ಪಠ್ಯದೊಳಗೆ ‘ತಿರುಚುವಿಕೆ’: ಇದೀಗ ಸ್ಮಾರ್ತ ಬ್ರಾಹ್ಮಣರ ಸರದಿ

Update: 2022-06-10 03:48 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಪಠ್ಯ ಪುಸ್ತಕಗಳ ಪರಿಷ್ಕರಣೆಯ ಹೆಸರಿನಲ್ಲಿ ನಡೆದ ‘ತಿರುಚುವಿಕೆ’ಗೆ ಸಂಬಂಧಿಸಿ ರಾಜ್ಯ ಸರಕಾರ ಸ್ಪಷ್ಟೀಕರಣ ನೀಡಿದ ಬಳಿಕವೂ ವಿವಾದ ಮುಗಿದಿಲ್ಲ. ಬದಲಿಗೆ ಪರಿಷ್ಕರಣೆಯ ಇನ್ನಷ್ಟು ಇನ್ನಷ್ಟು ಹುಳುಕುಗಳು ಹೊರ ಬರುತ್ತಿವೆ. ಈವರೆಗೆ ಪ್ರಗತಿಪರ ಮತ್ತುವೈಚಾರಿಕ ಚಿಂತನೆಗಳನ್ನಷ್ಟೇ ರೋಹಿತ್ ಚಕ್ರತೀರ್ಥ ತಿರುಚಿದ್ದಾನೆ ಎಂದು ನಂಬಲಾಗಿತ್ತು. ಪಠ್ಯ ಪುಸ್ತಕದಲ್ಲಿ ರೋಹಿತ್ ಚಕ್ರತೀರ್ಥ ಸಮಿತಿ ‘ಬ್ರಾಹ್ಮಣರ ದೃಷ್ಟಿಕೋನಗಳನ್ನು’ ತುರುಕಿಸುವ ಪ್ರಯತ್ನ ಮಾಡಿದೆೆ ಎಂದು ಹಲವರು ಆರೋಪಿಸಿದ್ದರು. ಆದರೆ ಈಗ ನೋಡಿದರೆ, ರೋಹಿತ್ ಚಕ್ರತೀರ್ಥ ಈ ತಿರುಚುವಿಕೆಯ ವಿಷಯದಲ್ಲೂ ಎಲ್ಲ ಬ್ರಾಹ್ಮಣರನ್ನು ಪ್ರತಿನಿಧಿಸದೇ ನಿರ್ದಿಷ್ಟ ‘ಮಾಧ್ವ ಬ್ರಾಹ್ಮಣರನ್ನು’ ಪ್ರತಿನಿಧಿಸಿದ್ದಾನೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿವೆ. ಲಿಂಗಾಯತರು, ಬಿಲ್ಲವರು ಸೇರಿದಂತೆ ನಾಡಿನ ವಿವಿಧ ಜಾತಿ, ಸಮುದಾಯಗಳು ಪಠ್ಯ ಪುಸ್ತಕ ಪರಿಷ್ಕರಣೆಯ ಬಗ್ಗೆ ಆಕ್ಷೇಪಣೆ ಎತ್ತಿದ ಬೆನ್ನಿಗೇ ಈಗ ಶಂಕರಾಚಾರ್ಯರ ಅನುಯಾಯಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಪಠ್ಯದಲ್ಲಿ ಶಂಕರಾಚಾರ್ಯರನ್ನು ಪರಿಚಯಿಸುವ ನೆಪದಲ್ಲೇ, ಅವರ ತತ್ವವನ್ನು ಕಲಬೆರಕೆ, ಬೆರಕೆ, ಒಪ್ಪತಕ್ಕದ್ದಲ್ಲದ ಮಿಶ್ರಣ ಎಂಬಿತ್ಯಾದಿಯಾಗಿ ವ್ಯಂಗ್ಯವಾಡಿದ್ದಾನೆ ಎಂದು ಸ್ಮಾರ್ತ ಬ್ರಾಹ್ಮಣರು ಆರೋಪಿಸುತ್ತಿದ್ದಾರೆ. ಒಂದನ್ನು ಗಮನಿಸಬೇಕು. ಪಠ್ಯ ಪುಸ್ತಕ ಪರಿಷ್ಕರಣೆಗೆ ಮೂಲ ಕಾರಣ ‘ಬೌದ್ಧ ಧರ್ಮದ ಉದಯಕ್ಕೆ ಕಾರಣಗಳೇನು?’ ಎನ್ನುವ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ‘ವೈದಿಕ ಆಚರಣೆಗಳಲ್ಲಿರುವ ನ್ಯೂನತೆಗಳು’ ಎನ್ನುವುದನ್ನು ಹಲವು ದಶಕಗಳಿಂದ ಪಠ್ಯ ಪುಸ್ತಕಗಳು ಕಲಿಸುತ್ತಾ ಬಂದಿವೆೆ.

ಯಜ್ಞ ಯಾಗಾದಿಗಳ ಹೆಸರಲ್ಲಿ ನಡೆಯುತ್ತಿದ್ದ ದುಬಾರಿ ಆಚರಣೆಗಳು, ಅಸ್ಪಶ್ಯತೆ , ಮೇಲು ಕೀಳು ಮೊದಲಾದ ವೈದಿಕ ಆಚರಣೆಗಳೇ ಹೊಸ ಧರ್ಮ ಉದಯಕ್ಕೆ ಕಾರಣ ಎನ್ನುವುದನ್ನು ನಾವೆಲ್ಲರೂ ಕಲಿತಿದ್ದೇವೆ. ನಮ್ಮ ಇತಿಹಾಸ ಪುಸ್ತಕಗಳು ಇದನ್ನೇ ಪ್ರತಿಪಾದಿಸುತ್ತವೆ. ಅಷ್ಟೇ ಅಲ್ಲ, ಆ ವೈದಿಕ ನ್ಯೂನತೆಗಳು ಇಂದಿಗೂ ಸಮಾಜವನ್ನು ಜಾತಿಯ ಹೆಸರಲ್ಲಿ ವಿಂಗಡಿಸಿ ಜನರನ್ನು ಶೋಷಣೆಗೀಡು ಮಾಡುತ್ತಿವೆ ಮತ್ತು ಈ ಶೋಷಣೆಯನ್ನು ವಿರೋಧಿಸಿ ಈಗಲೂ ತುಳಿತಕ್ಕೊಳಪಟ್ಟ ಸಮುದಾಯಗಳು ಮತಾಂತರವಾಗುತ್ತಿವೆ. ದಲಿತರು ಈ ಕಾಲಘಟ್ಟದಲ್ಲೂ ಬೌದ್ಧ ಮತವನ್ನು ಅವಲಂಬಿಸುವುದಕ್ಕೆ ವೈದಿಕ ಆಚರಣೆಗಳಲ್ಲಿರುವ ನ್ಯೂನತೆಗಳೇ ಕಾರಣ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಈ ಸತ್ಯವನ್ನು ಮುಚ್ಚಿ ಹಾಕುವ ಒಂದೇ ಕಾರಣಕ್ಕಾಗಿ ‘ಪಠ್ಯ ಪುಸ್ತಕ ಪರಿಷ್ಕರಣೆ’ ಎನ್ನುವ ಪ್ರಹಸನಕ್ಕೆ ವೈದಿಕ ಪ್ರಣೀತರಾಗಿರುವ ಮಾಜಿ ಸಚಿವ ಸುರೇಶ್ ಕುಮಾರ್ ನಾಂದಿ ಹಾಡಿದರು. ಅದಕ್ಕಾಗಿಯೇ ಒಬ್ಬ ವೈದಿಕ ಸಮುದಾಯದ ಅಭ್ಯರ್ಥಿಯನ್ನು ಸೂಚಿಸಿದ ಹೆಗ್ಗಳಿಕೆಯೂ ಅವರಿಗೇ ಸಲ್ಲಬೇಕು. ಈ ವೈದಿಕ ‘ಪು’ರೋಹಿತನೋ, ಏನನ್ನು ಮಾಡಲು ಆದೇಶ ನೀಡಲಾಗಿತ್ತೋ ಅವುಗಳ ಜೊತೆಗೆ ‘ಅದರ ಅಪ್ಪನನ್ನು’ ಕೂಡ ಮಾಡಿ ಸರಕಾರವನ್ನು ನಗೆಪಾಟಲಿಗೀಡು ಮಾಡಿದ್ದಾನೆ. ಪಠ್ಯ ಪುಸ್ತಕದಲ್ಲಿ ವೈದಿಕರ ನ್ಯೂನ್ಯತೆಗಳನ್ನು ಮುಚ್ಚಿ ಹಾಕುವುದರ ಜೊತೆಗೆ ಈತ ಉಳಿದ ಸಮುದಾಯಗಳನ್ನು ವ್ಯಂಗ್ಯ ಮಾಡುವುದಕ್ಕೂ ಪರಿಷ್ಕರಣೆಯನ್ನು ಬಳಸಿಕೊಂಡಿರುವುದು ಇದೀಗ ಬೆಳಕಿಗೆ ಬಂದಿದೆ. ಬೇಡರ ಸಮುದಾಯವನ್ನು ‘ದಾರಿಗಳ್ಳರು’ ಎಂದು ನಿಂದಿಸಿರುವ ಬಗ್ಗೆ ವಾಲ್ಮೀಕಿ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ‘ವಾಲ್ಮೀಕಿಯು ಬೇಡರ ಸಂಗಡ ಸೇರಿ ದಾರಿಗಳ್ಳನಾಗಿದ್ದ’ ಎಂಬ ಸಾಲನ್ನು ಪಠ್ಯಪುಸ್ತಕದಲ್ಲಿ ತುರುಕಿಸಿದ್ದಾನೆ. ಅಷ್ಟೇ ಅಲ್ಲ, ಆತ ಬ್ರಾಹ್ಮಣರೊಳಗೂ ಸೀಮಿತ ಸಮುದಾಯವೊಂದನ್ನು ಮಾತ್ರ ಪ್ರತಿನಿಧಿಸಿದ್ದಾನೆ. ಶಂಕರಾಚಾರ್ಯರ ಬಗ್ಗೆ ಬರೆಯುತ್ತಾ, ಶಂಕರ ಎನ್ನುವ ಪದವನ್ನು ಸಂಕರ ಎನ್ನುವ ಪದಕ್ಕೆ ಕುಗ್ಗಿಸಿ, ಆ ಪದಕ್ಕೆ, ‘ಕಲಬೆರಕೆ, ಒಪ್ಪತಕ್ಕದ್ದಲ್ಲದ ಮಿಶ್ರಣ’ ಎಂದೆಲ್ಲ ಕರೆದು ಅದ್ವೈತ ತತ್ವವನ್ನು ವ್ಯಂಗ್ಯವಾಡಿದ್ದಾನೆ ಎಂದು ಸ್ಮಾರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆಕ್ರೋಶಕ್ಕೆ ಒಂದು ಸುದೀರ್ಘ ಹಿನ್ನೆಲೆಯೂ ಇದೆ ಎನ್ನುವುದನ್ನು ನಾವು ಗಮನಿಸಬೇಕು.

ದ್ವೈತ ಪಂಥೀಯರಾಗಿರುವ ಮಾಧ್ವರು, ಅದ್ವೈತ ಪಂಥೀಯರಾಗಿರುವ ಸ್ಮಾರ್ತರ ನಡುವೆ ಇರುವ ತಿಕ್ಕಾ ಟ ಇಂದು ನಿನ್ನೆಯದಲ್ಲ. ಮಾಧ್ವರನ್ನು ನಿಂದಿಸಿ ಸ್ಮಾರ್ತರು, ಸ್ಮಾರ್ತರನ್ನು ನಿಂದಿಸಿ ಮಾಧ್ವರು ಹಲವು ಕೃತಿಗಳನ್ನೇ ಬರೆದಿದ್ದಾರೆ. ತೀರಾ ಕೀಳಭಿರುಚಿಯ ಮಾತುಗಳಿಂದ ಪರಸ್ಪರರು ಕೆಸರೆರಚಿಕೊಂಡು ಬಂದಿದ್ದಾರೆ. ಇಷ್ಟಾದರೂ, ಶಂಕರಾಚಾರ್ಯರು, ರಾಮಾನುಜಾಚಾರ್ಯರ ತತ್ವ, ಸಿದ್ಧಾಂತಗಳ ಬಗ್ಗೆ ಹಲವು ವಿಚಾರವಾದಿ ಲೇಖಕರು ಗೌರವ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಕುವೆಂಪು ಅವರು ತಮ್ಮ ‘ಭಾರತ ಜನನಿಯ ತನುಜಾತೆ’ ಪದ್ಯ ಬರೆದಾಗ ಅದರಲ್ಲಿ ಶಂಕರಾಚಾರ್ಯರನ್ನು ಮತ್ತು ರಾಮಾನುಜಾಚಾರ್ಯರನ್ನು ಉಲ್ಲೇಖಿಸಿದ್ದರು. ಆದರೆ ಮಧ್ವಾಚಾರ್ಯರನ್ನು ಉಲ್ಲೇಖಿಸಿಲ್ಲ ಮಾತ್ರವಲ್ಲ, ತಮ್ಮ ಬದುಕಿನುದ್ದಕ್ಕೂ ಮಧ್ವಾಚಾರ್ಯರ ಚಿಂತನೆಯ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ, ಬರಹಗಳನ್ನು ಬರೆಯುತ್ತಾ ಬಂದವರು. ‘ಶೂದ್ರರು ನಿತ್ಯ ನರಕವಾಸಕ್ಕೆ ಅರ್ಹರು’ ಎನ್ನುವ ಮಾಧ್ವರ ಚಿಂತನೆ ಇದಕ್ಕೆ ಮುಖ್ಯ ಕಾರಣ. ಮಾಧ್ವ ಸಿದ್ಧಾಂತ ಅತ್ಯಂತ ಸಂಕುಚಿತ ಮತ್ತು ಜಾತೀಯವಾದಿ ಎಂದು ಕುವೆಂಪು ನಂಬಿದ್ದ ಕಾರಣ ತಮ್ಮ ಪದ್ಯದಲ್ಲಿ ಅವರಿಗೆ ಸ್ಥಾನವನ್ನು ನೀಡಿರಲಿಲ್ಲ. ಆದರೆ ಬಳಿಕ ಪೇಜಾವರ ಶ್ರೀಗಳು ತೀವ್ರ ಒತ್ತಡವನ್ನು ಹಾಕಿ, ಅಂದಿನ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಮೂಲಕ ನಾಡಗೀತೆಯಲ್ಲಿ ‘ಮಾಧ್ವ’ರ ಹೆಸರನ್ನು ಸೇರಿಸಲು ಯಶಸ್ವಿಯಾದರು. ಆದರೆ ಕುವೆಂಪು ನಿರಾಕರಿಸಿದ ಮಾಧ್ವರನ್ನು ಅವರದೇ ಪದ್ಯಕ್ಕೆ ಸೇರಿಸುವುದರ ವಿರುದ್ಧ ಕುವೆಂಪು ಪುತ್ರ ಪೂರ್ಣಚಂದ್ರ ತೇಜಸ್ವಿ ಸೇರಿದಂತೆ ನಾಡಿನ ಪ್ರಗತಿಪರರು ವಿರೋಧಿಸಿದ್ದರು. ರೋಹಿತ್‌ಚಕ್ರತೀರ್ಥ ಎಂಬಾತ ಕುವೆಂಪು ವಿರುದ್ಧ ದಾಳಿಗಳನ್ನು ಆರಂಭಿಸುವುದಕ್ಕೆ ಕುವೆಂಪು ಅವರು ಮಾಧ್ವರ ಕುರಿತಂತೆ ತಳೆದಿದ್ದ ಕಟು ಧೋರಣೆಯೂ ಒಂದು ಕಾರಣವಾಗಿತ್ತು. ನಾಡಗೀತೆಯನ್ನು ಅತ್ಯಂತ ಕೀಳು ಅಭಿರುಚಿಯ ಭಾಷೆಯಲ್ಲಿ ತಿರುಚಿರುವುದಕ್ಕೂ ಇದೇ ಕಾರಣ. ಪಠ್ಯ ಪುಸ್ತಕದ ಪರಿಷ್ಕರಣೆಯ ಹೆಸರಲ್ಲಿ ಕುವೆಂಪು ಅವರ ಪರಿಚಯವನ್ನು ಅತ್ಯಂತ ವ್ಯಂಗ್ಯವಾಗಿ ಮಾಡಿ ತನ್ನ ಸೇಡನ್ನು ತೀರಿಸಿಕೊಂಡದ್ದೂ ಇದೇ ದ್ವೇಷ ಕಾರಣಕ್ಕೆ. ಈತನ ದ್ವೇಷ ಕೇವಲ ಕುವೆಂಪು ಅವರಿಗಷ್ಟೇ ಸೀಮಿತವಾಗಿಲ್ಲ ಎನ್ನುವುದು ‘ಸ್ಮಾರ್ತ’ ಬ್ರಾಹ್ಮಣರು ವ್ಯಕ್ತಪಡಿಸುತ್ತಿರುವ ಆಕ್ರೋಶದಿಂದ ಗೊತ್ತಾಗುತ್ತದೆ. ಮಾಧ್ವ ಸಿದ್ಧಾಂತವನ್ನು ಒಪ್ಪದೇ ಇರುವ ಕಾರಣಕ್ಕಾಗಿ ಈತ ಶಂಕರಾಚಾರ್ಯರ ತತ್ವವನ್ನೇ ಪರೋಕ್ಷವಾಗಿ ಕಲಬೆರಕೆಯ ಸಿದ್ಧಾಂತ ಎಂದು ಪಠ್ಯದಲ್ಲಿ ವ್ಯಂಗ್ಯವಾಡುತ್ತಾನೆ.

ಪರಿಷ್ಕರಣೆಯ ಹೆಸರಿನಲ್ಲಿ ರೋಹಿತ್ ಚಕ್ರತೀರ್ಥ ಭಾವನೆಗಳ ಜೊತೆಗೆ ಆಟವಾಡಿದ್ದಾನೆ. ವೈದಿಕರ ಭಾವನೆಗಳಿಗೆ ನೋವಾಗುತ್ತದೆ ಎನ್ನುವ ಕಾರಣಕ್ಕಾಗಿ ಆರಂಭಗೊಂಡ ‘ಪರಿಷ್ಕರಣೆ’ ಇದೀಗ ಈ ದೇಶದ ವಿವಿಧ ಬಹುಸಂಖ್ಯಾತ ಜಾತಿ, ಸಮುದಾಯಗಳ ಭಾವನೆಗಳಿಗೆ ತೀವ್ರವಾದ ಘಾಸಿ ಮಾಡುವುದರೊಂದಿಗೆ ಮುಕ್ತಾಯಗೊಂಡಿದೆ. ಈ ಪಠ್ಯ ಪುಸ್ತಕವನ್ನು ಪರಿಷ್ಕೃತ ಪಠ್ಯ ಪುಸ್ತಕ ಎಂದು ಕರೆಯದೇ ‘ತಿರುಚಲ್ಪಟ್ಟ ಪಠ್ಯ ಪುಸ್ತಕ’ ಎಂದು ಕರೆಯುವುದೇ ಹೆಚ್ಚು ಸರಿ. ಈ ಕೆಂಡವನ್ನು ತನ್ನ ಸೆರಗಿನಲ್ಲಿ ಎಷ್ಟರವರೆಗೆ ಜೋಪಾನ ಮಾಡುತ್ತದೆಯೋ ಅಷ್ಟರಮಟ್ಟಿಗೆ ಸರಕಾರಕ್ಕೆ ಅಪಾಯವಿದೆ. ಜನರ ಭಾವನೆಗಳೊಂದಿಗೆ ಆಟವಾಡುವುದನ್ನು ನಿಲ್ಲಿಸಿ ತಕ್ಷಣ ಈ ಪರಿಷ್ಕೃತ ಪುಸ್ತಕವನ್ನು ಸರಕಾರ ಹಿಂದೆಗೆಯಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News