ಪ್ರತಿಭಟನಾಕಾರರ ವಿರುದ್ಧ ಬಲವಂತದ ಕ್ರಮ ನಿಲ್ಲಿಸುವಂತೆ ಕೇಂದ್ರಕ್ಕೆ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಆಗ್ರಹ
ಹೊಸದಿಲ್ಲಿ: ದೇಶಾದ್ಯಂತ ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಆಡಳಿತಗಳು ಬಲವಂತದ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಹಾಗೂ ವಿವಿಧ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಕಾಯಿದೆ ಹಾಗೂ ನಿಯಮಗಳನ್ನು ಉಲ್ಲಂಘಿಸುತ್ತಿರುವುದಕ್ಕೆ ಅಂತ್ಯ ಹಾಡಬೇಕು ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ ಭಾರತ ಸರಕಾರವನ್ನು ಆಗ್ರಹಿಸಿದೆ.
ಪ್ರವಾದಿ ವಿರುದ್ಧ ಇಬ್ಬರು ಉಚ್ಛಾಟಿತ ಬಿಜೆಪಿ ನಾಯಕರು ನೀಡಿದ ಹೇಳಿಕೆ ವಿರುದ್ಧ ಪ್ರತಿಭಟಿಸಿದವರ ಮನೆ, ಕಟ್ಟಡಗಳನ್ನು ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ಕಾರ್ಯಾಚರಣೆಯ ಮೂಲಕ ನೆಲಸಮಗೊಳಿಸುತ್ತಿರುವುದರ ಬೆನ್ನಿಗೆ ಆಮ್ನೆಸ್ಟಿಯಿಂದ ಈ ಆಗ್ರಹ ಕೇಳಿ ಬಂದಿದೆ.
ಮಿತಿಮೀರಿದ ಪೊಲೀಸ್ ಕ್ರಮ ಅಂತ್ಯಗೊಳ್ಳಬೇಕು ಹಾಗೂ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿ ಶಾಂತಿಯುತವಾಗಿ ಪ್ರತಿಭಟಿಸಿದವರನ್ನು ತಕ್ಷಣ ಭೇಷರತ್ತಾಗಿ ಬಿಡುಗಡೆಗೊಳಿಸಬೇಕು ಎಂದು ಸಂಸ್ಥೆಯು ಆಗ್ರಹಿಸಿದೆ.
ʻʻಬಲವಂತದ ಕ್ರಮ, ಅಕ್ರಮ ಬಂಧನ ಹಾಗೂ ನೆಲಸಮದಂತಹ ಕಠಿಣ ಕಾರ್ಯಾಚರಣೆಗಳು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನುಗಳಿಗೆ ಸಂಬಂಧಿಸಿದಂತೆ ಭಾರತದ ಬದ್ಧತೆಗಳಿಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ಹೇಳಿಕೆಯಲ್ಲಿ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ ಬೋರ್ಡ್ ಅಧ್ಯಕ್ಷ ಆಕಾರ್ ಪಟೇಲ್ ಅವರ ಮಾತುಗಳನ್ನೂ ಉಲ್ಲೇಖಿಸಲಾಗಿದೆ.