಾಠವನ್ನು ಅಥವಾ ಅಂತಹ ವ್ಯಕ್ತಿಗಳ ಕುರಿತ ಲೇಖನವನ್ನು ಪ್ರಸ್ತುತ ವರ್ಷದ ಪಠ್ಯಕ್ರಮದಲ್ಲಿ ಸೇರಿಸಲಾಗಿದೆ. ಒಂದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರಕಾರವು ಶೈಕ್ಷಣಿಕ ಪಠ್ಯಕ್ರಮ ರಚನೆಯಲ್ಲಿ ಹಸ್ತಕ್ಷೇಪ ನಡೆಸಬಾರದು. ಈ ಹಿಂದೆ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇದ್ದಾಗ ಅವರೂ ಸಹ ತಮ್ಮ ವಿಚಾರಕ್ಕೆ ತಂಕ್ಕಂತೆ ಪಠ್ಯ ಪುಸ್ತಕ ರಚನೆ ಪ್ರಕ್ರಿಯೆಯಲ್ಲಿ ಕೈ ಹಾಕಿದ್ದರು. ಇದು ನಮ್ಮ ಮೊದಲ ಆಕ್ಷೇಪ ಎಂದರು.

ಪಠ್ಯರಚನೆಯನ್ನು ಸಂಪೂರ್ಣವಾಗಿ ರಾಜ್ಯದ ಶಿಕ್ಷಣ ತಜ್ಞರು, ಉಪನ್ಯಾಸಕರು, ಸಾಹಿತಿಗಳು, ಬರಹಗಾರರು ಇವರ ನಿಯಂತ್ರಣಕ್ಕೆ ಬಿಡಬೇಕು. ಆದರೆ ರಾಜ್ಯ ಬಿಜೆಪಿ ಸರಕಾರವು ತನ್ನ ರಾಜಕೀಯ ಹಿತಾಸಕ್ತಿಗಾಗಿ, ಪರಿಷ್ಕರಣಾ ಸಮಿತಿಯ ಮೂಲಕ ತನ್ನ ಅಜೆಂಡಾವನ್ನು ಪಾಠದಲ್ಲಿ ಇಟ್ಟಿದೆ. ಸ್ವಾತಂತ್ಯ ಹೋರಾಟದಲ್ಲಿ ಭಾಗವಹಿಸದೇ ಬೆನ್ನು ತೋರಿಸಿ, ಜನತೆಯ ಐಕ್ಯತೆಗೆ ವಿರುದ್ಧವಾಗಿ ಕೋಮು ಭಾವನೆಗಳನ್ನು ಹರಡಿದ ಕೆ.ಬಿ.ಹೆಡ್ಗೇವಾರ್ ಭಾಷಣದ ತುಣುಕನ್ನು ಯಾರು ಆದರ್ಶ ಪುರುಷ  ಎಂಬ ಶೀರ್ಷಿಕೆ ಅಡಿಯಲ್ಲಿ ತಂದಿದ್ದಾರೆ ಎಂದು ಟೀಕಿಸಿದರು.

ಸ್ವತಂತ್ರ ಸಂಗ್ರಾಮದ ರಾಜಿರಹಿತ ಹೋರಾಟದ ಪ್ರಶ್ನಾತೀತ ನಾಯಕ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಪಾಠವನ್ನು ತೆಗೆದು ಹಾಕಿದ್ದರು. 7 ನೆತರಗತಿಯ ಸಮಾಜ ವಿಜ್ಞಾನ ಪಾಠದಿಂದ ಸಾವಿತ್ರಿಬಾಯಿ ಫುಲೆ, ಕನಕದಾಸರು ಹಾಗೂ ಪುರಂದರದಾಸರ ಕುರಿತ ಪಾಠಗಳನ್ನು ತೆಗೆಯಲಾಗಿದೆ. 9ನೆ ತರಗತಿಯ ಸಮಾಜ ವಿಜ್ಞಾನ ಪಾಠದಲ್ಲಿ ಬಸವಣ್ಣನವರ ಐತಿಹಾಸಿಕ ಹಿನ್ನೆಲೆ ಕುರಿತು ತಪ್ಪಾಗಿ ಉಲ್ಲೇಖಿಸಲಾಗಿದೆ.

9ನೆ ತರಗತಿಯ ಸಮಾಜ ವಿಜ್ಞಾನ ಪಾಠದಲ್ಲಿ ಅಂಬೇಡ್ಕರ್ ಅವರನ್ನು ‘ಸಂವಿಧಾನ ಶಿಲ್ಪಿ' ಎಂದು ಕರೆದಿರುವುದನ್ನು ತೆಗೆದು ಹಾಕಲಾಗಿದೆ. 10ನೆ ತರಗತಿಯ ಕನ್ನಡ ಪಠ್ಯದಿಂದ ವಿವೇಕಾನಂದರ ಮಾನವತಾವಾದಿ ಮೌಲ್ಯಗಳ ಕುರಿತ ಪಾಠವನ್ನು ಕೈ ಬಿಡಲಾಗಿದೆ. ಇದರೊಂದಿಗೆ, ನೈತಿಕತೆ ಮೌಲ್ಯಗಳನ್ನು ಸಾರುವ ಪಿ.ಲಂಕೇಶ್, ಎ.ಎನ್. ಮೂರ್ತಿರಾಯರು, ಸಾರಾ ಅಬೂಬಕರ್ ಇವರ ಲೇಖನಗಳು ಮತ್ತು ಇತರ ಪ್ರಗತಿಪರ ಚಿಂತಕರ ಪಾಠಗಳನ್ನು ಕೈ ಬಿಡಲಾಗಿದೆ. ಯಾವ ಕಾರಣಗಳಿಗಾಗಿ ಈ ಪಾಠಗಳನ್ನು ಕೈ ಬಿಡಲಾಗಿದೆ ಎಂಬುದಕ್ಕೆ ಸ್ಪಷ್ಟನೆ ದೊರೆತಿಲ್ಲ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬೆಂಗಳೂರು ಜಿಲ್ಲಾ ಉಪಾಧ್ಯಕ್ಷೆ ಅಪೂರ್ವ, ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕಲ್ಯಾಣ್‍ಕುಮಾರ್, ಖಜಾಂಚಿ ವಿನಯ್‍ಚಂದ್ರ, ಸೆಕ್ರೆಟರಿಯಟ್ ಸದಸ್ಯರಾದ ಕಿರಣ್, ನವಾಝ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News