×
Ad

ಬೇಸಿಗೆಗೂ ಮುನ್ನ ಅಗ್ನಿ ಅವಘಡ ತಡೆಗೆ ಮುಂದಾದ ಬಂಡೀಪುರದ ಅರಣ್ಯಾಧಿಕಾರಿಗಳು

Update: 2025-12-22 12:08 IST

ಚಾಮರಾಜನಗರ, ಡಿ.21: ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಪ್ರದೇಶಗಳಿಗೆ ವಿಸ್ತಾರಗೊಂಡಿರುವ ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಅರಣ್ಯಾಧಿಕಾರಿಗಳು ಬೇಸಿಗೆಗೂ ಮುನ್ನ ಬೆಂಕಿ ಅವಘಡವನ್ನು ತಪ್ಪಿಸಲು ಕಾಡಿನೊಳಗೆ ಫೈರ್ ಲೈನ್ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಡಿಸೆಂಬರ್ ತಿಂಗಳಲ್ಲೇ ಬೆಂಕಿ ಅವಘಡ ತಡೆಗೆ ಅರಣ್ಯಾಧಿಕಾರಿಗಳು ಮುಂದಾಗಿರುವುದು ಗಮನಾರ್ಹವಾಗಿದೆ.

ಬೇಸಿಗೆ ಆರಂಭಕ್ಕೆ ಇನ್ನೂ ಮೂರ್ನಾಲ್ಕು ತಿಂಗಳು ಇದ್ದರೂ ಅರಣ್ಯಾಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿ ಮಾರ್ಗ ಮತ್ತು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಫೈರ್ ಲೈನ್ ನಿರ್ಮಾಣ ಮಾಡುತ್ತಿದ್ದಾರೆ. ಅರಣ್ಯಾಧಿಕಾರಿಗಳಿಗೆ ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತರು ಬೆಂಬಲ ನೀಡುತ್ತಿದ್ದಾರೆ.

ಬೆಂಕಿ ಅವಘಡದಿಂದ ಬಂಡೀಪುರವನ್ನು ರಕ್ಷಿಸಲು ಫೈರ್‌ಲೈನ್ ಜತೆಗೆ ಅರಣ್ಯದಲ್ಲಿ ಗರಿಕೆ ಹುಲ್ಲಿನ ಬೆಳವಣಿಗೆಗೆ ಮಾರಕವಾಗುವ ಕಳೆ ಗಿಡಗಳನ್ನು ಬೇರು ಸಮೇತ ತೆರವುಗೊಳಿಸುವ ಕಾರ್ಯ ನಡೆಸಿದೆ.

ಈ ವರ್ಷ ಸಾಕಷ್ಟು ಮಳೆಬಿದ್ದ ಪರಿಣಾಮ ಅರಣ್ಯ ಪ್ರದೇಶದ ಎಲ್ಲ ಕೆರೆಕಟ್ಟೆಗಳಲ್ಲಿ ನೀರಿನ ಸಂಗ್ರಹವಿದೆ. ಅಲ್ಲದೆ ಆಗಾಗ ಬೀಳುತ್ತಿರುವ ಸಣ್ಣ ಪುಟ್ಟ ಮಳೆಯಿಂದ ಹುಲ್ಲು ಹಾಗೂ ಮರಗಿಡಗಳು ಇನ್ನೂ ಹಸಿರಾಗಿದ್ದರೂ ಅರಣ್ಯ ಇಲಾಖೆ ಬೆಂಕಿ ಅವಘಡದ ಬಗ್ಗೆ ಅಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಡಿಸೆಂಬರ್ ಮೊದಲ ವಾರದಿಂದಲೇ ಎಲ್ಲ 13 ವಲಯಗಳಲ್ಲಿಯೂ 2,850 ಕಿಮೀ ಉದ್ದಕ್ಕೂ ಲಾಂಟಾನ ಮುಂತಾದ ಕಳೆಗಳನ್ನು ತೆಗೆದು ಫೈರ್‌ಲೈನ್ ನಿರ್ಮಾಣ ಮಾಡಲಾಗುತ್ತಿದೆ. ಇಲಾಖೆಯ ಸಿಬ್ಬಂದಿ ಜತೆಗೆ ಫೈರ್ ವಾಚರ್‌ಗಳು ಹುಲಿ ಯೋಜನೆಯ ಅರಣ್ಯ ಪ್ರದೇಶ ಗಳ ನಿಗದಿತ ಸ್ಥಳಗಳಲ್ಲಿ ಕಳೆಗಳನ್ನು ತೆರವುಗೊಳಿಸಲು ಆರಂಭಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ಬಾರಿ ಗೊಬ್ಬರದ ಗಿಡಗಳನ್ನು ಬುಡಸಮೇತ ತೆರವುಗೊಳಿಸುವ ಕಾರ್ಯಾಚರಣೆ ನಡೆಸುತ್ತಿದೆ. ಎಂ ಆ್ಯಂಡ್ ಯು ಎಂಬ ಸಂಸ್ಥೆಯ ಸಹಕಾರದಿಂದ ಸಣ್ಣ ಮತ್ತು ದೊಡ್ಡ ಕಳೆಗಳನ್ನು ತೆರವುಗೊಳಿಸುತ್ತಿದೆ. ವ್ಯಾಪಕವಾಗಿ ಬೆಳೆದಿರುವ ಗಿಡಗಳ ಕಾಂಡದವರೆಗೂ ಕತ್ತರಿಸಿ ಬುಡವನ್ನು ಜೆಸಿಬಿಗಳಿಂದ ಬೇರು ಸಮೇತ ತೆಗೆಯಲಾಗುತ್ತಿದೆ.

ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಯೋಜನೆಯ ಅರಣ್ಯ ಪ್ರದೇಶದಲ್ಲಿ ತಮಿಳುನಾಡು ಹಾಗೂ ಕೇರಳವನ್ನು ಹೆದ್ದಾರಿಗಳು ಹಾದುಹೋಗಿದ್ದು ಇಲ್ಲಿ ಪ್ರತಿದಿನವೂ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಆದ್ದರಿಂದ ಅರಣ್ಯ ಇಲಾಖೆ ಪ್ರತೀ ವರ್ಷವೂ ರಸ್ತೆ ಬದಿಗಳಲ್ಲಿ ಬೆಳೆದಿರುವ ಪೊದೆಗಳನ್ನು ತೆರವುಗೊಳಿಸುತ್ತಿದ್ದರೂ ಮತ್ತೆ ಬೆಳೆಯುತ್ತಿವೆ. ಇದರಿಂದ ರಸ್ತೆ ಬದಿಯ ಪೊದೆಗಳ ಮರೆಯಲ್ಲಿರುವ ವನ್ಯಜೀವಿಗಳು ವಾಹನಗಳ ಮೇಲೆ ದಾಳಿಗೆ ಮುಂದಾಗುತ್ತಿವೆ. ರಸ್ತೆ ದಾಟಲು ಮುಂದಾಗುವ ವನ್ಯಜೀವಿಗಳು ವಾಹನಗಳಿಗೆ ಕಾಣದೆ ಅಪಘಾತಗಳು ಸಂಭವಿಸುತ್ತವೆ.

ವಿಶ್ವ ವಿಖ್ಯಾತ ಬಂಡೀಪುರ ರಾಷ್ಟ್ರೀಯ ಉದ್ಯಾನವದಲ್ಲಿ ಒಂದು ತಿಂಗಳಿನಿಂದ ಎಲ್ಲ ವಲಯಗಳಿಗೂ ಸಣ್ಣ ಹಾಗೂ ಕಳೆಗಿಡಗಳನ್ನು ತೆರವುಗೊಳಿಸಲಾಗುತ್ತಿದೆ. ಬೇಸಿಗೆಗೂ ಮುನ್ನವೇ ಫೈರ್‌ಲೈನ್ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದ್ದು, ಮುಕ್ತಾಯದ ಹಂತದಲ್ಲಿದ್ದು ಬೇಸಿಗೆಯಲ್ಲಿ ಅರಣ್ಯ ಸಂರಕ್ಷಣೆಗೆ ಪೂರ್ವ ಸಿದ್ಧತೆ ಮಾಡಲಾಗುತ್ತಿದೆ.

-ಎನ್.ಸಿ.ಮಹದೇವ, ಬಂಡೀಪುರ ವಲಯ ಅರಣ್ಯಾಧಿಕಾರಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಾ.ಅಶ್ವಥ್ ಕುಮಾರ್

contributor

Similar News