ಉತ್ತರ ಪ್ರದೇಶ ಸಿಎಂ ಕುರಿತು ಆಕ್ಷೇಪಾರ್ಹ ಪೋಸ್ಟ್: ಆರೋಪಿ ಯುವಕನ ಬಂಧನ
ಲಕ್ನೋ : ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಕುರಿತು ಆಕ್ಷೇಪಾರ್ಹ ವಿಚಾರಗಳನ್ನು ಪೋಸ್ಟ್ ಮಾಡಿದ ಆರೋಪದಲ್ಲಿ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಟೆಟಾರಿಯಾ ಗ್ರಾಮದ ನಿವಾಸಿ ಅಕ್ರಮ್ ಅಲಿ ಆಲಿಯಾಸ್ ಗುಲ್ಬಹಾರ್ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಪೈಂಟರ್ ಆಗಿರುವ ಈತ ರವಿವಾರ ರಾತ್ರಿ 11 ಗಂಟೆಗೆ ಆಕ್ಷೇಪಾರ್ಹ ವಾಟ್ಸ್ ಆ್ಯಪ್ ಸ್ಟೇಟಸ್ ಹಾಕಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಆತನನ್ನು ಬಂಧಿಸಲಾಗಿದೆ.
ಆತನ ವಿರುದ್ಧ ಐಪಿಸಿ ಸೆಕ್ಷನ್ 504, 505,469, 295 ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆಯನ್ವಯ ಪ್ರಕರಣ ದಾಖಲಿಸಲಾಗಿದೆ.
ಆದಿತ್ಯನಾಥ್ ಅವರ ತಿರುಚಿದ ಚಿತ್ರದೊಂದಿಗೆ ಪ್ರಚೋದನಾತ್ಮಕ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದಕ್ಕಾಗಿ ಕಳೆದ ತಿಂಗಳು 15 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದರು. ನಂತರ ಆತನಿಗೆ ಶಿಕ್ಷೆಯ ರೂಪದಲ್ಲಿ 15 ದಿನಗಳ ಕಾಲ ಗೋಶಾಲೆಯೊಂದರಲ್ಲಿ ಸೇವೆ ಸಲ್ಲಿಸುವಂತೆ ಹಾಗೂ ಸಾರ್ವಜನಿಕ ಸ್ಥಳವೊಂದನ್ನು 15 ದಿನಗಳ ಕಾಲ ಶುಚಿಗೊಳಿಸುವಂತೆ ಸೂಚಿಸಲಾಗಿತ್ತು. ಆತನಿಗೆ ರೂ. 10,000 ದಂಡವನ್ನೂ ವಿಧಿಸಲಾಗಿತ್ತು.