×
Ad

ಬಳ್ಕುಂಜೆಯಲ್ಲಿ ಬೃಹತ್ ಕೈಗಾರಿಕಾ ವಲಯ ಸ್ಥಾಪನೆ: ನೆಲೆ ಕಳೆದುಕೊಳ್ಳಲಿರುವ ಮೂಲ ನಿವಾಸಿಗಳು

Update: 2022-06-08 14:10 IST

ಮಂಗಳೂರು: ಮುಲ್ಕಿ ತಾಲೂಕಿನ ಬಳ್ಕುಂಜೆ, ಕೊಲ್ಲೂರು, ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೃಹತ್ ಕೈಗಾರಿಕಾ ವಲಯ ಸ್ಥಾಪನೆಗೆ ಸರಕಾರ ಮುಂದಾಗಿದ್ದು, ನೆಲದ ಮೂಲ ನಿವಾಸಿಗಳು ಸಹಿತ ನೂರಾರು ಕುಟುಂಬಗಳು ನೆಲೆ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದೆ.

ಈಗಾಗಲೇ ಕರ್ನಾಟಕ ಕೈಗಾರಿಕಾ ಪ್ರಾಧಿಕಾರದ ಅಧಿಕಾರಿಗಳು ಮನೆಗಳನ್ನು ಸರಕಾರಕ್ಕೆ ಬಿಟ್ಟುಕೊಡಬೇಕು ಎಂದು ಇಲ್ಲಿನ ಗ್ರಾಮಸ್ಥರಿಗೆ ಸೂಚನೆ ನೀಡಿದ್ದು, ಆಕ್ಷೇಪಣೆಗಳನ್ನು ಸಲ್ಲಿಸಲು ನೋಟಿಸ್ ಜಾರಿಗೊಳಿಸಿದ್ದಾರೆ. ಸರಕಾರದ ಈ ಅವೈಜ್ಞಾನಿಕ ನಿರ್ಧಾರದಿಂದಾಗಿ ಬಳಕುಂಜೆ ಗ್ರಾಪಂ ವ್ಯಾಪ್ತಿಯಲ್ಲಿರುವ ಕೊರಗರ ಕಾಲನಿ ಸಹಿತ ಮೂರೂ ಗ್ರಾಪಂಗಳ ನೂರಾರು ಕುಟುಂಬಗಳು ಮನೆ, ಜಮೀನನ್ನು ಕಳೆದುಕೊಂಡು ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ.

ಬಳ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಾಗಿರುವ ಮೂಲನಿವಾಸಿಗಳ ಸಹಿತ ಗ್ರಾಮಸ್ಥರು ಸರಕಾರದ ಆದೇಶವನ್ನು ತಿರಸ್ಕರಿಸಿದ್ದು, ಇದು ನಮ್ಮ ನೆಲ. ಇಲ್ಲಿಂದ ನಮ್ಮನ್ನು ಎಲ್ಲಿಗೋ ಕಳುಹಿಸಿ ಸರಕಾರ ಕೈಗಾರಿಕೆ ಮಾಡಬೇಕಾದ ಅನಿವಾರ್ಯತೆ ಏನಿದೆ? ಎಂದು ಆಕ್ರೋಶ ಭರಿತರಾಗಿ ಸರಕಾರವನ್ನು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಬಳ್ಕುಂಜೆ ಕೊರಗರ ಕಾಲನಿ ನಿವಾಸಿ ರಂಗ ಕೊರಗ ಎಂಬವರು ‘‘ಸರಕಾರ ಸೇರಿದಂತೆ ಎಲ್ಲರೂ ಹಲವು ದಶಕಗಳಿಂದ ಕೊರಗರು ಈ ನೆಲದ ಮೂಲನಿವಾಸಿಗಳು ಎಂದು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಮೂಲನಿವಾಸಿಗಳನ್ನು ಕಡೆಗಣಿಸುತ್ತಾ ಮೂಲೆಗುಂಪು ಮಾಡುತ್ತಾ ಬಂದಿದ್ದಾರೆಯೇ ಹೊರತು ಅವರ ಅಭಿವೃದ್ಧಿಗೆ ಚಿಂತಿಸಿಲ್ಲ’’ ಎಂದು ಅಳಲು ತೋಡಿಕೊಂಡರು.

 ನೆಲೆ ಕಳೆದುಕೊಳ್ಳಲಿರುವ ಕೊರಗರ ದೈವಗಳು: ಮೂಲಗಳ ಪ್ರಕಾರ ಬಳ್ಕುಂಜೆ ವ್ಯಾಪ್ತಿಯ ಕೊರಗರ ಕಾಲನಿಯಲ್ಲಿ ಸುಮಾರು 42 ದೈವಗಳನ್ನು ಪೂಜಿಸಲಾಗುತ್ತಿದೆ. ಈ ಪೈಕಿ 11 ದೈವಸ್ಥಾನಗಳಿದ್ದು, ವರ್ಷಕ್ಕೆ 3ರಿಂದ ನಾಲ್ಕು ಬಾರಿ ವಿಶೇಷ ಪೂಜಾ ಕೈಂಕರ್ಯಗಳು ನಡೆಸಲಾಗುತ್ತಿವೆ. ಹೀಗಿರುವಾಗ ನಮ್ಮನ್ನು ಯಾವುದೇ ಬಲ ಪ್ರಯೋಗಿಸಿ ಇಲ್ಲಿಂದ ಬೇರೆಡೆಗೆ ಸರಕಾರ ಕಳುಹಿಸಬಹುದು. ಆದರೆ ದೈವಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಸರಕಾರಕ್ಕೆ ಸಾಧ್ಯವೇ ಎಂದು ಕೊರಗರು ಪ್ರಶ್ನಿಸುತ್ತಿದ್ದಾರೆ. ಸರಕಾರದ ಅವೈಜ್ಞಾನಿಕ ತೀರ್ಮಾನದಿಂದಾಗಿ ತುಳುನಾಡಿನ ಮೂಲನಿವಾಸಿಗಳ ದೈವಗಳು ನೆಲೆಯನ್ನೇ ಕಳೆದುಕೊಳ್ಳಬೇಕಾದ ದುಸ್ಥಿತಿ ಬಂದಿದೆ ಎಂದು ಕೊರಗ ಸಮುದಾಯ ಅಳಲನ್ನು ತೋಡಿಕೊಂಡಿದೆ.

ಜನಪ್ರತಿನಿಧಿ, ಗ್ರಾಪಂಗೂ ಇಲ್ಲದ ಮಾಹಿತಿ: ಕೈಗಾರಿಕಾ ವಲಯ ಸ್ಥಾಪನೆಗೆ ನಿವೇಶನ ನೀಡುವಂತೆ ಕರ್ನಾಟಕ ರಾಜ್ಯ ಕೈಗಾರಿಕಾ ಮಂಡಳಿ ಸ್ಥಳೀಯರಿಗೆ ನೋಟಿಸ್ ಜಾರಿ ಮಾಡಿದೆ. ಆದರೆ, ಈ ಬಗ್ಗೆ ಗ್ರಾಪಂ ಅಧ್ಯಕ್ಷರಿಗಾಗಲೀ, ಅಭಿವೃದ್ಧಿ ಅಧಿಕಾರಿಗಾಗಲೀ, ಸ್ವತಃ ಕ್ಷೇತ್ರದ ಶಾಸಕರಿಗೇ ತಿಳಿದಿಲ್ಲ. ಗ್ರಾಮಕ್ಕೆ ಸಂಬಂಧಿಸಿದ ಯಾವುದೇ ಜನಪ್ರತಿನಿಧಿಗಾಗಲಿ, ಅಧಿಕಾರಿಗಳಿಗಾಗಲೀ ಯಾವುದೇ ಮಾಹಿತಿ ನೀಡದೆ ಸರಕಾರ ಗ್ರಾಮಸ್ಥರನ್ನು ಒಕ್ಕಲೆಬ್ಬಿಸುವ ಷಡ್ಯಂತರ ನಡೆಸುತ್ತಿದೆ ಎಂಬ ಆರೋಪ ಇಲ್ಲಿನ ಜನಪ್ರತಿನಿಧಿಗಳೇ ಮಾಡುತ್ತಿದ್ದಾರೆ.

‘ಸತ್ತರೂ ಇಲ್ಲೇ, ಬದುಕಿದರೂ ಇಲ್ಲೇ...’

ನಾನು ಸರಕಾರ ನೀಡಿದ 5 ಸೆಂಟ್ಸ್ ನಿವೇಶನದಲ್ಲಿ ಇತ್ತೀಚೆಗಷ್ಟೇ ಮನೆ ನಿರ್ಮಿಸಿಕೊಂಡಿದ್ದೇನೆ. ಮನೆಯ ಸುತ್ತಮುತ್ತ ತರಕಾರಿ ಬೆಳೆಸಿದ್ದೇನೆ. ಮನೆಯಲ್ಲಿರುವ ನಾಲ್ಕೈದು ತೆಂಗಿನ ಮರಗಳಿಂದ ಸಿಗುವ ತೆಂಗಿನ ಕಾಯಿ ಮಾರಿಕೊಂಡು ನನ್ನ ವಿಧವೆ ಸೊಸೆ ಹಾಗೂ 4 ವರ್ಷದ ಮೊಮ್ಮಗನೊಂದಿಗೆ ಜೀವನ ನಡೆಸುತ್ತಿದ್ದೇನೆ. ನನ್ನ ಮಗ ತೀರಿಕೊಂಡು ಒಂದು ವರ್ಷವಾಯಿತು. ಏಕಾಏಕಿ ಮನೆ ಬಿಟ್ಟು ಹೋಗಬೇಕೆಂದರೆ ಗಂಡು ದಿಕ್ಕಿಲ್ಲದ ನನ್ನ ಸಂಸಾರ ಎಲ್ಲಿಗೆ ಹೋಗುವುದು? ಸತ್ತರೂ ಸರಿ, ಬದುಕಿದರೂ ಸರಿ ಮನೆ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಇಲ್ಲೆ ಇರುತ್ತೇವೆ ಎಂದು 70 ವರ್ಷದ ಸರೋಜನಿ ಎಂಬವರು ಕಣ್ಣೀರು ಹಾಕುತ್ತಾ ತನ್ನ ಅಸಹಾಯಕತೆ ತೋಡಿಕೊಂಡರು.

ಕುಲ ಕಸುಬಿಗೂ ಕುತ್ತು

ಇಲ್ಲಿನ ಮೂಲ ನಿವಾಸಿಗಳು ಇಲ್ಲೇ ಪಕ್ಕದ ಪ್ರದೇಶಗಳಲ್ಲಿ ಸಿಗುವ ನಾರು, ಬಳ್ಳಿಗಳಿಂದ ವಿವಿಧ ಸಾಮಗ್ರಿಗಳನ್ನು ತಯಾರಿಸಿ ಜೀವನ ನಡೆಸುವವರಾಗಿದ್ದಾರೆ. ಈ ಭಾಗದ ಮೂಲನಿವಾಸಿಗಳು ಸ್ವಲ್ಪ ಪ್ರಮಾಣದ ಕೃಷಿ, ಹೈನುಗಾರಿಕೆ ಹೊಂದಿದ್ದರೂ, ಅದರೊಂದಿಗೆ ಅಲ್ಲೇ ಸಮೀಪದ ಕಾಡು, ಗುಡ್ಡ ಪ್ರದೇಶದಲ್ಲಿ ಸಿಗುವ ಬಳ್ಳಿಗಳನ್ನು ಬಳಸಿಕೊಂಡು ತಮ್ಮ ಮೂಲ ಕಸುಬಾದ ಬುಟ್ಟಿ, ಚಾಪೆ, ಅಲಂಕಾರಿಕ ವಸ್ತುಗಳ ತಯಾರಿಕೆ ಮಾಡುವ ಮೂಲಕ ಕುಲ ಕಸುಬು ಹಾಗೂ ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿದ್ದಾರೆ. ಆದರೆ, ಸರಕಾರದ ದುಡುಕುತನದ ನಿರ್ಧಾರದಿಂದಾಗಿ ಅವರ ಕುಲ ಕಸುಬು, ಸಂಸ್ಕೃತಿಯ ಬುಡಕ್ಕೇ ಕೊಡಲಿ ಏಟು ಬೀಳಲಿದೆ.

Writer - ರಹ್ಮಾನ್ ಹಳೆಯಂಗಡಿ

contributor

Editor - ರಹ್ಮಾನ್ ಹಳೆಯಂಗಡಿ

contributor

Similar News