ಕಾಲ್ನಡಿಗೆಯ ಹಜ್ ಯಾತ್ರಿಕ ಶಿಹಾಬ್ ಚೊಟ್ಟೂರ್‌ಗೆ ತಲಪಾಡಿಯಲ್ಲಿ ಸ್ವಾಗತ

Update: 2022-08-03 03:22 GMT

ಮಂಗಳೂರು : ಮಲಪ್ಪುರಂನಿಂದ ಪವಿತ್ರ ಹಜ್ ಯಾತ್ರೆಗೆ ಕಾಲ್ನಡಿಗೆಯಲ್ಲಿ ಹೊರಟಿರುವ ಶಿಹಾಬ್ ಚೊಟ್ಟೂರು ಗುರುವಾರ ಸಂಜೆ 5.30ಕ್ಕೆ ತಲಪಾಡಿ ಗಡಿ ಮೂಲಕ ದ.ಕ.ಜಿಲ್ಲೆಗೆ ಪ್ರವೇಶಿಸಿದ್ದು, ನೂರಾರು ಮಂದಿ ಭವ್ಯ ಸ್ವಾಗತ ನೀಡಿದರು.

ಸುಮಾರು 8600ಕ್ಕೂ ಅಧಿಕ ಕಿ.ಮೀ. ದೂರದಲ್ಲಿರುವ ಪವಿತ್ರ ಮಕ್ಕಾವನ್ನು 9 ತಿಂಗಳ ಅವಧಿಯ ಕಾಲ್ನಡಿಗೆಯಲ್ಲೇ ಕ್ರಮಿಸುವ ಸಂಕಲ್ಪ ಮಾಡಿರುವ ಶಿಹಾಬ್ ತಲಪಾಡಿ ಪ್ರವೇಶಿಸುತ್ತಲೇ ನೂರಾರು ಮಂದಿ ಬರಮಾಡಿಕೊಂಡರು. 

ಗುರುವಾರ ಮಧ್ಯಾಹ್ನ ಕೇರಳದ ಹೊಸಂಗಡಿಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡ ಶಿಹಾಬ್ ಕೆಲವು ಹೊತ್ತು ವಿಶ್ರಾಂತಿ ಪಡೆದು ಬಳಿಕ ಯಾತ್ರೆ ಮುಂದುವರಿಸಿದರು. ಕೋಟೆಕಾರ್ ಸಮೀಪದ ಬೀರಿಯ ಮಸೀದಿಯಲ್ಲಿ ಮಗ್ರಿಬ್ ನಮಾಝ್ ನಿರ್ವಹಿಸಿದ ಶಿಹಾಬ್ ಅವರಿಗೆ ಸಾರ್ವಜನಿಕರು ಶುಭಕೋರಿದರು.

ಈ ಸಂದರ್ಭದಲ್ಲಿ ಭಾರೀ ಜನಜಂಗುಳಿ, ನೂಕು ನುಗ್ಗಲು ಉಂಟಾಗಿ ಶಿಹಾಬ್ ಅವರಿಗೆ ಸಾವಧಾನವಾಗಿ ನಡೆಯುವುದೇ ಕಷ್ಟವಾಯಿತು. ತಲಪಾಡಿಯಿಂದ ಬೀರಿವರೆಗೂ ಅವರನ್ನು ಸುತ್ತುವರೆದು ಹಿಂಬಾಲಿಸಿಕೊಂಡು ಬಂದ ಜನರ ಅತ್ಯುತ್ಸಾಹ ನೂಕಾಟ, ತಳ್ಳಾಟಕ್ಕೂ ಕಾರಣವಾಯಿತು.

ನಗರದ ಪಂಪ್‌ವೆಲ್‌ನ ತಖ್ವಾ ಮಸ್ಜಿದ್‌ನಲ್ಲಿ ರಾತ್ರಿ ತಂಗಿದ್ದಾರೆ.

ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್, ರಾಜ್ಯ ಹಜ್ ಕಮಿಟಿಯ ಮಾಜಿ ಸದಸ್ಯ ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಮತ್ತಿತರರು ಶಿಹಾಬ್ ಅವರನ್ನು ಗಡಿಪ್ರದೇಶದಲ್ಲಿ ಬರ ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News