ಪ್ರತಿಭಟನೆಯಲ್ಲಿ ಕಲ್ಲು ತೂರಾಟ, ಕಾನೂನು ಕೈಗೆತ್ತಿಕೊಳ್ಳುವಂತಹ ಕೆಲಸ ಬೇಡ: ಶಾಫಿ ಸಅದಿ

Update: 2022-06-10 13:20 GMT
 ಶಾಫಿ ಸಅದಿ - ವಕ್ಫ್ ಬೋರ್ಡ್ ಅಧ್ಯಕ್ಷ

ಬೆಂಗಳೂರು: 'ಒಂದು ಧರ್ಮದ ದೇವ ದೇವತೆಗಳು, ಅದೇ ರೀತಿ ಮತ್ತೊಂದು ಧರ್ಮದ ಆರಾಧನ ಕ್ರಮಗಳನ್ನು ಟೀಕಿಸುವುದು, ಭಾವನಾತ್ಮಕ ವಿಚಾರಗಳನ್ನು ಕೆದಕಿ, ಕೋಮು ವಿಷಬೀಜ ಬಿತ್ತುವ ನೂಪುರ್ ಶರ್ಮ ಸೇರಿದಂತೆ ಯಾರೆ ಆದರೂ ಅಂತಹವರಿಗೆ ಗರಿಷ್ಠ ಪ್ರಮಾಣದ ಶಿಕ್ಷೆಯಾಗಲೇಬೇಕು. ಒಂದು ಕಡೆ ಶಿಕ್ಷೆಯಾದರೆ ಮತ್ತೆ ಇಂತಹ ವಾತಾವರಣ ನಿರ್ಮಾಣವಾಗುವುದಿಲ್ಲ' ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ಹೇಳಿದ್ದಾರೆ. 

ಈ ಸಂಬಂಧ 'ವಾರ್ತಾ ಭಾರತಿ'ಯೊಂದಿಗೆ ಮಾತನಾಡಿದ ಅವರು, ಪ್ರತಿಭಟನೆ ಮಾಡುವುದು ಸಂವಿಧಾನಾತ್ಮಕವಾಗಿ ನಮಗೆ ಸಿಕ್ಕಿರುವ ಸ್ವಾತಂತ್ರ್ಯ. ಆದರೆ, ಪ್ರತಿಭಟನೆಯಲ್ಲಿ ಕಲ್ಲು ತೂರಾಟ ಮಾಡುವುದು, ಕಾನೂನು ಕೈಗೆತ್ತಿಕೊಳ್ಳುವಂತಹ ಕೆಲಸವನ್ನು ಯಾರೂ ಒಪ್ಪುವುದಿಲ್ಲ. ಇಂತಹ ಕೆಲಸಗಳಿಂದ ನೂಪುರ್ ಶರ್ಮಾ ಅವರಂತಹವರಿಗೆ ಮತ್ತಷ್ಟು ಪ್ರಚೋದನೆ ನೀಡಿದಂತಾಗುತ್ತದೆ. ಪ್ರವಾದಿ ಯಾರ ಮೇಲೂ ಕಲ್ಲು ತೂರಾಟ ಮಾಡುವಂತೆ ಹೇಳಿಲ್ಲ. ನಾವು ಆ ಪೈಗಂಬರ್ ಹೆಸರಿನಲ್ಲಿ ಕಲ್ಲು ತೂರಾಟ ನಡೆಸುವುದು ದೊಡ್ಡ ತಪ್ಪಾಗುತ್ತದೆ ಎಂದು ತಿಳಿಸಿರು.

ಇಂತಹ ವಿಚಾರವನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳದೆ, ಕಾನೂನಾತ್ಮಕ ಮಾರ್ಗದಲ್ಲಿ ಹೋರಾಡೋಣ. ನೂಪುರ್ ಶರ್ಮಗೆ ಶಿಕ್ಷೆ ಆಗುವ ತನಕ ನಮ್ಮ ಪ್ರತಿಭಟನೆ ಮುಂದುವರಿಯಬೇಕು. ಆದರೆ, ಪ್ರತಿಭಟನೆ ಸಂದರ್ಭದಲ್ಲಿ ಮತ್ತೊಂದು ಧರ್ಮದ ಮಠ, ಮಂದಿರಗಳಿಗೆ, ಅಮಾಯಕರ ಆಸ್ತಿ ಪಾಸ್ತಿಗಳಿಗೆ ಹಾನಿಯಾಗುವಂತೆ ಮಾಡಬಾರದು. ಇಸ್ಲಾಮ್ ಹಿಂಸೆಗೆ ಅವಕಾಶ ನೀಡಲ್ಲ ಎಂಬುದನ್ನು ಮರೆಯಬಾರದು ಎಂದು ಶಾಫಿ ಸಅದಿ ತಿಳಿಸಿದರು.

ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ, ಹುಬ್ಬಳ್ಳಿಯಲ್ಲಿ ಆದ ಘಟನೆಗಳು ನಮ್ಮ ಮುಂದಿದೆ. ಮುಸ್ಲಿಮರು ಅತ್ಯಂತ ಗೌರವ ಕೊಡುವ ಜಗತ್ತಿನ ಸರ್ವಶ್ರೇಷ್ಠ ನಾಯಕ ಪ್ರವಾದಿ ಮುಹಮ್ಮದ್(ಸ). ಪೈಗಂಬರ್ ಅವರ ಬಗ್ಗೆ ಅನಗತ್ಯವಾಗಿ ಬರೆದರೆ ಅಥವಾ ಹೇಳಿಕೆ ಕೊಟ್ಟರೆ ಒಂದು ದೊಡ್ಡ ಜನ ಸಮುದಾಯ ಭಾವನಾತ್ಮಕವಾಗಿ ಘಾಸಿಗೊಳಗಾಗುತ್ತದೆ ಎಂಬ ವಿಚಾರಗೊತ್ತಿದ್ದರೂ ಈ ರೀತಿ ಮಾಡುವವರಿಗೆ ಗರಿಷ್ಠ ಪ್ರಮಾಣದ ಶಿಕ್ಷೆ ಆಗಲೇಬೇಕು ಎಂದು ಅವರು ಒತ್ತಾಯಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News