ಪ್ರಜಾಪ್ರಭುತ್ವದ ಅಸ್ತ್ರ ಬಳಸಿ ವಿರೋಧಿಗಳ ಧಮನ: ವಿನಯಕುಮಾರ್ ಸೊರಕೆ ಆರೋಪ

Update: 2022-06-13 13:13 GMT

ಪಡುಬಿದ್ರಿ: ಬೆಲೆಯೇರಿಕೆ, ನಿರುದ್ಯೋಗ, ಶೇ.40 ಕಮಿಶನ್ ಮೂಲಕ ಬಿಜೆಪಿ ಸರಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಜನತೆ ಮನಗಾಣಬೇಕಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.

ಹೆಜಮಾಡಿ ಬಿಲ್ಲವ ಸಂಘದ ಸಭಾಂಗಣದಲ್ಲಿ ರವಿವಾರ ಸಂಜೆ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡ ಚಿಂತನ ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವದ ಅಸ್ತ್ರಗಳನ್ನು ದುರುಪಯೋಗಪಡಿಸಿಕೊಂಡು ಈಗಿನ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿರೋಧಿಗಳನ್ನು ಧಮನಿಸುತ್ತಿದೆ. ಕಾಂಗ್ರೆಸ್ ಯಾವತ್ತೂ ಹಾಗೆ ನಡೆದುಕೊಂಡಿಲ್ಲ. ಈ ಬಗ್ಗೆ ಸರಿಯಾದ ಮಾಹಿತಿ ಯನ್ನು ಮತದಾರರಿಗೆ ಮನಮುಟ್ಟುವಂತೆ ತಿಳಿಸಬೇಕು ಎಂದರು. 

ಭ್ರಷ್ಟಾಚಾರದಲ್ಲಿ ಮುಳುಗಿದ ರಾಜ್ಯ ಸರ್ಕಾರ ಹೆಜಮಾಡಿ ಬಂದರು ಕಾಮಗಾರಿಯ ಸಂದರ್ಭದಲ್ಲೂ ಗುತ್ತಿಗೆದಾರರೊಂದಿಗೆ ಕಮಿಶನ್‍ಗಾಗಿ ಬೇಡಿಕೆ ಇಟ್ಟಿದೆ. ಈ ಬಗ್ಗೆ ಗುತ್ತಿಗೆದಾರರ ಸಂಘವೇ ತಮ್ಮ ಮುಂದೆ ತಿಳಿಸಿದೆ ಎಂದು ಅವರು ಹೇಳಿದರು. 

ಕೆಪಿಸಿಸಿ ಮಾಧ್ಯಮ ವಕ್ತಾರ ಎ.ಮುನೀರ್ ಪಕ್ಷ ಬಲವರ್ಧನೆ ಮತ್ತು ಮುಂಬರುವ ಚುನಾವಣಾ ತಯಾರಿ ಬಗ್ಗೆ ಸುದೀರ್ಘ ವಿವರಣೆ ನೀಡಿ, ದಿನಕ್ಕೆ ಒಂದು ಗಂಟೆ ಪಕ್ಷ ಬಲವರ್ಧನೆಗೆ ಸಮಯ ಮೀಸಲಿಡಿ ಎಂದು ಕಾರ್ಯ ಕರ್ತರಿಗೆ ಮನವಿ ಮಾಡಿದರು.

ದಲಿತ ಮುಖಂಡ ಶೇಖರ್ ಹೆಜ್ಮಾಡಿ ಪಕ್ಷದ ಸಂಘಟಾನತ್ಮಕ ಕಾರ್ಯದ ಬಗ್ಗೆ ಮಾತನಾಡಿ, ಸಂವಿಧಾನ ಉಳಿಯಲು ಕಾಂಗ್ರೆಸ್ ಬಲವರ್ಧನೆ ಅನಿವಾರ್ಯ. ಉಭಯ ಜಿಲ್ಲೆಗಳ ಹಿಂದುತ್ವದ ಪ್ರಯೋಗ ಶಾಲೆ ಎಜೆಂಡಾದ ವಿರುದ್ಧ ಕಾಂಗ್ರೆಸ್ ಪರಿಣಾಮಕಾರಿ ಯೋಜನೆ ಸಿದ್ಧಪಡಿಸಿದೆ ಎಂದರು.

ಪ್ರತಿಭಾ ಪುರಸ್ಕಾರ: ಈ ಬಾರಿಯ ಹತ್ತನೇ ತರಗತಿ ಪರೀಕ್ಷೆಯಲ್ಲಿ ಕೀರ್ತಿ ತಂದ ಹೆಜಮಾಡಿಯ 8 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದೊಂದಿಗೆ ಗೌರವಿಸಲಾಯಿತು.

ಸನ್ಮಾನ: ಹೆಜಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಮತ್ತು ಸದಸ್ಯರಾಗಿ ಸೇವೆ ಸಲ್ಲಿಸಿದ ಪಕ್ಷದ ಹಿರಿಯ ಸದಸ್ಯರನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು. ಸಾಧಕರನ್ನು ಗೌರವಿಸಲಾಯಿತು.

ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸುಧೀರ್ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಸುವರ್ಣ ಅಡ್ವೆ, ಗುಲಾಂ ಮುಹಮ್ಮದ್, ಯುವ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೇನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ಕಾಂಗ್ರೆಸ್ ಮುಖಂಡರುಗಳಾದ ವೈ.ಸುಧೀರ್ ಕುಮಾರ್, ತೇಜಪಾಲ್ ಸುವರ್ಣ, ಶಿವಾಜಿ ಸುವರ್ಣ, ರಾಜೀವಿ ಶೆಟ್ಟಿ, ಯುವ ಕಾಂಗ್ರೆಸ್ ಉಡುಪಿ ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಝಿಯಾನ್, ಯು.ಸಿ.ಶೇಕಬ್ಬ, ಅಬ್ದುಲ್ ಅಜೀಜ್ ಹೆಜ್ಮಾಡಿ, ವಾಮನ ಕೋಟ್ಯಾನ್ ನಡಿಕುದ್ರು, ದೀಪಕ್ ಎರ್ಮಾಳ್, ಅಶ್ವಿನಿ ಬಂಗೇರ, ಸುನಿಲ್ ಬಂಗೇರ, ಜಯಶೀಲ ಬಂಗೇರ, ಗಣೇಶ್ ಕೋಟ್ಯಾನ್, ಕಿಶೋರ್ ಎರ್ಮಾಳ್ ಮತ್ತಿತರರು ಉಪಸ್ಥಿತರಿದ್ದರು.

ಸಂತೋಶ್ ಪಡುಬಿದ್ರಿ ಮತ್ತು ಕೇಶವ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿದರು. ಸುಭಾಷ್ ಸಾಲ್ಯಾನ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News