ಸದಸ್ಯತ್ವದ ಅರ್ಜಿಯ ಮೌಲ್ಯಮಾಪನ : ಉಕ್ರೇನ್‌ಗೆ ಇಯು ಮುಖ್ಯಸ್ಥೆ ಭೇಟಿ
ಕೀವ್, ಜೂ.11: ಯುರೋಪಿಯನ್ ಯೂನಿಯನ್‌ನ ಸದಸ್ಯತ್ವದ ಬಗ್ಗೆ ಉಕ್ರೇನ್‌ನೊಂದಿಗೆ ಚರ್ಚಿಸಲು ಯುರೋಪಿಯನ್ ಯೂನಿಯನ್ ಮುಖ್ಯಸ್ಥೆ ಉರ್ಸುಲಾ ವೋನ್‌ಡರ್ ಲಿಯೆನ್ ಶನಿವಾರ ಉಕ್ರೇನ್‌ಗೆ ಆಗಮಿಸಿದ್ದಾರೆ ಎಂದು ವರದಿಯಾಗಿದೆ.
ಉಕ್ರೇನ್ ಪುನನಿರ್ಮಾಣಕ್ಕೆ ಅಗತ್ಯವಿರುವ ಜಂಟಿ ಕಾರ್ಯ ಮತ್ತು ಉಕ್ರೇನ್‌ಗೆ ಯುರೋಪಿಯನ್ ಯೂನಿಯನ್ ಸದಸ್ಯತ್ವದ ದಾರಿಯಲ್ಲಿ ಸಾಧಿಸಿರುವ ಪ್ರಗತಿಯ ಬಗ್ಗೆ ಆ ದೇಶದ ಅಧ್ಯಕ್ಷರೊಂದಿಗೆ ಚರ್ಚಿಸಲಿದ್ದೇನೆ ಎಂದು ಉರ್ಸುಲಾ ಲಿಯೆನ್ ಟ್ವೀಟ್ ಮಾಡಿದ್ದಾರೆ. ಅಧ್ಯಕ್ಷರ ಜತೆಗಿನ ಚರ್ಚೆಗಳು ಉಕ್ರೇನ್‌ನ ಸದಸ್ಯತ್ವದ ಬಗ್ಗೆ ನಿರ್ಧರಿಸಲು ಪೂರಕವಾಗಲಿದೆ. ಸದಸ್ಯತ್ವಕ್ಕೆ ಉಕ್ರೇನ್‌ನ ಸನ್ನದ್ಧತೆಯ ಕುರಿತು ತನ್ನ ಜತೆಗಿರುವ ನಿಯೋಗವು ಮೌಲ್ಯಮಾಪನ ನಡೆಸಲಿದ್ದು ಮೌಲ್ಯಮಾಪನದ ವರದಿ ಹಾಗೂ ಕೈಗೊಳ್ಳಬೇಕಾದ ಸುಧಾರಣೆಯ ವಿವರವನ್ನು ಶೀಘ್ರ ಪ್ರಕಟಿಸಲಾಗುವುದು ಎಂದವರು ಸುದ್ಧಿಗಾರರಿಗೆ ಹೇಳಿದ್ದಾರೆ.
ಯುರೋಪಿಯನ್ ಯೂನಿಯನ್‌ಗೆ ಆದಷ್ಟು ಬೇಗ ಸೇರ್ಪಡೆಗೊಳ್ಳಬೇಕೆಂದು ಉಕ್ರೇನ್ ಶತಪ್ರಯತ್ನ ನಡೆಸುತ್ತಿದೆ. ಆದರೆ ಸದಸ್ಯತ್ವದ ಪ್ರಕ್ರಿಯೆ ದೀರ್ಘಾವಧಿಯದ್ದಾಗಿದ್ದು ಹಲವು ವರ್ಷ ಬೇಕಾಗಬಹುದು ಎಂದು ಯುರೋಪಿಯನ್ ಯೂನಿಯನ್‌ನ ಅಧಿಕಾರಿಗಳು ಹೇಳಿದ್ದಾರೆ. ರಶ್ಯದ ಆಕ್ರಮಣದ ಹಿನ್ನೆಲೆಯಲ್ಲಿ ತನ್ನ ಭೌಗೋಳಿಕ-ರಾಜಕೀಯ ದುರ್ಬಲತೆಯನ್ನು ಕಡಿಮೆಗೊಳಿಸಲು ಯುರೋಪಿಯನ್ ಯೂನಿಯನ್ ಸದಸ್ಯತ್ವ ಪೂರಕವಾಗಲಿದೆ ಎಂದು ಉಕ್ರೇನ್ ಪ್ರತಿಪಾದಿಸುತ್ತಿದೆ. ಮುಂದಿನ ವಾರ ಉಕ್ರೇನ್‌ನ ಅರ್ಜಿಯನ್ನು ಪರಿಶೀಲನೆಗೆ ಎತ್ತಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದು ಉರ್ಸುಲಾ ಉಕ್ರೇನ್‌ಗೆ ನೀಡುತ್ತಿರುವ ಎರಡನೇ ಭೇಟಿಯಾಗಿದೆ. ಈ ಹಿಂದೆ ಎಪ್ರಿಲ್ 8ರಂದು ಉಕ್ರೇನ್‌ಗೆ ಆಗಮಿಸಿದ್ದ ಅವರು ಉಕ್ರೇನ್ ಯುರೋಪಿಯನ್ ಯೂನಿಯನ್ ಕುಟುಂಬಕ್ಕೆ ಸೇರಿದೆ ಎಂದಿದ್ದರು.
ಆದರೆ ಶಿಷ್ಟಾಚಾರ ಬದಿಗೊತ್ತಿ, ಉಕ್ರೇನ್‌ಗೆ ತ್ವರಿತವಾಗಿ ಸದಸ್ಯತ್ವ ನೀಡುವ ಬಗ್ಗೆ ಯೂನಿಯನ್‌ನ ಕೆಲವು ಸದಸ್ಯರು ಆಕ್ಷೇಪ ಎತ್ತಿದ್ದಾರೆ. ರಶ್ಯ ಆಕ್ರಮಣಕ್ಕೂ ಮುನ್ನ, ಉಕ್ರೇನ್‌ನಲ್ಲಿ ಭ್ರಷ್ಟಾಚಾರ ಪ್ರಕರಣ ಹೆಚ್ಚಿರುವ ಬಗ್ಗೆ ದಾಖಲೆ ಇರುವುದರಿಂದ ಮತ್ತು ನಾರ್ಥ್ ಮೆಸೆಡೊನಿಯಾ ಹಾಗೂ ಅಲ್ಬೇನಿಯಾ ದೇಶಗಳು ಉಕ್ರೇನ್‌ಗಿಂತ ಮೊದಲು ಅರ್ಜಿ ಸಲ್ಲಿಸಿರುವುದರಿಂದ ಉಕ್ರೇನ್ ಅರ್ಜಿಯ ಬಗ್ಗೆ ತರಾತುರಿಯ ನಿರ್ಧಾರ ಸಲ್ಲದು ಎಂದು ಕೆಲವು ಸದಸ್ಯರು ಪ್ರತಿಪಾದಿಸಿದ್ದಾರೆ. ರಶ್ಯ ಆಕ್ರಮಣದ ಬಳಿಕ ಯುರೋಪಿಯನ್ ಯೂನಿಯನ್ ಉಕ್ರೇನ್‌ಗೆ ಶಸ್ತ್ರಾಸ್ತ್ರ ಖರೀದಿಗೆ 2.1 ಬಿಲಿಯನ್ ಡಾಲರ್ ಮೊತ್ತ ಹಾಗೂ 700 ಮಿಲಿಯನ್ ಯುರೋ ಮೌಲ್ಯದ ಇತರ ನೆರವು ಒದಗಿಸಿದೆ. ಜತೆಗೆ, ರಶ್ಯ ವಿರುದ್ಧ 6 ಹಂತದ ನಿರ್ಬಂಧ ಜಾರಿಗೊಳಿಸಿದೆ. ಯುದ್ಧ ಆರಂಭಗೊಂಡ ಬಳಿಕ ಉಕ್ರೇನ್‌ನಿಂದ ಪಲಾಯನ ಮಾಡಿರುವ ಸುಮಾರು 5 ಮಿಲಿಯನ್ ನಿರಾಶ್ರಿತರಿಗೆ ಯುರೋಪಿಯನ್ ಯೂನಿಯನ್ ಆಶ್ರಯ ಕಲ್ಪಿಸಿದೆ.