ದೇಶದಲ್ಲಿ ನಿರೀಕ್ಷಿತ ಜೀವಿತಾವಧಿ ಹೆಚ್ಚಳ : ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟಂ‌ ವರದಿ

Update: 2022-06-13 02:22 GMT
ಸಾಂದರ್ಭಿಕ ಚಿತ್ರ

ಭಾರತ: ಭಾರತೀಯರ ನಿರೀಕ್ಷಿತ ಜೀವಿತಾವಧಿ 2015-19ರ ಅವಧಿಯಲ್ಲಿ 69.7 ವರ್ಷಕ್ಕೆ ಹೆಚ್ಚಳವಾಗಿದೆ. ಆದಾಗ್ಯೂ ಇದು ಜಾಗತಿಕ ಸರಾಸರಿಯಾದ 72.6 ವರ್ಷಕ್ಕೆ ಹೋಲಿಸಿದರೆ ಕಡಿಮೆ. ಭಾರತದಲ್ಲಿ ನಿರೀಕ್ಷಿತ ಜೀವಿತಾವಧಿ ಎರಡು ವರ್ಷದಷ್ಟು ಹೆಚ್ಚಲು ಸುಮಾರು ಹತ್ತು ವರ್ಷಗಳು ಬೇಕಾಗಿವೆ. ಹುಟ್ಟಿದ ಮಗುವಿನ ಒಂದನೇ ವರ್ಷದಲ್ಲಿ ನಿರೀಕ್ಷಿತ ಜೀವಿತಾವಧಿಯನ್ನು ನೋಡಿದಾಗ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಸಾವಿನ ಪ್ರಮಾಣ ಅತ್ಯಧಿಕವಾಗಿರುವುದು ಒಟ್ಟಾರೆ ನಿರೀಕ್ಷಿತ ಜೀವಿತಾವಧಿಯ ವೇಗ ಕುಂಠಿತಗೊಳ್ಳಲು ಕಾರಣ ಎಂದು timesofindia.com ವರದಿ ಮಾಡಿದೆ.

ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟಂ (ಎಸ್‍ಆರ್‌ಎಸ್) ಬಿಡುಗಡೆ ಮಾಡಿದ "ಅಬ್ರಿಜ್ಡ್ ಲೈಫ್ ಟೇಬಲ್ಸ್-2015-19ರ ವರದಿಯ ಪ್ರಕಾರ, ಅತ್ಯಧಿಕ ಶಿಶು ಮರಣ ಪ್ರಮಾಣ ಇರುವ ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲಿ ಹುಟ್ಟಿನ ವೇಳೆ ಮತ್ತು ಒಂದು ವರ್ಷದ ಮಗುವಿನ ನಿರೀಕ್ಷಿತ ಜೀವಿತಾವಧಿಯ ಅಂತರ ಅತ್ಯಧಿಕವಾಗಿದೆ.

ಎರಡನೇ ಅತ್ಯಧಿಕ ಶಿಶು ಮರಣ ಪ್ರಮಾಣ (38) ಇರುವ ಉತ್ತರ ಪ್ರದೇಶದಲ್ಲಿ ಮಗುವಿನ ಹುಟ್ಟು ಮತ್ತು ಒಂದು ವರ್ಷ ತುಂಬಿದ ಬಳಿಕ ನಿರೀಕ್ಷಿತ ಜೀವಿತಾವಧಿಯ ಅಂತರ 3.4 ವರ್ಷ ಇದೆ. ಅಂತೆಯೇ ಅತ್ಯಧಿಕ ಶಿಶು ಮರಣ ಪ್ರಮಾಣ (43) ಇರುವ ಮಧ್ಯಪ್ರದೇಶದಲ್ಲಿ ಈ ಅಂತರ 2.7 ವರ್ಷ ಆಗಿದೆ.

ಕಳೆದ 45 ವರ್ಷಗಳ ಅವಧಿಯಲ್ಲಿ ನಿರೀಕ್ಷಿತ ಜೀವಿತಾವಧಿ 49.7 ವರ್ಷ ಇದ್ದುದು ಇದೀಗ 69.7 ವರ್ಷಕ್ಕೆ ಹೆಚ್ಚಿದೆ. ಒಡಿಶಾದಲ್ಲಿ ನಿರೀಕ್ಷಿತ ಜೀವಿತಾವಧಿ ಅತ್ಯಧಿಕವಾಗಿದ್ದು, 1970-75ರ ವೇಳೆಗೆ 45.7 ವರ್ಷ ಇದ್ದ ಜೀವಿತಾವಧಿ ಪ್ರಮಾಣ ಇದೀಗ 69.7 ವರ್ಷಕ್ಕೆ ಹೆಚ್ಚಿದೆ.

ತಮಿಳುನಾಡಿನಲ್ಲಿ ನಿರೀಕ್ಷಿತ ಜೀವಿತಾವಧಿ 49.6 ವರ್ಷದಿಂದ 72.6 ವರ್ಷಕ್ಕೆ ಹೆಚ್ಚಿದೆ. ಉತ್ತರಪ್ರದೇಶದಲ್ಲಿ ನಿರೀಕ್ಷಿತ ಜೀವಿತಾವಧಿ 65.6 ವರ್ಷಗಳಾಗಿದ್ದು, 65.3ವರ್ಷ ನಿರೀಕ್ಷಿತ ಜೀವಿತಾವಧಿ ಹೊಂದಿರುವ ಛತ್ತೀಸ್‍ಗಢವನ್ನು ಹೊರತುಪಡಿಸಿದರೆ ಇದು ಕನಿಷ್ಠ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News