×
Ad

ಉದ್ಯೋಗಿಗಳಿಗೆ 1.5 ಕೋಟಿ ರೂ.ಬೆಲೆಯ ಫ್ಲ್ಯಾಟ್‌ಗಳನ್ನು ಉಡುಗೊರೆಯಾಗಿ ನೀಡುತ್ತಿರುವ ಕಂಪೆನಿ!: ಕಾರಣ ಏನು ಗೊತ್ತಾ?

Update: 2025-12-22 17:00 IST

ಸಾಂದರ್ಭಿಕ ಚಿತ್ರ | Photo Credit : FREEPIK

ಕಂಪನಿಗಳು ಬೋನಸ್ಗಳು, ಇಎಸ್ಒಪಿಗಳು ಅಥವಾ ಸಮಯ ಹೊಂದಾಣಿಕೆಯ ಕೆಲಸದ ನೀತಿಗಳನ್ನು ತಂದು ವೃತ್ತಿಪರರನ್ನು ದೀರ್ಘಕಾಲ ಉಳಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಚೀನಾದ ಅಟೊಮೊಬೈಲ್ ಕಂಪನಿಯೊಂದು ವಿಭಿನ್ನ ಹಾದಿ ಹಿಡಿದಿದೆ.

ಚೀನಾದ ಆಟೋಮೊಬೈಲ್ ಟೆಕ್ ಕಂಪನಿಯೊಂದು ತಮ್ಮ ದೀರ್ಘಕಾಲೀನ ಉದ್ಯೋಗಿಗಳಿಗೆ 1.5 ಕೋಟಿ ರೂ. ಮೌಲ್ಯದ ಪ್ರೀಮಿಯಂ ಫ್ಲ್ಯಾಟ್ಗಳನ್ನು ಉಡುಗೊರೆಯಾಗಿ ನೀಡುತ್ತಿರುವುದು ಹಲವರ ಹುಬ್ಬೇರಿಸಿದೆ. ಕೌಶಲ್ಯಭರಿತ ಪ್ರತಿಭೆಗಳನ್ನು ಉಳಿಸಿಕೊಳ್ಳಲು ಮತ್ತು ವೃತ್ತಿನಿಷ್ಠೆಗೆ ಬೆಂಬಲಿಸಲು ಕಂಪನಿ ಈ ಉಡುಗೊರೆಗಳನ್ನು ನೀಡುತ್ತಿದೆ.

ಝೆಜಿಯಾಂಗ್ ಗುವೊಶೆಂಗ್ ಅಟೊಮೊಟಿವ್ ಟೆಕ್ನಾಲಜಿ ಎನ್ನುವ ಕಂಪನಿ ತನ್ನ ನಂಬಿಕಸ್ತ ಉದ್ಯೋಗಿಗಳಿಗೆ ದೀರ್ಘಕಾಲೀನ ವೃತ್ತಿನಿಷ್ಠೆಗೆ ವಸತಿ ನಿವಾಸಗಳನ್ನು ಬಹುಮಾನವಾಗಿ ನೀಡುತ್ತಿದೆ. ಮೂರು ವರ್ಷಗಳ ಅವಧಿಗೆ ದೀರ್ಘಕಾಲ ಕೆಲಸ ಮಾಡಿದ ಉದ್ಯೋಗಿಗಳಿಗೆ 18 ವಸತಿ ಫ್ಲ್ಯಾಟ್ಗಳನ್ನು ನೀಡುವುದಾಗಿ ಚೀನಾದ ಈ ಅಟೊಮೊಬೈಲ್ ಕಂಪನಿ ಘೋಷಿಸಿದೆ. ಈ ಪ್ರತಿಯೊಂದು ಮನೆಯೂ ರೂ 1.3 ಕೋಟಿಯಿಂದ ರೂ 1.5 ಕೋಟಿ ನಡುವೆ ಇರಲಿದೆ. ಚೀನಾದ ಉತ್ಪಾದನಾ ಕ್ಷೇತ್ರದಲ್ಲಿ ನೀಡಲಾದ ಬಹಳ ಅಮೋಘ ಉದ್ಯೋಗಿ ಲಾಭ ಇದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಝೆಜಿಯಾಂಗ್ ಗುವೊಶೆಂಗ್ ಅಟೊಮೊಟಿವ್ ಟೆಕ್ನಾಲಜಿ ಸಣ್ಣ ಕಂಪನಿಯೇನಲ್ಲ. ಕಂಪನಿಯಲ್ಲಿ 450 ಮಂದಿ ಕೆಲಸ ಮಾಡುತ್ತಾರೆ. 2024ರಲ್ಲಿ ಕಂಪನಿಯ ಮೌಲ್ಯ 70 ದಶಲಕ್ಷ ಡಾಲರ್ ತಲುಪಲಿದೆ. ಅದರ ಗಾತ್ರದ ಹೊರತಾಗಿಯೂ ಕೌಶಲ್ಯಭರಿತ ತಂತ್ರಜ್ಞರು ಮತ್ತು ವ್ಯವಸ್ಥಾಪಕ ಸಿಬ್ಬಂದಿಯನ್ನು ಉಳಿಸಿಕೊಳ್ಳುವಲ್ಲಿ ಕಂಪನಿ ವಿಫಲವಾಗುತ್ತಿದೆ. ಚೀನಾದ ಔದ್ಯಮಿಕ ಕ್ಷೇತ್ರದಲ್ಲಿ ಇದೊಂದು ದೊಡ್ಡ ಸಮಸ್ಯೆಯಾಗಿ ಬೆಳೆದಿದೆ.

ಝೆಜಿಯಾಂಗ್ ಗುವೊಶೆಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಅನೇಕರು ವಲಸಿಗರಾಗಿದ್ದು, ಕಂಪನಿಯ ಸಮೀಪ ವಸತಿ ಸೌಲಭ್ಯ ಹೊಂದಿಲ್ಲ. ಕಂಪನಿಯ ಪ್ರಧಾನ ವ್ಯವಸ್ಥಾಪಕ ವಾಂಗ್ ಜಿಯಾಯುವಾನ್ ಪ್ರಕಾರ, “ಕೆಲಸಕ್ಕಾಗಿ ಉದ್ಯೋಗಿಗಳು ಮತ್ತೊಂದು ಪ್ರಾಂತ್ಯದಿಂದ ಇಲ್ಲಿಗೆ ಬರಬೇಕಾಗಿ ಬರುತ್ತಿದೆ. ಕಂಪನಿ ಇರುವೆಡೆ ಬಾಡಿಗೆ ಮನೆ ಪಡೆಯುವುದು ಬಹಳ ದುಬಾರಿ. ಮತ್ತೊಂದೆಡೆ ಆಸ್ತಿ ಖರೀದಿಸುವುದು ಕೈಗೆಟುಕದ ವಿಷಯವಾಗಿದೆ. ಉದ್ಯೋಗಿಗಳ ಈ ಸಮಸ್ಯೆಯನ್ನು ನಿಭಾಯಿಸಲು ಫ್ಲ್ಯಾಟ್ ಹಂಚಿಕೆ ಯೋಜನೆಯನ್ನು ಆರಂಭಿಸಲಾಗಿದೆ. ಈ ವರ್ಷ ನಾವು ಐದು ಫ್ಲ್ಯಾಟ್ ವಿತರಿಸಿದ್ದೇವೆ. ಮುಂದಿನ ವರ್ಷ ಎಂಟು ಹೆಚ್ಚು ಫ್ಲ್ಯಾಟ್ಗಳನ್ನು ವಿತರಿಸಲಿದ್ದೇವೆ. ಮೂರು ವರ್ಷಗಳಲ್ಲಿ 18 ಪ್ಲ್ಯಾಟ್ ವಿತರಿಸುವ ಯೋಜನೆಯಿದೆ. ನಮ್ಮ ಮೂಲ ವ್ಯವಸ್ಥಾಪನಾ ತಂಡವನ್ನು ಉಳಿಸಿಕೊಳ್ಳುವುದು ಮತ್ತು ಅತ್ಯುತ್ತಮ ಪ್ರತಿಭೆಗಳನ್ನು ಆಕರ್ಷಿಸುವುದು ನಮ್ಮ ಉದ್ದೇಶವಾಗಿದೆ”

ಫ್ಲ್ಯಾಟ್ಗಳನ್ನು ಕಂಪನಿಯ ಕೈಗಾರಿಕಾ ನೆಲೆ ಇರುವ ಐದು ಕಿಮೀ ದೂರದಲ್ಲಿ ಒದಗಿಸಲಾಗಿದೆ. ಹೀಗಾಗಿ ವೃತ್ತಿಪರ ಉದ್ದೇಶಕ್ಕೆ ಹೆಚ್ಚು ದೂರ ಪ್ರಯಾಣಿಸುವ ಅಗತ್ಯ ಉದ್ಯೋಗಿಗಳಿಗೆ ಬಾರದಂತೆ ಖಚಿತಪಡಿಸಲಾಗಿದೆ. ಪ್ರತಿ ಮನೆ 100ರಿಂದ 159 ಚದರ ಮೀಟರ್ಗಳಷ್ಟಿದ್ದು, 1,076ರಿಂದ 1,615 ಚದರ ಅಡಿಗಳಷ್ಟಿದೆ. ಈ ಗಾತ್ರದ ಮನೆಗಳನ್ನು ಆ ಪ್ರದೇಶದಲ್ಲಿ ಪ್ರೀಮಿಯಂ ಮನೆಗಳೆಂದು ವ್ಯಾಖ್ಯಾನಿಸಲಾಗಿದೆ. ಇವುಗಳ ಮರುಮಾರಾಟ ಬೆಲೆಯು ಚದರ ಮೀಟರ್ಗೆ 7,000ದಿಂದ 8,500 ಯುವಾನ್ಗಳಷ್ಟಿವೆ.

ಝೆಜಿಯಾಂಗ್ ಗುವೊಶೆಂಗ್ನಲ್ಲಿ ವೃತ್ತಿನಿರತರಾಗಿರುವ ವಿವಾಹಿತ ದಂಪತಿಯೊಬ್ಬರಿಗೆ 144 ಚದರ ಮೀಟರ್ನ ಅಪಾರ್ಟ್ಮೆಂಟ್ ನೀಡಿರುವುದು ಅಪರೂಪದ ಉದಾಹರಣೆಯಾಗಿದೆ. ಕಂಪನಿಗೆ ಕೌಟುಂಬಿಕವಾದ ಕೊಡುಗೆಯನ್ನು ಗುರುತಿಸಿ ಈ ಕೊಡುಗೆ ನೀಡಲಾಗಿದೆ. ಯೋಜನೆಯಡಿ ಆರಂಭದಲ್ಲಿ ಉದ್ಯೋಗಿಗಳು ವಸತಿ ಒಪ್ಪಂದಕ್ಕೆ ಸಹಿ ಹಾಕುತ್ತಾರೆ. ನಂತರ ಕಂಪನಿ ಅಗತ್ಯ ನವೀಕರಣಗಳನ್ನು ಮಾಡಿದ ನಂತರ ನಿವಾಸವನ್ನು ಪ್ರವೇಶಿಸುತ್ತಾರೆ. ಮಾಲೀಕತ್ವವನ್ನು ತಕ್ಷಣವೇ ಹಸ್ತಾಂತರಿಸಲಾಗುವುದಿಲ್ಲ. ಫ್ಲ್ಯಾಟ್ ಸ್ವೀಕರಿಸಿದ ಬಳಿಕ ಉದ್ಯೋಗಿಗಳು ಐದು ವರ್ಷಗಳ ಕಾಲ ಕಂಪನಿಯಲ್ಲಿ ಸೇವೆ ಸಲ್ಲಿಸಿದರೆ ಅಧಿಕೃತವಾಗಿ ನಿವಾಸ ಅವರ ಹೆಸರಿಗೆ ವರ್ಗಾವಣೆಗೊಳ್ಳುತ್ತದೆ. ಅವರು ನವೀಕರಣದ ವೆಚ್ಚವನ್ನು ಮಾತ್ರ ಮರುಪಾವತಿಸಬೇಕಾಗುತ್ತದೆ. ಆಸ್ತಿಯ ಮಾರುಕಟ್ಟೆ ಮೌಲ್ಯವನ್ನು ಪಾವತಿಸುವ ಅಗತ್ಯವಿರುವುದಿಲ್ಲ.

ಕಂಪನಿ ಈಗಾಗಲೇ 18 ಫ್ಲ್ಯಾಟ್ಗಳನ್ನು ಖರೀದಿಸಿದ್ದು, ಉದ್ಯೋಗಿಗಳ ನಡುವೆ ಅವುಗಳನ್ನು ವಿತರಿಸಲು ಯೋಜಿಸಿದೆ. ಕಂಪನಿಯಲ್ಲಿ ಆರಂಭಿಕ ಹಂತದಲ್ಲಿ ಆಗಮಿಸಿ ಮ್ಯಾನೇಜ್ಮೆಂಟ್ ಸ್ಥಾನಗಳಿಗೆ ಏರಿದ ಐದು ಮಂದಿಗೆ ಈ ಕೊಡುಗೆ ನೀಡಲಾಗಿದೆ. ಕಂಪನಿಯ ಏಳಿಗೆಯಲ್ಲಿ ದೀರ್ಘಕಾಲದವರೆಗೆ ಅವರ ಪಾತ್ರವನ್ನು ಪ್ರೋತ್ಸಾಹಿಸಲು ಈ ಬಹುಮಾನ ನೀಡಲಾಗಿದೆ.

ಹಾಗೆಂದು ಎಲ್ಲಾ ಉದ್ಯೋಗಿಗಳಿಗೂ ಫ್ಲ್ಯಾಟ್ ಪಡೆಯುವ ಅವಕಾವಿಲ್ಲ. ಉನ್ನತ ತಾಂತ್ರಿಕ ಅನುಭವ ಮತ್ತು ಪರಿಣತಿ ಅಗತ್ಯವಿರುವ ಉದ್ಯೋಗಗಳಿಗೆ ಮಾತ್ರ ಫ್ಲ್ಯಾಟ್ ವಿತರಿಸುವ ಉದ್ದೇಶವಿದೆ.

ಕೃಪೆ: indiatoday.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News