ಭಾರತದ ವರ್ಚಸ್ಸಿಗೆ ಧಕ್ಕೆ ತಂದ ಬಿಜೆಪಿಯ ನಾಯಕರು!

Update: 2022-06-09 03:44 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಉತ್ತರ ಪ್ರದೇಶ ಸೇರಿದಂತೆ ದೇಶಾದ್ಯಂತ ಕಾನೂನು ಸುವ್ಯವಸ್ಥೆಗೆ ಭಾರೀ ಧಕ್ಕೆಯನ್ನುಂಟು ಮಾಡಿದ, ನೂರಾರು ದೇಶವಾಸಿಗಳ ಬಂಧನಕ್ಕೆ ಕಾರಣವಾದ ‘ಪ್ರವಾದಿ ನಿಂದನೆ’ಯ ಪ್ರಕರಣದ ಕುರಿತಂತೆ ಕೊನೆಗೂ ಕೇಂದ್ರ ಸರಕಾರ ಎಚ್ಚೆತ್ತುಕೊಂಡಿದೆ. ವಿಪರ್ಯಾಸವೆಂದರೆ, ಪ್ರವಾದಿ ನಿಂದನೆಯ ವಿರುದ್ಧ ಭಾರತದಲ್ಲಿ ವ್ಯಾಪಕ ಪ್ರತಿಭಟನೆಗಳು ವ್ಯಕ್ತವಾದಾಗ, ಸರಕಾರ ಆ ಪ್ರತಿಭಟನೆಯನ್ನು ದಮನಿಸುವ ಪ್ರಯತ್ನ ಮಾಡಿತೇ ಹೊರತು, ಆರೋಪಿಗಳ ಮೇಲೆ ಕ್ರಮ ತೆಗೆದುಕೊಳ್ಳಲು ಮುಂದಾಗಲಿಲ್ಲ. ಸರಕಾರದ ವೌನ, ದುಷ್ಕರ್ಮಿಗಳಿಗೆ ಇನ್ನಷ್ಟು ಕುಮ್ಮಕ್ಕು ನೀಡುವಂತಿತ್ತು. ಆದರೆ ಯಾವಾಗ ಹೊರ ದೇಶದ ಸರಕಾರಗಳು ಈ ಬಗ್ಗೆ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳತೊಡಗಿದವೋ ಆಗ ಭಾರತದೊಳಗಿರುವ ಸರಕಾರ ಎಚ್ಚೆತ್ತುಕೊಂಡಿತು. ದ್ವೇಷದ ಹೇಳಿಕೆಯನ್ನು ನೀಡಿದ ಬಿಜೆಪಿ ನಾಯಕರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಂಡಿತು ಮಾತ್ರವಲ್ಲ, ಮಾಧ್ಯಮಗಳಲ್ಲಿ ‘ಸರ್ವ ಧರ್ಮ ಸಮನ್ವಯ’ದ ಬಗ್ಗೆ ಹೇಳಿಕೆಯ ಮೇಲೆ ಹೇಳಿಕೆಗಳನ್ನು ನೀಡತೊಡಗಿತು. ಬಿಜೆಪಿಯ ಇಂತಹ ದ್ವೇಷ ಹೇಳಿಕೆಗಳಿಂದ ಅತಿ ಹೆಚ್ಚು ಹಾನಿಯಾಗುತ್ತಿರುವುದು ಭಾರತಕ್ಕೇ ಆಗಿದ್ದರೂ, ಈ ಧಾರ್ಮಿಕ ನಿಂದನೆಗಳ ಹೇಳಿಕೆಗಳನ್ನು ಪರೋಕ್ಷವಾಗಿ ಪ್ರೋತ್ಸಾಹಿಸಿಕೊಂಡು ಬಂದ ಸರಕಾರ, ಹೊರ ದೇಶಗಳ ಎಚ್ಚರಿಕೆಗೆ ತಲೆಬಾಗಿ ತಕ್ಷಣ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾದುದು ಭಾರತದ ಪಾಲಿಗೆ ತೀವ್ರ ಮುಜುಗರದ ಸಂಗತಿಯೇ ಆಗಿದೆ.

ಧಾರ್ಮಿಕ ಮಹಾತ್ಮರ ನಿಂದನೆಯ ವಿರುದ್ಧ ದೇಶದೊಳಗಿರುವ ಜನರು ಪ್ರತಿಭಟನೆ ವ್ಯಕ್ತಪಡಿಸಿದಾಗಲೇ ಕ್ರಮ ತೆಗೆದುಕೊಂಡಿದ್ದರೆ, ಕೇಂದ್ರ ಸರಕಾರದ ಘನತೆ ಹೆಚ್ಚುತ್ತಿತ್ತು. ಆದರೆ ಭಾರತದ ಪ್ರಜೆಗಳ ಆಕ್ರೋಶಕ್ಕೆ ಕಿವುಡಾಗಿ ಕೊಲ್ಲಿ ರಾಷ್ಟ್ರಗಳು ಸೇರಿದಂತೆ ಹೊರ ದೇಶದ ವಿವಿಧ ಸರಕಾರಗಳು ಎಚ್ಚರಿಕೆ ನೀಡಿದಾಗ ಸರಕಾರ ಸ್ಪಂದಿಸಿತು. ಈ ಸ್ಪಂದನಕ್ಕೆ ಮುಖ್ಯ ಕಾರಣ, ಕೊಲ್ಲಿ ರಾಷ್ಟ್ರಗಳ ಜೊತೆಗೆ ಭಾರತ ಹೊಂದಿರುವ ವಾಣಿಜ್ಯ ಸಂಬಂಧಳು. ಜಗತ್ತಿನ ಸುಮಾರು 17 ರಾಷ್ಟ್ರಗಳು ಭಾರತದೊಳಗೆ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಆತಂಕ ವ್ಯಕ್ತಪಡಿಸಿ ಭಾರತದೊಂದಿಗೆ ಸ್ಪಷ್ಟೀಕರಣವನ್ನು ಕೇಳಿತು. ಮಾತ್ರವಲ್ಲ, ಪ್ರವಾದಿ ನಿಂದನೆ ಕೃತ್ಯಗಳನ್ನು ಖಂಡಿಸಿತು. ಇದಿಷ್ಟೇ ಆಗಿದ್ದರೆ ಸರಕಾರದ ಮೇಲೆ ದೊಡ್ಡ ಪರಿಣಾಮವಾಗುತ್ತಿರಲಿಲ್ಲವೇನೋ? ಯಾವಾಗ ಭಾರತದ ಉತ್ಪನ್ನಗಳನ್ನು ಆ ರಾಷ್ಟ್ರಗಳು ಬಹಿಷ್ಕರಿಸತೊಡಗಿದವೋ ಆಗ ಸರಕಾರ ತಕ್ಷಣ ಎಚ್ಚೆತ್ತುಕೊಂಡಿತು. ಸರಕಾರ ಎಚ್ಚೆತ್ತುಕೊಂಡಿತು ಎನ್ನುವುದಕ್ಕಿಂತ, ಸರಕಾರವನ್ನು ನಿಯಂತ್ರಿಸುತ್ತಿರುವ ಬೃಹತ್ ಉದ್ಯಮಿಗಳು ಎಚ್ಚೆತ್ತುಕೊಂಡರು. ಕೊಲ್ಲಿ ರಾಷ್ಟ್ರಗಳ ಬಹಿಷ್ಕಾರ ನೇರವಾಗಿ ದುಷ್ಪರಿಣಾಮಗಳನ್ನು ಬೀರುವುದು ಭಾರತದ ಬೃಹತ್ ಉದ್ಯಮಿಗಳ ಮೇಲೆ. ಆ ಮೂಲಕ ಅದು ಭಾರತದ ಆರ್ಥಿಕತೆಗೆ ಇನ್ನಷ್ಟು ಗಾಯಗಳನ್ನು ಮಾಡಬಹುದು. ಉದ್ಯಮಿಗಳ ಹಣ, ಬೆಂಬಲದಿಂದ ನಡೆಯುತ್ತಿರುವ ಸರಕಾರ ತಕ್ಷಣ ಪ್ರವಾದಿ ನಿಂದನೆಗೈದ ನಾಯಕರ ಮೇಲೆ ಕ್ರಮ ತೆಗೆದುಕೊಂಡಿತು ಮಾತ್ರವಲ್ಲ, ಅವರ ಕೃತ್ಯಗಳಿಗಾಗಿ ವಿಷಾದಿಸಿತು. ಭಾರತ ಸರ್ವ ಧರ್ಮಗಳನ್ನು ಗೌರವಿಸುವ ದೇಶವಾಗಿದೆ ಎಂದು ಸ್ಪಷ್ಟೀಕರಣವನ್ನು ನೀಡಿತು.

ಭಾರತದ ಸ್ಪಷ್ಟೀಕರಣವನ್ನು ಗಮನಿಸಿದರೆ ‘ಈ ದೇಶದಲ್ಲಿ ಧಾರ್ಮಿಕ ನಿಂದನೆಗಳ ಹೇಳಿಕೆಗಳನ್ನು ಬಿಜೆಪಿ ನಾಯಕರು ನೀಡುತ್ತಿರುವುದು ಇದೇ ಮೊದಲ ಬಾರಿಯೇನೋ’ ಎಂದು ಯಾರಾದರೂ ಭಾವಿಸಬೇಕು. ಅಭಿವೃದ್ಧಿಗೆ ಸಂಬಂಧಿಸಿ ಸಂಪೂರ್ಣ ವಿಫಲವಾಗಿರುವ ಮೋದಿ ನೇತೃತ್ವದ ಸರಕಾರ, ತನ್ನ ಅಧಿಕಾರವುಳಿಸಿಕೊಳ್ಳಲು ‘ದ್ವೇಷ ರಾಜಕಾರಣ’ವನ್ನು ಬಲವಾಗಿ ನೆಚ್ಚಿಕೊಂಡಿದೆ. ಅದರ ಭಾಗವಾಗಿಯೇ ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಬಿಜೆಪಿ ಮುಖಂಡರು ಜನರನ್ನು ಕೆರಳಿಸುವ ಹೇಳಿಕೆಗಳಲ್ಲಿ ತಲ್ಲೀನರಾಗಿದ್ದಾರೆ. ಈ ಮೂಲಕ ಕುಸಿದು ಹೋಗಿರುವ ದೇಶದ ಆರ್ಥಿಕತೆಯ ಕಡೆಗೆ ಜನರ ಗಮನ ಹರಿಯದಂತೆ ನೋಡಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಇದು ಪ್ರಜ್ಞಾಪೂರ್ವಕವಾಗಿ ನಡೆಯುತ್ತಿದೆ. ಹಲಾಲ್ ಕಟ್, ಜಟ್ಕಾ ಕಟ್, ಹಿಜಾಬ್ ಮೊದಲಾದ ಬೆಳವಣಿಗೆಗಳು ಈ ದ್ವೇಷ ರಾಜಕಾರಣದ ಭಾಗವೇ ಆಗಿದೆ. ಸಿ.ಟಿ. ರವಿ, ಅನಂತ್ ಕುಮಾರ್ ಹೆಗಡೆ, ಈಶ್ವರಪ್ಪ, ತೇಜಸ್ವಿ ಸೂರ್ಯ ಮೊದಲಾದ ಅಪ್ರಬುದ್ಧ ನಾಯಕರ ಬಾಯಲ್ಲಿ ಹರಿದಾಡುವ ‘ಧಾರ್ಮಿಕ ನಿಂದನೆಯ ಮಾತು’ಗಳಿಂದ ಬಿಜೆಪಿ ತನ್ನ ಜೀವ ಉಳಿಸಿಕೊಂಡಿದೆ ಎಂದು ಬಿಜೆಪಿಯೊಗಿನ ವರಿಷ್ಠರೇ ನಂಬಿದ್ದಾರೆ. ಇಂತಹ ಸಂದರ್ಭದಲ್ಲಿ ಏಕಾಏಕಿ ಗಲ್ಫ್ ರಾಷ್ಟ್ರಗಳಿಂದ ಬಂದಿರುವ ಆಕ್ಷೇಪ ಸರಕಾರವನ್ನು ತೀವ್ರ ಇಕ್ಕಟ್ಟಿನಲ್ಲಿ ಸಿಲುಕಿಸಿತು.

ಬರೇ ರಾಜಕೀಯ ಖಂಡನೆಯಾಗಿದ್ದರೆ ಸರಕಾರ ಅವುಗಳನ್ನು ನಿರ್ಲಕ್ಷಿಸುತ್ತಿತ್ತು. ಆದರೆ ಆರ್ಥಿಕ ಬಹಿಷ್ಕಾರದ ಬಗ್ಗೆಯೂ ಆ ಸರಕಾರ ಮಾತನಾಡಿದ್ದುದರಿಂದ ಅನಿವಾರ್ಯ ವಾಗಿ ತನ್ನ ನ್ನು ತಾನು ತಿದ್ದಿಕೊಳ್ಳಲೇಬೇಕಾದಂತಹ ಸ್ಥಿತಿಗೆ ಮೋದಿ ನೇತೃತ್ವದ ಸರಕಾರ ಸಿಲುಕಿಕೊಂಡಿತು. ಇಂದು ಗೋಮಾಂಸಗಳ ರಫ್ತಿನಿಂದ ಭಾರತದ ಉದ್ಯಮಿಗಳು ಕೋಟ್ಯಂತರ ರೂಪಾಯಿಯನ್ನು ಸಂಪಾದಿಸುತ್ತಿದ್ದಾರೆ. ಗಲ್ಫ್ ರಾಷ್ಟ್ರಗಳು ಭಾರತದೊಳಗೆ ನಡೆಯುತ್ತಿರುವ ವಿದ್ಯಮಾನಗಳನ್ನು ಖಂಡಿಸಿದಾಗ ‘ಭಾರತ ಗೋಮಾಂಸ ರಫ್ತನ್ನು ನಿಲ್ಲಿಸಿ ಅವರ ಆಹಾರಕ್ಕೆ ಕಲ್ಲು ಹಾಕಿ ಪಾಠ ಕಲಿಸುತ್ತದೆ’ ಎಂದು ಕೆಲವು ಮುಗ್ಧ ‘ಮೋದಿ ಭಕ್ತರು’ ಭಾವಿಸಿದ್ದರು. ಆದರೆ ಅವರೆಲ್ಲರಿಗೂ ಆಘಾತವಾಗುವಂತೆ ಕೇಂದ್ರ ಸರಕಾರ ನಡೆದುಕೊಂಡಿತು. ಆ ರಾಷ್ಟ್ರಗಳ ಜೊತೆಗೆ ವ್ಯವಹಾರ ನಡೆಸುತ್ತಿರುವ ಬೃಹತ್ ಉದ್ಯಮಿಗಳೆಲ್ಲ, ಆ ದೇಶಗಳ ಜೊತೆಗೆ ವ್ಯವಹಾರ ಸಂಬಂಧವನ್ನು ಕಡಿದುಕೊಂಡು ತಮ್ಮ ‘ದೇಶಭಕ್ತಿ’ಯನ್ನು ಸಾಬೀತು ಪಡಿಸುತ್ತಾರೆ ಎಂದು ಭಾವಿಸಿದ್ದು ಕೂಡ ಹುಸಿಯಾಯಿತು.

ಈ ಸಂದರ್ಭದಲ್ಲಿ ಒಂದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಗಲ್ಫ್ ರಾಷ್ಟ್ರಗಳಲ್ಲಿ ವ್ಯವಹಾರ ನಡೆಸುತ್ತಿರುವ ಭಾರತದ ಬೃಹತ್ ಉದ್ಯಮಿಗಳ ಮೇಲಿನ ಕಾಳಜಿಯಿಂದ ತಕ್ಷಣ ಆಯಾ ರಾಷ್ಟ್ರಗಳಿಗೆ ಸ್ಪಷ್ಟೀಕರಣ ನೀಡಿದ ಭಾರತ ಸರಕಾರ ತನ್ನದೇ ದೇಶದೊಳಗಿರುವ ‘ಬಡಪಾಯಿ ವ್ಯಾಪಾರಿ’ಗಳ ಜೊತೆಗೆ ಹೇಗೆ ನಡೆದುಕೊಂಡಿದೆ? ಧರ್ಮದ ಹೆಸರಿನಲ್ಲಿ ನಮ್ಮದೇ ದೇಶದೊಳಗಿನ ನಮ್ಮದೇ ಜನರ ವ್ಯಾಪಾರಕ್ಕೆ ಬಹಿಷ್ಕಾರ ಹಾಕಲು ಬಿಜೆಪಿಯೊಳಗಿರುವ ನಾಯಕರೇ ಕರೆಕೊಟ್ಟರು. ಅದನ್ನು ತಡೆದು ಆ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಯಾಕೆ ಸಾಧ್ಯವಾಗಲಿಲ್ಲ? ಈ ದೇಶದ ಮುಸ್ಲಿಮರು ಈ ದೇಶದ ಭಾಗವೇ ಆಗಿದ್ದಾರೆ. ಅವರ ವ್ಯವಹಾರಗಳಲ್ಲಿ ನಷ್ಟವಾದರೆ ಅದು ಭಾರತದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡುತ್ತದೆ. ಅದರಿಂದ ದೇಶದ ನಿರುದ್ಯೋಗಗಳು ಹೆಚ್ಚುತ್ತವೆ. ತನ್ನದೇ ದೇಶದ ವ್ಯಾಪಾರಿಗಳ ವಿರುದ್ಧ ಬಹಿಷ್ಕಾರ ಕೃತ್ಯಗಳು ನಡೆದಾಗ ಅವುಗಳನ್ನು ಸಂಭ್ರಮಿಸಿದ್ದ ಸರಕಾರ, ಭಾರತದ ಬೃಹತ್ ಉದ್ಯಮಿಗಳಿಗೆ ಗಲ್ಫ್ ರಾಷ್ಟ್ರಗಳು ಬಹಿಷ್ಕಾರ ಹಾಕಿದಾಗ ಎಚ್ಚೆತ್ತುಕೊಂಡಿದ್ದು ಯಾಕೆ? ಈ ಬೃಹತ್ ಉದ್ಯಮಿಗಳ ಮೇಲೆ ಇರುವ ಇಷ್ಟೊಂದು ಪ್ರೀತಿ ತನ್ನದೇ ದೇಶದ ಬಡ ವ್ಯಾಪಾರಿಗಳ ಮೇಲೆ ಯಾಕಿಲ್ಲ? ಕೊಲ್ಲಿ ರಾಷ್ಟ್ರದ ಆದೇಶಕ್ಕೆ ತಲೆ ಬಾಗಿ ತನ್ನ ಪಕ್ಷದ ನಾಯಕಿಯೊಬ್ಬಳನ್ನು ವಜಾಗೊಳಿಸಲು ಸಾಧ್ಯವಾಗುತ್ತದೆಯಾದರೆ, ದೇವಸ್ಥಾನದ ಜಾತ್ರೆಯೊಂದರಲ್ಲಿ ಕಲ್ಲಂಗಡಿ ಮಾರುತ್ತಿದ್ದ ವ್ಯಾಪಾರಿಯ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬಿಜೆಪಿ ನೇತೃತ್ವದ ಸರಕಾರಕ್ಕೆ ಯಾಕೆ ಸಾಧ್ಯವಾಗಿಲ್ಲ? ದ್ವೇಷ ರಾಜಕಾರಣದಿಂದ ಭಾರತದ ಆರ್ಥಿಕತೆ ಇನ್ನಷ್ಟು ಹಿಂದಕ್ಕೆ ಚಲಿಸುತ್ತದೆಯೇ ಹೊರತು, ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾರದು ಎನ್ನುವ ವಾಸ್ತವವನ್ನು ಇನ್ನಾದರೂ ಬಿಜೆಪಿ ಅರ್ಥಮಾಡಿಕೊಳ್ಳದೇ ಇದ್ದರೆ, ದೇಶವಾಸಿಗಳೇ ಅದನ್ನು ಬಿಜೆಪಿಗೆ ಅರ್ಥಮಾಡಿಸುವ ದಿನಗಳು ಅತಿ ಬೇಗನೇ ಬರಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News