ಉಡುಪಿ; ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕೃಿಯಗೊಂಡ ಯುವಕನ ಅಂಗಾಂಗ ದಾನ

Update: 2022-06-11 13:42 GMT
ನವೀನ್

ಉಡುಪಿ : ರಸ್ತೆ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾದ ಯುವಕನೊಬ್ಬ ಚಿಕಿತ್ಸೆಯ ಬಳಿಕವೂ  ಮೆದುಳು ನಿಷ್ಕೃಿಯಗೊಂಡ ಹಿನ್ನೆಲೆಯಲ್ಲಿ ಆತನ ಅಂಗಾಂಗಗಳ ದಾನಕ್ಕೆ ಕುಟುಂಬಿಕರು ನಿರ್ಧರಿಸಿದ್ದರಿಂದ ಆರು ಮಂದಿಗೆ ಹೊಸ ಜೀವನ ಲಭಿಸಿದ್ದು, ಯುವಕ ಸಾವಿನಲ್ಲೂ ಸಾರ್ಥಕತೆಯನ್ನು ಕಾಣುವಂತಾಯಿತು.

ಜೂನ್ 8ರಂದು ರಾತ್ರಿ 10 ಗಂಟೆಯ ಸುಮಾರಿಗೆ ಕೊಕ್ಕರ್ಣೆ ಬಳಿ ನಡೆದ ರಸ್ತೆ ಅಪಘಾತದಲ್ಲಿ ಕೊಕ್ಕರ್ಣೆ ನಿವಾಸಿ ನವೀನ್ (38) ಎಂಬ ಯುವಕ ತೀವ್ರವಾಗಿ ಗಾಯಗೊಂಡಿದ್ದರು. ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೂ.9ರಂದು ಬೆಳಗ್ಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಪಘಾತದ ಪರಿಣಾಮದಿಂದ ನವೀನ್ ತೀವ್ರತರವಾದ ಗಾಯಗಳನ್ನು ಹೊಂದಿದ್ದು, ಕೆಎಂಸಿ ತಜ್ಞ ವೈದ್ಯರ ತೀವ್ರ ಪ್ರಯತ್ನದ ಹೊರತಾಗಿಯೂ ಅವರು  ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ. ಈ ಹಂತದಲ್ಲಿ ನವೀನ್ ಅವರ ಪತ್ನಿ ಮಲ್ಲಿಕಾ ಮತ್ತವರ ಕುಟುಂಬ ಸದಸ್ಯರು ಇತರ ರೋಗಿಗಳ ಜೀವ ಉಳಿಸಲು ಸಾಧ್ಯವಾಗುವ ಅಂಗಗಳನ್ನು ದಾನ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದರು.‌

ನವೀನ್ ಅವರ ಎರಡು ಮೂತ್ರ ಪಿಂಡಗಳು, ಯಕೃತ್ತು, ಚರ್ಮ ಹಾಗೂ ಎರಡು ಕಾರ್ನಿಯಾಗಳು/ಕಣ್ಣುಗುಡ್ಡೆ ಗಳನ್ನು ತೆಗೆದು ಒಟ್ಟು 6 ಜನರ ಜೀವ ಉಳಿಸಲು ಹಾಗೂ ಅವರಿಗೆ ಮರು ಬದುಕು ನೀಡಲು ಸಾಧ್ಯವಾಗಿದೆ ಎಂದು ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.

ನವೀನ್ ಕುಟುಂಬಿಕರ ಒಪ್ಪಿಗೆ ಬಳಿಕ ಮಾನವ ಅಂಗಾಂಗ ಕಸಿ ಕಾಯ್ದೆ ೧೯೯೪ರ ಅನುಸಾರ ನವೀನ್ ಅವರನ್ನು ಆರು ಗಂಟೆಗಳ ಅಂತರದಲ್ಲಿ ಎರಡು ಬಾರಿ ಪರಿಶೀಲಿಸಿ ಅಧಿಕೃತವಾಗಿ ಪರಿಣಿತ ವೈದ್ಯರ ತಂಡವು ರೋಗಿಯ ಮೆದುಳು ನಿಷ್ಕೃಿಯಗೊಂಡಿದೆ ಎಂದು ಘೋಷಿಸಿತು. ಮೊದಲು ಜೂ.10ರ ಸಂಜೆ 5ಕ್ಕೆ ಹಾಗೂ ಎರಡನೇಯದು ಜೂ.10ರ ರಾತ್ರಿ 11:35ಕ್ಕೆ.

ಜೀವನಸಾರ್ಥಕತೆ ಪ್ರೋಟೋಕಾಲ್ ಮತ್ತು ನಿರ್ಧಾರಗಳ ಪ್ರಕಾರ ನೋಂದಾಯಿತ ರೋಗಿಗಳಿಗೆ ಎರಡು ಕಾರ್ನಿಯಾಗಳು ಮತ್ತು ಒಂದು ಮೂತ್ರಪಿಂಡ ಮತ್ತು ಚರ್ಮವನ್ನು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ  ರೋಗಿಗಳಿಗೆ ಬಳಸಲಾಯಿತು. ಯಕೃತ್ತು ಮತ್ತು ಒಂದು ಕಿಡ್ನಿಯನ್ನು  ಮಂಗಳೂರು ಅಂಬೇಡ್ಕರ್ ಸರ್ಕಲ್‌ ನಲ್ಲಿರುವ ಕೆಎಂಸಿ ಆಸ್ಪತ್ರೆಗೆ ಕಳುಹಿಸಿ ಕೊಡಲಾಯಿತು.

ದಾನ ಮಾಡಿದ ಅಂಗಗಳನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಗ್ರೀನ್ ಕಾರಿಡಾರ್ ಮೂಲಕ ಮಣಿಪಾಲದಿಂದ ಮಂಗಳೂರಿಗೆ ಕೊಂಡೊಯ್ಯಲಾಯಿತು.

ಪತಿಯನ್ನು ಕಳೆದುಕೊಂಡ ದು:ಖದ ನಡುವೆಯೂ ನವೀನ್ ಪತ್ನಿ ಮಲ್ಲಿಕಾ ಹಾಗೂ ಕುಟುಂಬದ ಸದಸ್ಯರು ಅಂಗದಾನದಂಥ ಪುಣ್ಯದ ಕೆಲಸ ಸಾಧ್ಯವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಅಂಗದಾನದ ಮೂಲಕ ಸಾವಿನಲ್ಲೂ ಆತ ಸಾರ್ಥಕತೆಯನ್ನು ಕಂಡಿದ್ದಾನೆ ಎಂದು ತಿಳಿಸಿದರು.

ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ ಪ್ರತಿಕ್ರಿಯಿಸಿ, ವ್ಯಕ್ತಿಯೊಬ್ಬರ ಜೀವ ಉಳಿಸುವ ನಿಟ್ಟಿನಲ್ಲಿ ಅಂಗದಾನ ಶ್ರೇಷ್ಟವಾದ ಕೆಲಸ ವಾಗಿದ್ದು, ಅತ್ಯಂತ ಮಹತ್ವವನ್ನು ಪಡೆದಿದೆ. ಜನರು ಈ ರೀತಿಯ ಉತ್ತಮ ಕಾರ್ಯಗಳಿಗೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿ, ಅಂಗದಾನ ಮಾಡಲು  ನಿರ್ಧರಿಸಿದ  ನವೀನ್ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಿದರು.

‘ನವೀನ್‌ರ ಬಡ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿ’

ಬೋಟ್‌ನಲ್ಲಿ ಕೆಲಸ ಮಾಡಿ ಕುಟುಂಬವನ್ನು ನಡೆಸುತಿದ್ದ ನವೀನ್‌ರದ್ದು ಅತ್ಯಂತ ಬಡ ಕುಟುಂಬ. ಪತ್ನಿ ಮಲ್ಲಿಕಾ ಬೀಡಿ ಕಟ್ಟಿ ಎರಡು ಮಕ್ಕಳ ಕುಟುಂಬ ನಿರ್ವಹಣೆಗೆ ನೆರವಾಗುತಿದ್ದರು. ಇಂಥ ಕುಟುಂಬ ಈಗ ಆಧಾರ ಸ್ಥಂಬವನ್ನೇ ಕಳೆದುಕೊಂಡಿದೆ. ಆದುದರಿಂದ ಸಾರ್ವಜನಿಕರು ಹಾಗೂ ಸಹೃದಯಿಗಳು ಈ ಬಡ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗುವಂತೆ ನವೀನ್ ಕುಟುಂಬದ ಆತ್ಮೀಯರೂ, ಕೊಕ್ಕರ್ಣೆ ಕ್ಷೇತ್ರದ ಜನಪ್ರತಿನಿಧಿ, ಮಾಜಿ ತಾಪಂ ಸದಸ್ಯರಾದ  ಡಾ.ಸುನೀತಾ ಶೆಟ್ಟಿ ಅವರು ಮನವಿ ಮಾಡಿದ್ದಾರೆ.

ನವೀನ್ ಅವರ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿದ ಮಲ್ಲಿಕಾ, ಆತನ ತಾಯಿ ಹಾಗೂ ಮೂವರು ಸಹೋದರರಿಗೆ ಊರಿನವರ ಪರವಾಗಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಡಾ.ಶೆಟ್ಟಿ ತಿಳಿಸಿದರು. ಈ ಮೂಲಕ ನವೀನ್ ಹಲವು ಮಂದಿಗೆ ಮರು ಜೀವ ನೀಡಿದ್ದಾರೆ. ಇದು ಸಾರ್ಥಕ ಭಾವ ಮೂಡಿಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News