ಪ್ರವಾದಿ ನಿಂದನೆ: ಇಬ್ಬರು ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಿದ ದಿಲ್ಲಿ ಪೊಲೀಸರು
ಹೊಸದಿಲ್ಲಿ: ಇಸ್ಲಾಂ ಹಾಗೂ ಪ್ರವಾದಿ ಮುಹಮ್ಮದ್ ರ ಕುರಿತು ಇಬ್ಬರು ಬಿಜೆಪಿ ನಾಯಕರು ರಾಷ್ಟ್ರೀಯ ದೂರದರ್ಶನ ಹಾಗೂ ಟ್ವಿಟರ್ ನಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಎರಡು ವಾರಗಳ ನಂತರ ದ್ವೇಷಪೂರಿತ ಭಾಷಣ, ಗುಂಪುಗಳಿಗೆ ಪ್ರಚೋದನೆ ಹಾಗೂ ಸಮಾಜದ ಶಾಂತಿ ಮತ್ತು ಸಾಮರಸ್ಯವನ್ನು ಕದಡುವ ಸನ್ನಿವೇಶಗಳನ್ನು ಸೃಷ್ಟಿಸಿದ್ದಕ್ಕಾಗಿ ಪೊಲೀಸರು ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇಬ್ಬರು ಬಿಜೆಪಿ ವಕ್ತಾರರು, ಸಂಸದ ಅಸದುದ್ದೀನ್ ಉವೈಸಿ, ಪತ್ರಕರ್ತರು, ಸಾಮಾಜಿಕ ಮಾಧ್ಯಮ ಬಳಕೆದಾರರು ಹಾಗೂ ಧಾರ್ಮಿಕ ಸಂಘಟನೆಗಳ ಸದಸ್ಯರನ್ನು ಹೆಸರಿಸಿ ಎರಡು ಎಫ್ಐಆರ್ ಗಳನ್ನು ದಾಖಲಿಸಲಾಗಿದೆ.
ನೂಪುರ್ ಶರ್ಮಾ ಹಾಗೂ ಪಕ್ಷದ ದಿಲ್ಲಿ ಮಾಧ್ಯಮ ವಿಭಾಗದ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರ ಆಕ್ಷೇಪಾರ್ಹ ಮತ್ತು ಕೋಮುವಾದಿ ಹೇಳಿಕೆಗೆ 16ಕ್ಕೂ ಹೆಚ್ಚು ದೇಶಗಳಿಂದ ಭಾರೀ ಖಂಡನೆ ವ್ಯಕ್ತವಾದ ಬಳಿಕ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸದುದ್ದೀನ್ ಉವೈಸಿ ಹಾಗೂ ಹರಿದ್ವಾರ ದ್ವೇಷ ಭಾಷಣ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ನರಸಿಂಹಾನಂದ ಅವರನ್ನು ದಿಲ್ಲಿ ಪೊಲೀಸರು ಎಫ್ ಐಆರ್ ನಲ್ಲಿ ಹೆಸರಿಸಿದ್ದಾರೆ.
ಸ್ಪೆಷಲ್ ಸೆಲ್ ನ ಇಂಟೆಲಿಜೆನ್ಸ್ ಫ್ಯೂಷನ್ ಹಾಗೂ ಸ್ಟ್ರಾಟೆಜಿಕ್ ಆಪರೇಷನ್ (ಐಎಫ್ಎಸ್ಒ) ಘಟಕ ದಾಖಲಿಸಿದ ಪೊಲೀಸ್ ಪ್ರಕರಣ ಅಥವಾ ಎಫ್ಐಆರ್ ನಲ್ಲಿ ಹೆಸರಿಸಲಾದವರಲ್ಲಿ ದಿಲ್ಲಿ ಬಿಜೆಪಿಯ ಮಾಧ್ಯಮ ಘಟಕದ ಉಚ್ಛಾಟಿತ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್, ಪೀಸ್ ಪಾರ್ಟಿಯ ಮುಖ್ಯ ವಕ್ತಾರ ಶಾದಾಬ್ ಚೌಹಾಣ್, ಪತ್ರಕರ್ತೆ ಸಬಾ ನಖ್ವಿ, ಹಿಂದೂ ಮಹಾಸಭಾದ ಪದಾಧಿಕಾರಿ ಪೂಜಾ ಶಕುನ್ ಪಾಂಡೆ, ರಾಜಸ್ಥಾನದ ಮೌಲಾನಾ ಮುಫ್ತಿ ನದೀಮ್, ಅಬ್ದುರ್ ರೆಹಮಾನ್, ಅನಿಲ್ ಕುಮಾರ್ ಮೀನಾ ಹಾಗೂ ಗುಲ್ಜಾರ್ ಅನ್ಸಾರಿ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.