ಪ್ರವಾದಿ ನಿಂದನೆ: ಸಂಯಮವೇ ಉತ್ತರ

Update: 2022-06-11 04:36 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ತೀವ್ರ ಕುಂದು ತಂದ ‘ ಪ್ರವಾದಿ ನಿಂದನೆ’ ಪ್ರಕರಣ ದಿನೇ ದಿನೇ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಬಿಜೆಪಿ ವರಿಷ್ಠರಾದ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಅವರು ಪ್ರವಾದಿಯ ಕುರಿತಂತೆ ನೀಡಿದ ಹೇಳಿಕೆಯ ವಿರುದ್ಧ ಆರಂಭದಲ್ಲಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಾರೀ ಪ್ರತಿಭಟನೆ ನಡೆಯಿತು. ಆದರೆ ಆರೋಪಿಗಳನ್ನು ಬಂಧಿಸುವ ಬದಲು, ಪ್ರತಿಭಟನೆ ನಡೆಸಿದ 500ಕ್ಕೂ ಅಧಿಕ ಮಂದಿಯ ವಿರುದ್ಧ ಸರಕಾರ ಕ್ರಮ ತೆಗೆದುಕೊಂಡಿತು. ದೇಶಾದ್ಯಂತ ಇದರ ವಿರುದ್ಧ ಮುಸ್ಲಿಮ್ ಸಂಘಟನೆಗಳು ಶಾಂತಿಯುತ ಪ್ರತಿಭಟನೆ ನಡೆಸಿದವಾದರೂ, ಆ ಬಗ್ಗೆ ಬಿಜೆಪಿ ವರಿಷ್ಠರು ಸಣ್ಣದೊಂದು ವಿಷಾದವನ್ನೂ ವ್ಯಕ್ತಪಡಿಸಲಿಲ್ಲ. ಆದರೆ ನಿಧಾನಕ್ಕೆ ಈ ಪ್ರಕರಣ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗತೊಡಗಿತು. ಕೊಲ್ಲಿರಾಷ್ಟ್ರಗಳು ಸೇರಿದಂತೆ ಸುಮಾರು 17 ದೇಶಗಳು ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಖಂಡಿಸಿದವು. ಮಾತ್ರವಲ್ಲ, ಇವುಗಳನ್ನು ವಿರೋಧಿಸಿ ಭಾರತದ ಉತ್ಪನ್ನಗಳನ್ನು ಬಹಿಷ್ಕರಿಸತೊಡಗಿದವು. ಆ ತಕ್ಷಣವೇ ಎಚ್ಚೆತ್ತ ಭಾರತ ಸರಕಾರ, ‘ಪ್ರವಾದಿ ನಿಂದನೆ’ಯನ್ನು ಖಂಡಿಸಿತಲ್ಲದೆ, ಆರೋಪಿಗಳನ್ನು ಪಕ್ಷದಿಂದ ವಜಾ ಗೊಳಿಸಿತು. ಸಂಬಂಧ ಪಟ್ಟವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುವ ಭರವಸೆಯನ್ನೂ ನೀಡಿತು. ತಡವಾಗಿಯಾದರೂ ಸರಕಾರ ತೆಗೆದುಕೊಂಡ ಈ ನಿರ್ಧಾರ ಅಭಿನಂದನಾರ್ಹ.

ಪ್ರವಾದಿ ನಿಂದನೆಯ ಪ್ರಕರಣದಲ್ಲಿ, ಕೇಂದ್ರ ಸರಕಾರ ಭಾರೀ ಮುಜುಗರವನ್ನು ಅನುಭವಿಸಿದೆ. ಈಗಾಗಲೇ ಈ ಪ್ರಕರಣ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿರುವುದರಿಂದ, ಸರಕಾರ ಮುಂದಿನ ದಿನಗಳಲ್ಲಿ ತಮ್ಮ ಪಕ್ಷದೊಳಗಿರುವ ನಾಯಕರ ನಾಲಗೆಗಳಿಗೆ ಕಡಿವಾಣ ಹಾಕುವ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿದೆ. ಆದರೆ ಕೋಮು ವಿಭಜನೆಗಳ ಮೂಲಕವೇ ಅಸ್ತಿತ್ವದಲ್ಲಿರುವ ಸರಕಾರವೊಂದು, ಈ ನಿಲುವನ್ನು ಶಾಶ್ವತವಾಗಿ ಕಾಪಾಡಿಕೊಳ್ಳುತ್ತದೆ ಎಂದು ನಂಬುವಂತಿಲ್ಲ. ಆದರೆ ಅಂತರ್‌ರಾಷ್ಟ್ರೀಯ ಒತ್ತಡಕ್ಕೆ ತಲೆಬಾಗಿರುವ ಸರಕಾರ, ಇಂತಹ ದ್ವೇಷ ರಾಜಕೀಯಕ್ಕೆ ಭಾರತದೊಳಗಿನ ಜನಸಾಮಾನ್ಯರಷ್ಟೇ ಅಲ್ಲ, ಅಂತರ್‌ರಾಷ್ಟ್ರೀಯ ಮಟ್ಟದಲ್ಲೂ ಭಾರತೀಯರು ಬೆಲೆತೆರಬೇಕಾಗುತ್ತದೆ ಎನ್ನುವುದನ್ನು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು. ಇದೇ ಸಂದರ್ಭದಲ್ಲಿ, ‘ಪ್ರವಾದಿ ನಿಂದನೆ ಪ್ರಕರಣ’ವನ್ನು ಇನ್ನಷ್ಟು ಬೆಳೆಸುವುದಕ್ಕೆ ದೇಶದೊಳಗಿರುವ ಕೆಲವು ರಾಜಕೀಯ ನಾಯಕರು ಯತ್ನಿಸುತ್ತಿದ್ದಾರೆ. ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ದಿಲ್ಲಿಯಲ್ಲಿ ಭಾರೀ ಪ್ರಮಾಣದ ಧರಣಿಗಳು ನಡೆದಿವೆ. ದೇಶದ ಹಲವೆಡೆ ಈ ಪ್ರತಿಭಟನೆಯ ಕಾವು ವಿಸ್ತರಿಸಿದೆ. ಸಂತ್ರಸ್ತ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಅವರನ್ನು ಬೀದಿಗಿಳಿಸುವ ಪ್ರಯತ್ನವನ್ನು ಕೆಲವು ರಾಜಕಾರಣಿಗಳು ನಡೆಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇವನ್ನು ಬಳಸಿಕೊಂಡು ಮಾಧ್ಯಮಗಳು ‘ಸಂತ್ರಸ್ತರನ್ನೇ ಆರೋಪಿಗಳನ್ನಾಗಿಸಲು’ ಶತ ಪ್ರಯತ್ನ ಮಾಡುತ್ತಿವೆ. ಮಾಧ್ಯಮಗಳು ಮತ್ತು ರಾಜಕಾರಣಿಗಳು ತೋಡಿದ ಹೊಂಡಕ್ಕೆ ಸಂತ್ರಸ್ತರು ತಾವಾಗಿಯೇ ಧಾವಿಸಿ ಬೀಳುತ್ತಿದ್ದಾರೆ.

ಒಂದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ. ರಾಜಕಾರಣಿಗಳು ಇಂತಹ ದ್ವೇಷ ಭಾಷಣಗಳನ್ನು ಮಾಡುವುದೇ ಒಂದು ನಿರ್ದಿಷ್ಟ ಸಮುದಾಯವನ್ನು ಪ್ರಚೋದಿಸುವುದಕ್ಕಾಗಿ. ಉದ್ವಿಗ್ನ ಹೇಳಿಕೆಗಳು ಹೊರ ಬಿದ್ದ ಬೆನ್ನಿಗೇ ಸಂತ್ರಸ್ತ ಸಮುದಾಯ ಬೀದಿಗಿಳಿದು ಭಾವಾವೇಶವನ್ನು ಪ್ರದರ್ಶಿಸಿದರೆ ದ್ವೇಷ ಭಾಷಣಕಾರರ ಅರ್ಧ ಕೆಲಸ ಮುಗಿದಂತೆ. ಕಾನ್ಪುರ ಪ್ರತಿಭಟನೆಯ ಸಂದರ್ಭದಲ್ಲಿ ನೂರಾರು ಸಂತ್ರಸ್ತ ಪ್ರತಿಭಟನಾಕಾರರ ಮೇಲೆ ಪ್ರಕರಣಗಳನ್ನು ದಾಖಲಿಸುವ ಮೂಲಕ ಉತ್ತರ ಪ್ರದೇಶದ ಸರಕಾರ ತನ್ನ ‘ದುರುದ್ದೇಶ’ವನ್ನು ಸಾಧಿಸಿಕೊಂಡಿತು. ಅಂತರ್‌ರಾಷ್ಟ್ರೀಯ ಮಟ್ಟದ ಪ್ರತಿಕ್ರಿಯೆಗಳಿಂದ ಮುಜುಗರಕ್ಕೀಡಾಗಿರುವ ಸರಕಾರದ ಮಾನ ಕಾಪಾಡುವ ಭಾಗವಾಗಿ, ಇದೀಗ ಮತ್ತೆ ಪ್ರಕರಣವನ್ನು ಬೆಳೆಸುವುದಕ್ಕೆ ಕೆಲವು ರಾಜಕಾರಣಿಗಳು ಯತ್ನಿಸುತ್ತಿದ್ದಾರೆ. ಅದಕ್ಕಾಗಿ, ಅಮಾಯಕರನ್ನು ಪ್ರಚೋದಿಸಿ ಮತ್ತೆ ಬೀದಿಗಿಳಿಸುವ ಪ್ರಯತ್ನ ನಡೆಯುತ್ತಿದೆ. ಶುಕ್ರವಾರ ದಿಲ್ಲಿಯಲ್ಲಿ ಏಕಾಏಕಿ ಭುಗಿಲೆದ್ದ ಪ್ರತಿಭಟನೆಯೂ ಇದರ ಭಾಗವೇ ಆಗಿದೆ. ಈ ಪ್ರತಿಭಟನೆಯ ಲಾಭವನ್ನು ಗರಿಷ್ಠ ಮಟ್ಟದಲ್ಲಿ ತನ್ನದಾಗಿಸಿಕೊಳ್ಳಲು ಬಿಜೆಪಿ ಮತ್ತು ಬಿಜೆಪಿ ನೇತೃತ್ವದ ಸರಕಾರ ಪ್ರಯತ್ನಿಸುತ್ತಿದೆ. ಒಂದೆಡೆ ಪ್ರತಿಭಟನಾಕಾರರ ಮೇಲೆ ಮೊಕದ್ದಮೆಗಳನ್ನು ದಾಖಲಿಸಿ ಅವರನ್ನು ಜೈಲಿಗೆ ಸಾಗಿಸಿದರೆ, ಇನ್ನೊಂದೆಡೆ, ಪ್ರತಿಭಟನಾಕಾರರ ದಾಂಧಲೆಗಳ ಕಡೆಗೆ ಬೊಟ್ಟು ಮಾಡಿ ಇವರು ತಮ್ಮ ದ್ವೇಷ ಭಾಷಣಗಳನ್ನು ಸಮರ್ಥಿಸಿಕೊಳ್ಳತೊಡಗಿದ್ದಾರೆ.

ಬೆಳಗಾವಿಯಲ್ಲಿ ನೂಪುರ್ ಶರ್ಮಾ ಪ್ರತಿಕೃತಿಯನ್ನು ನೇಣಿಗೆ ಹಾಕಿದ ದೃಶ್ಯವೊಂದು ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆೆ. ಈ ಕೃತ್ಯವನ್ನು ಯಾರು ಎಸಗಿದ್ದಾರೆ? ಎನ್ನುವುದು ಇನ್ನೂ ಬೆಳಕಿಗೆ ಬಂದಿಲ್ಲ. ಆದರೂ ಮಾಧ್ಯಮಗಳು ಆ ಕೃತ್ಯವನ್ನು ಈಗಾಗಲೇ ಸಂತ್ರಸ್ತ ಸಮುದಾಯದ ತಲೆಗೆ ಕಟ್ಟುವಲ್ಲಿ ಯಶಸ್ವಿಯಾಗಿವೆ. ಈ ಕೃತ್ಯವನ್ನು ಯಾರೇ ಮಾಡಿರಲಿ ಅದು ಖಂಡನೀಯ. ಬೆಳಗಾವಿಯಲ್ಲಿ ಇಂತಹ ಪ್ರಕರಣಗಳು ಈ ಹಿಂದೆಯೂ ನಡೆದಿವೆ. ಸಿಂಧಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿ ಅದನ್ನು ಮುಸ್ಲಿಮರ ತಲೆಗೆ ಕಟ್ಟುವ ಪ್ರಯತ್ನ ನಡೆಯಿತು. ತನಿಖೆಯ ಕೊನೆಯಲ್ಲಿ ಆ ಕೃತ್ಯವನ್ನು ಎಸಗಿರುವುದು ಶ್ರೀರಾಮಸೇನೆಯ ಕಾರ್ಯಕರ್ತರು ಎನ್ನುವುದು ಬೆಳಕಿಗೆ ಬಂತು. ಸಂದರ್ಭದ ಲಾಭ ಪಡೆಯಲು, ಒಂದು ಸಮುದಾಯವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ನೂಪುರ್ ಶರ್ಮಾ ಪ್ರತಿಕೃತಿಯನ್ನು ಸಂಘಪರಿವಾರ ಸಂಘಟನೆಗಳೇ ನೇಣಿಗೇರಿಸಿದ್ದರೆ ಅಚ್ಚರಿಯೇನೂ ಇಲ್ಲ. ಅಥವಾ ಈ ಕೃತ್ಯವನ್ನು ಮುಸ್ಲಿಮ್ ಸಮುದಾಯಕ್ಕೆ ಸೇರಿದ ದುಷ್ಕರ್ಮಿಗಳು ಮಾಡಿದ್ದರೂ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹಾಗೆಯೇ ಅದರ ಜೊತೆ ಜೊತೆಗೇ, ಭಾರತವನ್ನು ಇಂತಹ ಸ್ಥಿತಿಗೆ ತಳ್ಳಿದ ನೂಪುರ್ ಶರ್ಮಾರಂತಹ ವಿಷ ಜಂತುಗಳ ಮೇಲೆಯೂ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿದೆ.

ಅತಿ ಹೆಚ್ಚು ಪ್ರವಾದಿ ನಿಂದನೆ ನಡೆದಿರುವುದು ಪ್ರವಾದಿಯ ಜೀವಿತಾವಧಿಯಲ್ಲಿ ಎನ್ನುವ ಅಂಶವನ್ನು ನಾವು ಗಮನಿಸಬೇಕು. ಈ ಸಂದರ್ಭದಲ್ಲಿ ಸ್ವತಃ ಪ್ರವಾದಿಯವರು ಮತ್ತು ಅವರ ಸಂಗಾತಿಗಳು ಅತಿ ಹೆಚ್ಚು ಸಹನೆಯನ್ನು ಪಾಲಿಸಿದ್ದರು. ಮತ್ತು ಈ ನಿಂದನೆಯ ಮೂಲಕ ಪ್ರವಾದಿಯ ಚಿಂತನೆಗಳನ್ನು ನಾಶ ಪಡಿಸುವುದಕ್ಕೆ ಅವರಿಗೆ ಸಾಧ್ಯವಾಗಲಿಲ್ಲ. ಇದೇ ಸಂದರ್ಭದಲ್ಲಿ ಪ್ರವಾದಿಯವರು ಪಾಲಿಸಿದ ಸಂಯಮ ಆ ಚಿಂತನೆಗಳಿಗೆ, ಸಂದೇಶಗಳಿಗೆ ಇನ್ನಷ್ಟು ಶಕ್ತಿಯನ್ನು ನೀಡಿತೇ ಹೊರತು, ಅವರನ್ನು ಹಿಂದಕ್ಕೆ ತಳ್ಳಲಿಲ್ಲ. ಯಾರೆಲ್ಲಾ ಪ್ರವಾದಿಯವರನ್ನು ನಿಂದಿಸಿದರೋ ಅವರು ಇತಿಹಾಸದ ಪುಟಗಳಿಂದ ಅತ್ಯಂತ ಹೀನಾಯವಾಗಿ ಅಳಿದು ಹೋದರು. ಇದು ಕೇವಲ ಮುಹಮ್ಮದ್ ಪೈಗಂಬರ್ ಅವರಿಗಷ್ಟೇ ಸೀಮಿತ ಮಾತಲ್ಲ, ವಿಶ್ವದಲ್ಲಿ ಆಗಿ ಹೋದ ಎಲ್ಲ ಪ್ರವಾದಿಗಳನ್ನು, ಧಾರ್ಮಿಕ ಮಹಾತ್ಮರನ್ನು ಅವರ ಜೀವಿತಾವಧಿಯಲ್ಲೇ ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳಲಾಗಿದೆ. ಆದರೆ ಅವರೆಲ್ಲರೂ ಅಪಾರ ಸಂಯಮ, ತಾಳ್ಮೆಗಳಿಂದ ಅವುಗಳಿಗೆ ಎದೆಗೊಟ್ಟರು. ಆ ಕಾರಣಕ್ಕಾಗಿಯೇ ಆ ಮಹಾತ್ಮರು ಇಂದಿಗೂ ನಮ್ಮ ನಡುವೆ ಉಳಿದುಕೊಂಡಿದ್ದಾರೆ. ನೂಪುರ್ ಶರ್ಮಾರಂತಹ ಉಲ್ಕೆಗಳು ಈ ಜಗತ್ತಿನಲ್ಲಿ ಲಕ್ಷಾಂತರ ಆಗಿ ಹೋಗಿವೆ. ಒಮ್ಮೆ ಉರಿದಂತೆ ಭಾಸವಾದರೂ ಕೆಲವೇ ಕ್ಷಣಗಳಲ್ಲಿ ಬೂದಿಯಾಗಿ ಇಲ್ಲವಾಗಿವೆ. ಆದುದರಿಂದ, ಪ್ರವಾದಿ ನಿಂದನೆಯ ಸಂದರ್ಭದಲ್ಲಿ ನಾವು ಪಾಲಿಸುವ ಸಂಯಮವೇ ಪ್ರವಾದಿಯವರಿಗೆ ನೀಡಬಹುದಾದ ಅತಿ ದೊಡ್ಡ ಗೌರವವಾಗಿದೆ. ಮತ್ತು ಈ ಸಂಯಮದ ಮೂಲಕವೇ ದುಷ್ಕರ್ಮಿಗಳ ಸಂಚುಗಳನ್ನು ನಾವು ವಿಫಲಗೊಳಿಸಬೇಕಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News